ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 124
Wednesday, April 15, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 124
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಇಂದು ಎಪ್ರಿಲ್ 15. ಸೌರಮಾನ ಯುಗಾದಿ. ಇಂದು ಕೇರಳಂ ನವರಿಗೆ ವಿಷು ಪಂಜಾಬಿಗರಿಗೆ ಬೈಸಾಖಿ, ಅಸ್ಸೋಮ್ ನವರಿಗೆ ಬಿಹು ಹೀಗೆ. ಎಲ್ಲರಿಗೂ ಸಡಗರ ಸಂಭ್ರಮ. ಇಂದು ಅವಿಭಜಿತ ದಕ್ಷಿಣ ಕನ್ನಡದವರಿಗೆ ಯುಗಾದಿ ಅಂದರೆ ಹೊಸ ವರ್ಷದ ಸಂಭ್ರಮ. ಮಂಗಳೂರು ಕಡೆ ಈಗ ಇದನ್ನು ವಿಷು ಎಂದೇ ಕರೆಯಲಾಗುತ್ತದೆ. ಇದು ಮಲಯಾಳೀಕರಣದ ಪ್ರಭಾವ. ವಿವಿಧತೆಯಲ್ಲಿ ಏಕತೆ ಈ ನೆಲದ ವೈಶಿಷ್ಟ್ಯ. ಈ ವಿಷು ಬರುವುದು ವಿಷು ಸಂಕ್ರಮಣ ಅಥವಾ ಮೇಷ ಸಂಕ್ರಮಣದ ಮಾರನೆಯ ದಿನ (ಪಾಡ್ಯ). ಇಂದು ಮೇಷ ಮಾಸದ ಮೊದಲ ದಿನ ಯುಗದ ಆದಿ. ಏನು ಇದರ ವೈಶಿಷ್ಟ್ಯ ನೋಡೋಣ.
ನಮ್ಮ ಹಬ್ಬಗಳು ಕೇವಲ ಕ್ಯಾಲೆಂಡರ್ ನ ದಿನಗಳಲ್ಲ ಬದಲಾಗಿ ಪ್ರಕೃತಿ ವಿದ್ಯಮಾನದ ದಾಖಲೆಗಳು. ಮಕ್ಕಳೇ ನಿಮಗೆ ಗೊತ್ತಿದೆ. ನಮ್ಮ ಭೂಗ್ರಹದಲ್ಲಿ ಋತು ಬದಲಾವಣೆಗಳಿವೆ. ಇದಕ್ಕೆ ಕಾರಣ ಭೂಮಿ ತನ್ನ ಅಕ್ಷದಲ್ಲಿ 23.5° ಗಳಷ್ಟು ವಾಲಿಕೊಂಡಿರುವುದು. ಇದರಿಂದ ಪೂರ್ವದಲ್ಲಿ ಮೂಡಿ ಪಶ್ಚಿಮದಲ್ಲಿ ಮುಳುಗಬೇಕಾದ ಸೂರ್ಯ ಪ್ರತಿದಿನ ತನ್ನ ಸ್ಥಾನ ಬದಲಾಯಿತ್ತಾ ಮಕರ ಸಂಕ್ರಾಂತಿ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತಗಳ ನಡುವೆ ಓಲಾಡುವಂತೆ ಕಾಣುತ್ತಾನೆ. ಮಕರ ಸಂಕ್ರಾಂತಿ ವೃತ್ತ ಅವನಿಗೆ ದಕ್ಷಿಣದ ಸರಹದ್ದಾದದರೆ ಕರ್ಕ ವೃತ್ತ ಅವನ ಉತ್ತರದ ಗಡಿ. ಅವನು ಮಕರ ಸಂಕ್ರಮಣದ ದಿನ (ಜನವರಿ 14/15) ಮಕರ ವೃತ್ತದ ಮೇಲಿದ್ದು ಅಲ್ಲಿಂದ ಉತ್ತರಕ್ಕೆ ಚಲಿಸಲು ತೊಡಗುತ್ತಾನೆ. ಇದು ಉತ್ತರಾಯಣ ಅಥವಾ ಉತ್ತರದ ಪಯಣ. ಇದು ಜುಲೈ 15 ಅಂದರೆ ಕರ್ಕಾಟಕ ಸಂಕ್ರಮಣ ಈ ಉತ್ತರದ ಪ್ರಯಾಣ ಕೊನೆಗೊಂಡು ಮಾರನೆಯ ದಿನದಂದು ದಕ್ಷಿಣಾಯನ ಆರಂಭ. ಉತ್ತರಾಯಣ ಉತ್ತರಾರ್ಧ ಗೋಳದಲ್ಲಿ ಬೇಸಿಗೆ ತಂದರೆ ದಕ್ಷಿಣಾಯನದಿಂದ ಚಳಿಗಾಲ ಕಾಲಿಡುತ್ತದೆ. ಹೀಗೆ ಪಂಚಾಂಗದ ಪ್ರಮುಖ ಘಟನೆಗಳು ಈ ರೀತಿಯ ಬದಲಾವಣೆ ತರುತ್ತವೆ.
ಇನ್ನು ವಿಷು ಸಂಕ್ರಮಣ. ವಿಷು ಸಂಕ್ರಮಣ ಎಂದರೆ ಸೂರ್ಯ ವಿಷು ವೃತ್ತ ಎಂದರೆ ಭೂಮಧ್ಯ ರೇಖೆಯ ಮೇಲಿರುವ ದಿನ. ಇಂದು ಅಂದರೆ ಯುಗಾದಿಯ ದಿನ ಸೂರ್ಯ ಉತ್ತರಾರ್ಧ ಗೋಳದಲ್ಲಿರುತ್ತಾನೆ. ಅಂದರೆ ಇನ್ನು ಮುಂದೆ ಬಿಸಿಲಿನ ಪ್ರತಾಪ ಜೋರು. ಇದರೊಂದಿಗೆ ಕರಾವಳಿಯಲ್ಲಿ ತೇವಾಂಶ ಹೆಚ್ಚುತ್ತಾ ಹೋಗುತ್ತದೆ.
ನಿಮಗೆ ಗೊತ್ತಿದೆ ಬೇಸಿಗೆಯಲ್ಲಿ ಚರ್ಮ ವಿಸರ್ಜನಾ ಕ್ರಿಯೆಯ ಕಾರ್ಯ ಕೈಗೆತ್ತಿಕೊಳ್ಳುತ್ತದೆ. ಮೂತ್ರದ ಉತ್ಪತ್ತಿ ಕಡಿಮೆಯಾಗಿ ಹೆಚ್ಚು ಬೆವರು ಉತ್ಪತ್ತಿಯಾಗುತ್ತದೆ. ಈ ಬೆವರು ಆವಿಯಾಗುವಾಗ ಚರ್ಮದ ಉಷ್ಣತೆಯನ್ನು ಹೊತ್ತೊಯ್ಯತ್ತದೆ. ಆಗ ಚರ್ಮ ತಂಪಾಗಿಡುವ ನೈಸರ್ಗಿಕ AC ಆರಂಭವಾಗುತ್ತದೆ. ವಾತಾವರಣದಲ್ಲಿ ತೇವಾಂಶ ಕಡಿಮೆ ಇದ್ದರೆ ಬೆವರು ಮೂಡುವಾಗಲೇ ಆವಿಯಾಗುತ್ತದೆ. ಆದ್ದರಿಂದ ನೀವು ಘಟ್ಟದ ಮೇಲೆ ಹೋದರೆ ಬೆವರು ಮೂಡುವುದಿಲ್ಲ. ಬೆವರು ಮೂಡುವುದಿಲ್ಲ ಎಂದರೆ ಬೆವರುವುದಿಲ್ಲ ಎಂದು ಅರ್ಥವಲ್ಲ. ಬದಲಾಗಿ ಹನಿ ಮೂಡುವುದಿಲ್ಲ (precipitation) ಎಂದರ್ಥ. ಆದರೆ ಕರಾವಳಿಯಲ್ಲಿ ಹಾಗಲ್ಲ ತೇವಾಂಶ (humidity) ಅಧಿಕವಾಗಿರುವುದರಿಂದ ಬೆವರ ಹನಿಗಳು ಮೂಡುವುದರಿಂದ ನಿಮ್ಮ ಬಟ್ಟೆ ಒದ್ದೆಯಾಗುತ್ತದೆ. ವಾತಾವರಣದ ಉಷ್ಣತೆಯನ್ನು ಗಮನಿಸಿ ಕಲಬುರ್ಗಿ ರಾಯಚೂರುಗಳಲ್ಲಿ ಉಷ್ಣತೆ 45 47°C ಇರುತ್ತದೆ. ಆದರೆ ನಮ್ಮಲ್ಲಿ 32. ಅದೇ 37°C ಎಂದರೆ ಅತಿ ಹೆಚ್ಚು. ಇದಕ್ಕೆ ಕಾರಣ ನಮಗೆ ತೀರಾ ಸಮೀಪದಲ್ಲಿರುವ ಸಮುದ್ರದ ಕಾರಣದಿಂದ. ಅತಿಯಾದ ತೇವಾಂಶಕ್ಕೆ ಕಾರಣವೂ ಸಮುದ್ರವೇ.
ಈ ಯುಗಾದಿಯ ನಂತರ ವಾತಾವರಣದ ತೇವಾಂಶ ಹೆಚ್ಚುವುದು ಮಾತ್ರವಲ್ಲ ಭೂಮಿಯ ತೇವಾಂಶವೂ ಹೆಚ್ಚುತ್ತದೆ. ಆದ್ದರಿಂದ ಭೂಮಿಯಲ್ಲಿ ನಿದ್ರಾವಸ್ಥೆಯಲ್ಲಿರುವ ಗೆಡ್ಡೆ ಗೆಣಸುಗಳು ಮೊಳಕೆ ಬರುತ್ತವೆ. ಆದ್ದರಿಂದ ಕೇನೆ, ಕೆಸುವಿನ ಎಲೆಗಳು ಭೂಮಿಯ ಮೇಲೆ ಕಾಣಿಸಿಕೊಳ್ಳಲಾರಂಭಿಸುತ್ತವೆ.
ಹೀಗೆ ಯುಗಾದಿ ಇನ್ನೂ ಹಲವು ಬದಲಾವಣೆಗಳನ್ನು ಹೊತ್ತು ಬರುತ್ತದೆ. ಆದ್ದರಿಂದ ಯುಗಾದಿ ಒಂದು ಬರಿಯ ಕ್ಯಾಲೆಂಡರ್ ನ ದಿನವಲ್ಲ ಅದು ಬದುಕಿನ ಬದಲಾವಣೆಯ ಸೂಚಕ. ಬನ್ನಿ ಎಳೆ ಗೋಡಂಬಿಯ ಪಾಯಸ ತಿಂದು ಯುಗಾದಿಯನ್ನು ಸಂಭ್ರಮಿಸೋಣ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************