ಪಯಣ : ಸಂಚಿಕೆ - 87 (ಬನ್ನಿ ಪ್ರವಾಸ ಹೋಗೋಣ)
Saturday, March 28, 2026
Edit
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ''ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅರಣ್ಯಧಾಮ' ಕ್ಕೆ ಪಯಣ ಮಾಡೋಣ ಬನ್ನಿ....
ಹಸಿರೇ ಉಸಿರಾಗಿರುವವರಿಗೆ ಹೇಳಿ ಮಾಡಿಸಿದ ತಾಣ ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ. ಕೊಡಗು ಬೆರಗು ಹುಟ್ಟಿಸುವಷ್ಟು ಸೌಂದರ್ಯ ಅಡಕ ಮಾಡಿಕೊಂಡಿದೆ. ಅದರಲ್ಲೂ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ, ಬೆಟ್ಟದ ಬುಡದ ಇರ್ಪು ಜಲಪಾತ ದರ್ಶನ ಅದರ ಮಜವೇ ಬೇರೆ.
ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕುರ್ಚಿ ಗ್ರಾಮದ ಇರ್ಪು ಎಂಬಲ್ಲಿಂದ ಚಾರಣ ಶುರು. ಸಮುದ್ರಮಟ್ಟದಿಂದ ಸುಮಾರು 905 ಮೀ. ಎತ್ತರದಲ್ಲಿದೆ. ನರಿಮಲೆ ಅರಣ್ಯ ವಿಶ್ರಾಂತಿ ಗೃಹ, ಮುನಿಕಲ್ ಗುಹೆ ಬ್ರಹ್ಮಗಿರಿ ಬೆಟ್ಟದ ಹೈಲೈಟ್ಸ್, ಬೆಟ್ಟದ ಮೇಲೆ ವಿಶಾಲ ಮೈದಾನ ಪ್ರದೇಶ 'ಚೆಂಡು ಮಾಳ' ವಿದೆ. ಕಾಡೆಮ್ಮೆ ಮೇಯುವ 'ಕಾಟಿಮಾಳ', ಬೃಹತ್ ಬಂಡೆ 'ಭೀಮಕಲ್ಲು'. ಇರ್ಪುವಿನಿಂದ ನರಿಮಲೆ ಗೆಸ್ಟ್ ಹೌಸ್‌ಗೆ 4.5 ಕಿ.ಮೀ. ಅಲ್ಲಿಂದ ಮುನಿಕಲ್‌ಗೆ 3 ಕಿ.ಮೀ. ದೂರ, ಅಲ್ಲಿಂದ ಬ್ರಹ್ಮಗಿರಿಗೆ 4.5 ಕಿ.ಮೀ. ಹೀಗೆ ಚಾರಣ ಅಂತ್ಯದವರೆಗೆ ಸುಮಾರು 12 ಕಿ.ಮೀ. ನಡೆಯಬೇಕು. ಇಷ್ಟು ನಡಿಗೆಗೆ ಅಂದಾಜು ನಾಲ್ಕು ಗಂಟೆ ಬೇಕು. ಪ್ರಕೃತಿ ದತ್ತ ಕಾಡು, ದೊಡ್ಡ ಮರಗಳು, ಆನೆ, ಜಿಂಕೆ, ಕಡವೆ, ಕಾಡೆಮ್ಮೆ, ಕಾಡು ಹಂದಿ ಇತ್ಯಾದಿಗಳನ್ನು ಚಾರಣ ವೇಳೆ ವೀಕ್ಷಿಸಲು ಸಾಧ್ಯ. ಬೆಳಗಿನ ಜಾವದಲ್ಲಿ ಪ್ರಾಣಿಗಳು ಮೇಯಲು ಬರುವುದರಿಂದ ಈ ಹೊತ್ತಿನಲ್ಲಿ ದರ್ಶನ ಭಾಗ್ಯ ಸುಲಭ.
ಬೆಟ್ಟದ ಮೇಲಿನ ಮುನಿಕಲ್ ಗುಹೆಯಿಂದ ಕೇರಳದ ಕ್ಷೇತ್ರವೊಂದಕ್ಕೆ ಸಂಪರ್ಕವಿದೆ ಎಂಬ ಪ್ರತೀತಿ. ಗುಹೆಯಲ್ಲಿ ಒಂದು ದ್ವಾರವಿದ್ದು, ಜನ ಹಿಂದೆಲ್ಲಾ ಸಂಚರಿಸುತ್ತಿದ್ದರಂತೆ.
ಬ್ರಿಟಿಷ್ ಕಾಲದ ಬಂಗಲೆ : 'ನರಿಮಲೆ ಅರಣ್ಯ ವಿಶ್ರಾಂತಿ ಗೃಹ' ವನ್ನು ಮೂಲತಃ ಬ್ರಿಟಿಷರು ನಿರ್ಮಿಸಿದ್ದು, ಈ ಬಂಗಲೆಗೆ ಹೋಗಲು ಮೊದಲು ರಾಜರ ಕಾಲದಲ್ಲಿ ಕುದುರೆ ರಸ್ತೆ ನಿರ್ಮಿಸಿದ್ದು, ಅದರ ಕುರುಹನ್ನು ಈಗಲೂ ಕಾಣಬಹುದು. ಈ ಬಂಗಲೆಯನ್ನು, 10 ವರ್ಷಗಳ ಹಿಂದೆ ಪುನರ್ನಿರ್ಮಾಣ ಮಾಡಿದ್ದು, ಇಲ್ಲಿ ಪ್ರವಾಸಿಗರು ರಾತ್ರಿ ವೇಳೆ ತಂಗಲು ಅವಕಾಶವಿದೆ.
ಚಾರಣದ ಗಮ್ಯವಾದ ಬ್ರಹ್ಮಗಿರಿಯ ತುತ್ತ ತುದಿ ತಲುಪಿದ ವೇಳೆ ಕೇರಳ ಪ್ರದೇಶವನ್ನು ಅಲ್ಲಿಂದಲೇ ವೀಕ್ಷಿಸಬಹುದು. ಮುಂಜಾನೆ 6 ಗಂಟೆಗೆ ಚಾರಣ ಶುರು ಮಾಡಿದರೆ ಸಂಜೆ 6 ಗಂಟೆಗೆ ವಾಪಸ್ ಬರಬಹುದು. ಇಷ್ಟವಿದ್ದರೆ ರಾತ್ರಿ ಬೆಟ್ಟದ ಮೇಲಿನ ನರಿಮಲೆ ವಸತಿಗೃಹದಲ್ಲೇ ಕಳೆಯಬಹುದು.
"ಹಸಿರೇ ಉಸಿರಾಗಿರುವವರಿಗೆ ಹೇಳಿ ಮಾಡಿಸಿದ ತಾಣ ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ. ಕೊಡಗು ಬೆರಗು ಹುಟ್ಟಿಸುವಷ್ಟು ಸೌಂದರ್ಯ ಅಡಕ ಮಾಡಿಕೊಂಡಿದೆ."
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************