-->
ಮಕ್ಕಳ ಜಗಲಿಯಲ್ಲಿ ವಿಶೇಷ ಲೇಖನ : ಕೂಲ್ ಲಿಪ್ ಎಂಬ ಕಿಲ್ಲರ್!!!

ಮಕ್ಕಳ ಜಗಲಿಯಲ್ಲಿ ವಿಶೇಷ ಲೇಖನ : ಕೂಲ್ ಲಿಪ್ ಎಂಬ ಕಿಲ್ಲರ್!!!

ಮಕ್ಕಳ ಜಗಲಿಯಲ್ಲಿ
ವಿಶೇಷ ಲೇಖನ : ಕೂಲ್ ಲಿಪ್ ಎಂಬ ಕಿಲ್ಲರ್!!!
ಲೇಖಕರು : ಗಿರೀಶ್ ಎಂ ಎನ್ 
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು 
ಮಡಿಲು ಕೌನ್ಸಿಲಿಂಗ್ ಪಾಯಿಂಟ್ ಅಚ್ಲಾಡಿ
ಉಡುಪಿ ಜಿಲ್ಲೆ
Mob : 8722715472

       
ಕೂಲ್ ಲಿಪ್ “Cool Lip” ಎನ್ನುವುದು ಸಾಮಾನ್ಯವಾಗಿ ತುಟಿಯ ಒಳಭಾಗದಲ್ಲಿ ಇಡುವ ತಂಬಾಕು ಅಥವಾ ನಿಕೋಟಿನ್ ನ ಪುಟ್ಟ ಪೌಚ್ ಆಗಿರುತ್ತದೆ. ಇದು ಕೆಲವೊಮ್ಮೆ snus ತರಹದ ಉತ್ಪನ್ನವಾಗಿರಬಹುದು ಅಥವಾ Zyn ತರಹ ನಿಕೋಟಿನ್ ಪೌಚ್ ಆಗಿರಬಹುದು.

ಸ್ನಸ್ (snus) ಒಂದು ಪರಂಪರಾಗತ, ಪಾಸ್ಚರೈಸ್ ಮಾಡಿದ ತೇವ ತಂಬಾಕು ಉತ್ಪನ್ನವಾಗಿದೆ. ಇದರ ವಿರುದ್ಧವಾಗಿ ಝಿನ್ (Zyn ) ಒಂದು ಆಧುನಿಕ, ತಂಬಾಕು ರಹಿತ ನಿಕೋಟಿನ್ ಪೌಚ್ ಆಗಿದ್ದು, ಸಸ್ಯ ತಂತುಗಳು (plant fibers) ಮತ್ತು ನಿಕೋಟಿನ್ ಸಾಲ್ಟ್‌ಗಳಿಂದ ತಯಾರಿಸಲಾಗುತ್ತದೆ.

ಕೂಲ್ ಲಿಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ನಿಕೋಟಿನ್ ಮೆದುಳಿನ ಮೆಸೋಲಿಂಬಿಕ್ ವ್ಯವಸ್ಥೆ (mesolimbic system) ಮೇಲೆ ತನ್ನ ಪ್ರಭಾವವನ್ನು ಬೀರಿ, ಆನಂದದ ಕೇಂದ್ರ ಭಾಗವಾದ ನ್ಯೂಕ್ಲಿಯಸ್ ಅಕ್ಯುಂಬೆನ್ಸ್ (Nucleus Accumbens) ನಲ್ಲಿ ಡೋಪಮೈನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ನ್ಯೂಕ್ಲಿಯಸ್ ಅಕ್ಯುಂಬೆನ್ಸ್ ಪ್ರೇರಣೆ, ಬಹುಮಾನ ಮತ್ತು ಅಭ್ಯಾಸ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಉದಾ: ನಮಗೆ ಥ್ರಿಲ್ ಕೊಡುವ ಆಟ ಪುನಃ ಪುನಃ ಆಡಬೇಕೆಂದೆನಿಸುತ್ತದೆ. ಅಂತೆಯೇ ನಿಕೋಟಿನ್ ನೀಡುವ ತಾತ್ಕಾಲಿಕ ಉಲ್ಲಾಸ ಪುನಃಪುನಃ ಬಳಕೆ ಮಾಡಲು ಮನಸ್ಸನ್ನು ಪ್ರೇರೇಪಿಸಿ ಕ್ರಮೇಣ ಅವಲಂಬನೆಯನ್ನು ಉಂಟುಮಾಡುತ್ತದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೆದುಳು ಇನ್ನೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಮುಖ್ಯವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ, ಸ್ವಯಂ ನಿಯಂತ್ರಣ, ಗಮನ ಹಾಗೂ ಯೋಜನೆಗೆ ಸಂಬಂಧಿಸಿದ ಮುಂಭಾಗದ ಮೆದುಳಿನ ಭಾಗ (prefrontal cortex) ಅಭಿವೃದ್ಧಿ ಹೊಂದುತ್ತಿರುವ ಹಂತದಲ್ಲಿದ್ದು ಈ ಸಮಯದಲ್ಲಿ ಮೆದುಳಿನ ಆನಂದ ಏರ್ಪಡಿಸುವ ಮಾರ್ಗ(reward pathway) ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಆದ್ದರಿಂದ ಈ ವಯಸ್ಸಿನಲ್ಲಿ ತಂಬಾಕು ಅಥವಾ ನಿಕೋಟಿನ್ ಬಳಸಿದರೆ, ಅದು ದೊಡ್ಡವರಿಗಿಂತ ಹೆಚ್ಚು ವೇಗವಾಗಿ ಮತ್ತು ಗಾಢವಾಗಿ ವ್ಯಸನ ಉಂಟುಮಾಡುತ್ತದೆ. ವೈಜ್ಞಾನಿಕ ಅಧ್ಯಯನಗಳು ತೋರಿಸಿರುವಂತೆ ನಿಕೋಟಿನ್ ಮೆದುಳಿನಲ್ಲಿ ಡೋಪಮಿನ್ ಬಿಡುಗಡೆ ಹೆಚ್ಚಿಸಿ, ಆನಂದದ ಭಾವನೆ ಉಂಟುಮಾಡುತ್ತದೆ ಮತ್ತು ಅದರಿಂದ ಮೆದುಳಿನ ಆನಂದ ಏರ್ಪಡಿಸುವ ಮಾರ್ಗಗಳಲ್ಲಿ ಶಾಶ್ವತ ಬದಲಾವಣೆಗಳು ಸಂಭವಿಸಬಹುದು. ಇದರಿಂದಾಗಿ ಮುಂದಿನ ದಿನಗಳಲ್ಲಿ ನಿಕೋಟಿನ್ ಇಲ್ಲದೆ ಸಂತೋಷ ಅಥವಾ ಶಾಂತಿ ಅನುಭವಿಸುವುದು ಕಷ್ಟವಾಗಬಹುದು. ಇಷ್ಟೇ ಅಲ್ಲದೆ ನಿಕೋಟಿನ್ ಗಮನ, ಸ್ಮರಣೆ ಮತ್ತು ಹೊಸ ಮಾಹಿತಿಯನ್ನು ಕಲಿಯುವ ಸಾಮರ್ಥ್ಯವನ್ನು ಹಾನಿಗೊಳಿಸಬಹುದು ಎಂಬುದನ್ನು ಸಾಕ್ಷ್ಯಾಧಾರಿತ ಅಧ್ಯಯನಗಳು ತಿಳಿಸಿವೆ.

ಎಳೆ ವಯಸ್ಸಿನಲ್ಲಿ ತಂಬಾಕು ಬಳಕೆ ಪ್ರಾರಂಭಿಸಿದವರು ದೊಡ್ಡವರಾದ ನಂತರ ಅದನ್ನು ಬಿಡುವುದು ಕಷ್ಟವಾಗುತ್ತದೆ. ಕೆಲವು ಅಧ್ಯಯನಗಳು ತೋರಿಸಿರುವಂತೆ, ಸಿಗರೆಟ್ ಅಥವಾ ಇತರ ತಂಬಾಕು ಉತ್ಪನ್ನಗಳನ್ನು ಬಳಸುವವರು ಮುಂದಿನ ದಿನಗಳಲ್ಲಿ ಮದ್ಯಪಾನ ಅಥವಾ ಇತರ ಮಾದಕ ವಸ್ತುಗಳ ಬಳಕೆಯ ಅಪಾಯಕ್ಕೂ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲಾ ಮಾಹಿತಿಯು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ವರದಿಗಳು ಮತ್ತು ನರಶಾಸ್ತ್ರ ಸಂಬಂಧಿತ ಸಮೀಕ್ಷೆಗಳ ಆಧಾರದ ಮೇಲೆ ಸಾಬೀತಾಗಿರುತ್ತದೆ.

ಜಾಗತಿಕ ಯುವ ತಂಬಾಕು ಸಮೀಕ್ಷೆ 2019 ರ ಸಮೀಕ್ಷೆಯ ಪ್ರಕಾರ Global Youth Tobacco Survey (GYTS) – 
(ಇದು ಶಾಲಾ ವಿದ್ಯಾರ್ಥಿಗಳ 13–15 ವರ್ಷ ಮೇಲೆ ನಡೆಸುವ ರಾಷ್ಟ್ರೀಯ ಸಮೀಕ್ಷೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ( CDC) ಸಹಯೋಗದಲ್ಲಿ ನಡೆಸಲಾಗುತ್ತದೆ. ) ಭಾರತದಲ್ಲಿ ಸುಮಾರು 8.4%–8.5% ಅಂದರೆ ಸರಿ ಸುಮಾರು ನೂರರಲ್ಲಿ ಎಂಟರಿಂದ ಒಂಬತ್ತು ವಿದ್ಯಾರ್ಥಿಗಳು ತಂಬಾಕು ಬಳಸುತ್ತಾರೆ ಎಂದು ತಿಳಿಸಿದೆ.18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಬಗ್ಗೆ ಹೆಚ್ಚು ಉಲ್ಲೇಖವಾಗುವ ಪ್ರಮುಖ ಮೂಲ ಇದೇ.

ತಂಬಾಕು ಅವಲಂಬನೆ ಇದೆ ಎಂದು ದೃಡಪಡಲು ಕೆಳಕಂಡ ಅಂಶದಲ್ಲಿ ಕನಿಷ್ಠ 3 ಲಕ್ಷಣಗಳು ಇರಬೇಕು.

ತಂಬಾಕು ಬಳಕೆಗೆ ತೀವ್ರ ಆಸೆ (Craving)
ಬಳಕೆಯನ್ನು ನಿಯಂತ್ರಿಸಲು ಕಷ್ಟ.

ತಂಬಾಕು ಹಿಂತೆಗೆದ ಲಕ್ಷಣ (ಕೈ ನಡುಗುವುದು ನಿದ್ರಾಹೀನತೆ ವಾಕರಿಕೆ ತಲೆನೋವು ಇತ್ಯಾದಿ)

ಸಹಿಷ್ಣುತೆ (ನಶೆಯ ಪರಿಣಾಮಕ್ಕೆ ಹೆಚ್ಚು ಪ್ರಮಾಣ ಬೇಕಾಗುವುದು)

ಸಾಮಾಜಿಕ ಚಟುವಟಿಕೆಗಳ ನಿರ್ಲಕ್ಷ್ಯ
ಹಾನಿ ಇದ್ದರೂ ಬಳಕೆಯನ್ನು ಮುಂದುವರಿಸುವುದು.

ಹದಿಹರೆಯದವರು (ವಿದ್ಯಾರ್ಥಿಗಳು) ತಂಬಾಕು ಉತ್ಪನ್ನಗಳತ್ತ ಆಕರ್ಷಿತರಾಗುವ ಕಾರಣಗಳು ಹಲವು ಅವುಗಳೆಂದರೆ: 

ಸ್ನೇಹಿತರ ಪ್ರಭಾವ (Peer Pressure): ಸ್ನೇಹಿತರು ಬಳಸುತ್ತಿದ್ದರೆ, “ನಾವು ಕೂಡ ಪ್ರಯತ್ನಿಸೋಣ” ಎಂದು ಆಕರ್ಷಣೆ ಉಂಟಾಗುತ್ತದೆ. ಸ್ನೇಹಿತರು ಬಳಸುವಂತೆ ಒತ್ತಾಯಿಸುವುದು, ನಾನು ತಂಬಾಕು ಬಳಸದೆ ಇದ್ದರೆ ಸ್ನೇಹಿತರು ತಮ್ಮ ವರ್ಗದಿಂದ ದೂರ ಮಾಡಬಹುದು ಎಂಬ ಆತಂಕ ತಂಬಾಕನ್ನು ಬಳಸುವಂತೆ ಮಾಡುತ್ತದೆ. 

ಕುಟುಂಬದ ಪ್ರಭಾವ (Family Influence) :
ಕುಟುಂಬದಲ್ಲಿ ಅಪ್ಪ, ಅಮ್ಮ, ಅಣ್ಣ, ಅಥವಾ ಇತರ ಹಿರಿಯರು ತಂಬಾಕು ಬಳಸುತ್ತಿದ್ದರೆ, ಮಕ್ಕಳ ಮೇಲೆ ಅದರ ಪರಿಣಾಮ ಹೆಚ್ಚು. ಮಕ್ಕಳು ಹಿರಿಯರನ್ನು ನೋಡಿ ಅನುಕರಣೆ ಮಾಡುತ್ತ ಕಲಿಯುತ್ತಾರೆ. ಮನೆಯಲ್ಲಿ ಎಲ್ಲರೂ ಬಳಸುತ್ತಿದ್ದರೆ ಇದು ಸಾಮಾನ್ಯ ಎಂದು ಭಾವಿಸಬಹುದು. ಮನೆಯವರಿಂದ ತಂಬಾಕು ಬಳಕೆಯ ಬಗ್ಗೆ ಕಟ್ಟುನಿಟ್ಟಿನ ವಿರೋಧ ಇಲ್ಲದಿದ್ದರೆ, ಪ್ರಯತ್ನಿಸುವ ಸಾಧ್ಯತೆ ಹೆಚ್ಚು, ಮನೆಯಲ್ಲಿ ಸುಲಭವಾಗಿ ಲಭ್ಯವಿರುವುದರಿಂದ ಮಕ್ಕಳಿಗೆ ಪ್ರಯೋಗಿಸಲು ಅವಕಾಶ ಸಿಕ್ಕು ಇದರ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ ಎಂಬುದನ್ನು ಸಾಕಷ್ಟು ಅಧ್ಯಯನಗಳು ಹೇಳುತ್ತದೆ..

ಕುತೂಹಲ: ಹದಿಹರೆಯದ ಈ ವಯಸ್ಸಿನಲ್ಲಿ ಹೊಸದನ್ನು ಪ್ರಯತ್ನಿಸುವ ಆಸಕ್ತಿ ಹೆಚ್ಚು ಇರುತ್ತದೆ. ತಂಬಾಕು ತನ್ನ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಎಂಬುದನ್ನು ಪ್ರಯೋಗದಿಂದ ತಿಳಿದುಕೊಳ್ಳುವ ತವಕ ಹಾಗೂ ದೊಡ್ಡವರಂತೆ ಕಾಣಬೇಕು ಎಂಬ ಆಸೆ ತಂಬಾಕು ಸೇವನೆಗೆ ಕಾರಣವಾಗುತ್ತದೆ.

ಮಾಧ್ಯಮ ಮತ್ತು ಮಾದರಿ ವ್ಯಕ್ತಿಗಳ ಪ್ರಭಾವ : ಸಿನಿಮಾಗಳಲ್ಲಿ ನಾಯಕರು ತಂಬಾಕು ಬಳಕೆಯನ್ನು ಸ್ಟೈಲಾಗಿ ತೋರಿಸಿ ಮಕ್ಕಳಲ್ಲಿ ವಿವೇಚನೆಗೆ ಒಳಪಡಿಸುವ ಮೆದುಳು ಪೂರ್ಣ ಪ್ರಮಾಣದಲ್ಲಿ ಬೆಳೆಯದ ಕಾರಣ ಸುಲಭದಲ್ಲಿ ಅವರ ಪ್ರಭಾವಕ್ಕೆ ಒಳಗಾಗಿ ತಂಬಾಕನ್ನು ಬಳಸಲು ಪ್ರೇರಣೆ ಪಡೆದುಕೊಳ್ಳುತ್ತಾರೆ.

ಒತ್ತಡ ಕಡಿಮೆ ಆಗುತ್ತದೆ ಎಂಬ ತಪ್ಪು ನಂಬಿಕೆ: 
ಪರೀಕ್ಷೆ ಒತ್ತಡ ಅಥವಾ ಮಾನಸಿಕ ಒತ್ತಡ / ಕಿರಿಕಿರಿ ಕಡಿಮೆ ಮಾಡಲು ತಂಬಾಕು ಉಪಯೋಗವಾಗುತ್ತದೆ ಎಂದು ಬಲವಾಗಿ ನಂಬಿಸುವ ವರ್ಗದವರಿಂದ ಪ್ರೇರಣೆಗೆ ಒಳಪಟ್ಟು ತಂಬಾಕಿನ ಉತ್ಪನ್ನವನ್ನು ಬಳಸುತ್ತಾರೆ.

ರುಚಿ (ಫ್ಲೇವರ್) ಉತ್ಪನ್ನಗಳ ಆಕರ್ಷಣೆ : 
ಕೆಲವು ತಂಬಾಕು ಉತ್ಪನ್ನಗಳಲ್ಲಿ ಮಿಂಟ್, ಚಾಕೊಲೇಟ್, ಹಣ್ಣುಗಳ ರುಚಿ ಇತ್ಯಾದಿ ಸೇರಿರುತ್ತದೆ. ಇದರಿಂದ ತಂಬಾಕಿನ ಕಹಿ ರುಚಿ ಕಡಿಮೆಯಾಗುತ್ತದೆ. ಇದು ಹಾನಿಕಾರಕ ಅಲ್ಲ ಎಂಬ ತಪ್ಪು ಭಾವನೆ ಮೂಡಿ ಹೊಸದಾಗಿ ಪ್ರಯತ್ನಿಸುವ ಯುವಕರಿಗೆ ಸುಲಭವಾಗುತ್ತದೆ. ಪ್ಯಾಕೆಟ್‌ಗಳ ಬಣ್ಣ ಮತ್ತು ಆಕರ್ಷಕ ವಿನ್ಯಾಸವೂ ಗಮನ ಸೆಳೆಯುತ್ತದೆ.

ಬೇಸರ, ಏಕಾಂತ ಅಥವಾ ಖಾಲಿ ಸಮಯ : 
ಕೆಲವು ಯುವಕರು ಸಮಯ ಕಳೆಯಲು ಅಥವಾ ಬೇಸರವನ್ನು ದೂರ ಮಾಡಲು ತಂಬಾಕು ಬಳಸುಸುತ್ತಾರೆ. ಖಾಲಿ ಸಮಯ ಹೆಚ್ಚು ಇದ್ದಾಗ ಏನಾದರೂ ಹೊಸದನ್ನು ಪ್ರಯತ್ನಿಸೋಣ ಎಂಬ ಮನೋಭಾವ ಮೂಡಬಹುದು. ಏಕಾಂತ ಅಥವಾ ಒಳ್ಳೆಯ ಹವ್ಯಾಸಗಳ ಕೊರತೆ ಇದ್ದಾಗ ತಾತ್ಕಾಲಿಕ ಸಾಂತ್ವನಕ್ಕಾಗಿ ತಂಬಾಕು ಉತ್ಪನ್ನದಂತಹ ವಸ್ತುವಿನ ಮೊರೆಹೋಗುವ ಸಾಧ್ಯತೆ ಇರುತ್ತದೆ.

 ಅತಿ ಚಟುವಟಿಕೆಯ ತೊಂದರೆ :(Attention-Deficit Hyperactivity Disorder) : ಇರುವ ಮಕ್ಕಳಲ್ಲಿ ತಂಬಾಕು ಬಳಕೆಯ ಅಪಾಯ ಹೆಚ್ಚು ಕಾಣಬಹುದು, ಏಕೆಂದರೆ ಇವರಲ್ಲಿ ತಕ್ಷಣ ಪ್ರತಿಕ್ರಿಯಿಸುವ ಸ್ವಭಾವ (impulsivity) ಮತ್ತು ಸ್ವಯಂ ನಿಯಂತ್ರಣದ ಸವಾಲು ಹೆಚ್ಚಿರುತ್ತದೆ. ನಿಕೋಟಿನ್ ಮೆದುಳಿನ ಚಟುವಟಿಕೆಯನ್ನು ಚುರುಕುಗೊಳಿಸಿ ತಾತ್ಕಾಲಿಕವಾಗಿ ಗಮನ ಮತ್ತು ಸಮಾಧಾನ ಹೆಚ್ಚಿಸುವಂತೆ ಮಾಡುತ್ತದೆ. ಆದ್ದರಿಂದ ಹದಿಹರೆಯವರಲ್ಲಿ ತಂಬಾಕು ಮೆದುಳನ್ನು ಕೂಲ್ ಮಾಡುತ್ತದೆ ಎಂಬ ತಪ್ಪು ಭಾವನೆ ಮೂಡಿ ನಿರಂತರವಾಗಿ ಬಳಸುವ ಸಾಧ್ಯತೆ ಇದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಸ್ವಯಂ ಚಿಕಿತ್ಸೆ ಕಲ್ಪನೆ (self-medication hypothisis) ಎಂದು ಕರೆಯುತ್ತಾರೆ.

ಕೌಟುಂಬಿಕ ಕಲಹ ಹಾಗೂ ನಿರಂತರ ಜಗಳಗಳು:

ದೈಹಿಕ ಅಥವಾ ಮಾನಸಿಕ ಹಿಂಸೆ ನಡೆಯುವ ವಾತಾವರಣದಲ್ಲಿ ಬೆಳೆವ ಮಕ್ಕಳು ಹಾಗೂ ಯುವಕರು ತೀವ್ರ ಒತ್ತಡ, ಭಯ ಮತ್ತು ಅಸುರಕ್ಷಿತ ಭಾವನೆಗಳನ್ನು ಅನುಭವಿಸುತ್ತಿರುತ್ತಾರೆ. ಇದು ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇಂತಹ ನೋವು ಮತ್ತು ಆತಂಕದಿಂದ ತಾತ್ಕಾಲಿಕವಾಗಿ ಹೊರಬರಲು ಕೆಲವರು ತಂಬಾಕಿನಂತಹ ಅಪಾಯಕಾರಿ ಚಟುವಟಿಕೆಗಳತ್ತ ಆಕರ್ಷಿತರಾಗಬಹುದು.

ಹದಿಹರೆಯದ ವಿದ್ಯಾರ್ಥಿಗಳು ತಂಬಾಕು ರಹಿತ ಜೀವನ ನಡೆಸಲು ಸುಲಭ ಪರಿಹಾರಗಳು :

1.ಸ್ನೇಹಿತರ ಒತ್ತಡ ಬಂದಾಗ ಆತ್ಮವಿಶ್ವಾಸದಿಂದ “ಬೇಡ” ಎಂದು ಹೇಳುವ ಅಭ್ಯಾಸ ಮಾಡಿಕೊಳ್ಳಿ. ಅವರು ನಿಮ್ಮನ್ನು ಸಭ್ಯ ಎಂದು ಪ್ರಚೋದಿಸಬಹುದು, ಗಂಡಸ್ತನ ಬೇಕಿದಕ್ಕೆ ಎಂದು ಹೇಳಬಹುದು, ನೆನಪಿರಲಿ ದೇಹ ಮತ್ತು ಮನಸ್ಸಿಗೆ ಒಳಿತಲ್ಲದ ವಸ್ತುವನ್ನು ಸೇವಿಸಲು ಪ್ರಚೋದಿಸುವ ಸ್ನೇಹಿತರು ಸ್ನೇಹಿತರೇ ಅಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡು ತಂಬಾಕು ಬಳಸದ ಉತ್ತಮ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.


2. ಕ್ರೀಡೆ ಮತ್ತು ವ್ಯಾಯಾಮದಲ್ಲಿ ನಿರಂತರ ತೊಡಗಿರಿ – ಇದು ಹದಿಹರೆಯದಲ್ಲಿ ಉಂಟಾಗುವ ಸಾಮಾನ್ಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಎಂಡಾರ್ಫಿನ್‌ಗಳು ಮುಖ್ಯವಾಗಿ ಮೆದುಳು ಮತ್ತು ಮೆದುಳುರಜ್ಜುವಿನಲ್ಲಿ (spinal cord) ಉತ್ಪತ್ತಿಯಾಗುವ ನರಸಂದೇಶಕ ರಾಸಾಯನಿಕಗಳಾಗಿವೆ. ಇವು ಸ್ವಾಭಾವಿಕವಾಗಿ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದ್ದು, ಜೊತೆಗೆ ಮನಸ್ಸಿಗೆ ಸಂತೋಷ ಮತ್ತು ಉಲ್ಲಾಸದ ಅನುಭವವನ್ನು ಉಂಟುಮಾಡುತ್ತವೆ. 

3. ಸಂಗೀತ, ಚಿತ್ರಕಲೆ, ಓದು, ಬರವಣಿಗೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಧ್ಯಾನ, ಆಳವಾದ ಉಸಿರಾಟ, ಯೋಗ ಮುಂತಾದ ಒತ್ತಡ ನಿರ್ವಹಣಾ ವಿಧಾನಗಳನ್ನು ಅನುಸರಿಸಿ.

4. ತಂಬಾಕು ಬಳಸುವ ಸ್ಥಳಗಳು, ಹಾಗೂ ಸ್ನೇಹಿತರಿಂದ ದೂರವಿರಿ ಪೋಷಕರು, ಶಿಕ್ಷಕರು ಅಥವಾ ವಿಶ್ವಾಸಾರ್ಹ ಹಿರಿಯರೊಂದಿಗೆ ಮಾತನಾಡಿ. ಅಗತ್ಯವಿದ್ದರೆ ಮನೋವೈದ್ಯಕೀಯ ಸಲಹೆ ಪಡೆಯಿರಿ.

5. ಶಾಲೆಯ ತಂಬಾಕು ವಿರೋಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನಿಮ್ಮ ಭವಿಷ್ಯದ ಗುರಿಗಳನ್ನು ಸ್ಪಷ್ಟವಾಗಿ ನಿಗದಿಪಡಿಸಿ. ಆರೋಗ್ಯದಲ್ಲಿ ಆಗುವ ಉತ್ತಮ ಬದಲಾವಣೆಗಳನ್ನು ಗಮನಿಸಿ. ತಂಬಾಕಿನ ಆಸೆ ಬಂದಾಗ ಒಳ್ಳೆಯ ಆಹಾರ ಅಥವಾ ನೀರು ಸೇವಿಸುವಂತಹ ಪರ್ಯಾಯ ಕ್ರಮಗಳನ್ನು ಅನುಸರಿಸಿ.

6. ಸೆಳೆತವನ್ನು ಸ್ವಯಂ ನಿಯಂತ್ರಿಸಲು 4D ತಂತ್ರವನ್ನು ಉಪಯೋಗಿಸಿ :

Delay : ತಿನ್ನುವ ಇಚ್ಛೆಯನ್ನು 30 ರಿಂದ 60 ನಿಮಿಷ ಮುಂದಕ್ಕೆ ಹಾಕಿ ಹೀಗೆ ಮಾಡಿದಾಗ ತಂಬಾಕು ಸೇವಿಸಬೇಕೆನ್ನುವ ತವಕದ ತೀವ್ರತೆ ಒಂದು ಹಂತ ಮುಟ್ಟಿದ ಮೇಲೆ ನಿಯಂತ್ರಣಕ್ಕೆ ಬರುತ್ತದೆ.

Displace : ಸ್ನೇಹಿತರ ವರ್ಗವು ಅಥವಾ ನಿರಂತರವಾಗಿ ಭೇಟಿ ನೀಡುವ ಅಂಗಡಿಯಿಂದನು ನಿಮಗೆ ಪ್ರಚೋದನೆ ಸಿಗುತ್ತಿದ್ದರೆ ಅಲ್ಲಿಂದ ತಕ್ಷಣ ಹೊರಟುಬಿಡಿ.

Discuss : ತಂಬಾಕಿನ ಸೆಳೆತ ಹೆಚ್ಚಾದಲ್ಲಿ ನೀವು ನಂಬುವ ವ್ಯಕ್ತಿಗಳೊಂದಿಗೆ ಮುಕ್ತವಾಗಿ ನಿಮ್ಮ ಅಭ್ಯಾಸ ಕುರಿತು ಚರ್ಚಿಸಿ ಹಾಗೂ ಈ ಕ್ಷಣ ನಿಮ್ಮಲ್ಲಾಗುತ್ತಿರುವ ಬದಲಾವಣೆಗಳನ್ನು ಹೇಳಿಕೊಳ್ಳಿ. ಇದರಿಂದ ಒತ್ತಡ ಕಮ್ಮಿಯಾಗಿ ತಂಬಾಕಿನ ಸೆಳೆತ ನಿಯಂತ್ರಣಕ್ಕೆ ಬರುತ್ತದೆ.

Deep Breath : ತಂಬಾಕಿನ ಸೆಳೆತ ಉಂಟಾಗುವ ಸಮಯದಲ್ಲಿ ಹಿಂದೆ ಗೆದ್ದ ಚಿಹ್ನೆಯಿಂದ ದೇಹ ಮತ್ತು ಮನಸ್ಸಿನಲ್ಲಿ ಕಿರಿ ಕಿರಿ ಉಂಟಾಗಬಹುದು. ಇದನ್ನು ನಿಯಂತ್ರಿಸಲು ಉಸಿರಾಟದ ವ್ಯಾಯಾಮ ತುಂಬಾ ಸಹಾಯಕಾರಿ

▪️ಸಾಮಾಜಿಕ ಜಾಲತಾಣಗಳಲ್ಲಿ ತಂಬಾಕು ಪ್ರೋತ್ಸಾಹಿಸುವ ವಿಷಯಗಳಿಂದ ದೂರವಿರಿ.
▪️ಸಾಕಷ್ಟು ನಿದ್ರೆ ಪಡೆಯಿರಿ – ಇದು ಆತ್ಮನಿಯಂತ್ರಣ ಹೆಚ್ಚಿಸುತ್ತದೆ.
▪️ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸಿಕೊಳ್ಳಿ
▪️ನೀವು ತಂಬಾಕು ಸೇವನೆ ಬಿಡದು ನಿರ್ಧರಿಸಿದ ವಿಷಯವನ್ನು ನಿಮ್ಮ ಆಪ್ತರೊಂದಿಗೆ ಹೇಳಿಕೊಳ್ಳಿ.
▪️ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಕಾನೂನುಬಾಹಿರ ಎಂಬುದನ್ನು ತಿಳಿದುಕೊಳ್ಳಿ.
▪️ತಂಬಾಕು ರಹಿತ ಜೀವನಕ್ಕೆ ಇತರರಿಗೆ ಮಾದರಿಯಾಗಿರಿ.

ತಂಬಾಕು ಬಳಕೆ (ಸಿಗರೇಟ್ ಸೇದುವುದು, ಬೀಡಿ, ಗುಟ್ಕಾ, ಜರ್ದಾ, ಖೈನಿ, ಸ್ನಫ್ ಮುಂತಾದವು) ದೇಹದ ಹಲವಾರು ಅಂಗಗಳಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ. World Health Organization (WHO) ಮತ್ತು Centers for Disease Control and Prevention (CDC) ವರದಿಗಳ ಪ್ರಕಾರ ತಂಬಾಕು ದೇಹದ ಬಹುತೇಕ ಎಲ್ಲಾ ಅಂಗಗಳಿಗೆ ಹಾನಿ ಉಂಟುಮಾಡುತ್ತದೆ.

◼️ತಂಬಾಕು ಬಳಕೆಯಿಂದ ಉಂಟಾಗುವ ಕ್ಯಾನ್ಸರ್ ವಿಧಗಳ ಕುರಿತು ತಿಳಿದಿರಲಿ.
1. ಶ್ವಾಸಕೋಶ ಕ್ಯಾನ್ಸರ್ (Lung Cancer)
2. ಬಾಯಿ ಕ್ಯಾನ್ಸರ್ (Oral Cancer)
ತುಟಿ
ನಾಲಿಗೆ
ವಸಡು(gums)
ಒಳಗಲ್ಲ
3. ಗಂಟಲು ಕ್ಯಾನ್ಸರ್ (Throat / Pharyngeal Cancer)
4. ಧ್ವನಿಪೆಟ್ಟಿಗೆ ಕ್ಯಾನ್ಸರ್ (Laryngeal Cancer)
5. ಅನ್ನನಾಳ ಕ್ಯಾನ್ಸರ್ (Esophageal Cancer)
ಗಂಟಲಿನಿಂದ ಹೊಟ್ಟೆಗೆ ಆಹಾರ ಸಾಗಿಸುವ ನಾಳದಲ್ಲಿ ಉಂಟಾಗುವ ಕ್ಯಾನ್ಸರ್.
6. ಹೊಟ್ಟೆ ಕ್ಯಾನ್ಸರ್ (Stomach Cancer)
7. ಮೇದೋಜೀರಕ ಗ್ರಂಥಿ ಕ್ಯಾನ್ಸರ್ (Pancreatic Cancer)
8. ಯಕೃತ್ತಿನ ಕ್ಯಾನ್ಸರ್ (Liver Cancer)
9. ಮೂತ್ರಪಿಂಡ ಕ್ಯಾನ್ಸರ್ (Kidney Cancer)
10. ಮೂತ್ರಾಶಯ ಕ್ಯಾನ್ಸರ್ (Bladder Cancer)
11. ಗರ್ಭಾಶಯದ ಮುಖದ ಕ್ಯಾನ್ಸರ್ (Cervical Cancer)
12. ಕೊಲನ್ ಮತ್ತು ರೆಕ್ಟಮ್ ಕ್ಯಾನ್ಸರ್ (Colorectal Cancer) ಇತ್ಯಾದಿ.

“ಕೂಲ್ ಲಿಪ್” ಎಂಬುದು ಹೊರಗೆ ಸ್ಟೈಲಾಗಿ, ಹಾನಿಯಿಲ್ಲದಂತೆ ಕಾಣಬಹುದು. ಆದರೆ ಅದರ ಒಳಗೆ ಇರುವ ನಿಕೋಟಿನ್ ಮೆದುಳಿನ ಆನಂದದ ಕೇಂದ್ರ ವ್ಯವಸ್ಥೆಯನ್ನು ಬದಲಿಸಿ, ನಿಧಾನವಾಗಿ ವ್ಯಸನಕ್ಕೆ ಕಾರಣವಾಗುತ್ತದೆ.

ಹದಿಹರೆಯದವರ ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಈ ವಯಸ್ಸಿನಲ್ಲಿ ನಿಕೋಟಿನ್ ಬಳಕೆ ಹೆಚ್ಚು ಅಪಾಯಕಾರಿ. ತಾತ್ಕಾಲಿಕ ಸಂತೋಷಕ್ಕಾಗಿ ಪ್ರಾರಂಭಿಸಿದ ತಂಬಾಕು ಒಂದು ದಿನ ನಿಮ್ಮ ಮತ್ತು ನಿಮ್ಮ ಕುಟುಂಬದವರನ್ನು ಜೀವಂತವಾಗಿ ಸುಡುವ ಬಂದೂಕಾಗಬಹುದು! ಬದುಕೊ? ಬಂದೂಕೋ? ಆಯ್ಕೆ ನಿಮ್ಮದು.
................................... ಗಿರೀಶ್ ಎಂ ಎನ್ 
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು 
ಮಡಿಲು ಕೌನ್ಸಿಲಿಂಗ್ ಪಾಯಿಂಟ್ ಅಚ್ಲಾಡಿ
ಉಡುಪಿ ಜಿಲ್ಲೆ
Mob : 8722715472
*****************************************






Ads on article

Advertise in articles 1

advertising articles 2

Advertise under the article