ವಿದ್ಯಾರ್ಥಿ ಮಿತ್ರ ವಿಜ್ಞಾನ
Wednesday, March 4, 2026
Edit
ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 10
ಲೇಖನ : ವಿದ್ಯಾರ್ಥಿ ಮಿತ್ರ ವಿಜ್ಞಾನ
ಬರಹ : ಪ್ರದೀಪ್ ಕುಮಾರ್
ಸಹ ಶಿಕ್ಷಕರು (ವಿಜ್ಞಾನ)
ಸರಕಾರಿ ಪ್ರೌಢಶಾಲೆ ಅತ್ತಾವರ
ಮಂಗಳೂರು ದಕ್ಷಿಣ,
Mob : +91 87624 30577
ಹಾಯ್ ಮಕ್ಕಳೇ, ನೀವೀಗ ಭರದಿಂದ ನಿಮ್ಮ SSLC ವಾರ್ಷಿಕ ಪರೀಕ್ಷೆಗೆ ಸಿದ್ಧತೆ ಮಾಡುತ್ತೀದ್ದೀರಲ್ವಾ ? ವಿಜ್ಞಾನ ವಿಷಯಕ್ಕೂ ಇತರೇ ವಿಷಯದಂತೆ ಶಾಲೆ ನಡೆಯುವ ದಿನಗಳಲ್ಲಿ ಪ್ರತಿ ದಿನ 30 ರಿಂದ 45 ನಿಮಿಷ ಹಾಗೂ ರಜಾ ದಿನಗಳಲ್ಲಿ ಸುಮಾರು 2 ಗಂಟೆ ಮೀಸಲಿಟ್ಟು ಓದುತ್ತಿದ್ದೀರಾ ತಾನೇ ? ಉತ್ತಮ ಫಲಿತಾಂಶ ಬಯಸುವ ವಿದ್ಯಾರ್ಥಿ ನೀವಾಗಿದ್ದಲ್ಲಿ ಅಧ್ಯಯನದಲ್ಲಿ ಇಂತಹ ಬದ್ಧತೆ ಅಗತ್ಯ.
ಇನ್ನು ಎಷ್ಟು ಹೊತ್ತು ಓದುತ್ತಿದ್ದೀರಿ, ಅನ್ನುವುದರೊಂದಿಗೆ ಹೇಗೆ ಓದುತ್ತಿದ್ದೀರಾ ಅನ್ನುವುದು ಮುಖ್ಯ ಎಂದು ನಿಮಗೆ ತಿಳಿದಿರುತ್ತದೆ ಅಲ್ಲವೇ. ಈಗ ವಿಜ್ಞಾನ ವಿಷಯದ ಬಗ್ಗೆ ಒಂದಿಷ್ಟು ಚರ್ಚಿಸೋಣ.
ಅಂತಿಮ ಹಂತದ ತಯಾರಿಯಲ್ಲಿರುವ ನೀವೀಗ ವಿಜ್ಞಾನದ 13 ಅಧ್ಯಾಯಗಳ ಬಗ್ಗೆ ಒಂದಷ್ಟು ತಿಳಿದವರಾಗಿರುತ್ತೀರಿ. ಬೇಗನೇ ಸ್ಮರಣೆಗೆ ಬಾರದ ವಿಷಯಗಳನ್ನು ಮತ್ತೆ ಮತ್ತೆ ಅಧ್ಯಯನ ಮಾಡುತ್ತಾ ಮೆದುಳಿನಲ್ಲಿ ಸ್ಮರಣೆಯಲ್ಲಿ ಉಳಿಯುವಂತೆ ಮಾಡುವುದು. 4 ಮಾದರಿ ಪ್ರಶ್ನೆ ಪತ್ರಿಕೆಗಳ ಉತ್ತರಗಳನ್ನು ತಪ್ಪದೇ ಬರೆಯಲು ಸಾಧ್ಯವಾಗುವಂತೆ ಸಿದ್ಧರಾಗುವುದು, ನಿಮ್ಮ ಪೂರ್ವ ತಯಾರಿಯ ಭಾಗವಾಗಿದೆ ತಾನೇ?
ಶಹಬ್ಬಾಸ್, ನಿಮಗಿನ್ನೂ ಸಮಯವಿದೆ, LBA ಯಲ್ಲಿರುವ ಪ್ರಶ್ನೆ ಸಹಿತ ಉತ್ತರಗಳು, ಗೆಲುವಿನ ಹೆಜ್ಜೆಯಂತಹ ಉಪಯುಕ್ತ ಸಂಪನ್ಮೂಲಗಳು, ನಿಮ್ಮ ಶಿಕ್ಷಕರು ನೀಡಿರುವ ನೋಟ್ಸ್ ಹಾಗೂ ಪಠ್ಯಪುಸ್ತಕ ಹೀಗೆ ಅಧ್ಯಯನ ನಡೆಸಲು ಸಾಕಷ್ಟು ಸಾಮಾಗ್ರಿಗಳಿವೆ. ಇವನ್ನೆಲ್ಲಾ ನಿಮ್ಮ ಸಾಮರ್ಥ್ಯ ಹಾಗೂ ಶಿಕ್ಷಕರ ಸಲಹೆಯಂತೆ ಆಯ್ಕೆ ಅನುಸಾರ ಅಧ್ಯಯನ ನಡೆಸಿ. ಒಟ್ಟು ಓದುವ ಸಾಮಾಗ್ರಿಗಳ ರಾಶಿ ನಿಮ್ಮಲ್ಲಿ ತಳಮಳ ಹೆಚ್ಚಿಸುತ್ತಿದೆ ಎಂದಾದರೆ, ನಿಮ್ಮನ್ನು 3 ವರ್ಷಗಳಿಂದ ಅಧ್ಯಯನ ನಡೆಸಿದ ನಿಮ್ಮ ಶಿಕ್ಷಕರು ನಿಮ್ಮ ಅಧ್ಯಯನಕ್ಕೆ ಸೂಕ್ತ ಮಾರ್ಗದರ್ಶಕರು, ಅವರ ಸಲಹೆ ಪಡೆಯಿರಿ.
ವಿಜ್ಞಾನದಲ್ಲಿ ಬರುವ ಚಿತ್ರಗಳ ಮಹತ್ವ ನಿಮಗೆ ತಿಳಿದೇ ಇದೆ. ಪರೀಕ್ಷೆಯಲ್ಲಿ ಕೇಳಬಹುದಾದ ಅಷ್ಟೂ ಚಿತ್ರಗಳನ್ನು ಭಾಗ ಸಹಿತ ನೀವು ಅಧ್ಯಯನ ನಡೆಸಿರುತ್ತೀರಿ. ಅವುಗಳು ಸ್ಮೃತಿ ಪಟಲದಿಂದ ಜಾರದಂತೆ, ದಿನಕ್ಕೊಂದು ಚಿತ್ರ ಬರೆದು ಅಭ್ಯಾಸ ಮಾಡುವುದು ಜಾಣತನ. ವಿಜ್ಞಾನದ ಒಂದೊಂದು ಅಧ್ಯಾಯಗಳೂ ಎಷ್ಟೊಂದು ಆಸಕ್ತಿದಾಯಕ ಅಲ್ಲವೇ ? ಸಮೀಕರಣ ಸರಿದೂಗಿಸುವ ಥ್ರಿಲ್, ರಚನಾ ಸೂತ್ರ, ಚುಕ್ಕಿ ಸೂತ್ರಗಳ ಸುಂದರ ವಿನ್ಯಾಸಗಳು, ಪ್ರಶ್ನೆಯಲ್ಲೇ ಉತ್ತರ ಅಡಗಿರುವ ಸರಳ ನಿರೂಪಣೆಗಳು, ನಿತ್ಯ ಜೀವನಕ್ಕೆ ಹತ್ತಿರವಿರುವ ಪರಿಕಲ್ಪನೆಗಳು, ನಾವೇನು ನೋಡುತ್ತಿದ್ದೇವೆಯೋ, ಅನುಭವಿಸುತ್ತಿದ್ದೇವೆಯೋ ಅದನ್ನೇ ವ್ಯವಸ್ಥಿತ ವಾಕ್ಯದ ರೂಪದಲ್ಲಿ ಹೇಳುವ ವಿಜ್ಞಾನ ಸರಳ ಮಾತ್ರವಲ್ಲ ಮನರಂಜನಾತ್ಮಕ ಜ್ಞಾನ ಭಂಡಾರವೂ ಹೌದು. ಮಾಡಿ, ನೋಡಿ ಅರಿಯುವ ಸಂಗತಿಯೂ ಹೌದು.
ವಿಜ್ಞಾನ ಪರೀಕ್ಷೆ ಬರೆಯಲು ಸಮಯ ಕಡಿಮೆಯಾಯಿತು ಅನ್ನುವ ಮಾತೇ ಇಲ್ಲ. ಎಂತ ಮಾರಾಯರೇ ಒಂದೊಂದು ವಾಕ್ಯಕ್ಕೆ ಒಂದೊಂದು ಮಾರ್ಕ್ , ಕೆಲವೊಮ್ಮೆ ಹಸಿರು, ಕೆಂಪು ಎಂದು ಒಂದು ಶಬ್ದ ಬರೆದರೂ ಒಂದು ಮಾರ್ಕ್, ಮತ್ತೆ ಕೇವಲ A, B ಎಂದು ಮಂಡಲ, ದ್ರಾವಣ ಗುರುತಿಸಿದರೂ ಬರೋಬ್ಬರಿ ಒಂದು ಮಾರ್ಕ್, ಇದು ವಿಜ್ಞಾನದ ಪವರ್. ಹಾಂ ಹಾಗೆಂದು ಇದನ್ನು ಬರೆಯಲು ನಿಮ್ಮ ಜ್ಞಾನ, ಬುದ್ದಿವಂತಿಕೆ ಅಗತ್ಯ ಅನ್ನುವುದು ಒಪ್ಪಬೇಕು ಬಿಡಿ.
3,4,5 ಅಂಕದ ಪ್ರಶ್ನೆಗಳಿದ್ದರೂ , ಅದೆಲ್ಲಾ ಬಿಡಿಬಿಡಿಯಾಗಿ a, b, c ಎಂಬ ಉಪಪ್ರಶ್ನೆಗಳಾಗಿ ವಿಂಗಡಣೆಯಾಗುತ್ತವೆ. ಪ್ರಬಂಧ ಬರೆಯುವ ಪ್ರಮೇಯವೇ ಇಲ್ಲ. ಇನ್ನು ವಿಜ್ಞಾನದಲ್ಲಿ ಬರುವ ಸೀಮಿತ ಲೆಕ್ಕಗಳು, ನಿಮ್ಮ ಗಣಿತದ ಲೆಕ್ಕಗಳಿಗೆ ಹೋಲಿಸಿದರೆ, ಏನೇನೂ ಕಷ್ಟವಲ್ಲ. ನೀವದನ್ನು ಮನಸಾರೆ ಒಪ್ಪಿಕೊಂಡು, ಅಪ್ಪಿಕೊಂಡು ಬಿಡಿಸಲು ಪ್ರಯತ್ನಿಸಬೇಕು ಅಷ್ಟೇ.
ಎಲ್ಲೋ, ಅಲ್ಲೊಂದು, ಇಲ್ಲೊಂದು ಕಾಣಿಸಿಕೊಳ್ಳುವ ಅನ್ವಯದ ಪ್ರಶ್ನೆಗಳನ್ನೇ ಮುಂದಿಟ್ಟುಕೊಂಡು ವಿಜ್ಞಾನ ಕಷ್ಟವೆಂದರೆ ಹೇಗೆ..? 80 ಕ್ಕೆ 80 ಅಂಕ ತೆಗೆಯುವುದು ಬಾಳೆಹಣ್ಣು ತಿಂದಷ್ಟು ಸುಲಭವಾಗಬಾರದಲ್ಲ, ಕನಿಷ್ಟ ದಾಳಿಂಬೆ ತಿನ್ನುವಷ್ಟು ಕಠಿಣ ಇರಲಿ ಬಿಡಿ, ಸ್ವಲ್ಪ ಸವಾಲು ಇಲ್ಲದಿದ್ದರೆ, ಏನು ಚಂದ..?
ಮಕ್ಕಳೇ ಬ್ಲೂಪ್ರಿಂಟ್ ನೀಡಿ, ಅಧ್ಯಾಯವಾರು ಪ್ರಾಮುಖ್ಯತೆ ನೀಡಬೇಕಾದ ಅಂಶಗಳು ತಿಳಿದಿವೆ. ಸಣ್ಣ ಪಾಠಗಳಾದ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ, ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಮೊದಲಾದ ಪಾಠಗಳನ್ನು ಚೆನ್ನಾಗಿ ಓದಿ ಕರಗತಗೊಳಿಸಿ. ದಿನಕ್ಕೆ 9 ಪ್ರಶ್ನೆಗಳು + ಒಂದು ಚಿತ್ರ ಎಂಬಂತೆ ಪ್ಯಾಕೇಜ್ ರೂಪದಲ್ಲಿ ಅಧ್ಯಯನ ನಡೆಸಬಹುದು.
ಆಸಕ್ತಿ, ನಿಮ್ಮ ಹೆತ್ತವರು ಹಾಗೂ ಶಿಕ್ಷಕರ ಪ್ರಯತ್ನಕ್ಕೆ, ನಿಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಪ್ರತಿಫಲ ನೀಡುವ ಛಲ, ಅಧ್ಯಯನವನ್ನು ಆನಂದಿಸುವ ಮನೋಭಾವ ನಿಮ್ಮಲ್ಲಿದ್ದರೆ , ನಿಮ್ಮ ಗುರಿ ತಲುಪುವಲ್ಲಿ ನಿಮಗೆ ತಡೆಯೇನಿದೆ..? ನಿಮಗೆ ನೀವೇ ಸಾಟಿ ! ಆಲಸ್ಯ, ಸೋಮಾರಿತನದ ಮುಸುಕು ಕಿತ್ತು ಎಸೆಯಿರಿ. ವಿದ್ಯಾರ್ಥಿ, ಸುಖಾರ್ಥಿಯಾಗಲಾರ, ಆಗಬಾರದೂ ಕೂಡಾ…. ಶುಭವಾಗಲಿ.
ಸಹ ಶಿಕ್ಷಕರು (ವಿಜ್ಞಾನ)
ಸರಕಾರಿ ಪ್ರೌಢಶಾಲೆ ಅತ್ತಾವರ
ಮಂಗಳೂರು ದಕ್ಷಿಣ,
Mob : +91 87624 30577
*****************************************