ನಿಷ್ಪಾಪಿ ಸಸ್ಯಗಳು : ಸಂಚಿಕೆ - 147
Thursday, April 23, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 147
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ನಾನು ಇಂದು ತಮಗೆ ಬಹಳ ವಿಶೇಷವಾದ ಸಸ್ಯವೊಂದರ ಪರಿಚಯ ಮಾಡಲಿದ್ದೇನೆ. ನಾನೊಂದು ಬಾರಿ ನಮ್ಮೂರಿನ ಪಕ್ಕದ ಪಾಣಾಜೆಕೋಡಿಯ ನಾಟಿವೈದ್ಯರಾದ ವೆಂಕಪ್ಪ ಪಂಡಿತರ ಮನೆಗೆ ಔಷಧಿಗಾಗಿ ಹೋಗಿದ್ದೆ. ಅವರ ಮನೆಯ ಬಳಿ ಹಲವಾರು ಔಷದಿ ಸಸ್ಯಗಳಿದ್ದವು. ಅದರಲ್ಲೊಂದು ಗಿಡದಲ್ಲಿ ಅರಳಿದ್ದ ಹೂವು ನನ್ನನ್ನು ಬಹಳವಾಗಿ ಆಕರ್ಷಿಸಿತು. ಕಡು ಕಿತ್ತಳೆಕೆಂಪು ಬಣ್ಣದಲ್ಲಿ ಗುಲಾಬಿಯನ್ನು ಸೋಲಿಸುವ ಸೌಂದರ್ಯ!. ಮಿಂಚುವ ದಳಗಳು ಮೇಣದ ತರಹ ದಪ್ಪ. ನಡುವೆ ಬಿಳಿ ಕೇಸರದ ಗುಚ್ಛ. ಎಷ್ಟು ಚಂದವೆಂದರೆ ಕಂಡ ಕೂಡಲೇ ಬೇಕೆನಿಸುವಷ್ಟು!
ಶಾಖೆಗಳ ತುದಿಗಳಲ್ಲಿ ಒಂಟಿ ಹಾಗೂ ನಾಲ್ಕೈದು ಮೊಗ್ಗುಗಳು ಒಮ್ಮೆಗೇ ಮೂಡಿದ್ದೂ ಇತ್ತು. ಆ ಹಸಿರು ಎಲೆಗಳ ನಡುವೆ ಟೊಮೆಟೊ ಹಣ್ಣಿನಂತೆ ಹೂವುಗಳು ಮಿಂಚುತ್ತಿದ್ದವು. ಹೂವು ಉದುರಿದ ಬಳಿಕ ಹಳದಿ ಬಣ್ಣದ ಶಂಕುವಿನಾಕಾರದ ಕಾಯಿಗಳೂ ಇದ್ದವು. ಅವುಗಳ ರುಚಿ ನೋಡಲು ಭಯವಾಯಿತಾದರು ಪಂಡಿತರು ತಿನ್ನಬಹುದೆಂದು ಅಭಯ ನೀಡಿದರು. ರುಚಿ ಹುಳಿಯಾಗಿತ್ತು.. ತಿರುಳಿನ ಜೊತೆ ಕಪ್ಪನೆಯ ಪುಟಾಣಿ ಬೀಜಗಳಿದ್ದವು. ಈ ನಿಷ್ಪಾಪಿ ಸಸ್ಯದ ಹೂವು ಮುಂಜಾನೆ 9 ರ ನಂತರ ಅರಳಿ ಸಂಜೆಗೆ ಬಾಡುವಂತಹ ಅಲ್ಪಕಾಲದ್ದಾಗಿತ್ತು.
ಮೈತುಂಬಾ ಕಡು ಹಸಿರಾದ ದಪ್ಪನೆಯ ಎಲೆಗಳು ಇದರ ವಿಶೇಷತೆ. ಕಾಂಡದ ಮೇಲೆ ಒಂದಿಷ್ಟೂ ಜಾಗ ಬಿಡದೆ ತೆಳ್ಳಗೆ ಚೂಪು ಚೂಪಾದ ಗೊಂಚಲು ಗೊಂಚಲಾದ ಕಂದು ಮುಳ್ಳುಗಳ ರಾಶಿ!. ಎಲೆ ಕಂಕುಳ ಸನಿಹ ಒಂದೊಂದು ಬಿಂದುವಿನಲ್ಲೂ 5-6 ಮುಳ್ಳುಗಳು !!. ನೀವದನ್ನು ನೋಡಿದರೆ ಬೆಚ್ಚಿಬೀಳಬೇಕು. ಗಿಡ ಕಡಿಯುವುದಿದ್ದರೆ ಬೆರಳೂರಲೂ ಸ್ಥಳವಿಲ್ಲ. ಪಂಡಿತರಲ್ಲಿ ಅದರ ಹೆಸರಿನ ಬಗ್ಗೆ ವಿಚಾರಿಸಿದಾಗ "ಅದು ಔಷಧಿಯೆಂದು ಗೊತ್ತು. ಅದಕ್ಕಾಗಿಯೆ ನೆಟ್ಟಿರುವೆ. ಅದ್ಯಾವುದೋ ಒಂದು ಕಳ್ಳಿ ಗಿಡ" ಎಂದರು.
ನಾನೂ ಹೂವಿಗೋಸ್ಕರ ಒಂದು ತುಂಡು ತಂದು ನೆಟ್ಟೆ. ಬದುಕಿತು. ಮೊದಮೊದಲು ಸ್ವಲ್ಪ ನೀರು ಬೇಕಾಯಿತು. ಮಳೆಗಾಲ, ಚಳಿಗಾಲದಲ್ಲಿ ಹೂವುಗಳಾದುವು. ಈಗ ಹೆಸರು ಹುಡುಕುವ ಸರದಿ ನನ್ನದಾಗಿತ್ತು. ಮುಳ್ಳು ನೋಡುವಾಗ ಕಳ್ಳಿ/ಕ್ಯಾಕ್ಟಸ್ ಎಂದನಿಸಿತ್ತು. ನನ್ನ ಹುಡುಕುವಿಕೆಗೆ ಅದರ ಸಸ್ಯ ಶಾಸ್ತ್ರೀಯ ಹೆಸರು ಪೆರೆಸ್ಕಿಯಾ (Pereskia) ಎಂದು ತಿಳಿಯಿತು. ಮೇಣದ ಗುಲಾಬಿ, ರೋಸ್ ಕ್ಯಾಕ್ಟಸ್, ಎಲೆ ಕಳ್ಳಿ ಅಂತ ಇತರ ಹೆಸರುಗಳಂತೆ.
ನಿಮಗೆ ಈ ಗಿಡದ ವಿಶೇಷತೆ ಏನು ಗೊತ್ತಾ? ಇದು 6 ಕೋಟಿ ವರ್ಷಗಳ ಹಿಂದಿನ ಕ್ಯಾಕ್ಟಸ್ ತಳಿಯಂತೆ!!. ಆವಾಗ ಎಲ್ಲಾ ಕ್ಯಾಕ್ಟಸ್ ಗೂ ಎಲೆಗಳಿದ್ದುವಂತೆ. ಬಳಿಕ ವಿಕಾಸದ ಹಾದಿಯಲ್ಲಿ ಎಲೆಗಳು ಮಾಯವಾಗಿ ಮುಳ್ಳುಗಳ ರಚನೆಯಾಯಿತು. ಇದು ಮಾತ್ರ ಹಸಿರು ಹಸಿರು ಎಲೆಗಳನ್ನು ಹೊತ್ತು ಹಾಗೇ ಉಳಿದಿದೆ ಎಂದು ತಿಳಿದಾಗ ರೋಮಾಂಚನಗೊಂಡೆ.
ಮಧ್ಯ ಅಮೆರಿಕದ ಮೂಲನಿವಾಸಿಯಾದ ಈ ಕಳ್ಳಿ ಪನಾಮಾ, ಕೊಲಂಬಿಯಾ ಗಳ ನದಿ, ತೊರೆಗಳ ಬಳಿ ಕಂಡುಬರುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಇದನ್ನು ಕಳೆಗಿಡವೆಂದು ಘೋಷಿಸಲಾಗಿದೆ. ಮಲೇಷಿಯಾ, ಚೀನಾ ಗಳಲ್ಲಿ ಇದರ ಎಲೆ ಕ್ಯಾನ್ಸರ್, ಮಧುಮೇಹ, ಹೊಟ್ಟೆ ಹುಣ್ಣು, ಅಧಿಕ ರಕ್ತದೊತ್ತಡಕ್ಕೆ ಬಳಸುವರಂತೆ. ಸೆವೆನ್ ಸ್ಷಾರ್ ನೀಡಲ್ ಅಂತಾರಂತೆ ಈ ಗಿಡಕ್ಕೆ. ಭಾರತದಲ್ಲೂ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ನಮ್ಮೂರಲ್ಲಿ ಆ ಬಳಿಕ ನಾನು ಕೆಲವು ಕಡೆ ಬೇಲಿಯಲ್ಲೂ ಇದನ್ನು ಗುರುತಿಸಿದೆ. ಈ ಜೀವಂತ ಬೇಲಿ ಇದ್ದಲ್ಲಿ ಪ್ರಾಣಿಗಳ ತೊಂದರೆ ಮಾತ್ರವಲ್ಲ ಕಳ್ಳರೂ ಬರಲಾರರು ಅಲ್ಲವೇ? ಗಿಡಕ್ಕೆ ಬಿಸಿಲು ಹೆಚ್ಚು ಬಿದ್ದರೆ ಹೂಗಳೂ ಹೆಚ್ಚು. ನೀರು ಕಡಿಮೆ ಇದ್ದರೆ ಎಲೆಗಳನ್ನು ಉದುರಿಸಿ ಹಾಯಾಗಿರ್ತದೆ. ಪೊದೆಯಾಗಿ, ಸಣ್ಣ ಮರವಾಗಿ ಹತ್ತಡಿಯವರೆಗೂ ಬೆಳೆಯಬಲ್ಲದು. ಸಣ್ಣ ಕಡ್ಡಿ ಬಿದ್ದರೂ ಸಾಯದೆ ಜೋಪಾನವಾಗಿದ್ದು ನೀರು ಬಿದ್ದಾಗ ಜೀವನಪ್ರೀತಿ ತೋರುತ್ತದೆ.
ನೋಡಿದಿರಾ ಮಕ್ಕಳೇ, ಒಣ ಜಾಗದಲ್ಲಿ ಒಂದು ತುಂಡು ನೆಟ್ಟು ನೋಡಿ. ಹೂವಾದ ಬಳಿಕ ಹೇಳಿ.
ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************