ಸ್ಫೂರ್ತಿಯ ಮಾತುಗಳು : ಸಂಚಿಕೆ - 213
Monday, April 27, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 213
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ರ ಮಾರ್ಚ್- ಏಪ್ರಿಲ್ ಮಾಹೆಗಳಲ್ಲಿ ನಡೆಸಿದ ಎಸ್. ಎಸ್ ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿ ವಾರವೇ ಸಂದಿದೆ. ನಿಗದಿತ ದಿನಕ್ಕೆ ಮುಂಚಿತವಾಗಿಯೇ ಫಲಿತಾಂಶ ಬಿಡುಗಡೆಯಾಗಿದೆ. ರೇಂಕ್ ನಿರ್ಣಯಕ್ಕೆ ಹಿಂದಿ ಮತ್ತು ಸಂಸ್ಖೃತ ಬೇಕು ಬೇಡ ಎಂಬ ಗೊಂದಲದ ನಡುವೆಯೂ ನ್ಯಾಯಾಲಯದ ಆದೇಶದಂತೆ ತೃತೀಯ ಭಾಷೆಗೆ ನ್ಯಾಯ ಸಿಕ್ಕಿದೆ. ಫಲಿತಾಂಶದಲ್ಲಿ ಹಿಂದಿಗೆ ಮನ್ನಣೆ ಸಿಕ್ಕಿ ಅದು ಗೆದ್ದು ಬೀಗಿದೆ; ಸಂಸ್ಕೃತಕ್ಕೂ ಅವಕಾಶ ತಪ್ಪಿಹೋಗಲಿಲ್ಲ. ರಾಜ್ಯದ ಫಲಿತಾಂಶ ಈ ಬಾರಿ ದಾಖಲೆಯೆಂಬುದು ವಿಶೇಷ. ಈ ಏರಿಕೆಯಲ್ಲಿ ಆಂತರಿಕ ಮೌಲ್ಯಮಾಪನದಲ್ಲಿ ನೀಡಲಾದ ಧಾರಾಳ ಅಂಕಗಳು ಅಲ್ಪ ಮಟ್ಟದಲ್ಲಿ ನೆರವಾಗಿರಲೂ ಬಹುದು.
ಕರ್ನಾಟಕ ರಾಜ್ಯದ ಫಲಿತಾಂಶ 94.1%. ಕಳೆದ ಬಾರಿಗಿಂತ ಬರೋಬ್ಬರಿ ಶೇಕಡಾ 14 ರಷ್ಟು ನೆಗೆತ ಕಂಡ ಫಲಿತಾಂಶ. ಜಿಲ್ಲಾವಾರು ತಾಳೆ ಹಾಕಿದಾಗ ದಕ್ಷಿಣ ಕನ್ನಡ ಶೇಕಡಾ 98.4 ಫಲಿತಾಂಶ ಪಡೆದು ಮಾಮೂಲಿನಂತೆ ಮೊದಲ ಸ್ಥಾನಿ. ದಕ್ಷಿಣ ಕನ್ನಡದ ಪಕ್ಕದಲ್ಲೇ ಇರುವ ಉಡುಪಿ ಜಿಲ್ಲೆಯು ಪಿ.ಯೂ ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶಗಳಲ್ಲಿ ಪ್ರಥಮ ಮತ್ತು ದ್ವೀತೀಯ ಸ್ಥಾನಗಳಿಗಾಗಿ ಪೈಪೋಟಿಯಲ್ಲಿರುತ್ತವೆ. ಈ ಬಾರಿ ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 98.18 ಫಲಿತಾಂಶ ಪಡೆದು ಅತ್ಯಲ್ಪ ಅಂತರದಲ್ಲಿ ಉಡುಪಿ ದ್ವೀತೀಯ ಸ್ಥಾನ ಪಡೆಯಿತು. ಉತ್ತರಕನ್ನಡ ಜಿಲ್ಲೆ ಶೇಕಡಾ 98.09 ಫಲಿತಾಂಶ ನೀಡಿ ತೃತೀಯ ಸ್ಥಾನ ಅಲಂಕರಿಸಿತು.
ಈ ಸಲ ಬಂಟ್ವಾಳ ತಾಲೂಕು 97.87% ಫಲಿತಾಂಶ ಪಡೆದಿದೆ. 96 ಪ್ರೌಢ ಶಾಲೆಗಳ ಪೈಕಿ 16 ಸರಕಾರಿ, 7 ಅನುದಾನಿತ ಮತ್ತು 32 ಅನುದಾನರಹಿತ ಒಟ್ಟು 55 ಪ್ರೌಢ ಶಾಲೆಗಳು ಶೇಕಡಾ 100% ಫಲಿತಾಂಶ ನೀಡಿರುವುದು ಗ್ರಾಮಾಂತರ ಶಾಲೆಗಳು ಕಲಿಕಾ ಮಟ್ಟ ಕಾಯ್ದುಕೊಳ್ಳುವಲ್ಲಿ ಶ್ರಮಿಸುತ್ತಿವೆ ಎಂಬುದನ್ನು ಮತ್ತೊಮ್ಮೆ ರುಜುವಾತು ಮಾಡಿವೆ.
ರಾಜ್ಯದಲ್ಲಿ ಕಳೆದ ಬಾರಿ 22ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದರೆ ಈ ಬಾರಿ ಏಳು ಮಂದಿಗೆ ಈ ಭಾಗ್ಯ ಬಂದಿದೆ. ಅವರಲ್ಲಿ ಮೂವರು ಬಾಲಕಿಯರು ಮತ್ತು ನಾಲ್ವರು ಬಾಲಕರು ಎಂಬುದೇ ವಿಶೇಷ. ರಾಜ್ಯದ ಒಟ್ಟು ಫಲಿತಾಂಶವನ್ನು ಬಾಲಕ ಬಾಲಕಿಯರೆಂದು ವಿಂಗಡಿಸುವುದಾದರೆ ಹುಡುಗಿಯರು ಶೇಕಡಾ 96.1 ಮತ್ತು ಹುಡುಗರು ಶೇಕಡಾ 91.94 ಫಲಿತಾಂಶ ನೀಡಿದ್ದಾರೆ. ಹುಡುಗಿಯರ ಕೈ ಮೇಲಾಗಿರುವುದು ಅವರ ಕಲಿಕಾ ಶ್ರಮವನ್ನು ಎತ್ತಿ ಹಿಡಿಯುತ್ತದೆ.
ಬಂಟ್ವಾಳ ತಾಲೂಕಿನ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಪೂರ್ವಿ 620 ಅಂಕ ಪಡೆದು ತಾಲೂಕಿಗೆ ಮೊದಲಿಗಳಾಗಿರುವಳು.
ವಿಟ್ಲ ಕಸಬ ಗ್ರಾಮದ ಕಲ್ಲಕಟ್ಟ ನಿವಾಸಿ, ಟೈಲರ್ ವೃತ್ತಿಯ ಕೆ. ಜಗನ್ನಾಥ ಶೆಟ್ಟಿ ಸಾರಿಕಾ ಶೆಟ್ಟಿ ದಂಪತಿಗಳ ಪುತ್ರಿ ಕುಮಾರಿ ಬಾಂಧವಿ 625ಕ್ಕೆ 606 ಅಂಕ ಗಳಿಸಿ ಕನ್ನಡ ಮಾಧ್ಯಮದಲ್ಲಿ ಉತ್ತಮ ಸಾಧನೆ ಮಾಡಿರುತ್ತಾಳೆ.
ಸಂಸ್ಕೃತ ಭಾಷೆಯಲ್ಲಿ ನೂರಕ್ಕೆ ನೂರರ ಈಕೆಯ ಸಾಧನೆ ಪ್ರಶಂಸನೀಯ. ಸ್ಕೌಟ್ ಚಟುವಟಿಕೆಯಲ್ಲಿ ತೃತೀಯ ಸೋಪಾನ ಮುಗಿಸಿ , ರಾಜ್ಯ ಪುರಸ್ಕಾರ ಪಡೆಯಲು ಕಾತರಳಾಗಿರುವ ಬಾಂಧವಿಯು ವಿಠಲ ಪ್ರೌಢ ಶಾಲೆಯ ವಿದ್ಯಾರ್ಥಿನಿ. ಆ ಪ್ರೌಢ ಶಾಲೆಗೆ ಬಾಂಧವಿಯೇ ಮೊದಲಿಗಳಾಗಿರುವಳು. ಬಾಂಧವಿ ಬಿ.ಪಿ.ಎಲ್ ಕುಟುಂಬದ ಮಗಳು. ಬಡತನವು ಕಲಿಕೆಗೆ ಅಡ್ಡಿಯಲ್ಲ. ಕಲಿಯುವವರು ಎಲ್ಲಿಯೂ ಕಲಿಯುತ್ತಾರೆ. ಕಲಿಯುವ ಆಸಕ್ತಿ ಮತ್ತು ಪರಿಶ್ರಮ ಬೇಕು ಎಂದೆನ್ನುವ ಈಕೆ ಹೆತ್ತವರು ನೀಡಿದ ಸಹಕಾರ ಹಾಗೂ ಬೋಧಕರ ಪ್ರೋತ್ಸಾಹಗಳನ್ನು ಸ್ಮರಿಸುತ್ತಾಳೆ. ತಾನು ನೃತ್ಯಾಭ್ಯಾಸಿಯಾಗಿದ್ದು ತನಗೆ ತಿಳಿದಿರುವ ನೃತ್ಯಗಳನ್ನು ಅಕ್ಕ ಪಕ್ಕದ ಬಾಲಕಿಯರಿಗೆ ಹೇಳಿ ಕೊಡಲು ಉತ್ಸುಕ ಮನಸ್ಸು ಹೊಂದಿರುವುದು ಈಕೆಯ ಮನೋವೈಶಾಲ್ಯಕ್ಕೆ ನಿದರ್ಶನ. ಸದಾ ಚಟುವಟಿಕೆ ಮತ್ತು ಕ್ರಿಯಾಶೀಲತೆಯೇ ಇವಳ ಯಶದ ಗುಟ್ಟು.
ವಿಠಲ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಕಿರಣ್ ಕುಮಾರ್‌ರವರು ಹೇಳುವಂತೆ , “ಅತ್ಯುತ್ತಮ semi classical dancer, folk dancer, ಕುಣಿತ ಭಜನೆಗಾರ್ತಿ, ಉತ್ತಮ ವ್ಯಕ್ತಿತ್ವದ ಪ್ರತಿಭಾವಂತ ವಿದ್ಯಾರ್ಥಿನಿ ಬಾಂಧವಿ”.
ಬಾಂಧವಿಯು ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಮಟ್ಟದಲ್ಲಿ ನಡೆಸಿದ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣಳಾಗಿರುತ್ತಾಳೆ. ಜಿಲ್ಲಾ ಹಂತದ ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯದಲ್ಲಿ ಭಾಗವಹಿಸಿದ್ದಾಳೆ. ಬಾಂಧವಿ ಮಗಳ, ಮುಂದಿನ ಶಿಕ್ಷಣ ಸುಗಮವಾಗಲಿ ಎಂಬ ಹಾರೈಕೆಯೊಂದಿಗೆ ಎಸ್. ಎಸ್. ಎಲ್. ಸಿ. 2026ರ ಎಲ್ಲ ಸಾಧಕರಿಗೆ ಮಕ್ಕಳ ಜಗಲಿಯಿಂದ ಶುಭಾಶಯ ಹೇಳೋಣ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************