-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 142

ನಿಷ್ಪಾಪಿ ಸಸ್ಯಗಳು : ಸಂಚಿಕೆ - 142

ನಿಷ್ಪಾಪಿ ಸಸ್ಯಗಳು : ಸಂಚಿಕೆ - 142
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಈ ಬಾರಿ ಮಳೆ ಸ್ವಲ್ಪ ದೀರ್ಘವೆನಿಸುವಷ್ಟು ಕಾಲ ಬಂದ ಬಳಿಕ ಇಬ್ಬನಿ.. ಛಳಿ...ಯಿಂದ ಚಡಪಡಿಸಿ ಬೇಸಗೆಯ ದಿನಗಳಿಗೆ ಕಾಲೂರುತ್ತಿದ್ದೇವಷ್ಟೇ... ಆಗಲೇ ಸೆಖೆ... ಉರಿ.... ಆರಂಭವಾಗಿ ಉಷ್ಣತೆ ಏರತೊಡಗಿದೆ ಎಂದನಿಸುತ್ತಿಲ್ಲವೇ..? 

ಹೌದು, ಈ ಭಾವ ಎಲ್ಲರಿಗೂ ಮುಂದಿನ ದಿನಗಳ ಬಗ್ಗೆ ಗಾಬರಿ ಹುಟ್ಟಿಸುತ್ತಿದೆ. ನಡು ಸುಡು ಬಿಸಿಲಿಗಷ್ಟೇ ಅಲ್ಲ.. ಬೆಳಗಿನ ಹನ್ನೊಂದು ಹನ್ನೆರಡರ ಬಿಸಿಲ ಝಳವೆಷ್ಟಿದೆಯೆಂದರೆ ಏನಾದರೂ ಪಾನೀಯ ಬೇಕನಿಸುವಷ್ಟು! ಆಗೆಲ್ಲ ನೆನಪಾಗುವುದು ನಿಂಬೆ ಶರಬತ್ತು! ಅದನ್ನು ತಂದಿಟ್ಟು ಒಣಗದಂತೆ ನೋಡಿಕೊಳ್ಳೋದೆ ಒಂದು ಸಾಹಸ. ಅದಕ್ಕೇ ನಮ್ಮ ನರೆಮನೆಯ ಬೇಬಿಯಕ್ಕ ಒಂದು ಉಪಾಯ ಹೂಡಿದ್ದಾರೆ... ಅದೇನು ಗೊತ್ತೆ..? 

ಒಂದು ನಿಂಬೆ ಗಿಡ ತಂದು ಬೆಳೆಸ್ಕೊಂಡಿದ್ದಾರೆ. ಆದರೆ ಇದು ಮಾರುಕಟ್ಟೆಯಲ್ಲಿ ದೊರೆಯುವ ಸಾಮಾನ್ಯ ನಿಂಬೆ ಹಣ್ಣಿನ ಗಿಡವಲ್ಲ! ಮತ್ಯಾವುದು ಗೊತ್ತಾ? ಅದು ಗಜನಿಂಬೆಯಂತೆ! ನಮಗೂ ಬೇಬಿಯಕ್ಕ ಆಗಾಗ ಗಜನಿಂಬೆ ನೀಡುತ್ತಾ ದಣಿವನ್ನಾರಿಸಲು ಸಹಕರಿಸುತ್ತಿದ್ದು ಆ ಗಿಡವನ್ನು ಕಾಣುವಾಗ ನಮಗೂ ಪ್ರೀತಿಯುಕ್ಕುವಂತಾಗಿರುವುದು ಸುಳ್ಳಲ್ಲ. ಸಾಮಾನ್ಯ ನಿಂಬೆಗಿಂತ ಇದರ ಮರ ಗಟ್ಟಿಯಾಗಿದೆ. ನಿರ್ಲಿಪ್ತವಾಗಿರುವ ಈ ನಿಷ್ಪಾಪಿ ಸಸ್ಯದ ಎಲೆಗಳ ತೊಟ್ಟಿನ ಸಂದಿಯಲ್ಲಿ ಐದೆಸಳಿನ ಸುಂದರವಾದ ಪುಟ್ಟ ಬಿಳಿ ಹೂಗಳು ಗೊಂಚಲಾಗಿ ಕಾಣಿಸಿಕೊಂಡು ಮಿಡಿಗಳು ಮೂಡುತ್ತವೆ. ಸಾಮಾನ್ಯ ನಿಂಬೆಗಿಂತ ಇದರ ಕಾಯಿ ದೊಡ್ಡ ಗಾತ್ರದ್ದಾಗಿದ್ದು ತುದಿ ಚೂಪಾಗಿರುತ್ತದೆ. ಸಿಪ್ಪೆ ದಪ್ಪಗಿದ್ದರೂ ಧಾರಾಳ ನೀರು! ಎಲೆಗಳೂ ನಿಂಬೆಗಿಂತ ಸ್ವಲ್ಪ ದೊಡ್ಡದೇ ಇದ್ದು ನಸು ಹಸಿರು ಬಣ್ಣದಲ್ಲಿ ಆಯತಾಕಾರದಲ್ಲಿರುತ್ತದೆ. ನಿಂಬೆ ಮರದಂತೆ ಮೇಲೇರದೆ ನೆಲಕ್ಕೆ ಸಮತಲವಾಗಿ ಹರಡಿಕೊಳ್ಳುತ್ತದೆ. ಶಾಖೆಗಳು ನೆಲಕ್ಕೆ ತಾಗಿದರೆ ಅಲ್ಲೇ ಬೇರೂರಿ ಹೊಸ ಗಿಡವಾಗುವ ಅರ್ಹತೆ ಪಡೆಯುತ್ತದೆ. ಹೀಗೆ ನೆಟ್ಟ ಗಿಡ ಒಂದೆರಡು ವರ್ಷದೊಳಗೆ ಫಲ ನೀಡಿದರೆ ಬೀಜದಿಂದಾದ ಗಿಡವು ನಾಲ್ಕು ಐದು ವರ್ಷವಾಗುತ್ತಾ ಫಲ ನೀಡುತ್ತದೆ. 

ಬೀಜ ಕಡಿಮೆ ಇದ್ದು ಮೊಟ್ಟೆಯಾಕಾರಾದ ಗಾಲ್ಗರ್ ನಿಂಬೆಯು ಅಧಿಕ ಇಳುವರಿ ನೀಡಿದರೆ, ಯುರೋಪ್ ತಳಿಯಾದ ಇಟಲಿ ಗಜನಿಂಬೆ ಯು ಎಲ್ಲಾ ವಾತಾವರಣಕ್ಕೂ ಸೈ ಎನ್ನುತ್ತದೆ. ಬೀಜವಿರದ ರಸಭರಿತ ತಿರುಳು ಹೊಂದಿದ್ದು ಅಂಡಾಕಾರದಲ್ಲಿರುತ್ತದೆ. ಅಸ್ಸಾಮ್ ಗಜನಿಂಬೆ ಹೆಚ್ಚು ಫಲ ನೀಡಿದರೂ ರುಚಿ ಕಡಿಮೆ. ಚೆಂಡಿನಾಕಾರದ ಬನವಾಸಿ ಗಜನಿಂಬೆ ತೆಳು ಸಿಪ್ಪೆ ಹೊಂದಿದ್ದು ಅಧಿಕ ಇಳುವರಿ ನೀಡುವ ಮೂಲಕ ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲಿ ಜನಪ್ರಿಯವಾಗಿದೆ. ಪರ್ಶಿಯನ್ ಗಜನಿಂಬೆ ವರ್ಷವಿಡೀ ಕಾಯಿ ನೀಡಿದರೆ ಬೀಜವಿರದ ಜಿನೋವ ಗಜನಿಂಬೆ ಆಂದ್ರದಲ್ಲಿ ಜನಪ್ರಿಯ ವಾಗಿದೆ.

ಮಕ್ಕಳೇ, ಇಷ್ಟೆಲ್ಲ ತಳಿಗಳಿದ್ದರೂ ಗಜನಿಂಬೆ ಮಾರುಕಟ್ಟೆಯಲ್ಲಿ ಸ್ಥಾನಮಾನ ಪಡೆದಿಲ್ಲ ಗೊತ್ತೇ? ಅಷ್ಟರಮಟ್ಟಿಗೆ ಇದು ಒಂದು ಕೃಷಿಯಾಗಿ ಬೆಳೆದಿಲ್ಲವೆನ್ನಬಹುದು. ಕಲೆ ನಿವಾರಣೆಗೆ, ಆಹಾರ ವಸ್ತುಗಳಿಗೆ ಹಾಗೂ ಔಷಧಿಗಳಿಗೆ ಸುವಾಸನೆ ನೀಡಲು ಬಳಕೆಯಾಗುವುದಲ್ಲದೇ ಅತಿಸಾರ, ಆಮಶಂಕೆ, ಸಂಧಿವಾತ, ಗುಲ್ಮ ಸಂಬಂಧಿ ಕಾಯಿಲೆಗೆ ಬಳಸಲ್ಪಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ವಿಟಮಿನ್ ಸಿ , ಪೊಟಾಷಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ ನ್ನು ಒಳಗೊಂಡಿದೆ. ಚರ್ಮದ ಆರೈಕೆಗೆ ಉತ್ತಮವಾಗಿದೆ. ಉಪ್ಪಿನಕಾಯಿ, ಜ್ಯಾಮ್, ಸಲಾಡ್, ಹರ್ಬಲ್ ಟೀ, ಕ್ಯಾಂಡಿ ಯಾಗಿ ಬಳಕೆಯಲ್ಲಿದೆ.

ರೂಟೇಸಿಯೆ ಕುಟುಂಬದ ಸಿಟ್ರಸ್ ಕುಲದ ಕೂಸಾದ ಗಜನಿಂಬೆಯ ಸಸ್ಯಶಾಸ್ತ್ರೀಯ ಹೆಸರು ಸಿಟ್ರಸ್ ಲೈಮನ್ ( Citrus limon). ಇನ್ನೂ ಈ ಗಿಡದ ಬಗ್ಗೆ ನಮ್ಮ ಹೆಮ್ಮೆ ಏನು ಗೊತ್ತೇ? ಗಜನಿಂಬೆ ಭಾರತದ ಮೂಲನಿವಾಸಿ!.

ಮಕ್ಕಳೇ, ಯಾವುದೇ ರೋಗಗಳಿಗೆ ಸುಲಭದಲ್ಲಿ ಈಡಾಗದ ಈ ಸಸ್ಯ ಇತರ ಯಾವ ಗಿಡಗಳ ಮೇಲೂ ಸವಾರಿ ನಡೆಸದು. ನೀರು ಬಸಿದುಹೋಗುವ ಗೋಡು ಮಣ್ಣನ್ನು ಬಹಳ ಇಷ್ಟ ಪಡುತ್ತದೆ. ಒಮ್ಮೆ ನೆಟ್ಟರೆ ಬಹಳಷ್ಟು ಕಾಲ ಫಲ ನೀಡುತ್ತಾ ದಿಢೀರಾಗಿ ಆಗಮಿಸುವ ನೆಂಟರಿಷ್ಟರನ್ನು ತಣಿಸುತ್ತದೆ. ನೀವೂ ಇದರ ಶಾಖೆಯ ಮೂಲಕ ಗಿಡವೊಂದನ್ನು ಮಾಡಿಕೊಂಡರೆ ಬೇಕೆನಿಸಿದಾಗ ಬಳಸಬಹುದಲ್ಲವೇ?

ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************


Ads on article

Advertise in articles 1

advertising articles 2

Advertise under the article