-->
ಪಯಣ : ಸಂಚಿಕೆ - 89 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 89 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 89 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಕೊಡಗಿನ ಬ್ರಹ್ಮಗಿರಿ ಬೆಟ್ಟಗಳಲ್ಲಿ ನೆಲೆಸಿರುವ ಇರ್ಪು ಜಲಪಾತ' ಕ್ಕೆ ಪಯಣ ಮಾಡೋಣ ಬನ್ನಿ....
             
ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಖ್ಯಾತವಾಗಿರುವ ಕೊಡಗಿನ ಜಲಪಾತಗಳಲ್ಲಿ ಒಂದು. ಕೊಡಗಿನ ಹಲವಾರು ಜಲಪಾತಗಳ‍ಲ್ಲಿ ಒಂದಾಗಿರುವ ಈ ಜಲಪಾತ ತುಂಬಾ ರೋಮಾಂಚನಕಾರಿಯಾಗಿದೆ. ಮಡಿಕೇರಿಯಿಂದ ಸುಮಾರು ೫೦.ಕಿಮಿ ದೂರದಲ್ಲಿ ಇರುವ ಈ ಜಲಪಾತ, ನಾಗರಹೊಳೆ ಪ್ರಾಣಿ ರಕ್ಷಣಧಾಮದ ಕಾಡಿನಲ್ಲಿ ಸ್ಥಾಪಿತವಾಗಿದೆ. ಎಲ್ಲಾ ಕಾಲದಲ್ಲೂ ನೀರಿನಿಂದ ತುಂಬಿರುವ ಈ ಜಲಪಾತ ಮಳೆಗಾಲದಲ್ಲಿ ನೋಡಲು ತುಂಬಾ ಸುಂದರವಾಗಿರುತ್ತದೆ. ಈ ಜಲಪಾತವು ಪ್ರಸಿದ್ಧವಾದ ಪ್ರವಾಸಿತಾಣವಾಗಿದೆ. ಬ್ರಹ್ಮಗಿರಿ ಬೆಟ್ಟದಿಂದ ಉಗಮವಾಗುವ ಈ ಜಲಪಾತ ಲಕ್ಷಣತೀರ್ಥ ನದಿಗೆ ಸೇರ್ಪಡೆಯಾಗುತ್ತದೆ. 

ಚಾರಣ ಪ್ರಾರಂಭವಾಗುವುದೇ ಕುರ್ಚಿ ಗ್ರಾಮದ ಇರ್ಪು ಜಲಪಾತ ಬುಡದಿಂದ. ಎತ್ತರದಿಂದ ಧುಮುಕುವ ಇರ್ಪು ಜಲಪಾತ ಬಳಿಕ ಲಕ್ಷ್ಮಣತೀರ್ಥಕ್ಕೆ ಸೇರಿ ಕೆಆರ್‌ಎಸ್ ಸೇರಿಕೊಳ್ಳುತ್ತದೆ. ವರ್ಷ ಪೂರ್ತಿ ಇಲ್ಲಿ ನೀರು ಇರುತ್ತದೆ. ಜಲಪಾತ ಬುಡ ತಲುಪಲು ಸುರಕ್ಷಿತ ನಡಿಗೆ ಮಾರ್ಗವಿದೆ. ಜಲಪಾತದ ಎದುರು ತೂಗು ಸೇತುವೆ ಇದೆ. ಜಲಪಾತಕ್ಕಿಂತ ಸುಮಾರು 1 ಕಿ.ಮೀ ಗೂ ಮೊದಲು ಸುಂದರವಾದ ಇರ್ಪು ರಾಮೇಶ್ವರ ದೇವಾಲಯವಿದೆ.

ಇರ್ಪು ತಲುಪುವ ಮೊದಲು ಖಾಸಗಿಯವರ ಚಹಾ ಮತ್ತು ಕಾಫಿ ಎಸ್ಟೇಟ್‌ಗಳ ನಡುವೆ ಸಾಗುವುದು ಇನ್ನೊಂದು ರೋಚಕ ಅನುಭವ. ಪ್ರವಾಸಿಗರಿಗೆ ಇರ್ಪುವಿನಲ್ಲಿ ಸಾಕಷ್ಟು ಖಾಸಗಿ ಹೋಂ ಸ್ಟೇ ಸೌಲಭ್ಯಗಳಿವೆ. ಜೊತೆಗೆ ಅರಣ್ಯ ಇಲಾಖೆಯ ವಸತಿಗೃಹವೂ ಲಭ್ಯವಿದೆ. ನವೆಂಬರ್‌ನಿಂದ ಏಪ್ರಿಲ್ ಚಾರಣಕ್ಕೆ ಪ್ರಶಸ್ತ ಸಮಯ.

ಅರಣ್ಯ ಇಲಾಖೆ ಅನುಮತಿ ಪಡೆದು, ಇಲಾಖೆ ಕಳುಹಿಸುವ ಮಾರ್ಗದರ್ಶಿಯನ್ನು ಕರೆದುಕೊಂಡು ಚಾರಣಕ್ಕೆ ತೆರಳುವುದು ಅಗತ್ಯ. ಇಲಾಖೆಯ ಗೈಡ್‌ಗಳು ಸಂಪೂರ್ಣ ಚಾರಣದಲ್ಲಿ ಜೊತೆಗಿದ್ದು ಮಾರ್ಗದರ್ಶನ ನೀಡುತ್ತಾರೆ.

'ಪ್ರವಾಸ ಮನಸ್ಸಿಗೆ ಉಜ್ಜೀವನ. ಹೊಸ ಶಕ್ತಿ ತುಂಬುತ್ತದೆ.' 

"ಕಣ್ಮನ ಸೆಳೆಯುವ ವಿಹಂಗಮ ನೋಟ, ಚುಮುಚುಮು ನೀರಿನ ಹನಿಗಳ ತಂಗಾಳಿ, ಹಸಿರ ಸಿರಿಯ ವನದಲ್ಲಿ ಇರ್ಪು ಜಲಪಾತವನ್ನು ನೋಡುವುದೇ ಚೆಂದ" 

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************

Ads on article

Advertise in articles 1

advertising articles 2

Advertise under the article