-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 210

ಸ್ಫೂರ್ತಿಯ ಮಾತುಗಳು : ಸಂಚಿಕೆ - 210

ಸ್ಫೂರ್ತಿಯ ಮಾತುಗಳು : ಸಂಚಿಕೆ - 210
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
           
ಊರಿಗೆ ಸ್ವಾಮೀಜಿ ಬಂದಿದ್ದರು. ಪ್ರವಚನ ಮುಗಿಸಿ ಎಲ್ಲರಿಗೂ (ಮಂತ್ರ) ಅಕ್ಷತೆ, ಮುಸಂಬಿ ಹಣ್ಣು ಕೊಡುತ್ತಿದ್ದರು. ಹತ್ತಾರು ಮಂದಿ ಕೈಯ ಮೇಲೆ ಕರವಸ್ತ್ರ ಹರಡಿ ಅದರಲ್ಲಿ ಭಕ್ತಿಯಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು. ನನಗನಿಸಿತು... ಕೆಲವರು ಆ ಕರವಸ್ತ್ರದಲ್ಲಿ ಎಲ್ಲೆಲ್ಲಿ ಏನೇನನ್ನೆಲ್ಲಾ ಉಜ್ಜಿದ್ದಾರೋ ಏನೋ? ಆ ಮುಸುಡುಗಳಿಗೆ ಭಕ್ತಿ ಭಾವವೊಂದು ಕೇಡು! ಛೀ… ಛೀ..! ಆ ದಿನ ನಾನು ತರಗತಿಯಿಂದ ಹೊರ ಬರುವಾಗ ಕರವಸ್ತ್ರ ಮೇಜಿನ ಮೇಲೆ ಬಾಕಿಯಾಯಿತು. ಹೊರಗೆ ಬಂದವನಿಗೆ ಫಕ್ಕನೇ ಕರವಸ್ತ್ರದ ನೆನಪಾಯಿತು. ಕಾರಣ ಇಷ್ಟೇ- ಬರೆಯಲು ಬಳಸಿದ ಬಿಳಿ ಸುಣ್ಣದ ಹುಡಿಯನ್ನು ಒರೆಸಲು ನನಗೆ ಕರವಸ್ತ್ರ ಬೇಕಿತ್ತು. ಸೀದಾ ತರಗತಿಗೆ ವಾಪಾಸ್‌ ಬಂದೆ. ಕರವಸ್ತ್ರ ಮೇಜಿನ ಮೇಲಿತ್ತು. ತೆಗೆದೆ, ಮೊದಲು ಮೀಸೆ ಉಜ್ಜಿದೆ, ಮತ್ತೆ ಕೈ ಉಜ್ಜಿದೆ. ಮಕ್ಕಳೆಲ್ಲಾ ಗೋಳೋ ಎಂದು ಅತ್ತದ್ದಲ್ಲ, ನಕ್ಕಿದ್ದು. ಕಾರಣ ಏನು ಗೊತ್ತೇ. ನಾನು ಹೊರ ನಡೆದಂತೆ ತರಗತಿಯ ಮಾಣಿ ಆ ಟವೆಲಿನಿಂದ ಕರಿಹಲಗೆ ಒರೆಸಿ ಯಥಾ ಸ್ಥಾನದಲ್ಲಿ ಯಥಾ ಸ್ಥಿತಿಯಲ್ಲಿ ಆ ಟವೆಲನ್ನು ಸ್ಥಾಪನೆ ಮಾಡಿದ್ದ. ನನ್ನ ಮೀಸೆ ಸಂಪೂರ್ಣ ಒಂದು ಕ್ಷಣದಲ್ಲಿ ಬಿಳಿ. ನಕ್ಕಿದ್ದು ಮಕ್ಕಳ ತಪ್ಪಲ್ಲ, ಟವೆಲು ಮರೆತ ನನ್ನ ತಪ್ಪು. 

ಹೆಂಡತಿ ಹೇಳಿದ್ದಳು, “ನೀವು ಬರುವಾಗ ಗೋಳಿ ಬಜೆ ತನ್ನಿ, ಎಂದು. ಹೋಟೆಲೊಂದರ ಶೋಕೇಸಿನಲ್ಲಿ ಗೋಳಿ ಬಜೆಗಳು ಪವಡಿಸಿದ್ದುವು. ಆಗ ಪ್ಲಾಸ್ಟಿಕ್‌ ಲಕೋಟೆಗಳ ಬಳಕೆ ಬಹಳ ಕಡಿಮೆ. ಆ ಹೋಟೆಲು ಪ್ಲಾಸ್ಟಿಕ್‌ ಮುಕ್ತ. ಬಾಳೆಲೆಯಲ್ಲಿ ತಿಂಡಿ ಹಾಕಿ ಕಾಗದದಲ್ಲಿ ಸುತ್ತಿ ಕೊಡುತ್ತಿದ್ದರು. ನಾನು ಹೆಂಡತಿಗೆಂದು ಗೋಳಿ ಬಜೆ ಖರೀದಿಸಿ ಮನೆಯತ್ತ ಚುರುಕಾಗಿ ನಡೆದೆ. ಅಷ್ಟರಲ್ಲಿ ಗೋಳಿಬಜೆಯ ಪೊಟ್ಟಣ ಕೈ ಜಾರಿತು. ಕಾಗದ ಎಲೆ ಗೋಳಿಬಜೆ ದಿಕ್ಕಾ ಪಾಲು. ಹಣ ಕೊಟ್ಟದ್ದೇನಲ್ಲ! ಹೆಂಡತಿಗಾಗದಿದ್ದರೂ ನಾಯಿಗಾದೀತೆಂದು ಗೋಳಿಬಜೆಗಳನ್ನು ಹೆಕ್ಕಲಾರಭಿಸಿದೆ. ಒಯ್ಯುವುದಾರೂ ಹೇಗೆ? ಯೋಚನೆಗಿಟ್ಟುಕೊಂಡೆ. ತಕ್ಷಣ ಜ್ಞಾನೋದಯವಾಯಿತು. ಕರವಸ್ತ್ರ ಕಣ್ಣ ಮುಂದೆ ಪ್ರತ್ಯಕ್ಷವಾಯಿತು. ಎಲ್ಲವನ್ನು ಟವೆಲಿನಲ್ಲಿ ಸುತ್ತಿ ಮನೆಗೆ ತಂದೆ. ಕರವಸ್ತ್ರ ತೈಲಮಯ. ಹೆಂಡತಿಯ ಮುಖ ಕೆಂಪುಮಯ. 

ದೇವಾಲಯದಿಂದ ದೇವರ ಗಂಧಪ್ರಸಾದ, ಕುಂಕುಮ ಪ್ರಸಾದ, ಪಂಚಕಜ್ಜಾಯ ಪ್ರಸಾದ, ಅಪ್ಪಕಜ್ಜಾಯ ಪ್ರಸಾದ, ಬಾಳೆಹಣ್ಣು ಪ್ರಸಾದ, ಹೂಗಳನ್ನು ಕರವಸ್ತ್ರದಲ್ಲಿ ಸುತ್ತಿ ಮನೆಗೆ ತಂದು ಉಗಿಸಿಕೊಂಡ ಅನೇಕ ಮಿತ್ರರು ನನಗಿದ್ದಾರೆ. ಇದು ಸರಿಯಲ್ಲದಿದ್ದರೂ ಬೇರೆ ದಾರಿಯಿಲ್ಲವಲ್ಲ ಎಂಬ ಸಮಜಾಯಿಷಿಕೆ ಅವರದು. 

ಅವನಿಗೆ ಮೀನು ತಿನ್ನುವುದು ಇಷ್ಟ. ಅವನು ಮೀನು ತಿನ್ನುವುದಿಲ್ಲ ಎಂದೇ ನಾನು ತಿಳಿದಿದ್ದೆ. ಆ ದಿನ ಪೇಟೆಗೆ ಹೋಗಿದ್ದೆ. ಬಸ್‌ ಹತ್ತಿ ಕುಳಿತೆ. ಆದೇ ಸಮಯಕ್ಕೆ ಆ ಮಿತ್ರ ಬಸ್‌ ಹತ್ತಿದ ನನ್ನ ಪಕ್ಕ ತೆರವಾದ ಸೀಟಿತ್ತು . ನನಗೆ “ಸೀಟಿಡು” ಎಂದು ಹೇಳಿ ತಕ್ಷಣ ಇಳಿದ. ಪುನಹ ಬಂದವನೇ ನನ್ನ ಹತ್ತಿರ ಕುಳಿತ. ಮೀನಿನ ಪರಿಮಳ ಮೂಗಿಗೆ ಅಡರಿತು. ಅವನಿಗೆಂದೆ, “ಯಾರಾದರೂ ಮೀನು ಮಾರುವವರ ಕೈ ಕುಲುಕಿದೆಯಾ?” ತಕ್ಷಣ ಅವನು ತನ್ನ ಕೈಯ ಪೊಟ್ಟಣವನ್ನು ಸರಿಪಡಿಸುತ್ತಾ, “ಇಲ್ಲಪ್ಪ, ನಿನ್ನ ಮೂಗೇ ಸರಿಯಿಲ್ಲ" ಎನ್ನ ಬೇಕೇ? ಅವನ ಕರವಸ್ತ್ರದೊಳಗೆ ಮೀನಿನ ಚೀಲ ಅಡಗಿತ್ತು. ಅವನು ಸರಿಯೇ ಇದ್ದ, ನನ್ನ ಮೂಗು ಅವನಿಗೆ ಕೆಟ್ಟು ಹೋಗಿತ್ತು. ಟವೆಲಿನ ಕರಾಮತ್ತು ಅಸಾಧಾರಣ.

ಕರವಸ್ತ್ರವನ್ನು ಶತ್ರುಗಳಿಂದ ರಕ್ಷಣಾಸ್ತ್ರವನ್ನಾಗಿಯೂ ಬಳಸಿದ ಉದಾಹರಣೆಗಳಿವೆ. ಶತ್ರುಗಳು, ಕಳ್ಳರು, ದುರುಳ ದುಶ್ಶಾಸನರೆದುರಾದಾಗ ನಾಲ್ಕು ಕಲ್ಲುಗಳನ್ನು ಕರವಸ್ತ್ರದಲ್ಲಿ ಪೇರಿಸಿ ಕರವಸ್ತ್ರದ ಎರಡೆರಡು ಮೂಲೆಗಳನ್ನು ಜೊತೆಗೊಳಿಸಿ ಸುತ್ತಬೇಕು. ಕಲ್ಲು ಕರವಸ್ತ್ರದಲ್ಲಿ ಭದ್ರವಾಗಿದ್ದರೆ ಸಾಕು. ದಾಳಿಗಾರರ ಮುಖಕ್ಕೆ ಕಲ್ಲು ಪೇರಿತ ಕರವಸ್ತ್ರವನ್ನು ಬೀಸಿ ಮೊಗೆದರೆ ದಾಳಿನಿಂತು ಪಲಾಯನವಾರಂಭವಾಗುತ್ತದೆ.

ಮದುವೆ, ಉಪನಯನ ಸೀಮಂತಗಳೇ ಮೊದಲಾದ ಸಮಾರಂಭಗಳಲ್ಲಿ ಸಿಹಿ ತಿಂಡಿ ವಿತರಣೆಯಾಗುವಾಗ ಕರವಸ್ತ್ರ ಮುನ್ನೆಲೆಗೆ ಬರುವುದಿದೆ. ಎಡಭಾಗದಲ್ಲಿ ಅಲ್ಪ ಸ್ವಲ್ಪ ಅವಕಾಶವಿರುವ ಸಂಧಿಯೊಳಗೆ ಟವೆಲನ್ನು ಹಾಸಿಡುತ್ತಾರೆ. ಹೋಳಿಗೆ ಬಂದಾಗ ಎಡಕೈ ಚಾಚುತ್ತಾರೆ. ಆದರಲ್ಲಿ ಹೋಳಿಗೆ ಬಿದ್ದೊಡನೆ ಆ ಹೋಳಿಗೆ ಹೊಟ್ಟೆ ಸೇರದೆ ಟವೆಲಿನಲ್ಲಿ ಮಲಗುತ್ತದೆ. ಒಂದೆರಡು ಹೋಳಿಗೆ, ಮೈಸೂರು ಪಾಕು, ಅಂಬಡೆ, ಚಿಪ್ಸ್‌ ಎಲ್ಲವೂ ಟವೆಲಣ್ಣನ ಮಡಿಲು ಸೇರುತ್ತದೆ. ಊಟ ಮುಗಿದು ಏಳುವಾಗ ಸಿಹಿಗಳೊಂದಿಗೆ ಕರವಸ್ತ್ರ ಪ್ಯಾಕ್‌ ಆಗಿ ಮನೆ ಸೇರುತ್ತದೆ.

ನನ್ನಂತಹವರು ಪ್ರಯಾಣದಲ್ಲಿ ಕನಿಷ್ಠ ನಾಲ್ಕು ಕರವಸ್ತ್ರ ಒಯ್ಯುವುದೂ ಇದೆ. ಆಗ ಅವುಗಳಲ್ಲಿ ಒಂದು ಕರವಸ್ತ್ರವಾದರೆ ಉಳಿದವುಗಳು ಜೇಬು ವಸ್ತ್ರಗಳು. ಕೈಯಲ್ಲಿರುವ ಕರವಸ್ತ್ರ ಕೈಕೊಟ್ಟಾಗ ಅಥವಾ ಬಳಸುವಂತಿಲ್ಲ ಎಂದಾದಾಗ ಮೊದಲು ಅಂಗಿ ಜೇಬಿನ ಟವೆಲು ಹೊರಗೆ ಬರುತ್ತದೆ. ಕರದಲ್ಲಿ ಮೊದಲಿದ್ದುದು ಅಂಗಿ ಜೇಬು ಸೇರುತ್ತದೆ. ಹೀಗೆ ಅಗತ್ಯ ಬಂದಾಗ ಪರ್ಯಾಯವಾಗಿ ಟವೆಲುಗಳು ನಮ್ಮಲ್ಲಿ ಸ್ಟಾಕ್‌ ಇದ್ದರೆ ಎಷ್ಟು ಚಂದ ಅಲ್ವೇ?

ಹೀಗೆ ಟವೆಲು ಯಾನೇ ಕರವಸ್ತ್ರದ ಆಖ್ಯಾನ ವ್ಯಾಪಕವಾದುದು. ಈಗ ಇಷ್ಟೇ ಸಾಕೆನಿಸುತ್ತದೆ. ನೀ ಸಣ್ಣವನೆಂದು ಮೂದಲಿಸದೆ ಕರವಸ್ತ್ರವನ್ನು ಪೂಜ್ಯವಾಗಿ ನೋಡುವ ಮಹಾತ್ಮರು ನಾವಾಗಬಾರದೇಕೆ?
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************


Ads on article

Advertise in articles 1

advertising articles 2

Advertise under the article