ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 122
Friday, April 3, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 122
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ...ಹಾಗೆ ಬೇಸಿಗೆ ಕಾಲಿಟ್ಟಿದೆ. ನಿಮ್ಮ ಬೇಸಿಗೆ ರಜೆ ಇನ್ನೇನು ಆರಂಭವಾಗಲಿದೆ. ಈ ಬಾರಿಯ ಬೇಸಿಗೆ ಎಲ್ ನಿನೋ ದ ಕಾರಣದಿಂದ ಅಪಾಯಕಾರಿಯಾಗಲಿದೆ. ಆದ್ದರಿಂದ ಈ ಬೇಸಿಗೆಯ ರಜೆಯಲ್ಲಿ ನೀವು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಇದಕ್ಕೆ ಕಾರಣಗಳನ್ನು ಮುಂದೆ ಓದಿ.
ನಾನು ಹೇಳಿ ಕೇಳಿ ಕೃಷಿಕ. ನನ್ನ ತಂದೆಯ ಹೆಸರಿನಲ್ಲಿ ಕೃಷಿ ಭೂಮಿ ಇದೆ ಎನ್ನುವ ಕಾರಣಕ್ಕೆ ನಾನು ಕೃಷಿಕನಾದುದಲ್ಲ. ತಂದೆಯ ಮತ್ತು ಅಮ್ಮನಿಂದ ತರಬೇತಿ ಪಡೆದ ವೃತ್ತಿಪರ ಕೃಷಿಕ. ಕೃಷಿಕರು ಆಗಿ ಹೋಗಿರುವುದರ ಬಗ್ಗೆ ವ್ಯಥೆಪಡುತ್ತಾ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಮುಂದಿನ ಬೆಳೆಗೆ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಾರೆ. ನಿಸರ್ಗದ ಆಶ್ವಾಸನೆಗಳನ್ನು ನಂಬಿ ಅವರ ಹೂಡಿಕೆ ಮುಂದುವರಿಯುತ್ತದೆ. ಮುಂಗಾರು ನಾಲ್ಕೈದು ತಿಂಗಳು ಇರುವಾಗಲೇ ಸಮಗ್ರ ಕಳೆ ಮತ್ತು ಕೀಟ ನಿಯಂತ್ರಣಕ್ಕಾಗಿ ಆತ ಮಾಗಿ ಉಳುಮೆಯಲ್ಲಿ ತೊಡಗಿರುತ್ತಾನೆ. ಪ್ರಕೃತಿ ಮುಂದಿನ ಮಳೆ ಬೆಳೆ ಸಮೃದ್ಧಿಯ ಬಗ್ಗೆ ಆತ ತೆರೆದ ಕಣ್ಣಿನ ವೀಕ್ಷಣೆಯಲ್ಲಿರುತ್ತಾನೆ.
ನಾನು ಈ ವರ್ಷ ಬಹಳ ಖುಷಿಯಲ್ಲಿದ್ದೆ. ಏಕೆಂದರೆ ಮಾವು ಮತ್ತು ಗೇರು ದಂಡಿಯಾಗಿ ಹೂ ಬಿಟ್ಟಿದ್ದವು. ಮಾವು ಗೇರು ಚನ್ನಾಗಿ ಹೂ ಬಿಟ್ಟ ವರ್ಷ ಮಳೆ ಬೆಳೆ ಚನ್ನಾಗಿರುತ್ತದೆ ಎಂದು ಕರಾವಳಿಗರು ನಂಬುತ್ತಾರೆ. ಆದರೆ ಮಾವಿನ ಹೂ ನೋಡ ನೋಡುತ್ತಾ ಕರಗಿಯೇ ಹೋಯಿತು. ಆದ್ದರಿಂದ ಅವ್ಯಕ್ತ ಭಯದಲ್ಲಿದ್ದೆ. ಅದರ ಜೊತೆಗೆ ಪತ್ರಿಕೆಗಳಲ್ಲಿ ಎಲ್ ನಿನೋ (El Nino) ಪರಿಣಾಮದಿಂದಾಗಿ ಈ ವರ್ಷ ಮಳೆ ಕಡಿಮೆ ಇರುವುದಾಗಿ ಬರೆದಿದ್ದರು. ಹೀಗೆ ಅಮ್ಮನ ಬಳಿ ಮಾತನಾಡುತ್ತಾ ಕುಳಿತಿದ್ದೆ. ಅಮ್ಮ ಹೇಳಿದಳು ಮಗಾ ಈ ವರ್ಷ ಮಳೆ ತಡ ಮತ್ತು ಕಡಿಮೆ ನಿನ್ನ ಮುಂದಿನ ವರ್ಷದ ಬೆಳೆಯ ಬಗ್ಗೆ ಏನು ಯೋಚನೆ? ಒಮ್ಮೆಲೇ ಗಾಬರಿಯಾದೆ. ಅಮ್ಮ ಪೇಪರ್ ಓದುವುದಿಲ್ಲ. ಸುದ್ದಿ ವಾಹಿನಿಗಳನ್ನು ನೋಡುವುದಿಲ್ಲ. ಮತ್ತೆ ಹೇಗೆ ನಿಖರವಾಗಿ ಹೇಳುತ್ತಾಳೆ ಎಂದು ಗಾಬರಿ ಮೂಡಿ ಕೇಳಿದೆ, "ನಿಂಗೆ ಹೇಗೆ ಗೊತ್ತು" ಎಂದು. ನೋಡು ಶಿವರಾತ್ರಿ ಹಬ್ಬದ ನಂತರ ಬೆಳಿಗ್ಗೆ ಚಳಿ ಇರಬಾರದು. ಆ ನಂತರವೂ ಚಳಿ ಇದ್ದರೆ ಆ ವರ್ಷ ಮಳೆ ತಡ ಮತ್ತು ಕಡಿಮೆ. ಆದ್ದರಿಂದ ಬಿತ್ತನೆ ದಿನಾಂಕ ಮತ್ತು ಅಲ್ಪಾವಧಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎರಡನೆಯ ಬೆಳೆಯ ಯೋಚನೆ ಬಿಟ್ಟು ಬಿಡಬೇಕಾಗಬಹುದು ಎಂದಳು. ಅಮ್ಮನ ಈ El Nino ಜ್ಞಾನಕ್ಕೆ ಬೆಚ್ಚಿ ಬಿದ್ದೆ.
ನನ್ನ ಅಮ್ಮನಂತಹ ಅಮ್ಮನಿಗೂ ಈ El Nino ಮುನ್ನೆಚ್ಚರಿಕೆ ಇದೆ ಎಂದರೆ ಎಲ್ ನಿನೋ ಒಂದು ಅಸಾಧಾರಣ ವಿದ್ಯಮಾನ ಅಲ್ಲ ಒಂದು ಮಾಮೂಲಿ ಪ್ರಕ್ರಿಯೆ ಎಂಬುದು ಮನವರಿಕೆಯಾಯಿತು. ಎಲ್ ನಿನೋ 2 ರಿಂದ 7 ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುವ ಒಂದು ಹವಾಮಾನ ವಿದ್ಯಮಾನ. ಇದರ ಪ್ರಭಾವ 3 ತಿಂಗಳಿಂದ 9 ತಿಂಗಳ ವರೆಗೂ ಇರಬಹುದು. ಕೆಲವೊಮ್ಮೆ 12 ತಿಂಗಳ ವರೆಗೆ ಮುಂದುವರಿಯಬಹುದು. ಹಲವಾರು ಶತಮಾನಗಳಿಂದ ಮನುಷ್ಯ ಈ ಹವಾಮಾನ ಬದಲಾವಣೆಯ ಬಗ್ಗೆ ಗಮನಿಸುತ್ತಾ ವರದಿ ಮಾಡುತ್ತಾ ಬಂದಿದ್ದಾನೆ. ಈ ಎಲ್ ನಿನೋ ಪೂರ್ವ ಹವಾಮಾನದ ಸ್ಥಿತಿಗಳನ್ನು ಆತ ಗಮನಿಸಿದ್ದಾನೆ ಮತ್ತು ತನ್ನ ತದನಂತರದ ಪೀಳಿಗೆಗಳಿಗೆ ಮನವರಿಕೆ ಮಾಡಿದ್ದಾನೆ. ಆದ್ದರಿಂದ ನನ್ನಮ್ಮ ತಕ್ಷಣ ನನ್ನನ್ನು ಎಚ್ಚರಿಸಿದ್ದಾಳೆ.
El Nino ಎಂದರೆ ಎಂದರೆ ಸ್ಪಾನಿಶ್ ಭಾಷೆಯಲ್ಲಿ ಚಿಕ್ಕ ಹುಡುಗ (little boy) ಎಂದು ಅರ್ಥವಂತೆ. ಅಮೇರಿಕಾದ ನಾವಿಕರು ತಮ್ಮ ಸುತ್ತಲೂ ಇರುವ ಬೆಚ್ಚಗಿನ ಸಮುದ್ರವನ್ನು ನೋಡಿ ಹಾಗೆ ಕರೆದರು. ಇದೊಂದು ನೈಸರ್ಗಿಕ ಹವಾಮನ ವೈಪರೀತ್ಯ. ಕೇಂದ್ರ ಪೂರ್ವ ಉಷ್ಣ ವಲಯದ ಶಾಂತ ಸಾಗರದಲ್ಲಿ ನೀರು ಸಾಮಾನ್ಯಕ್ಕಿಂತ ಬೆಚ್ಚಗಾದಾಗ ಈ ಎಲ್ ನಿನೋ ಪರಿಣಾಮ ಉಂಟಾಗುತ್ತದೆ. ದುರ್ಬಲಗೊಳ್ಳುವ ವಾಣಿಜ್ಯ ಮಾರುತಗಳು (trade winds) ಈ ನಾಟಕೀಯ ಭೌಗೋಳಿಕ ಬದಲಾವಣೆಯನ್ನು ತರುತ್ತವೆ. ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಈ ವಾಣಿಜ್ಯ ಮಾರುತಗಳು ತಮ್ಮ ವೇಗವನ್ನು ಕಳೆದುಕೊಳ್ಳತ್ತವೆ ಅಥವಾ ವಿರುದ್ದವಾಗಿ ಬೀಸ ತೊಡಗುತ್ತವೆ. ಇದರಿಂದ ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮತ್ತು ಭಾರತಗಳಲ್ಲಿ ಮಳೆ ಕಡಿಮೆಯಾಗಿ ಬರ ಕಾಣಿಸಿಕೊಂಡರೆ ದಕ್ಷಿಣ ಅಮೇರಿಕಾ ಸಂಯಕ್ತ ಸಂಸ್ಥಾನ ಮತ್ತು ಪೆರುವಿನಲ್ಲಿ ಅತಿ ವೃಷ್ಠಿ ಅಥವಾ ನೆರೆ ಉಂಟಾದರೆ ಪಕ್ಕದ ಕೆನಡಾ ಚೆಚ್ಚಗಿರುತ್ತದೆ.
ಈ ಸಂದರ್ಭದಲ್ಲಿ ಸಮುದ್ರದ ಉಷ್ಣತೆ ಕನಿಷ್ಠ 0.5°C ನಷ್ಟು ಹೆಚ್ಚಿಸುತ್ತದೆ. ಹಾಗಾದರೆ ಇದು ಮಳೆಯನ್ನು ಹೇಗೆ ಪ್ರಭಾವಿಸುತ್ತದೆ ನೋಡೋಣ. ಗಾಳಿಯು ತಣ್ಣಗಿರುವ ಪ್ರದೇಶದಿಂದ (ಹೆಚ್ಚು ಒತ್ತಡದ ಪ್ರದೇಶ) ಕಡಿಮೆ ಒತ್ತಡದ ಪ್ರದೇಶದ (ಬೆಚ್ಚಗಿನ) ಕಡೆಗೆ ಬೀಸುತ್ತದೆ. ಹೀಗೆ ಬೀಸುವಾಗ ತನ್ನೊಂದಿಗೆ ನೀರಾವಿಯನ್ನು ಒಯ್ಯುತ್ತದೆ. ಈ ನೀರಾವಿ ಮೋಡವಾಗಿ ಮಳೆ ಸುರಿಸುತ್ತದೆ. ಭಾರತದ ಭೂ ಖಂಡದಲ್ಲಿ ಟಿಬೇಟಿಯನ್ ಪ್ರಸ್ಥಭೂಮಿ ಕಾಯುತ್ತದೆ. ಆಗ ಸಮುದ್ರದ ಮೇಲಿನಿಂದ ಗಾಳಿ ಭಾರತದ ಭೂ ಪ್ರದೇಶದ ಮೇಲೆ ಬೀಸುತ್ತದೆ. ಆದ್ದರಿಂದ ಮಾನ್ಸೂನ್ ದಕ್ಷಿಣದಿಂದ ಉತ್ತರಕ್ಕೆ ವ್ಯಾಪಿಸುತ್ತಾ ಸಾಗುವುದು. ಈಗ ಸಮುದ್ರವೇ ಬಿಸಿಯಾಗಿರುವುದರಿಂದ ಮಳೆಯ ಮಾರುತಗಳು ಭೂಮಿಯ ಕಡೆಗೆ ಬೀಸುವುದಿಲ್ಲ. ಭೂಮಧ್ಯ ರೇಖೆಯ ಆಸುಪಾಸು ಇರುವ ಪ್ರದೇಶಗಳು ಪ್ರಮುಖವಾಗಿ ಬಾಧಿತವಾಗುತ್ತವೆ.
ಇದರ ಪರಿಣಾಮಗಳನ್ನು ನೋಡೋಣ. ಮೊದಲೇ ಹೇಳಿದಂತೆ ಭಾರತ, ಆಫ್ರಿಕಾ, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಡಿಮೆ ಮಳೆ ಅಥವಾ ಬರ. ದಕ್ಷಿಣ ಅಮೇರಿಕಾ ಸಂಯಕ್ತ ಸಂಸ್ಥಾನ, ಪೆರು ಬೊಲಿವಿಯಾಗಳಲ್ಲಿ ವಿಪರೀತ ಮಳೆ ಮತ್ತು ನೆರೆ. ಆಸ್ಟ್ರೇಲಿಯಾ ಭಾಗಗಳಲ್ಲಿ ನಿಯಂತ್ರಣಕ್ಕೆ ಸಿಗದ ಕಾಳ್ಗಿಚ್ಚು. ಕೃಷಿ ಸಾಗರ ಮೀನು ಉತ್ಪಾದನೆಯಲ್ಲಿ ಗಣನೀಯ ಕುಸಿತ. ಬೇಸಿಗೆಯ ಉಷ್ಣತೆಯಲ್ಲಿ ಗಣನೀಯ ಏರಿಕೆ.
ಹೀಗೆ ಎಲ್ ನಿನೋ ಒಂದು ಹವಾಮಾನ ವೈಪರೀತ್ಯವಾದರೂ ಜಾಗತಿಕ ಆರ್ಥಿಕತೆ, ಜೀವಿ ಪರಿಸ್ಥಿತಿ ಶಾಸ್ತ್ರ (ecology) ಮತ್ತು ಮಾನವನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ.
ರಜೆಯಲ್ಲಿ ತಂದೆ ತಾಯಿಯೊಂದಿಗೆ ಸ್ನೇಹಿತರೊಂದಿಗೆ ಪ್ರವಾಸ ಹೊರಟಾಗ ಕಾಡಿನ ಅಂಚಿನಲ್ಲಿ ಯಾವುದೇ ಕಾರಣಕ್ಕೂ ಬೆಂಕಿ ಹೊತ್ತಿಸುವ ಕೆಲಸ ಮಾಡಬೇಡಿ. ಧೂಮಪಾನ ಮಾಡುವವರು ನಿಮ್ಮ ಜೊತೆಗಿದ್ದರೆ ಅವರು ತಮ್ಮ ಸಿಗರೇಟ್ ಅನ್ನು ಹೊತ್ತಿಸಿದ ಬೆಂಕಿ ಕಡ್ಡಿಯನ್ನು ಆರಿಸಿ ಎಸೆದಿದ್ದಾರೆ ಎನ್ನುವುದನ್ನು ಖಾತ್ರಿ ಮಾಡಿಕೊಂಡ ನಂತರವೇ ಆ ಜಾಗದಿಂದ ಹೊರಡಿ. ಇಲ್ಲವಾದಲ್ಲಿ ಇದು ಭಯಂಕರ ಕಾಡ್ಗಿಚ್ಚಿಗೆ ಕಾರಣವಾಗಿ ಅರ್ಜುನ ಖಾಂಡವ ವನ ದಹನ ಮಾಡಿದ ಹಾಗೆ ಅಪಾರ ಕಾಡು ಮಾತ್ರವಲ್ಲ ಅಪರೂಪದ ಮೂಲಿಕೆಗಳು ಮತ್ತು ಅಪಾರ ಜೀವ ಸಂಕುಲ ನಾಶವಾಗಬಹುದು. ನಿಮ್ಮ ಕಾರಿನ ಒಳಗೆ ಲೈಟರಗಳು, ದಹನ ಶೀಲ ವಸ್ತುಗಳಾದ ಪರ್ ಫ್ಯೂಮ್ ಗಳು, ಡಿಓಡರೈಸರ್ ಗಳನ್ನು ಇಟ್ಟು ಕೆಳಗಿಳಿಯಬೇಡಿ. ಒಂದು ಕ್ಷಣ ಇವುಗಳನ್ನು ಒಯ್ಯಬೇಕಾದಲ್ಲಿ ಅವುಗಳನ್ನು ಬಟ್ಟೆಯಲ್ಲಿ ಸುತ್ತಿ ಬ್ಯಾಗ್ ನ ಒಳಭಾಗದಲ್ಲಿ ಆಳವಾಗಿರಿಸಿ. ಬಿಸಿಲಿನಲ್ಲಿ ಟ್ರೆಕ್ಕಿಂಗ್ ಹೋಬೇಡಿ. ನಿಮ್ಮ ಜೊತೆ ಸಾಕಷ್ಟು ಕುಡಿಯುವ ನೀರನ್ನು ಒಯ್ಯಿರಿ ಮತ್ತು ಪದೇ ಪದೇ ಕುಡಿಯಿರಿ.. ದೇಹ ಮುಚ್ಚುವ ಹಾಗೆ ಸಡಿಲವಾದ ಹತ್ತಿಯ ಬಟ್ಟೆಗಳನ್ನು ಬಳಸಿ. ಯಾವುದೇ ಕಾರಣಕ್ಕೆ ಬಿಗಿಯಾದ ಸಿಂಥೆಟಿಕ್ ಬಟ್ಟೆಗಳನ್ನು ಬಳಸಬೇಡಿ. ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಕಡ್ಡಾಯವಾಗಿ ಮೂಗನ್ನು ಬಟ್ಟೆ ಅಥವಾ ಮಾಸ್ಕ್ ನಿಂದ ಮುಚ್ಚಿ. ಇಲ್ಲವಾದಲ್ಲಿ ವಾತಾವರಣದ ಆರ್ದ್ರತೆ ಕಡಿಮೆ ಇರುವುದರಿಂದ ಮೂಗಿನಿಂದ ರಕ್ತಸ್ರಾವವಾಗಬಹುದು.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************