-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 123

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 123

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 123
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ನಿದ್ದೆ ಮತ್ತು ಕನಸುಗಳ ಬಗ್ಗೆ ತಿಳಿಯುತ್ತಾ ಸುತ್ತಾಡುತ್ತಿದ್ದ ನಾವು ರಜೆಯನ್ನು ಕಳೆಯುವ ಬಗ್ಗೆ ಕೂಡಾ ಮಾತನಾಡಿದೆವು. ನಮ್ಮ ಪ್ರವಾಸಗಳಿಂದ ಬಿಡುಗಡೆಯಾಗುವ ಸೆರಟೋನಿನ್ ( happiness/ feel good hormone) ಬಗ್ಗೆ ತಿಳಿದೆವು. ಇದು ಸ್ವಸ್ಥ ನಿದ್ದೆಯ ಹಾರ್ಮೋನ್ ಕೂಡಾ ಹೌದು. ಪಿಕ್ ನಿಕ್ ಗೆ ಹೋಗಿ ಬಂದ ನಂತರ ನಿಮಗೆ ಬಣ್ಣದ ಕನಸುಗಳು/ ಹಗಲುಗನಸುಗಳು ಬೀಳಲು ಕಾರಣ ಇದೇ ಸೆರಟೋನಿನ್. 

ಈಗ ನನ್ನ ಶಿಷ್ಯೆಯ ಪ್ರಶ್ನೆಯ ಬಗ್ಗೆ ಬರೋಣ. ಇದನ್ನು ಆರಂಭದಲ್ಲಿಯೇ ಹೇಳಿದ್ದೆ. ಕೆಲವರಿಗೆ ಕನಸುಗಳೇ ಬೀಳುವುದಿಲ್ಲ ಏಕೆ? ಈಗ ನೀವೇ ಹೇಳುತ್ತೀರಿ ನಿದ್ದೆಯ‌ ಎರಡು ಹಂತಗಳಲ್ಲಿ ಇಲ್ಲವೆಂದರೆ ಕಣ್ರೆಪ್ಪೆ ಚಲನೆಯ ಹಂತದಲ್ಲಿಯಾದರೂ ಕನಸುಗಳು ಬೀಳದಿರಲು ಸಾಧ್ಯವೇ ಇಲ್ಲ. ಆದರೆ ಅವರೇಕೆ ಕನಸು ಬೀಳುತ್ತಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಇರುವ ಸಾಧ್ಯತೆ ಒಂದೇ ಅವರಿಗೆ ಕನಸುಗಳು ನೆನಪು ಉಳಿಯುತ್ತಿಲ್ಲ ಅಷ್ಟೇ. ಹಾಗಾದರೆ ಈ ಕನಸುಗಳು ಏಕೆ ನೆನಪಾಗಿ (memory) ಬದಲಾಗುತ್ತಿಲ್ಲ? 

ನಿಮ್ಮ ಮಿತ್ರರು ಮಾತನಾಡುವಾಗ ಕೇಳಿರಬಹುದು. ನನ್ನ ಫೋನ್ ನಲ್ಲಿ ಮೆಮೊರಿ ಭರ್ತಿಯಾಗಿದೆ ಆದ್ದರಿಂದ ‌ಫೋಟೋಗಳು ಸೇವ್ ಆಗುತ್ತಿಲ್ಲ ಎಂದು. ಅಂದರೆ ಪ್ರತಿಯೊಂದು ಘಟನೆಯೂ ಒಂದು ಸಣ್ಣ ನೆನಪು. ಇದು ನಿಮ್ಮ ಮೆದುಳಿನ ಹಾರ್ಡ್ ಡಿಸ್ಕ್ ನಲ್ಲಿ ಒಂದು ತುಣುಕು ಜಾಗವನ್ನು ಕೇಳುತ್ತದೆ. ಹೀಗೆ ಪ್ರತೀ ನೆನಪೂ ಸಂಚಯವಾಗುತ್ತಾ ಹೋದಂತೆ ನಿಮ್ಮ ಮೆದುಳಿನ ಹಾರ್ಡ್ ಡಿಸ್ಕ್ ಭರ್ತಿಯಾಗುತ್ತಾ ಹೋಗುತ್ತದೆ. ಅದೇ ನಿಮ್ಮ ಹಾರ್ಡ್ ಡಿಸ್ಕ್ ಅಥವಾ ಮೇಲ್ ಬಾಕ್ಸ್ ಭರ್ತಿಯಾಗುವುದು. ಇಲ್ಲಿ ನೀವು erase the earliest ಎಂದು ಆದೇಶ ನೀಡಿದರೆ ಹಳೆಯದನ್ನು ಅಳಿಸಿ ಹೊಸದನ್ನು ಒಳ ಬರಲು ಬಿಡುತ್ತದೆ. ಆದರೆ ಮೆದುಳು ಒಂದು ಸೂಪರ್ ಕಂಪ್ಯೂಟರ್ ಅಲ್ಲವೇ. ಅದು ಹಳೆಯದನ್ನು ಅಳಿಸುವಾಗ ಸಮಯವನ್ನು ಮಾನದಂಡವಾಗಿ ಬಳಸುವುದಿಲ್ಲ. ಬದಲಾಗಿ ಪ್ರಾಮುಖ್ಯತೆಯನ್ನು ಆದ್ಯತೆಯನ್ನಾಗಿ ಬಳಸುತ್ತದೆ. ಆದ್ದರಿಂದ ನೀವು 4 ವರ್ಷದವರಿರುವಾಗ ಅಪ್ಪನ ಹೆಗಲೇರಿ ಜಾತ್ರೆಗೆ ಹೋದದ್ದು, ಮೂರನೆಯ ತರಗತಿಯಲ್ಲಿ ಕಲಿತ ಪುಣ್ಯಕೋಟಿಯ ಕಥೆ, ನಾಲ್ಕನೆಯ ತರಗತಿಯಲ್ಲಿ ಗಂಟೆಯ ನೆಂಟನೆ ಓ ಗಡಿಯಾರ ಎಂಬ ಕವನ ನಿಮಗೆ ನೆನಪಿರುತ್ತದೆ. ಆದರೆ ಮೊನ್ನೆ ಪರೀಕ್ಷೆಗೆ ಬಾಯಿ ಪಾಠ ಮಾಡಿದ ಪ್ರಶ್ನೆ ಉತ್ತರ ಮರೆತು ಹೋಗಿರುತ್ತದೆ. ಅಂದರೆ ಇದು ನಿಮ್ಮ ಆದೇಶಕ್ಕೆ ಕಾಯದೆ ತನ್ನಷ್ಟಕ್ಕೇ ತಾನೇ ಆಯ್ಕೆ ಮಾಡಿಕೊಳ್ಳುತ್ತದೆ. ಒಂದು ವೇಳೆ ಮರೆವು ಇರಲಿಲ್ಲ ಎಂದಿಟ್ಟುಕೊಳ್ಳಿ ನಿಮ್ಮ ಮೆದುಳಿನ ಹಾರ್ಡ್ ಡಿಸ್ಕ್ ಭರ್ತಿಯಾಗಿ ಹೊಸದೇನೂ ಸ್ವೀಕರಿಸಲಾಗದ ಸ್ಥಿತಿ ಉಂಟಾಗಿ ಹುಚ್ಚು ಹಿಡಿಯುತ್ತಿತ್ತು. ಥೂ ಹಾಳು ಮರೆವು ಎನ್ನುತ್ತೀರಲ್ಲ. ಇನ್ನು ಮೇಲೆ ಹಾಗೆನ್ನಬೇಡಿ ಈ ಮರೆವು ನಿಮ್ಮ ಮೆದುಳಿನ ಆರೋಗ್ಯ ಕಾಪಾಡುವ ಒಂದು ದಿವ್ಯೌಷಧ.  

ಈಗ ಕನಸಿನ ನೆನಪುಗಳಿಗೆ ಬರೋಣ. ನಿಮ್ಮ ಮೆದುಳು ನಿಮ್ಮ ಕನಸುಗಳಿಗೆ ಯಾವುದೇ ಪ್ರಾಮುಖ್ಯತೆ ನೀಡದೇ ಇರಬಹುದು ಅಥವಾ ಮೆದುಳಿಗೆ ಕನಸಿನ ನೆನಪುಗಳು ಅಮುಖ್ಯವಾಗಿರುವುದರಿಂದ ನೆನಪಾಗಿ ದಾಖಲಿಸದೇ ಇರಬಹುದು. ಇಲ್ಲಿ ಆಯ್ಕೆ ಮೆದುಳಿಗೆ ಅಥವಾ ನಿಮ್ಮ ಮೆದುಳಿನ ಭಾವ ವಲಯಕ್ಕೆ ಹೊರತು ನಿಮ್ಮ ಇಚ್ಛೆ ಅನಿಚ್ಛೆಗಳಿಗಲ್ಲ.

ಕನಸುಗಳು ನೆನಪುಗಳಾಗದಿರಲು ಇನ್ನೊಂದು ಕಾರಣವೆಂದರೆ ನಿಮ್ಮ ಕನಸು ಮತ್ತು ಎಚ್ಚರಗಳ ನಡುವಿನ ಸಮಯದ ಅಂತರ. ಕನಸುಗಳು ಮುಗಿದು ಹೋದ ಮೇಲೆ ನಿಮಗೆ ಎಚ್ಚರವಾದರೆ ಅಂದರೆ ನಿಮ್ಮ ಕನಸುಗಳು ಮತ್ತು ಎಚ್ಚರದ ನಡುವಿನ ಅಂತರ ಹೆಚ್ಚಾದಷ್ಟೂ ನಿಮಗೆ ಕನಸುಗಳು ನೆನಪಿನಲ್ಲುಳಿಯುವ ಸಾಧ್ಯತೆಗಳು ಕ್ಷೀಣ. ನಿಮಗೆ ಕನಸುಗಳು ನಿಮ್ಮ ನೆನಪಿನಲ್ಲುಳಿಯಬೇಕೆಂದರೆ ನಿಮಗೆ‌ ಕನಸಿನ ನಡುವೆ ಎಚ್ಚರವಾಗಬೇಕು. ಆದ್ದರಿಂದ ಬೆಳಗಿನ ಜಾವದಲ್ಲಿ ನಿಮಗೆ ಕನಸಿನ ನಡುವೆ ಎಚ್ಚರವಾಗುವ ಅಥವಾ ಅಮ್ಮ ಬಂದು ಎಬ್ಬಿಸುವ ಸಾಧ್ಯತೆ ಇರುವುದರಿಂದ ಈ ಕನಸುಗಳು ನೆನಪುಳಿಯುವ ಸಾಧ್ಯತೆಗಳು ಜಾಸ್ತಿ.

ಈ ಬೆಳಗಿನ ಜಾವ ಬೀಳುವ ಕನಸುಗಳು ನೆನಪುಳಿಯುವ ಸಾಧ್ಯತೆಗಳು ಜಾಸ್ತಿಯೇ ಹೊರತು ಬೆಳಗಿನ ಜಾವದ ಕನಸುಗಳು ನಿಜವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************


Ads on article

Advertise in articles 1

advertising articles 2

Advertise under the article