-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 141

ನಿಷ್ಪಾಪಿ ಸಸ್ಯಗಳು : ಸಂಚಿಕೆ - 141

ನಿಷ್ಪಾಪಿ ಸಸ್ಯಗಳು : ಸಂಚಿಕೆ - 141
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಪರೀಕ್ಷಾ ತಯಾರಿಯಲ್ಲವೇ? ಸರಿ ಮಕ್ಕಳೇ, ಈ ವೇಳೆ ನಿಮಗೆ ಓದುವ ಅಗತ್ಯ ತುಂಬಾನೆ ಇದೆ. ಅದಕ್ಕಾಗಿ ಕಣ್ಣುಗಳ ಆರೋಗ್ಯವೂ ಬಹಳ ಮುಖ್ಯವಾಗಿದೆ. ನಮ್ಮ ಕಣ್ಣುಗಳ ಆರೋಗ್ಯಕ್ಕೆ ಅಗತ್ಯವಾಗಿರುವ 'ವಿಟಮಿನ್ ಎ' ಎಂದು ನಿಮಗೆಲ್ಲರಿಗೂ ಗೊತ್ತಲ್ಲವೇ? ಅದೂ ಕೂಡ ಹಳದಿ ಬಣ್ಣದ ತರಕಾರಿ, ಹಣ್ಣು ಹಂಪಲುಗಳಲ್ಲಿ ಹೆಚ್ಚಿರುತ್ತದೆ ಎಂದೂ ಅದರಲ್ಲೂ ಕ್ಯಾರೆಟ್ ಉತ್ತಮ ಎಂದು ಅರಿತಿದ್ದೇವೆ. ಆದರೆ ದುಬಾರಿ ಕ್ಯಾರೆಟ್ ಗಿಂತ ನಾಲ್ಕು ಪಟ್ಟು ಹೆಚ್ಚು 'ವಿಟಮಿನ್ ಎ' ಯಿಂದ ಸಮೃದ್ಧವಾಗಿರುವ ತರಕಾರಿಯೊಂದು ನಮ್ಮ ಮನೆಯ ಸುತ್ತಮುತ್ತ ಇದೆಯೆಂದರೆ ನಂಬುವಿರಾ?

ಕಿತ್ತಳೆಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ C ಇರುವ, ಹಾಲಿಗಿಂತ ನಾಲ್ಕು ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುವ, ಬಾಳೆಹಣ್ಣಿಗಿಂತ ಮೂರು ಪಟ್ಟು ಹೆಚ್ಚು ಪೊಟಾಷಿಯಂ ಇರುವ, ಬಾದಾಮಿ ಮತ್ತು ಪಾಲಕ್ ಗಿಂತ ಮೂರು ಪಟ್ಟು ಹೆಚ್ಚು ವಿಟಮಿನ್ ಇ ಇರುವ, ಮೊಟ್ಟೆಯ ಬಿಳಿಭಾಗಕ್ಕಿಂತ ಎರಡು ಪಟ್ಟು ಹೆಚ್ಚು ಪ್ರೊಟೀನ್ ಹೊಂದಿರುವ ಈ ತರಕಾರಿ ಯಾವುದು ಗೊತ್ತಾ? 

ಅಷ್ಟು ಮಾತ್ರವಲ್ಲ ಮಕ್ಕಳೇ, ಈ ತರಕಾರಿಯಲ್ಲಿ ವಿಟಮಿನ್ ಎ,ಬಿ,ಸಿ ಹಾಗೂ ಸತು, ಸೋಡಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಪೊಟಾಷಿಯಂ ನಂತಹ ಖನಿಜಾಂಶಗಳಿವೆ. ಇದರ ಸೊಪ್ಪಿನ ಬಳಕೆಯಿಂದ ಕಣ್ಣು, ಮೂಳೆ, ಹೃದಯ, ನರಗಳ ಆರೋಗ್ಯ ಉತ್ಯಮಗೊಳ್ಳುತ್ತದೆ. ರಕ್ತಹೀನತೆ, ರಕ್ತ ಶುದ್ಧೀಕರಣ, ಶೀತ, ಜ್ವರ, ಗಂಟಲು ನೋವು ಇತ್ಯಾದಿಗಳಿಗೆ ಬಹಳ ಪ್ರಯೋಜನಕಾರಿ!. ಕ್ಯಾನ್ಸರ್ ಬರುವ ಅಪಾಯವನ್ನು 80% ತಗ್ಗಿಸುತ್ತದೆ, ಸ್ತನ ಕ್ಯಾನ್ಸರ್ ಗೆ ಶಮನಕಾರಿಯೆಂದು ವರದಿಗಳು ತಿಳಿಸುತ್ತಿವೆ. ತೂಕ ನಷ್ಟವಾಗಲು, ಮಧುಮೇಹ ನಿಯಂತ್ರಿಸಲು, ಸಂಧಿವಾತ, ರೋಗ ನಿರೋಧತೆಗೆ, ಬ್ಯಾಕ್ಟೀರಿಯಾ ವಿರೋಧಿಯಾಗಿ ಈ ನಿಷ್ಪಾಪಿ ಸಸ್ಯ ಮಾನವನಿಗೆ ಸಹಾಯ ಮಾಡುತ್ತಿದೆ. ಹಳ್ಳಿಯ ಅಮ್ಮಂದಿರಿಗೆ ಜಂತು ಹುಳು ನಿವಾರಣೆಗೆ ಇದೆಷ್ಟು ಸಹಾಯಕವೆಂದು ಗೊತ್ತು. ಕೂದಲು, ಚರ್ಮದ ಹೊಳಪಿಗೆ, ರಕ್ತದೊತ್ತಡ, ಕೊಲೆಸ್ಟರಾಲ್ ಹಿಡಿತ ಸಾಧಿಸಲು, ಮೂಳೆಯ ದೃಢತೆಗೆ ಎಷ್ಟು ಸಹಾಯಕವೆಂದು ಆಯುರ್ವೇದ, ಯುನಾನಿ ಪದ್ಧತಿಗೆ ಗೊತ್ತು. ಇದರ ಸೊಪ್ಪಿನ ಚಹಾದಲ್ಲಿ ಫೈಬರ್ ಸಮೃದ್ಧವಾಗಿರುತ್ತದೆ. ಉಪಹಾರ, ಪಾನೀಯ, ಉಪ್ಪಿನಕಾಯಿ, ಸಾಂಬಾರ್, ಪತ್ರೊಡೆ, ಪಲ್ಯ, ಸಾರು, ಸೂಪ್ ಗಳಿಗೆ ಹೆಸರುವಾಸಿ!

ಮಕ್ಕಳೇ, ಇಷ್ಟೆಲ್ಲ ವಿಶೇಷತೆ ಇರುವ ಸಸ್ಯ ಯಾವುದೆಂಬ ಕುತೂಹಲವೇ? ಅದೇ ನಾವು ಉಪೇಕ್ಷೆ ಮಾಡುವ ನುಗ್ಗೇ ಕಾಯಿ!
ಹೌದು ಮಕ್ಕಳೇ, ಸಾಮಾನ್ಯವಾಗಿ ಹಳ್ಳಿಗಳ ಮೂಲೆಮೂಲೆಗಳಲ್ಲಿ ಕಾಣಸಿಗುವ ನುಗ್ಗೇಕಾಯಿ ಗಿಡಗಳಲ್ಲಿ ಸೊಂಪಾಗಿ ಎಲೆಗಳಿದ್ದರೂ ಕೊಯ್ಯದೆ ಹಣ್ಣಾಗಿ ಉದುರುವುದೇ ಹೆಚ್ಚು. ನುಗ್ಗೇ ಮರದಲ್ಲಿ ಕಾಯಿಗಳಿದ್ದರೂ ಬಳಸಲು ಅಸಡ್ಡೆ... ತಿಳಿ ಹಳದಿ ಬಿಳಿ ಬಣ್ಣದ ಅದರ ಪರಿಮಳ ಭರಿತ ಹೂವುಗಳು ಗೊಂಚಲುಗಳಾಗಿರುತ್ತವೆ. ಇವು ಸಾಂಬಾರಿಗೆ ಅದೆಷ್ಟು ಘಮ ನೀಡುವುದೆಂದರೆ ಬಳಸಿಯೇ ತಿಳಿಯಬೇಕು. ನೀರನ್ನು ಹೆಚ್ಚು ಬಯಸದ, ಒಣ ಭೂಮಿಯಲ್ಲಿ ಹಾಯಾಗಿ ಬದುಕುವ ನುಗ್ಗೆ ಸಸ್ಯಲೋಕದಲ್ಲಿ ಒಂದು ದೊಡ್ಡ ಸಂಪತ್ತು. ಇದು ಭಾರತವನ್ನೇ ಶ್ರೇಷ್ಠ ಗೊಳಿಸಿದೆ. ಅದ್ಭುತ ಪೌಷ್ಟಿಕಾಂಶ ಹಾಗೂ ಔಷಧೀಯ ಗುಣ ಹೊಂದಿರುವ ನುಗ್ಗೆ 6-7 ಮೀಟರ್ ಎತ್ತರ ಬೆಳೆಯಬಲ್ಲದು. ನೆಟ್ಟ ಮೂರು ತಿಂಗಳಲ್ಲೇ ಸಧೃಢವಾಗಿ ಬೆಳೆದು ಫಲ ನೀಡುತ್ತದೆ. ಬೂದು ಬಣ್ಣದ, ಅಷ್ಟು ಗಟ್ಟಿಯಲ್ಲದ ನಾಜೂಕಾದ ನುಗ್ಗೆ ಮರದಲ್ಲಿ ಉದ್ದುದ್ದ ದಂಟುಗಳು ತ್ರಿಪಕ್ಷೀಯ ಕವಲುಗಳಾಗಿ ಅವುಗಳಲ್ಲಿ ಮತ್ತೆ ಪುಟ್ಟಪುಟ್ಟ ಹಲವಾರು ಕವಲೊಡೆದ ದಂಟುಗಳಿದ್ದು ಅದರ ಸುತ್ತಲೂ ಸಣ್ಣ ಅಂಡಾಕಾರದ ಎಲೆಗಳ ಸಮೂಹವೇ ಇರುತ್ತದೆ. ಇವು ಸುಂದರವಾದ ಹಚ್ಚಹಸುರಾಗಿದ್ದು, ಮೃದುವಾಗಿರುತ್ತವೆ. ಎಲೆಗಳ ಅಂಚು ನಯವಾಗಿರುತ್ತದೆ. ಶಾಖೆಗಳ ತುದಿಗಳಲ್ಲಿ ಹೂವು ಕಾಯಿಗಳಾಗುತ್ತವೆ. ಕೋಡುಗಳಾಗಿ ಇಳಿಬೀಳುವ ಕಾಯಿಗಳು ಕೋಲಿನಂತಿರುವುದರಿಂದ ಇಂಗ್ಲೀಷ್ ಭಾಷೆಯಲ್ಲಿ Drum stik ಎಂದೇ ಹೆಸರು ಪಡೆದಿದೆ.

ಇದರ ಬೀಜಗಳು ನೆಲ್ಲಿಕಾಯಿ ಬೀಜದಂತಿರುತ್ತದೆ. ಗಿಡದಲ್ಲೇ ಬಿಟ್ಟರೆ ಒಣಗಿ ಬಹುದೂರ ಸಿಡಿಯಲ್ಪಡುತ್ತದೆ. ಇದರಿಂದ ತೈಲವನ್ನು ತೆಗೆಯುವರು. ಇದನ್ನು ನೀರಿನ ಶುದ್ಧೀಕರಣ, ಔಷಧಿಯಲ್ಲಿ ಬಳಸುವರು. ಭಾರತೀಯ ಮೂಲದ ನುಗ್ಗೆಯ ವೈಜ್ಞಾನಿಕ ಹೆಸರು ಮೊಲಿಂಗಾ ಒಲಿಫೆರಾ ( Moringa oleifera). ಮೊರೆಸಿಯೆ ಕುಟುಂಬಕ್ಕೆ ಸೇರಿದೆ. 

ಬೇರು, ತೊಗಟೆ, ಅಂಟು, ಎಲೆ, ಕಾಯಿ, ಹೂವು, ಬೀಜ, ಬೀಜದ ತೈಲ ಎಲ್ಲವೂ ಬಳಕೆಯಲ್ಲಿದ್ದು ಮನುಷ್ಯನಿಗೆ ಸಹಕಾರಿಯಾಗಿ ವರ್ತಿಸುವ ಈ ಸಸ್ಯವನ್ನು ಅದರ ಗೆಲ್ಲೊಂದನ್ನು ನೆಡುವ ಮೂಲಕವೂ ಬೆಳೆಸಬಹುದು. ಬೀಜದ ಮೂಲಕ ಸಸಿಗಳನ್ನು ಮಾಡಿಯೂ ಬೆಳೆಸಬಹುದು.ನುಗ್ಗೆ ತಳಿಗಳಾದ PKM 1,PKM 2, ಕೊಂಬು, ಜಾಫ್ನಾ, ಚವ್ಹೆಲ್ ಮೊದಲಾದ ಹಲವಾರು ತಳಿಗಳಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿರುವ,ವಿವಿಧ ಹವಾಮಾನಕ್ಕೆ ಹೊಂದಿಕೊಳ್ಳುವ, ತುಂಬಾ ಕಾಯಿ ಹಿಡಿಯುವ, ಚಿಕ್ಕ ಗಿಡದಲ್ಲೇ ಫಸಲು ನೀಡುವ , ವರ್ಷ ಪೂರ್ತಿ ಹೂವು ಕಾಯಿಗಳನ್ನು ನೀಡುವ ಮೂಲಕ ರೈತರಿಗೆ ಶಕ್ತಿ ತುಂಬುತ್ತವೆ.

ಮಕ್ಕಳೇ, ಇದೇ ನುಗ್ಗೆ ಗಿಡ ನಿಮ್ಮಲ್ಲೂ ಇದ್ದರೆ ಅದರ ಬಗ್ಗೆ ಕಾಳಜಿ ವಹಿಸಿರಿ. ಉಪಯುಕ್ತತೆಯ ಬಗ್ಗೆ ಹಿರಿಯರಿಗೆ ಮನದಟ್ಟು ಮಾಡುವುದಲ್ಲದೇ ನೀವೂ ಪ್ರೀತಿಯಿಂದ ಬಳಸುವಿರಲ್ಲವೇ?

ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************


Ads on article

Advertise in articles 1

advertising articles 2

Advertise under the article