ನಿಷ್ಪಾಪಿ ಸಸ್ಯಗಳು : ಸಂಚಿಕೆ - 146
Wednesday, April 15, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 146
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ...? ಈಗೆಲ್ಲ ವಿವಿಧ ಸಭೆ ಸಮಾರಂಭಗಳ ಕಾಲ. ಮದುವೆ, ಗೃಹಪ್ರವೇಶಗಳೆಂದು ನೀವೂ ಹೋಗಿರಬಹುದಲ್ಲವೇ..? ಸಮಾರಂಭಗಳ ಊಟದಲ್ಲಿ ಸರ್ವೇಸಾಮಾನ್ಯವಾಗಿ ನೀವು ಒಂದು ಸಾರನ್ನು ಗಮನಿಸಿಯೇ ಇರುತ್ತೀರಿ. ಆ ಸಾರಿಲ್ಲದೇ ಊಟದ ಮೆನು ಮುಗಿಯದು. ನಿಮಗೀಗ ಅದ್ಯಾವ ಸಾರೆಂದು ಅಂದಾಜಾಗಿರಬಹುದು. ಹೌದು.. ನಿಮ್ಮ ಊಹೆ ಸರಿಯಾಗಿಯೇ ಇದೆ. ಅದೇ ಟೊಮೆಟೊ ಸಾರು!.
ಹೌದು, ಟೊಮೆಟೊ ಇಲ್ಲದೆ ಇಂದು ಅಡುಗೆ ಮಾಡೋದನ್ನು ಊಹಿಸಲೂ ಸಾದ್ಯವಿಲ್ಲ. ಬಡವರ ಸೇಬು, ಕೆಂಪು ರತ್ನ ಎಂದೆಲ್ಲ ಕರೆಸಿಕೊಳ್ಳುವ ಟೊಮೆಟೊವನ್ನು ನಾವೂ ಬೆಳೆಯಬಹುದು.. ಆದರೆ ಬೆಳೆಯಾಗಿ ಅಲ್ಲ. ಅಂದರೆ ನಮ್ಮೂರಲ್ಲೂ ಗಿಡಗಳಾಗಿ ಫಸಲು ನೀಡೋದನ್ನು ನೀವೂ ನೋಡಿರಬಹುದು. ಟೊಮೆಟೊ ತುಂಬಾ ಸುಂದರವಾದ ಹಣ್ಣು. ಇದು ಪ್ರಪಂಚದಾದ್ಯಂತ ಅಡುಗೆ ಮನೆಯಲ್ಲಿ ಅಗ್ರಸ್ಥಾನ ಪಡೆದ ಏಕೈಕ ರಸ ಭರಿತ ಹಣ್ಣು ಅಥವಾ ತರಕಾರಿ ಎಂದೆನಿಸಿದೆ. ದಕ್ಷಿಣ ಅಮೆರಿಕದ ಆಂಡೀಸ್ ಪರ್ವತ ಶ್ರೇಣಿಯ ಇಳಿಜಾರಿನ ಕಾಡುಗಳು, ಪೆರು, ಈಕ್ವೆಡಾರ್ ಗಳಲ್ಲಿ ಕಣ್ಣು ಬಿಟ್ಟ ಟೊಮೆಟೋ ಇಂದು ಭಾರತದ ಮನೆಗಳಿಗೆ ಚಿರಪರಿಚಿತ ಹಾಗೂ ಅಪ್ಯಾಯಮಾನ ತರಕಾರಿ!. ಸಾಂಬಾರ್, ಸಾರು, ಚಟ್ನಿ ಇತ್ಯಾದಿಗೆ ಸ್ವಯಂ ಅರ್ಪಣೆ ಮಾಡಿಕೊಳ್ಳುವುದೇ ಅಲ್ಲದೆ ಯಾವುದೇ ತರಕಾರಿಯ ಜೊತೆಗೂ ಸೈ ಎಂದು ಜೊತೆಯಾಗಿ ನಿಂತು ಅಡುಗೆಯ ರುಚಿ ಹೆಚ್ಚಿಸುತ್ತಾ ಕಿಂಚಿತ್ತೂ ಎಡವಟ್ಟಾಗದಂತೆಯೂ ಕಾಪಾಡುತ್ತದೆ.
ಟೊಮೆಟೊ ಎಂಬ ಈ ನಿಷ್ಪಾಪಿ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಸೊಲೊಮನ್ ಲೈಕೋಪರ್ಸಿಕಮ್ (Solanum lycpersicum). ಇದು ಸೊಲನೇಸಿ ಕುಟುಂಬಕ್ಕೆ ಸೇರಿದ್ದು ಬದನೆ, ಆಲೂಗಡ್ಡೆ, ಮೆಣಸಿನ ಹತ್ತಿರದ ಸಂಬಂಧಿ. ಇದೊಂದು ವಾರ್ಷಿಕ ಸಸ್ಯವೇ ಆಗಿದ್ದರೂ ಸೂಕ್ತ ಕಾಳಜಿ ವಹಿಸಿದರೆ ಎರಡು ಮೂರು ವರ್ಷ ಬದುಕಬಲ್ಲದು.
ಟೊಮೆಟೊ ಗಿಡವು ಸಂಯುಕ್ತ ಮಾದರಿಯ ದೊಡ್ಡ ಎಲೆಯಲ್ಲಿ 5-9 ರವರೆಗೆ ಸಣ್ಣ ಎಲೆಗಳ ಜೋಡಣೆ ಪಡೆದಿರುತ್ತದೆ. ಮೇಲ್ಮೈ ನವಿರಾದ ರೋಮಗಳಿಂದ ಕೂಡಿ ಅಂಚುಗಳು ಗರಗಸದಂತಿರುತ್ತದೆ. ಎಲೆಯ ಕಂಕುಳಲ್ಲಿ ಮೂಡುವ ಚಿಗುರುಗಳನ್ನು ಕತ್ತರಿಸುತ್ತಾ ಬೆಳೆಸಿದರೆ ಗಿಡವು ದೃಢವಾಗುತ್ತದೆ. ನಕ್ಷತ್ರದಾಕಾರದ ಕಡು ಹಳದಿ ಬಣ್ಣದ ಹೂವಿಗೆ ಹಸಿರು ಬಣ್ಣದ ದೃಢವಾದ ಪುಷ್ಪಪಾತ್ರೆಯಿದ್ದು ಹೂವು ಒಣಗಿ ಬಿದ್ದಾಗ ಮೂಡಿಬರುವ ಕಾಯಿಗೆ ರಕ್ಷೆಯಾಗಿರುತ್ತದೆ. ಟೊಮೆಟೊ ದಲ್ಲಿ ದ್ವಿಲಿಂಗಿ ಹೂವುಗಳಿದ್ದು ಗಾಳಿಯಿಂದಲೇ ಪರಾಗಸ್ಪರ್ಶ ನಡೆಯುತ್ತದೆ. ಹೂವುಗಳು ಒಂಟಿಯಾಗಿರದೆ 4 ರಿಂದ 12 ಹೂಗಳವರೆಗೆ ಗೊಂಚಲುಗಳಲ್ಲಿ ಇರುತ್ತದೆ. ಟೊಮೆಟೊ ಮೊದಲು ಹಸಿರಾಗಿದ್ದು ಹಣ್ಣಾದಂತೆ ಕೆಂಪಾಗುತ್ತದೆ. ಇದರೊಳಗೆ 2 ರಿಂದ 5 ಕೋಣೆಗಳಿದ್ದು ಜೆಲ್ಲಿ ತರಹದ ದ್ರವದಲ್ಲಿ ನೂರಾರು ಹಳದಿಬಣ್ಣದ ಚಪ್ಪಟೆ ಬೀಜಗಳಿರುತ್ತವೆ. ಇದರ ಆಕರ್ಷಕ ಕೆಂಪು ಬಣ್ಣಕ್ಕೆ 'ಲೈಕೋಪೀನ್' ಎಂಬ ಆಂಟಿ ಆಕ್ಸಿಡೆಂಟ್ ಕಾರಣವಾಗಿದೆ.
ಟೊಮೆಟೊ ತಾಯಿ ಬೇರನ್ನು ಹೊಂದಿದ್ದರೂ ಕವಲು ಬೇರುಗಳ ಸಹಕಾರದಿಂದ ಚೆನ್ನಾಗಿ ಬೆಳೆಯುತ್ತದೆ. ವಿಶೇಷವೆಂದರೆ ಕಾಂಡವು ಮಣ್ಣಿಗೆ ಸೋಕಿದರೂ ಅಲ್ಲೆ ಬೇರು ಬೆಳೆಯುತ್ತದೆ!. ಎಳೆಯ ಕಾಂಡ ತುಂಬಾ ಮೃದುವಾಗಿದ್ದು ಸಣ್ಣ ರೋಮಗಳಿಂದ ಕೂಡಿರುತ್ತದೆ. ಇದರಲ್ಲಿ ಪೊದೆ ಮತ್ತು ಬಳ್ಳಿ ಎಂಬ ಎರಡು ಜಾತಿಗಳು ಪ್ರಮುಖವಾಗಿವೆ. ಇವು ತಳಿಗನುಸಾರ ಮೂರರಿಂದ ಹತ್ತಡಿಗಳಷ್ಟು ಎತ್ತರವೂ ಬೆಳೆಯಬಲ್ಲದು. ಮರ ಟೊಮೆಟೊ ಕೂಡ ಒಂದು ಜಾತಿಯಾಗಿದ್ದು ಇದು ಅರ್ಧ ಕಾಂಡವಾಗಿದ್ದು ಮತ್ತರ್ಧ ಬಳ್ಳಿಯಾಗಿ ಹಂದರವಾಗಿ ಹಬ್ಬಿ ಒಂದು ಕೊಯ್ಲಿಗೆ 32 ಸಾವಿರ ಟನ್ ಇಳುವರಿ ಬಂದ ಉದಾಹರಣೆ ಫ್ಲೋರಿಡಾದ ವಾಲ್ವ್ ಡೆಸ್ನೆ ಯ ಗ್ರೀನ್ ಹೌಸ್ ನಲ್ಲಿದ್ದು ಇದು ಗಿನ್ನೆಸ್ ದಾಖಲೆಗೆ ಸೇರಿದೆ. ಈ ಮರವು 40-50 ಚ.ಮೀ ಹಬ್ಬಿದೆ. ಇದನ್ನು 'ವಿಶ್ವದಲ್ಲೇ ಅತೀ ದೊಡ್ಡ ಟೊಮೆಟೊ ಮರ' ವೆಂದು ಪರಿಗಣಿಸಲಾಗಿದೆ. ತಾಂತ್ರಿಕವಾಗಿ ಮರವಲ್ಲದ ಈ ಹೈಬ್ರೀಡ್ ಟೊಮೆಟೊ ಗಿಡವನ್ನು ಆಕ್ಟೋಪಸ್ ಟೊಮೆಟೊ ಟ್ರೀ ಎನ್ನಲಾಗಿದೆ. ಇದರ ಹಣ್ಣುಗಳ ಗಾತ್ರ ಗಾಲ್ಫ್ ಬಾಲ್ ನಷ್ಟಿದ್ದು ಅಚ್ಚರಿಯ ಸಾಧ್ಯತೆಗೆ ಸವಾಲಾಗಿ ನಿಂತಿದೆಯೆಂದರೆ ತಪ್ಪಲ್ಲ.
ಸೌತೆ, ಕುಂಬಳ, ಬದನೆ ಮೊದಲಾದುವು ಸಸ್ಯಗಳ ಹಣ್ಣುಗಳೇ ಆಗಿದ್ದರೂ ತರಕಾರಿಗಳೆಂದೇ ಅಂಗೀಕಾರ ಪಡೆದಿವೆ. ಆದರೆ ಟೊಮೆಟೊ ಹಣ್ಣೆಂದೇ ಪರಿಗಣಿಸಲ್ಪಟ್ಟಿತ್ತು. ಅಮೆರಿಕಾದಲ್ಲಿ 1887 ತರಕಾರಿಗಳಿಗೆಲ್ಲ ಸುಂಕ ವಿಧಿಸಿದಾಗ ಈ ರೂಪಸಿ ಟೊಮೆಟೊ ಹಣ್ಣೆಂದು ಪಾರಾಗಿತ್ತು. ಆದರೆ 1893ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಟೊಮೆಟೊ ವನ್ನು ತರಕಾರಿ ಎಂದು ವ್ಯಾಖ್ಯಾನಿಸಿ ಸುಂಕದ ಕಟ್ಟೆಗೆ ನೂಕಿತು.
1540ರಲ್ಲಿ ಟೊಮೆಟೊವನ್ನು ಬೇಸಾಯ ಮಾಡಲು ಆರಂಭಿಸಿದ್ದು 1600ರಲ್ಲಿ ಎಲ್ಲ ಅಡುಗೆಗಳಲ್ಲಿ ಬಳಸಲು ಆರಂಭಿಸಲಾಯಿತು.1986 ರಲ್ಲಿ ಇಂಗ್ಲೆಂಡ್ ನ ಒಕ್ಲೊಹೋಮ್ ದಲ್ಲಿ ಬೆಳೆದ 3.51 ಕೆ.ಜಿ.ತೂಕದ ಟೊಮೆಟೊ ಇದುವರೆಗಿನ ಅತ್ಯಂತ ಭಾರದ ಟೊಮೆಟೊ ಎಂದು ದಾಖಲಾಗಿದೆ. ಅತಿ ದೊಡ್ಡ ಟೊಮೆಟೊ ಗಿಡ 'ಸನ್ ಗೋಲ್ಡ್' ನ್ನು ಇಂಗ್ಲೆಂಡ್ ನ ನ್ಯೂಟ್ರಿಕಲ್ಚರ್ ಕಂಪನಿ 2000ದಲ್ಲಿ ಬೆಳೆಸಿದೆ. ಇದು 19.8 ಮೀ ಎತ್ತರವಿತ್ತು.
ಕರ್ನಾಟಕದಲ್ಲಿ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ಅರ್ಕಾರಕ್ಷಕ್ ತಳಿಯು ರೈತರಿಗೆ ವರದಾನವಾಗಿದೆ. ಈ ತಳಿಯಲ್ಲಿ ಟೊಮೆಟೊ ಸಸ್ಯಗಳ ರೋಗ ತಡೆವ ಶಕ್ತಿ ಸಾಮರ್ಥ್ಯ ಹೆಚ್ಚಿದ್ದು ಸೊರಗು ರೋಗ, ಎಲೆಮುರುಟು, ಎಲೆಚುಕ್ಕೆ ರೋಗವನ್ನು ತಡೆಯುತ್ತದೆ. ಒಂದು ಗಿಡಕ್ಕೆ 10-12 ಕೆ ಜಿ ಫಸಲು ನೀಡುವ ಅರ್ಕಾರಕ್ಷಕ್ ಟೊಮೆಟೊ ಆಕರ್ಷಕ ಬಣ್ಣ, ಗಟ್ಟಿ, ಮಾರಾಟಕ್ಕೆ ಅನುಕೂಲಕರವಾಗಿದೆ.
ಅತೀ ವೇಗದಲ್ಲಿ ಬೆಳೆವ, ರಕ್ತ ಕೆಂಪು, ಹಳದಿ, ಕೇಸರಿ, ಗಾಢ ನೇರಳೆ, ಕೆಂಪು ಹಳದಿ ಮಿಶ್ರಿತ ಟೊಮೆಟೊ ಗಳಲ್ಲದೆ ಹಸಿರು, ನೇರಳೆ ಪ್ರಭೇದಗಳಿವೆ.
ಟೊಮೆಟೊದಿಂದ ಹೃದಯದ ತೊಂದರೆಗೆ ಲಂಡನ್ ನಲ್ಲಿ ಮಾತ್ರೆ ತಯಾರಿಸುವ ಪ್ರಯೋಗವು ನಡೆಯುತ್ತಿದ್ದು ಹೃದಯ ರಕ್ತನಾಳದ ಕೊಬ್ಬು ನಿವಾರಣೆಗೆ ಇದು ಉಪಯುಕ್ತವೆನ್ನಲಾಗಿದೆ. ಟೊಮೆಟೊ ಕೇವಲ ರುಚಿಗೆ ಮಾತ್ರವಲ್ಲದೆ ಸೌಂದರ್ಯ ವರ್ಧಕವಾಗಿಯೂ, ವಿಟಮಿನ್ ಎ, ಸಿ, ಫೈಬರ್, ಪೋಲೇಟ್, ಕ್ಯಾಲ್ಸಿಯಂ ಇದ್ದು ಮಾನವನಿಗೆ ಬಹು ಉಪಕಾರಿಯಾಗಿದೆ. ಚರ್ಮದ ಕಾಂತಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ಬಳಸಬಹುದಾಗಿದೆ.
ಬಹುಶ: ಟೊಮೆಟೊ ತಿನ್ನದವರು ನಮ್ಮಲ್ಲಿ ಯಾರೂ ಇರಲಿಕ್ಕಿಲ್ಲ ಅಲ್ಲವೇ..? ಸರಿ ಮಕ್ಕಳೇ, ನೀವೂ ಆಸಕ್ತಿಯಿಂದ ಒಂದೆರಡು ಗಿಡಗಳನ್ನಾದರೂ ಬೆಳಸಲು ಪ್ರಯತ್ನಿಸುವಿರಾ?
ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************