ಜೀವನ ಸಂಭ್ರಮ : ಸಂಚಿಕೆ - 239
Monday, April 27, 2026
Edit
ಜೀವನ ಸಂಭ್ರಮ : ಸಂಚಿಕೆ - 239
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ... ಇಂದು ಸಾಧ್ಯ ಮತ್ತು ಸಾಧನೆ ಬಗ್ಗೆ ತಿಳಿದುಕೊಳ್ಳೋಣ. ನಾವು ಬಯಸಿದ್ದು ಸಿಕ್ಕಿದರೆ ಅದು ಸಾಧ್ಯ. ಆ ಸಾಧ್ಯ ಪಡೆದಾಗ ಆಗುವ ಆನಂದಕ್ಕಿಂತ ವಿಶೇಷವಾದ ಆನಂದ ಅದನ್ನು ಸಾಧನೆ ಮಾಡುವಾಗ ಆಗುತ್ತದೆ. ಸಾಧ್ಯತೆ ಪರಿಪೂರ್ಣಗೊಂಡರೆ ಸಾಧನೆ ತಾನಾಗೇ ಉಂಟಾಗುತ್ತದೆ. ಎಲ್ಲಿಯವರೆಗೆ ಸಾಧ್ಯತೆಯ ಬೆನ್ನಟ್ಟಿ ಸಾಗುತ್ತೇವೆಯೋ ಅಲ್ಲಿಯವರೆಗೆ ಸಾಧ್ಯ ದೂರ ಉಳಿಯುತ್ತದೆ. ಸಾಧ್ಯ ಅಂದರೆ ನಾವು ಯಾವುದನ್ನು ಪಡೆಯಬೇಕೊ ಅದು. ಯಾವುದರ ಉದ್ದೇಶಕ್ಕಾಗಿ ನಾವು ಮಾಡುತ್ತೀವಿ ಅದು ಸಾಧನೆ. ಸಾಧನೆ ಅಂತ್ಯವಾಗುವುದು ಸಾಧ್ಯದಲ್ಲಿ. ನಾವು ಸಾಧ್ಯದ ಕನಸು ಕಾಣುತ್ತೇವೆ. ಅದಕ್ಕೆ ಬಹಳ ಬೆಲೆ ಕೊಡುತ್ತೇವೆ. ಸದೈವ ಅದನ್ನೇ ಕುರಿತು ಚಿಂತಿಸುತ್ತೇವೆ. ಹಾಗಾಗಿ ಸಾಧ್ಯವನ್ನೇ ಕಳೆದುಕೊಳ್ಳುತ್ತೇವೆ. ನಾವು ಸಾಧನೆಯಲ್ಲಿ ಸಮಾಧಾನ ಪಡೆಯಬೇಕು. ವರ್ಷ ವರ್ಷ ಸಾಧನೆ ಇರಬಹುದು. ಅದರಲ್ಲೇ ಸಮಾಧಾನ ಪಡೆಯಬೇಕು. ಹೋಗಿ ಊರು ತಲುಪುವುದು ಎಷ್ಟು ಮಹತ್ವದ್ದೊ?. ನಡೆಯೋದು ಅಷ್ಟೇ ಮಹತ್ವದ್ದು. ನಡೆಯುವಾಗ ಉಂಟಾಗುವ ಸಂತೋಷ, ನಡೆದು ಮುಗಿದ ಮೇಲೆ ಆಗುವುದಿಲ್ಲ. ನಡೆಯುವಾಗಿನ ಸಂತೋಷವೇ ಬೇರೆ, ನಡೆದು ಮುಗಿದ ಮೇಲಿನ ಸಂತೋಷವೇ ಬೇರೆ.
ಸಾಧನೆಯಲ್ಲಿ ಸಾದ್ಯ ಮರೆತರೆ ಸಾಧ್ಯ ತನ್ನಷ್ಟಕ್ಕೆ ದೊರಕುತ್ತದೆ. ಉದಾಹರಣೆಗೆ ನಾವು ನಿದ್ರೆ ಸುಖ ಅನುಭವಿಸಬೇಕು. ಅಂದರೆ ಚೆನ್ನಾಗಿ ಗಾಢ ನಿದ್ರೆ ಮಾಡಬೇಕು ಅಂತ ತಲೆಗೆ ಹಾಕಿಕೊಂಡು ಮಲಗಿದರೆ, ಆ ಮನುಷ್ಯನಿಗೆ ನಿದ್ರೆ ಬರುವುದಿಲ್ಲ. ಅದನ್ನೇ ಚಿಂತೆ ಮಾಡುತ್ತಾ ಇದ್ದರೆ ನಿದ್ರೆ ಬರೋದಿಕ್ಕೆ ಸಾಧ್ಯನೇ ಇಲ್ಲ. ನಿದ್ರೆ ಚೆನ್ನಾಗಿ ಬರಬೇಕಾದರೆ ನಿದ್ರೆಯನ್ನು ಮರೆಯಬೇಕು. ಹಾಡುವವನು ಹಾಡುತ್ತಾ ಇರುತ್ತಾನೆ. ಹಾಡಿನ ಆನಂದದ ಕಡೆ ಲಕ್ಷ್ಯ ಕೊಟ್ಟರೆ ಹಾಡು ಹೋಗುತ್ತದೆ. ಆ ಹಾಡಿನ ಆನಂದ ಅನುಭವಿಸಬೇಕಾದರೆ ಹಾಡಿನೊಳಗೆ, ಕೇಳುವುದರೊಳಗೆ, ಹಾಡೋದ್ರಾಗ ಮನುಷ್ಯ ಮರೆಯಬೇಕಾಗುತ್ತದೆ. ಹಾಗೆ ಸಾಧನೆ ಹಿಡಿದ ಬಳಿಕ ಸಾಧ್ಯ ಮರೆಯಬೇಕು. ಸರಿಯಾದ ಸಾಧನೆ ಅಂತ ಗೊತ್ತಾದ ಬಳಿಕ ಆಗ ಸಂತೋಷ ಇರುತ್ತದೆ.
ಮನುಷ್ಯ ಕೊನೆಗೆ ಏನಾಗುತ್ತಾನೆ ಅದು ಮಹತ್ವದಲ್ಲ. ಕೊನೆಯವರೆಗೆ ಹೇಗೆ ಬದುಕನ್ನು ಸಾಗಿಸುತ್ತಾನೆ ಅದು ಮಹತ್ವ. ಸಾಧನೆ ಜೀವನವನ್ನು ವ್ಯಾಪಿಸುತ್ತದೆ. ಸಾಧ್ಯ ಒಂದು ಕ್ಷಣದಲ್ಲಿ ಮುಕ್ತಾಯವಾಗುತ್ತದೆ. ವ್ಯಾಪಿಸುವುದು ಮಹತ್ವದ್ದು. ಜೀವನದ ತುಂಬಾ ಅನುಭವಿಸುವುದು ಮಹತ್ವದ್ದು. ಮಹರ್ಷಿ ರವೀಂದ್ರನಾಥ ಟ್ಯಾಗೋರ್ ಗೀತಾಂಜಲಿಯಲ್ಲಿ ಒಂದು ಸುಂದರ ಗೀತೆ ಬರೆದಿದ್ದಾರೆ "ಭಗವಂತನೇ, ನನ್ನ ಚಿಕ್ಕ ಮನೆ. ಅದನ್ನೆಲ್ಲ ಸ್ವಚ್ಛ ಮಾಡಿದ್ದೇನೆ. ಕಿಟಕಿಬಾಗಿಲುಗಳನ್ನು ತೆರೆದಿದ್ದೇನೆ. ಒಂದು ಬೆಳಕು ಕೊಡುವ ದೀಪ ಹಚ್ಚಿದ್ದೇನೆ. ಎಣ್ಣೆ ಹಾಕಿ ದೀಪದ ರಕ್ಷಣೆ ಮಾಡುತ್ತಾ ಇದ್ದೇನೆ. ಒಳಗೆ ಧೂಪ ಹಾಕಿದ್ದೇನೆ. ಸುಗಂಧ ಮನೆಯೊಳಗೇ ತುಂಬಿದೆ. ಮನೆ ಸಿದ್ಧವಾಗಿದೆ. ಭಗವಂತನೇ ನಿನ್ನನ್ನು ಸ್ವಾಗತಿಸಲು ಈ ಮನೆ ಸಿದ್ಧವಾಗಿದೆ. ಒಳಗೆ ಹೊಲಸಿಲ್ಲ. ಕತ್ತಲೆ ಇಲ್ಲ ಬೆಳಕಿದೆ. ನಾನು ಮನೆಯಲ್ಲಿ ಕುಳಿತು ನಿನ್ನ ದಾರಿ ಕಾಯುತ್ತಾ ಇದ್ದೇನೆ. ನೀನು ಎಂದು ಬರುತ್ತೀಯ ಎನ್ನುವುದು ಮಹತ್ವದಲ್ಲ. ನೀನು ಬರುತ್ತಿ ಅನ್ನುವುದಷ್ಟೇ ಮಹತ್ವ ನನಗೆ. ನಿನಗಾಗಿ ದಾರಿ ಕಾಯುವಾಗ ಆಗುವ ಆನಂದ ಬಹುಶ ನಿನ್ನನ್ನು ಕಂಡಾಗ ಆಗಲಿಕಿಲ್ಲ. ಭಗವಂತನೇ. ಮನೆ ಸ್ವಚ್ಛ ಮಾಡುವಾಗ ಸುಗಂಧ ಇರಿಸುವಾಗ ಎಷ್ಟು ಆನಂದ ಆಗುತ್ತೆ ಗೊತ್ತಾ. ಭಗವಂತನೇ ಯಾಕೆಂದರೆ ನಾನು ಏನು ಮಾಡುತ್ತಾ ಇದ್ದೇನೆ?. ಅದು ನಿನಗಾಗಿ ಅನ್ನೋ ಸಂತೋಷ ತುಂಬಿದೆ. ತಯಾರಿಯಲ್ಲಿ ಸಂತೋಷಪಡುತ್ತಾ ಇದ್ದೇನೆ. ವರ್ಷದ ಪ್ರಾರಂಭದಲ್ಲಿ ನಾವು ಪುಸ್ತಕ ತೆಗೆಯುತ್ತಿದ್ದಂತೆ ಇದು ಯಾವಾಗ ಮುಗಿಯುತ್ತೆ ಅಂದರೆ ಸಂತೋಷವಿಲ್ಲ....!
ಕಲಿಯುತ್ತಾ ಕಲಿಯುತ್ತಾ ಆನಂದ ಪಡಬೇಕು. ಕಲಿಯೋದು ವರ್ಷಪೂರ್ತಿ ಇರುತ್ತದೆ. ಹಾಗಾಗಿ ವರ್ಷ ಪೂರ್ತಿ ಸಂತೋಷಪಡಬಹುದು. ಫಲಿತಾಂಶದ ಆನಂದ ಕೇವಲ ಒಂದೆರಡು ದಿನ ಮಾತ್ರ. ಸಾಧನದಲ್ಲಿ ಆನಂದ ಇರುವಷ್ಟು ಸಾಧ್ಯದಲ್ಲಿ ಇಲ್ಲ. ಶಾಲಾ ವಾರ್ಷಿಕೋತ್ಸವ ಇನ್ನು ಒಂದೆರಡು ತಿಂಗಳು ಇರುವಾಗಲೇ ತಯಾರಿ ನಡೆದಿರುತ್ತದೆ. ವಾರ್ಷಿಕೋತ್ಸವ ಕೇವಲ ಐದಾರು ಗಂಟೆ ಕಾರ್ಯಕ್ರಮ. ಅದರಲ್ಲಿ ನಮ್ಮದು 10 ನಿಮಿಷದ ಕಾರ್ಯಕ್ರಮ. 10 ನಿಮಿಷ ಮುಗಿಯುತ್ತಿದ್ದಂತೆ ಸಂತೋಷ ಮುಗಿಯಿತು. ಆದರೆ ಎರಡು ತಿಂಗಳು ವಾರ್ಷಿಕೋತ್ಸವ ನೆನಿಸಿಕೊಂಡು ಮಾಡುವ ತಯಾರಿ ಪ್ರತಿ ಕ್ಷಣ ಸಂತೋಷ ಕೊಡುತ್ತದೆ. ಆ ಸಂತೋಷ ಎರಡು ತಿಂಗಳು ನಿರಂತರ ಇರುತ್ತದೆ. ನಾವು ಮಕ್ಕಳ ಫಲಿತಾಂಶ ನೋಡುವುದಲ್ಲ. ಸಾಧನೆಗೆ ಒತ್ತು ಕೊಡಬೇಕು. ಸಾಧನೆಯಾಗುತ್ತಿದ್ದರೆ ಆನಂದ ಪಡಬೇಕು. ಪ್ರತಿದಿನ ಕಲಿಕೆಯಲ್ಲಿ ಆನಂದ ಪಡಬೇಕು. ಸಾಧನೆ ಸರಿಯಾಗಿದ್ದರೆ ಫಲಿತಾಂಶ ಖಂಡಿತ ಉತ್ತಮವಾಗಿರುತ್ತದೆ. ಫಲಿತಾಂಶದ ಸಂತೋಷ ಒಂದೆರಡು ದಿನ. ಆದರೆ ಸಾಧನೆಯ ಸಂತೋಷ ವರ್ಷದ್ದು ಅಲ್ಲವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************