ಜೀವನ ಸಂಭ್ರಮ : ಸಂಚಿಕೆ - 237
Tuesday, April 14, 2026
Edit
ಜೀವನ ಸಂಭ್ರಮ : ಸಂಚಿಕೆ - 237
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ... ಇಂದು ಈ ಜಗತ್ತಿನ ವಸ್ತು ಮತ್ತು ವ್ಯಕ್ತಿಗಳ ಸ್ವರೂಪದ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನ ಯಾವುದೇ ವಸ್ತು, ಜೀವಿ ಯಾವುದೇ ಆಗಲಿ, ಅದು ಇದ್ದ ಹಾಗೆ ಇರುವುದಿಲ್ಲ. ಉದಾಹರಣೆಗೆ : ನಮಗೆ ಒಂದೆರಡು ಬಿಳಿ ಕೂದಲು ಬಂದಿತೆಂದರೆ ಕಿತ್ತು ಹಾಕುತ್ತೇವೆ. ಆ ಬಿಳಿ ಕೂದಲು ನಮ್ಮವೇ, ಬೇರೆಯವರದಲ್ಲ. ನಮ್ಮ ತಲೆಯ ಮೇಲೆ ನಮ್ಮ ಅನ್ನ ಉಂಡು, ನಮ್ಮ ರಸ ಹೀರಿ, ಬೆಳೆದಂತಹ ಎರಡು ಕೂದಲು ಸ್ವಲ್ಪ ಬಣ್ಣ ಬದಲಾದರೆ ನಮಗೆ ಸೇರುವುದಿಲ್ಲ. ಏಕೆ? ನಮಗೆ ಕರಿ ಕೂದಲ ಮೇಲೆ ಬಹಳ ಮೋಹ ಆಗಿರುತ್ತದೆ. ನಾವು ಭಾವಿಸುವುದೇನೆಂದರೆ ಈ ಕಪ್ಪು ಕೂದಲು ನೂರು ವರ್ಷ ಹೀಗೆ ಇರಬೇಕೆಂದು. ಹಾಗಾಗಿ ಆ ಬಿಳಿ ಕೂದಲನ್ನು ತೆಗೆದು ಹಾಕುತ್ತಾ, ತೆಗೆದು ಹಾಕುತ್ತಾ ಹೋಗುತ್ತೇವೆ. ಮತ್ತೆ ಬಿಳಿ ಕೂದಲು ಬರುತ್ತದೆ, ಏನು ಮಾಡೋದಕ್ಕೆ ಆಗುತ್ತದೆ? ಅದಕ್ಕೆ ಮನುಷ್ಯ ಏನು ಮಾಡುತ್ತಾನೆಂದರೆ ಅದಕ್ಕೆ ಬಣ್ಣ ಹಚ್ಚಿಕೊಂಡು ಹೋಗುತ್ತಾನೆ. ಇದು ಜನಕ್ಕೆ ಗೊತ್ತಾಗಬಾರದು ಎಂದು ಹೀಗೆ ಮಾಡುತ್ತಾನೆ. ಆದರೆ ಇದು ಎಲ್ಲರಿಗೂ ಗೊತ್ತಿದೆ. ಈತ ಬಣ್ಣ ಹಾಕಿದ್ದಾನೆ ಎಂದು ಎಲ್ಲರಿಗೂ ಗೊತ್ತಿದೆ. 40, 50 ವರ್ಷ ಆದ ಮೇಲೆ ಕೂದಲು ಬೆಳ್ಳಗಾಗುತ್ತದೆ ಅಂತ ಜಗತ್ತಿಗೆ ಗೊತ್ತಿದ್ದರೂ, ಈ ರೀತಿ ಮುಚ್ಚೊ ಹವ್ಯಾಸ ಇದಿಯಲ್ಲ ಅದು ಇದ್ದ ಹಾಗೆ ಇರಬೇಕು ಅಂತ. ಇದು ಆಗೋದೇ ಬಣ್ಣ ಹಾಕಬಾರದು ಅಂತಲ್ಲ. ಈ ತಲೆ ಕೂದಲು ಒಂದಲ್ಲ ಒಂದು ದಿನ ಬೆಳ್ಳಗಾಗುತ್ತದೆ ಅಂತ ಮೊದಲೇ ತಿಳಿದುಕೊಂಡಿದ್ದರೆ. ಏನು ಆಗುವುದಿಲ್ಲ. ಮೊದಲೇ ತಿಳಿದುಕೊಂಡಿದ್ದರೆ ಬೆಳ್ಳಗಾದರೇನು? ಕೆಂಪಗಾದರೇನು? ಆರಾಮಾಗಿ ಇರುತ್ತೇವೆ. ಹಾಗೆ ನಾವು, ಯಾವ ಯಾವುದನ್ನು ಬಯಸುತ್ತೇವೆ? ಅವು ಹೀಗೆ ಬದಲಾಗುತ್ತೆ ಅಂತ ತಿಳಿದು, ಪ್ರೇಮ ಮಾಡಿದರೆ ಆರಾಮ ಇರುತ್ತದೆ.
ಮದುವೆಯಾಗುವಾಗ ಹೇಳುತ್ತಾರೆ, ಏಳು ಜನ್ಮ ನೀವೇ ಸತಿಪತಿ ಅಂತ. ಇದನ್ನು ಕೇಳಿದರೆ ಹುಚ್ಚು ಆಗದೆ ಇರುತ್ತದೆ ಏನು. ಯಾವ ಸಂಬಂಧವೂ ಕಾಯಂ ಅಲ್ಲ. ದೇಹ ಸಂಬಂಧ ಇರಲಿ, ಮಾನಸಿಕ ಸಂಬಂಧವೇ ಇರಲಿ ಕಾಯಂ ಅಲ್ಲ. ಪತಿ-ಪತ್ನಿ, ತಂದೆ-ಮಗ, ಗುರು- ಶಿಷ್ಯ, ಯಾವುದೂ ಕೂಡ ಕಾಯಂ ಇಲ್ಲ. ಆ ಎಲ್ಲಾ ಸಂಬಂಧಗಳು ಹೊಯ್ದಾಡುತ್ತವೆ. ಸಂಬಂಧಗಳೆ ಹೊಯ್ದಾಡುವುದರಿಂದ ಇವುಗಳಿಂದ ಶಾಂತಿ ಪಡೆಯಲು ಯತ್ನಿಸಿದರೆ ಸಮಾಧಾನ ಸಿಗುವುದಿಲ್ಲ. ಸಂಬಂಧಗಳು ದೂರ ಆಗುವುದೇ ಅಂತ ತಿಳಿದುಬಿಟ್ಟರೆ, ಸಮಾಧಾನ ಆಗುತ್ತದೆ. ಜನ ಒಮ್ಮೆ ಹೊಗಳುತ್ತಾರೆ ಒಮ್ಮೆ ಬಯ್ಯುತ್ತಾರೆ. ಇದನ್ನು ತಿಳಿದುಕೊಂಡು ಬಿಟ್ಟರೆ ಬದುಕು ಆರಾಮ ಇರುತ್ತದೆ. ಹೊಗಳಿದಾಗಲೂ ಆರಾಮ. ತೆಗಳಿದಾಗಲೂ ಆರಾಮ ಇರುತ್ತದೆ. ಅದಕ್ಕೆ ಒಂದು ಸೂತ್ರ "ಇದ್ದಂಗೆ ಇರುವುದಿಲ್ಲ". ನಾವು ಈಗ ಇರುವಂತೆ ಇರುವುದಿಲ್ಲ. ಯಾರಾದರೂ ಸಹಿತ ಹಾಗೇ ಇರುವುದಿಲ್ಲ. ಏನಾದರೂ ಕೂಡ ಹಾಗೇ ಇರುವುದಿಲ್ಲ. ಇದನ್ನು ತಲೆಗೆ ಹಾಕಿಕೊಂಡು ವ್ಯಾಪಾರ ಮಾಡಿ, ಉದ್ಯೋಗ ಮಾಡಿ, ಏನಾದರೂ ಮಾಡಿ ಆರಾಮಾಗಿ ಇರುತ್ತದೆ. ಆರಾಮ ಇರಬೇಕಾದರೆ ತಿಳಿದುಕೊಳ್ಳಬೇಕು. ಇದ್ದಂಗೆ ಇರುವುದಿಲ್ಲ. ಜಗತ್ತೇ ಪಾಠ ಕಲಿಸುತ್ತದೆ. ಜಗತ್ತೇ ಒಂದು ಪುಸ್ತಕ. ಮನುಷ್ಯ ಕಲಿಯಲಿ ಅಂತ ದಿನ ಒಂದೊಂದು ಪುಟವನ್ನು ಜಗತ್ತು ತೋರಿಸುತ್ತಾ ಇದೆ. ಕೆಲಸಕ್ಕೆ ಸೇರಿ ಮೊದಲ ಸಹಿ ಹಾಕುವಾಗಲೇ ಹೇಳಿಕೊಳ್ಳಬೇಕು... ಈ ಕುರ್ಚಿ, ಈ ವೈಭವ ಇದ್ದಂಗೆ ಇರುವುದಿಲ್ಲ. ಇಡೀ ಇತಿಹಾಸ ನೋಡಿ. ಸಮಸ್ತ ಜಗತ್ತಿನ ಇತಿಹಾಸ ನೋಡಿ.
ಇತಿಹಾಸ ಎಂದರೇನು?...ಇದ್ದಂಗೆ ಇರುವುದಿಲ್ಲ. ವಿಜಯನಗರ ಅರಸರ ಕಾಲದಂತೆ ಈಗಿಲ್ಲ. ಇಂದಿನಂತೆ ನಾಳೆ ಇರುವುದಿಲ್ಲ. ಬೆಳಗಿನಂತೆ ಮಧ್ಯಾಹ್ನ ಇರುವುದಿಲ್ಲ. ಮಧ್ಯಾಹ್ನದಂತೆ ಸಂಜೆ ಇಲ್ಲ. ಸಂಜೆಯಂತೆ ರಾತ್ರಿ ಇಲ್ಲ. ಯಾರಾದರೂ, ಏನಾದರೂ, ಹೀಗೂ ಅನ್ನುತ್ತಾರೆ, ಹಾಗೂ ಅನ್ನುತ್ತಾರೆ. ಇದ್ದ ಹಾಗೆ ಅವರೇ ಇಲ್ಲ ಅಂದಮೇಲೆ ಅವರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ ಅನ್ನುವ ಭಾವ ಬರುತ್ತದೆ.
ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದ್ದು "ಬಯಸಿದ್ದು ಸಿಗೋದಿಲ್ಲ, ಸಿಕ್ಕಿದ್ದು ಕಾಯಂ ಇರುವುದಿಲ್ಲ." ಇದರ ಅರ್ಥ ಬಯಸುತ್ತಾ ಕೂರಬೇಡ. ಸಿಕ್ಕಿದಾಗಲೇ ಅನುಭವಿಸು. ಸಿಕ್ಕಿದ್ದು ಇದ್ದಂಗೆ ಇರುವುದಿಲ್ಲ. ಈ ಸೂತ್ರ ಸುಂದರ ಬದುಕಿನ ಸೂತ್ರ. ಅಲ್ಲವೇ ಮಕ್ಕಳೇ...?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************