ನಿಷ್ಪಾಪಿ ಸಸ್ಯಗಳು : ಸಂಚಿಕೆ - 145
Saturday, April 4, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 145
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ..? ಈಗೀಗ ನಿಮ್ಮಲ್ಲಿ ಹಲವರು ಅತ್ತಿತ್ತ ಪ್ರಯಾಣದಲ್ಲಿರುವಾಗ ಗಿಡಗಳನ್ನು ಗಮನಿಸುವ ಅಭ್ಯಾಸ ಬೆಳೆಸಿಕೊಂಡಿರುವ ಬಗ್ಗೆ ಹಾಗೂ ತರುಲತೆಗಳ ಆಕಾರ, ಸ್ವಭಾವ ಇತ್ಯಾದಿಗಳ ಬಗ್ಗೆ ಆಸಕ್ತರಾಗಿದ್ದೇವೆಂದು ತಿಳಿಸುತ್ತಿರುವಾಗ ನನಗೂ ಸಂತಸವಾಗುತ್ತಿದೆ.
ಮಾನವ ತನ್ನ ಸ್ವಾರ್ಥಕ್ಕಾಗಿ ಈ ಜೀವ ಜಗತ್ತಿನ ನಾಶದಲ್ಲೇ ಸುಖ ಕಾಣುತ್ತಿರುವಾಗ ವರ್ತಮಾನದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಸಹಿಸಿಕೊಂಡು ಇಡೀ ವಿಶ್ವವನ್ನೇ ಈ ನಿಷ್ಪಾಪಿ ಸಸ್ಯಗಳು ಕಾಯುತ್ತಿವೆ ಎಂಬುವುದಂತೂ ಸತ್ಯ.
ಮಕ್ಕಳೇ.. ಇಂದು ನಿಮಗೊಂದು ಸುಂದರವಾದ ಸಸ್ಯದ ಪರಿಚಯ ಮಾಡಲಿದ್ದೇನೆ ಬನ್ನಿ. ಇದು ನಮ್ಮೂರಲ್ಲಿರುವ ಡಾ| ಅಶ್ವಿನಿ ಎಂಬವರ ಮನೆ. ಇವರಲ್ಲಿಗೆ ಔಷಧಿಗೆಂದು ಹೋದಾಗಲೆಲ್ಲ ಅಂಗಳ ದಾಟಿ ಗುಡ್ಡದಲ್ಲೆಲ್ಲಾ ಹರಡಿರುವ ವಿಸ್ಮಯಕಾರಿ ಗಿಡಗಳನ್ನು ನೋಡುತ್ತಾ ನಿಂತು ಆಸ್ವಾದಿಸುವುದು ನನಗೆ ಬಹಳ ಇಷ್ಟ.
ಇಲ್ನೋಡಿ.. ಇದೊಂದು ಪ್ಲಾಸ್ಟಿಕ್ ನ ಅಗಲವಾದ ಪಾತ್ರೆ ಅಂದರೆ ನೀರಿನ ಟಬ್. ಅದರೊಳಗೆ ಹರಡಿಕೊಂಡಿರುವ ಆ ಸಸ್ಯವನ್ನೊಮ್ಮೆ ಗಮನಿಸಿ. ಇಂತಹ ಸಸ್ಯವನ್ನು ನೀವೆಲ್ಲಾದರೂ ನೋಡಿರುವಿರಾ? ನಾನಂತೂ ನೋಡಿಲ್ಲಪ್ಪ! ಅದು ಒಂದು ಜಲಸಸ್ಯವೇ ಸರಿ. ಆದರೆ ನನಗದು ಏಕಿಷ್ಟವಾಯ್ತು ಗೊತ್ತಾ? ಅದರ ಸುಂದರವಾದ ಎಲೆಗಳ ಕುಸುರಿ ಕೆಲಸ. ಅವುಗಳು ವಜ್ರದಾಕಾರವಾಗಿವೆ ಮಾತ್ರವಲ್ಲದೆ ಅಂಚುಗಳಲ್ಲಿ ಹಲ್ಲಿನಂತಹ ರಚನೆ! Diamond plant! ನೀರಿನ ಮೇಲ್ಮೈನಲ್ಲಿರುವ ಈ ಸಸ್ಯದ ಗುಂಪಾದ ಎಲೆಗಳು ನೆಲಕ್ಕೆ ವೃತ್ತಾಕಾರದಲ್ಲಿ ಹಾಸಿದ ಮೊಸಾಯಿಕ್ ಟೈಲ್ಸ್ ನಂತಹ ಆಕೃತಿಯನ್ನು ಹೋಲುತ್ತದೆ..! ಮಕ್ಕಳೇ, ಇದರ ಗುಂಪಾದ ಎಲೆಗಳ ಆಕಾರದಿಂದಲೇ ಮೊಸಾಯಿಕ್ ಸಸ್ಯವೆಂದು ಕರೆಸಿಕೊಳ್ಳುತ್ತದೆ. ನಿಜವಾಗಿ ಇದರ ಸಸ್ಯ ಶಾಸ್ತ್ರೀಯ ಹೆಸರು ಲುಡ್ವಿಜಿಯಾ ಸೆಡಿಯೋಯಿಡ್ಸ್ ( Ludwigia Sedioides). ಇದು ಓನಾಗ್ರಸೀ (Onagraceae) ಕುಟುಂಬದ ಮುದ್ದಿನ ಕೂಸು.
ಇದರ ಎಲೆಗಳು ಕಮಲದ ಎಲೆಗಳಂತೆ ತೇಲುವುದಾರೂ ಈ ಸಸ್ಯದ ದಂಟು ಕಮಲದಂತಿಲ್ಲ. ತೆಳ್ಳನೆಯ ಬಳ್ಳಿಯಂತಹ ನಸು ಕೆಂಪು ಕಾಂಡಕ್ಕೆ ಎಲೆಗಳು ಉದ್ದನೆಯ ದಂಟಿನ ಮೂಲಕ ಜೋಡಣೆಯಾಗಿವೆ ನೋಡಿದಿರಾ? ಎಲೆಗಳ ಬಣ್ಣ ಗಮನಿಸಿ. ಮಧ್ಯೆ ಹೊಳೆಯುವ ಹಸಿರಿನ ಜೊತೆಗೆ ಹೊರವಲಯದಲ್ಲಿ ಕೆಂಪು, ಗುಲಾಬಿ, ಹಳದಿ ಬಣ್ಣದ ಎಲೆಗಳನ್ನು ಗಮನಿಸಿ. ಈ ಬಣ್ಣದ ಎಲೆಗಳು ಇದರ ಆಕರ್ಷಣೆಗೆ ಕಾರಣವಾಗಿದೆ. ಈ ಸಸ್ಯಕ್ಕೆ ಬಿಸಿಲೆಂದರೆ ತುಂಬಾ ಇಷ್ಟವಂತೆ. ಅದಕ್ಕೇ ನೋಡಿ ಈ ಬಟಾಬಯಲಲ್ಲಿ ಇಟ್ಟಿದ್ದಾರೆ. ಬೆಳಗಿನಿಂದ ಸಂಜೆಯವರೆಗೂ ಬಿಸಿಲಿದೆ. ಕಡಿಮೆ ಬೆಳಕಲ್ಲಿ ಬಹು ನಿಧಾನ ಬೆಳವಣಿಗೆಯಂತೆ. ಬೆಳಕು ಕಡಿಮೆಯಾದರೆ ಎಲೆಗಳಲ್ಲಿ ಬಣ್ಣಗಳೂ ಮರೆಯಾಗುತ್ತವೆ. ಸಸ್ಯವು ಆಕರ್ಷಕವಾಗಿರಲು ಹಣ್ಣಾದ ಎಲೆಗಳನ್ನು ಆಗಾಗ ತೆಗೀತಾ ಇರಬೇಕು.
ಈ ಸಸ್ಯದ ಇನ್ನೊಂದು ವಿಶೇಷತೆ ಏನು ಗೊತ್ತಾ? ಅದು ತಿಳಿಯಬೇಕೆಂದರೆ ಒಂದಿಡೀ ದಿನ ನೀವು ಕಾಯಬೇಕು! ಹಗಲಿನಲ್ಲಿ ಉದ್ದುದ್ದಕ್ಕೆ ದೂರ ದೂರ ಕಾಂಡಗಳನ್ನು ಹರಡಿಸಿ ಎಲ್ಲಾ ಎಲೆಗಳಿಗೂ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳುವ ಲುಡ್ವಿಜಿಯಾ ಅಥವಾ ಮೊಸಾಯಿಕ್ ಸಸ್ಯವು ಕತ್ತಲಾವರಿಸಿದಂತೆ ಸಂಕುಚಿತಗೊಳ್ಳುತ್ತದೆ! ಎಷ್ಟೆಂದರೆ ಎಲೆಗಳ ಮೇಲೆ ಎಲೆಗಳು ಅತಿಕ್ರಮಿಸುವಷ್ಟು!
ನಿಮಗೆ ಹೊಸ ಸಸ್ಯ ಬೇಕೆಂದರೆ ಉದ್ದಕ್ಕೆ ಬೆಳೆದ ಶಾಖೆಯನ್ನು ತುಂಡರಿಸಿ ಪ್ರತ್ಯೇಕವಾಗಿ ನೆಟ್ಟರಾಯಿತು. ಏಕಾಂಗಿ ಸಸ್ಯದಲ್ಲಿ ಚಿಗುರು, ಬೇರು ಬಂದು ವಂಶವನ್ನು ಮುಂದುವರಿಯುತ್ತದೆ. ಇದು ಬರೇ ನೀರಲ್ಲಿ ಮಾತ್ರವೇ ಬೆಳೆಯೋದಲ್ಲ. ಒಂದೆರಡು ಅಡಿಯಷ್ಟು ಅಗಲ ಬೆಳೆಯುವ ಮೊಸಾಯಿಕ್ ಒಂದಡಿಯವರೆಗೂ ಎತ್ತರವಾಗಬಲ್ಲದು. ಇದು ಆರ್ದ್ರತೆ ಇರುವ ಜೌಗು ಮಣ್ಣಲ್ಲೂ ಆವಾಸವನ್ನು ಕಂಡುಕೊಳ್ಳುತ್ತದೆ.
ಆದರೆ ಹರಿವ ನೀರಲ್ಲಿ ನೀವು ನೆಟ್ಟರೆ ಇದು ಬದುಕಲಾರದು ಗೊತ್ತಾ? ಏಕೆಂದರೆ ನಿಶ್ಚಲವಾದ ಅಥವಾ ಬಹು ನಿಧಾನವಾಗಿ ಹರಿಯುವ, ಸೌಮ್ಯ ಸ್ಥಿರ ಹರಿವಿನಲ್ಲಿ ಮಾತ್ರವಿದು ಬದುಕು ಕಟ್ಟಿಕೊಳ್ಳಬಲ್ಲದು. ನೀರಿನ ಗುಣಮಟ್ಟದ ಹೆಚ್ಚಿನ ಏರಿಳಿತಕ್ಕೆ ತಕ್ಷಣ ಪ್ರತಿಕ್ರಿಯೆ ನೀಡುವ ಸೂಕ್ಷ್ಮ ಸಸ್ಯವಿದು. ನಿಷ್ಪಾಪಿ ಸಸ್ಯವಾದ ಮೊಸಾಯಿಕ್ ದೀರ್ಘಕಾಲಿಕ ಸಸ್ಯವಾಗಿದ್ದು ಗಮನಾರ್ಹ ನೋಟದ ಜೊತೆಗೊಂದು ಅದ್ಭುತ ಸಸ್ಯ.
ಎಲೆಗಳ ಕಂಕುಳಲ್ಲಿ ಎರಡಿಂಚು ವ್ಯಾಸವಿರುವ ಕಪ್ ಆಕಾರದ ನಾಲ್ಕು ಪಕಳೆಗಳ ಹೊಳಪಿನ ಹಳದಿ ಬಣ್ಣದ ಸುಂದರ ಒಂಟಿ ಹೂವುಗಳಾಗುತ್ತವೆ. ಸ್ಪೋಟಕ ಬೀಜವಿರುವ ಪುಟ್ಟ ಕಾಯಿಗಳಾಗುತ್ತವೆ. ಬೀಜಗಳಿಂದಲೂ ಸಂತಾನೋತ್ಪತ್ತಿ ನಡೆಯುತ್ತದೆ.
ಅಕ್ವೇರಿಯಂ, ನೀರಿನ ತೊಟ್ಟಿ, ಸಣ್ಣ ಕೊಳಗಳಲ್ಲಿ ಸೌಂದರ್ಯ ಹೆಚ್ಚಿಸಲು ಈ ಮೊಸಾಯಿಕ್ ಸಸ್ಯ ಬೆಳೆಸುವರು. ವೆನೆಜುವೆಲಾ ಮತ್ತು ಬ್ರೆಜಿಲ್ ಗೆ ಸ್ಥಳೀಯವಾದ ಮೊಸಾಯಿಕ್ ಸಸ್ಯ ಶ್ರೀಲಂಕಾ ದಲ್ಲಿ ಆಕ್ರಮಣಕಾರಿ ಸಸ್ಯವಾಗಿ ಪರಿಣಮಿಸಿದೆಯೆಂದರೆ ಇದರ ಸಾಮರ್ಥ್ಯದ ಅರಿವಾಗದಿರದು. ತ್ವರಿತ ಬೆಳವಣಿಗೆ, ಪರಿಣಾಮಕಾರಿ ಸಂತಾನೋತ್ಪತ್ತಿ ವಿಧಾನ, ಆಕ್ರಮಣಕಾರಿ ಸ್ವಭಾವದಿಂದ ಈ ಸಸ್ಯವು ಭವಿಷ್ಯದಲ್ಲಿ ಜೀವ ವೈವಿಧ್ಯತೆಗೆ ಅಪಾಯ ಉಂಟುಮಾಡಬಹುದೆನ್ನುವ ಭಯ ಪರಿಸರ ತಜ್ಞರಿಗಿದೆ. ಇದಕ್ಕೆ ಗಂಭೀರ ಕೀಟ ರೋಗಗಳ ಯಾವ ಸಮಸ್ಯೆಯೂ ಇಲ್ಲ.
ಕೈತೋಟದ ಸೌಂದರ್ಯವರ್ಧನೆಗೆ ನೀವು ಕೂಡ ಒಂದೆರಡು ಅಡಿಯಷ್ಟು ಆಳದ ಕೊಳ ಅಥವಾ ಪಾತ್ರೆಗಳಲ್ಲಿ ಇದನ್ನು ಸುಲಭವಾಗಿ ಬೆಳೆಸಬಹುದು. ಇಂದಿನ ಧಾವಂತದ ಬದುಕಿನಲ್ಲಿ ವೈದ್ಯಕೀಯ ವೃತ್ತಿಯ ಜೊತೆ ಜೊತೆಗೆ ಸಸ್ಯಗಳ ಜೊತೆಯೂ ಒಡನಾಟವಿರಿಸಿಕೊಂಡಿರುವ ನಮ್ಮ ಡಾ| ಅಶ್ವಿನಿಯವರು ನಮಗೆಲ್ಲ ಮಾದರಿಯಲ್ಲವೇ!
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************