-->
ಪಯಣ : ಸಂಚಿಕೆ - 85 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 85 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 85 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ''ಹಿಮವದ್ ಗೋಪಾಲಸ್ವಾಮಿ ಬೆಟ್ಟ' ಕ್ಕೆ ಪಯಣ ಮಾಡೋಣ ಬನ್ನಿ....
   
ಮೋಡಗಳ ನಡುವೆ ನಡೆದಾಡುವುದು ಸಾಧ್ಯವೇ? ಯಾರಾದರೂ ಇಂಥ ಮಾತು ಹೇಳಿದರೆ ಇದೇನು ಉತ್ಪ್ರೇಕ್ಷೆ ಅಥವಾ ಕಲ್ಪನಾವಿಹಾರಕ್ಕೆ ಈ ಉಕ್ತಿ ಹೊಂದುತ್ತದೆ ಎಂದು ಉಪೇಕ್ಷಿಸಬಹುದು. ಆದರೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದರೆ ಈ ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕಾಗುತ್ತದೆ.

ಬಂಡೀಪುರ ಅಭಯಾರಣ್ಯದ ಒಳಭಾಗದಲ್ಲಿದೆ ಈ ರೋಚಕ ತಾಣ. ಗಗನದ ಜೊತೆ ನಂಟು ಬೆಳೆಸಲೋ ಎಂಬಂತೆ ಎತ್ತರೆತ್ತರ ಬೆಳೆದುನಿಂತಿರುವ ಗುಡ್ಡಗಳ ಸಾಲಿನಲ್ಲಿ ಈ ಬೆಟ್ಟವೂ ಒಂದು. ದಟ್ಟಕಾಡು ಹಾಗೂ ಸುತ್ತೆಲ್ಲ ಹಸಿರು ಕಣಿವೆಗಳ ಅನಾವರಣ. ಹಿಮವದ್ ಎಂಬುದು ಈ ಸ್ಥಳಕ್ಕೆ ಅನ್ವರ್ಥಕ. ಈ ತಾಣ ಸದಾ ದಟ್ಟ ಮಂಜು ಮತ್ತು ಇಬ್ಬನಿಯ ಚಾದರದಲ್ಲಿ ಪವಡಿಸಿರುತ್ತದೆ. ಬಿಳಿ ಮೋಡಗಳಂತೂ, ಪರ್ವತ ಏರಿದರೆ ಕೈಗೇ ಸಿಗುತ್ತವೇನೋ ಎಂಬ ಭ್ರಮೆ ಮೂಡಿಸುತ್ತವೆ. ಗುಂಡ್ಲುಪೇಟೆಯಿಂದ ಹೆದ್ದಾರಿಯಲ್ಲಿ ಬಂಡೀಪುರ ಕಡೆಗೆ ಬರುತ್ತಿದ್ದಂತೆ, ಈ ಗುಡ್ಡಗಳ ಸಾಲಿನ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ.

ಈ ಪ್ರದೇಶ ರಕ್ಷಿತಾರಣ್ಯವಾದ್ದರಿಂದ ಅರಣ್ಯ ಇಲಾಖೆಯು ಸಾರ್ವಜನಿಕ ಪ್ರವೇಶಕ್ಕೆ ಕೆಲ ನಿರ್ಬಂಧ ವಿಧಿಸಿದೆ. ಆದರೆ ಬೆಳಗ್ಗೆ 7 ಗಂಟೆಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದರಿಂದ ಆ ಸಮಯಕ್ಕೆ ಅಲ್ಲಿದ್ದರೆ ಮನಮೋಹಕ ದೃಶ್ಯಗಳ ನೋಟವನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದು.

ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ 2800 ಆಡಿಗಳ ಎತ್ತರದಲ್ಲಿದೆ. ಈ ಬೆಟ್ಟದ ತುದಿಗೇರಲು ಕೆಲವೊಮ್ಮೆ ತಿರುವು ರಸ್ತೆಯಲ್ಲಿ, ಹಲವೊಮ್ಮೆ ನೇರ ರಸ್ತೆಯಲ್ಲಿ ಸಾಗಬೇಕಾಗುತ್ತದೆ. ಒಂದೆಡೆ ಕಂದರಗಳು, ಮತ್ತೊಂದೆಡೆ ಬಯಲು ಜಾಗಗಳು... ತುಸು ಎತ್ತರಕ್ಕೆ ಕಣ್ಣಾಡಿಸಿದರೆ ಚೆಲ್ಲಾಟವಾಡುವ ಮೋಡಗಳು. ಉದಯಿಸುತ್ತಿರುವ ಕೆಂಬಣ್ಣದ ಸೂರ್ಯ.... ಕಾಡಿನ ಕಡು ಹಸಿರು.... ಹೀಗೆ ದಾರಿಯುದ್ದಕ್ಕೂ ಚೆಂದದ ಸನ್ನಿವೇಶಗಳು ಸಿಗುವುದರಿಂದ ಹಾದಿ ಸವೆಸಿದ್ದೇ ತಿಳಿಯುವುದಿಲ್ಲ. ಚತುರ ಕಲಾವಿದನೊಬ್ಬ ಒಂದೇ ಕಲ್ಪನೆಯಲ್ಲಿ ಬಗೆ ಬಗೆ ಚಿತ್ತಾರ ಮೂಡಿಸಿದಂತಿದೆ ಈ ತಾಣ. ಗುಡ್ಡದ ಶಿರದಲ್ಲಿ ಕೃಷ್ಣ ದೇಗುಲವಿದೆ. ಹದಿನಾಲ್ಕನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಸ್ಥಾನ ಗೋಪುರ, ಮುಖ ಮಂಟಪ ಹಾಗೂ ಧ್ವಜಸ್ತಂಭಗಳನ್ನೊಳಗೊಂಡಿದೆ. ದೇವಾಲಯದ ಎದುರಿನ ವಿಶಾಲ ಅಂಗಳದಲ್ಲಿ ನಿಂತರೆ ಆಸುಪಾಸಿನ ಗಿರಿಗಳು ಹಾಗೂ ಕಂದಕಗಳ ದರ್ಶನವಾಗುತ್ತದೆ. ಕಣ್ಣು ನೋಡುವಷ್ಟು ದೂರಕ್ಕೂ ಗೋಚರಿಸುವ ಹಸಿರು ಹುಲ್ಲುಗಾವಲುಗಳು, ಭಿನ್ನ ಭಿನ್ನ ವಿನ್ಯಾಸದ ಕಾರ್ಪೆಟ್‌ನಂತೆ ಗೋಚರಿಸುತ್ತವೆ.

ಚಾರಣರಿಗಂತೂ ಈ ಗೋಪಾಲಸ್ವಾಮಿ ಬೆಟ್ಟ ಬಲು ಪ್ರಿಯ ಸ್ಥಳ. ಸಾಹಸವನ್ನು ಪ್ರೀತಿಸುವವರು ಶಿಖರವನ್ನು ಬುಡದಿಂದ ತುದಿಯವರೆಗೆ ಏರಬಹುದು. ಇತರರು ವಾಹನದಲ್ಲಿ ಶಿಖರವೇರಬಹುದು ಅಥವಾ ಸಣ್ಣಪುಟ್ಟ ಗುಡ್ಡಗಳನ್ನು ಹತ್ತಿ, ಖುಷಿಗೊಳ್ಳಬಹುದು. ಅಂತೂ ಎಲ್ಲರಿಗೂ ಇಲ್ಲಿ ಮುದಗೊಳ್ಳಲು ಕಾರಣಗಳಿವೆ.

ಈಚಿನವರೆಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಅಷ್ಟಾಗಿ ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಪ್ರವಾಸೋದ್ಯಮದ ಮತ್ತೊಂದು ಮುಖವೂ ಧಾರಾಳವಾಗಿ ಗೋಚರಿಸುತ್ತಿದೆ. ಗೀಚುಬರಹಗಳು ಮತ್ತು ಎಲ್ಲೆಂದರಲ್ಲಿ ವಸ್ತುಗಳನ್ನು ಎಸೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಇನ್ನೂ ಕೆಡದೆ ಉಳಿದಿರುವ ಈ ನಿಸರ್ಗ ಕೊಡುಗೆಯನ್ನು ಮೂಲರೂಪದಲ್ಲಿ ಕಾಪಾಡಿಕೊಳ್ಳುವತ್ತ ಗಮನ ಅವಶ್ಯ.

ಮಾರ್ಗ : ಬೆಂಗಳೂರಿನಿಂದ 220 ಕಿ.ಮೀ.. ಮೈಸೂರಿನಿಂದ 80 ಕಿ.ಮೀ. ಮೈಸೂರಿಗೆ ಹೋಗಿ, ಬಳಿಕ ಗುಂಡ್ಲುಪೇಟೆ ರಸ್ತೆಯಲ್ಲಿ ಸಾಗಬೇಕು. ಬಂಡೀಪುರಕ್ಕಿಂತ 10 ಕಿ.ಮೀ. ಹಿಂದೆ ಬಲಗಡೆ ಹೋಗಬೇಕು. ಅಲ್ಲಿ ಸೂಚನಾಫಲಕವಿದೆ. ಅಲ್ಲಿಂದ 15 ಕಿ.ಮೀ. ದೂರದಲ್ಲಿ ಬೆಟ್ಟವಿದೆ.

'ಹಿಮದ ಸ್ಪರ್ಶ, ಹಸಿರು ಕಾಡು, ನೀರಿನ ಹನಿಗಳ ಮಾಲೆಗಳ ತಿರುಗಾಟವೇ ಚಂದ. ಧಾರ್ಮಿಕ ಮೂಲವಾದ ಸ್ಥಳ ನೋಡಲೇ ಚಂದ' ಬನ್ನಿ ಒಮ್ಮೆ ಪ್ರವಾಸಕ್ಕೆ....

"ಪ್ರವಾಸ ಬದುಕಿಗೆ ರಂಗು ತುಂಬುತ್ತದೆ. ಹೊಸ ಅನುಭವಗಳು ಜೀವನಕ್ಕೆ ಉತ್ಸಾಹವನ್ನು ತುಂಬಿಸುತ್ತವೆ. ಪ್ರವಾಸ ಮಾಡಿದಷ್ಟು ಜೀವನದ ಸೌಂದರ್ಯ ಹೆಚ್ಚಾಗಿ ಕಾಣುತ್ತದೆ".

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article