ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 118
Wednesday, March 4, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 118
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ನಿಮಗೆ ಶ್ರೀ ರಾಮಮೂರ್ತಿ ಸರ್ ಚನ್ನಾಗಿ ಪರಿಚಯ. ಪ್ರತಿ ಮಂಗಳವಾರ ಅವರು ನಿಮ್ಮ ತಮ್ಮ ಬರೆಹಗಳ ಮೂಲಕ ಜೊತೆಗಿರುತ್ತಾರೆ. ಅವರು ಕೇವಲ ಬರೆಹಗಾರರು ಮಾತ್ರವಲ್ಲ ವ್ಯಾಪಕ ಓದುಗರು ಕೂಡಾ. ಮಕ್ಕಳ ಜಗಲಿಯಲ್ಲಿ ಬರುವ ಎಲ್ಲ ಲೇಖನಗಳನ್ನೂ ತಪ್ಪದೇ ಓದುತ್ತಾರೆ. ಪ್ರತಿಕ್ರಿಯಿಸುತ್ತಾರೆ. ನನ್ನ ವಿದ್ಯಾರ್ಥಿಯೊಬ್ಬರು ಕೆಲವರಿಗೆ ನಿದ್ದೆಯಲ್ಲಿ ಕನಸು ಬೀಳುವುದಿಲ್ಲ ಏಕೆ ಎಂದು ಕೇಳಿದ್ದರು. ಕನಸು ಬೀಳಬೇಕಾದರೆ ನಿದ್ದೆ ಮಾಡಬೇಕು. ಈ ನಿದ್ದೆ ಎಂದರೆ ಏನು ಎಂದು ಕಳೆದ ಐದು ಕಂತುಗಳಲ್ಲಿ ಹೇಳುತ್ತಾ ಹೋದೆ. ಈಗ ನಿಮ್ಮ ಶ್ರೀ ರಾಮಮೂರ್ತಿ ಸರ್ ನಾನು ಕನಸಿನ ಬಗ್ಗೆ ತಿಳಿಯಲು ಉತ್ಸುಕನಾಗಿದ್ದೇನೆ ಎಂದು ಒಂದು ಸಂದೇಶ ಕಳುಹಿಸಿದ್ದಾರೆ. ಆದ್ದರಿಂದ ಇವತ್ತಿನಿಂದ ಕನಸಿನ ಬಗ್ಗೆ ಚರ್ಚಿಸೋಣ.
ಅನೈಚ್ಛಿಕವಾದ ಚಿತ್ರಗಳ ಭಾವನೆಗಳ ಸ್ಪಷ್ಟವಾದ ಮೆರವಣಿಗೆಯೇ ಕನಸು. ಇದು ಒಂದು ನಿದ್ದೆಯ ಚಕ್ರದಲ್ಲಿ 15 ರಿಂದ 20 ನಿಮಿಷಗಳ ಕಾಲ ಸಾಗುವ ಒಂದು ಸಿನಿಮಾ ಇದು. ನಿದ್ದೆಯ ಚಕ್ರ ಎಂದರೆ ಮಂಪರು ಮತ್ತು ಗಾಢ ನಿದ್ದೆಗಳ ಸರಣಿ. ನಿದ್ದೆ ಮಂಪರಿನೊಂದಿಗೆ ಆರಂಭವಾಗುತ್ತದೆ. ಈ ಹಂತದಲ್ಲಿ ಕಣ್ರೆಪ್ಪೆಗಳ ಚುರುಕಿನ ಚಲನೆ ಇರುವುದಿಲ್ಲ. ಅಂದರೆ ಇದು ಕಣ್ರೆಪ್ಪೆಗಳ ಚಲನೆ ಇಲ್ಲದ ನಿದ್ದೆಯ ಹಂತ. Non Rapid Eye Movement (NREM). ಇನ್ನು ಗಾಢ ನಿದ್ದೆಯ ಹಂತದಲ್ಲಿ ಕಣ್ರೆಪ್ಪೆಗಳ ವೇಗದ ಚಲನೆಯು ಕಂಡುಬರುತ್ತದೆ. ಆದ್ದರಿಂದ ಇದು ವೇಗದ ಕಣ್ರೆಪ್ಪೆಗಳ ಚಲನೆಯ ಹಂತ Rapid Eye Movement (REM). ಈ ಹಂತದಲ್ಲಿ ನಾವು ಹೇಳುವ ಕನಸುಗಳು ಬೀಳುವುದು.
ಹಾಗಾದರೆ NREM ಹಂತದಲ್ಲಿ ಕನಸುಗಳು ಬೀಳುವುದೇ ಇಲ್ಲವೇ ಎಂದು ಕೇಳಬೇಡಿ. ಬೀಳುತ್ತವೆ. ಈ ಎರಡು ಹಂತಗಳಲ್ಲಿ ಬೀಳುವ ಕನಸುಗಳೇ ಬೇರೆ ಬೇರೆ. ಭಾಗವಹಿಸುವ ಮೆದುಳಿನ ಭಾಗಗಳೇ ಬೇರೆಬೇರೆ ಮತ್ತು ಅವುಗಳ ಉದ್ದೇಶ ಮತ್ತು ಪ್ರಭಾವಗಳೂ ಬೇರೆ ಬೇರೆ. REM ಹಂತದಲ್ಲಿ ಕನಸು ಕಾಣುವಾಗ ಹೆಚ್ಚೂ ಕಡಿಮೆ ನಿಮ್ಮ ಐಚ್ಛಿಕ ಸ್ನಾಯುಗಳು ನಿಶ್ಚೇಷ್ಟಗೊಂಡಿರುತ್ತವೆ (paralysed). ಆದ್ದರಿಂದ ಕನಸಿನಲ್ಲಿ ನೀವು ಮಾತನಾಡುತ್ತೀರಿ, ನಡೆಯತ್ತೀರಿ, ಕೂಗುತ್ತೀರಿ, ಬೊಬ್ಬೆ ಹೊಡೆಯುತ್ತೀರಿ. ಆದರೆ ನೀವು ಮಲಗಿದಲ್ಲಿಯೇ ಇರುತ್ತೀರಿ. ಏಕೆಂದರೆ ನಿಮ್ಮ ಸ್ನಾಯುಗಳು ನಿಮ್ಮೊಂದಿಗೆ ಸಹಕರಿಸುವ ಸ್ಥಿತಿಯಲ್ಲಿರುವುದಿಲ್ಲ.
ಈಗ ನಿಮ್ಮ ಪ್ರಶ್ನೆ ಕೆಲವರು ನಿದ್ದೆಯಲ್ಲಿ ನಡೆದಾಡುತ್ತಾರಲ್ಲ ಎಂಬುದು ತಾನೆ. ಅಂದರೆ ಅವರು ಯಾವ ಹಂತದ ನಿದ್ದೆಯಲ್ಲಿರುತ್ತಾರೆ ಎಂಬುದು ನಿಮಗೀಗ ಹೊಳೆದಿರಬಹುದು ಎಂದುಕೊಳ್ಳುತ್ತೇನೆ.
ಒಬ್ಬ ಆರೋಗ್ಯವಂತ ವಯಸ್ಕ 7 ರಿಂದ 9 ಗಂಟೆ ನಿದ್ದೆ ಮಾಡುತ್ತಾರೆ ಎಂದರೆ ಸರಿ ಸುಮಾರು 90 ನಿಮಿಷಗಳ 6 ನಿದ್ದೆಯ ಚಕ್ರಗಳಿರುತ್ತವೆ. ನನಗೆ ರಾತ್ರಿ ಎಚ್ಚರವಾಯಿತು ಎನ್ನುತ್ತೀರಲ್ಲ ಅದೇ. ಒಂದು ನಿದ್ದೆಯ ಚಕ್ರದಿಂದ ಇನ್ನೊಂದು ನಿದ್ದೆಯ ಚಕ್ರಕ್ಕೆ ಜಾರುವುದು. ಕೆಲವರು ಕನಸಿನ ಮೆಲುಕು ಹಾಕಿದರೆ ಉಳಿದವರು ಮಗ್ಗಲು ಬದಲಿಸುವಿಕೆ, ಚಾದರ ಸರಿಪಡಿಸುವಿಕೆಗಳಲ್ಲಿಯೇ ಒಂದು ನಿದ್ದೆಯ ಚಕ್ರದಿಂದ ಇನ್ನೊಂದಕ್ಕೆ ಜಾರಬಹುದು. ಇಬ್ಬರು ಒಟ್ಟಿಗೆ ಮಲಗಿದರೆ ಒಬ್ಬರ ನಿದ್ದೆಯ ಚಕ್ರ ಇನ್ನೊಬ್ಬರ ನಿದ್ದೆಯ ಚಕ್ರದೊಂದಿಗೆ ಹೊಂದಾಣಿಕೆ ಆಗದೇ ಇರುವುದರಿಂದ ಒಬ್ಬರಿಂದ ಇನ್ನೊಬ್ಬರ ನಿದ್ದೆಗೆ ತೊಂದರೆಯಾಗಬಹುದು.
ಕನಸುಗಳಲ್ಲಿಯೂ ಮೂರು ವಿಧಗಳು. ಒಂದು ಕನಸು ಒಂದು ದಿನಕ್ಕೆ ಕನಿಷ್ಠ 6 ಕನಸುಗಳು ಬೀಳಲೇ ಬೇಕಲ್ಲ. ಇವುಗಳು ನಿದ್ದೆಯ ಅನಿವಾರ್ಯ ಭಾಗಗಳು. ಇನ್ನೊಂದು ದುಃಸ್ವಪ್ನ (nightmare). ಕುಗ್ಗಿಸುವ, ಬೆದರಿಸುವ, ಹೆದರಿಕೆ ಹುಟ್ಟಿಸುವ ವೈವಿದ್ಯಮಯ ಕನಸುಗಳ. ಭಯ (fear) ಮತ್ತು ಆತಂಕಗಳೇ (anxiety) ದುಃಸ್ವಪ್ನಗಳ ಹೇತು. ಮೂರನೆಯದು ಹಗಲುಗನಸು (day dream). ನೀವು ಎಚ್ಚರಿದಲ್ಲಿರುವಾಗಲೇ ಉದ್ದೇಶಪೂರ್ವಕವಾಗಿ ಕಾಲ್ಪನಿಕ ಕನಸುಗಳೇ ಹಗಲುಗನಸುಗಳು.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************