ನಿಷ್ಪಾಪಿ ಸಸ್ಯಗಳು : ಸಂಚಿಕೆ - 144
Friday, March 27, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 144
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಅತ್ತ ಬೇಸಗೆಯ ಬಿಸಿಲ ಧಗೆ..ಇತ್ತ ಪರೀಕ್ಷೆಗಳ ಬಿಸಿ ತಾಗಿ ಇಡಿಯ ವಾತಾವರಣವೇ ಬಿಸಿಯಾದಂತಿದೆಯೆ...? ಹೌದೆಂದು ಅನಿಸಿದರೂ ಅವೆಲ್ಲವೂ ಸಹಜ ಪ್ರಕ್ರಿಯೆಗಳೇ ಅಲ್ಲವೇ? ತರು ಲತೆಗಳಂತೆ ಎಲ್ಲವನ್ನೂ ಶಾಂತವಾಗಿ ಸ್ವೀಕರಿಸುತ್ತಾ ಸಾಗುವುದೇ ಶ್ರೇಷ್ಠತೆಯಲ್ಲವೇ?
ನಮ್ಮ ಬಾಲ್ಯದಲ್ಲಿ ಕೊಂಡೆ ಮಂದಾರವೆಂಬ ಒಂದು ಹೂವಿನ ಗಿಡವಿತ್ತು. ಹಳದಿ ಮಂದಾರಕ್ಕೆ ರೇಷ್ಮೆಯಂತೆ ಮೃದುವಾದ ದಳಗಳು! ಕೈ ಸೋಕಿದರೆ ಎಲ್ಲಿ ಮುದುಡುವುದೋ ಎಂಬಷ್ಟು ನಾಜೂಕಾದ ಕೃತಿಯದು! ಒಂದಿಷ್ಟು ಬಿರಿಯಬಹುದೇ ಹೊರತು ಸಂಪೂರ್ಣವಾಗಿ ಅರಳುವ ಜಾಯಮಾನವೇ ಇಲ್ಲ. ಇರುವ ಐದಳ ಬಿಡಿಸಿದರೆ ಅದರಲೊಂದರ ಆಂತರ್ಯದಲ್ಲಿ ಗಾಢ ನೇರಳೆಯ ಚುಕ್ಕಿ! ಮಧ್ಯೆ ಕೇಸರಗುಚ್ಛ. ಈ ಹೂವಿಗೆ ಅದರದೇ ಆದ ವಿಶೇಷ ಸುಗಂಧವಿದೆ. ಹೂವಿನ ನಾಜೂಕಿಗೆ ತಕ್ಕಂತೆ ಹಸಿರ ವಿಶಿಷ್ಠವಾದ ಪುಷ್ಪಪಾತ್ರೆ. ಅದಕೊಂದು ಸಣ್ಣ ಹೂತೊಟ್ಟು. ಎಲೆಗಳ ಕಂಕುಳಲ್ಲಿ ಮೂಡುವ ಮೊಗ್ಗುಗಳೇ ಹಸಿರು ಹುಳಗಳಂತೆ ಮುದ್ದಾಗಿ ಚಂದ. ನಾವು ನಾಳೆ ಅರಳಲಿರುವ ಮೊಗ್ಗುಗಳನ್ನ ಅದರ ಹಿಂದಿನ ದಿನ ಸಂಜೆ ಕೊಯ್ದು ಮಾಲೆ ಹೆಣೆಯುತ್ತಿದ್ದೆವು. ಆ ಮಾಲೆಯ ಹೂಗಳು ಅರಳುವಾಗ ಪುಟ್ಟಪುಟ್ಟದಾಗಿರುವುದು ಮುಡಿಯಲು ಅನುಕೂಲವಾಗುತ್ತಿತ್ತು !.
ಕನ್ನಡದಲ್ಲಿ ಹಳದಿ ಮಂದಾರ, ಕಾಡು ಮಂದಾರ, ವನ ಸಂಪಿಗೆ, ಕಾಂಚನವೆಂದೂ ಕರೆಯುವ ಈ ಹೂವಿನ ಗಿಡ ಫ್ಯಾಬೇಸಿಯೇ ಕುಟುಂಬದ ಕನಸು. ಸಸ್ಯ ಶಾಸ್ತ್ರೀಯವಾಗಿ ಬೌಹಿನಿಯಾ ಟೊಮೆಂಟೊಸಾ (Bauhinia tomentosa) ಎಂಬ ನಾಮಧೇಯದ ಈ ನಿಷ್ಪಾಪಿ ಸಸ್ಯ ಹಳದಿ ಬೆಲ್, ಆರ್ಕಿಡ್ ಮರವೆಂದೂ ಕರೆಸಿಕೊಳ್ಳುತ್ತದೆ. ಏಷ್ಯಾ ಹಾಗೂ ಆಫ್ರಿಕಾಕ್ಕೆ ಸ್ಥಳೀಯ ಸಸ್ಯವೆಂದು ಗುರುತಿಸಿಕೊಂಡಿದೆ.
ಮೂರ್ನಾಲ್ಕು ಮೀಟರ್ ಎತ್ತರವಾಗಿ ಪೊದೆಸಸ್ಯದಂತೆ ಬೆಳೆಯುವ ಹಳದಿ ಮಂದಾರವು ಇಳಿಬೀಳುವ ತೆಳ್ಳಗಿನ ಬಹು ರೆಂಬೆ ಕೊಂಬೆಗಳಿರುವ ಅಂಕುಡೊಂಕಿನ ಸಣ್ಣ ಮರ. ಬೇರುಗಳು ಆಳಕ್ಕಿಳಿಯುವುದರಿಂದ ದೃಢವಾಗಿರುತ್ತದೆ. ತೊಗಟೆ ಬೂದು ಕಂದುಬಣ್ಣದಲ್ಲಿರುತ್ತದೆ. ಎರಡು ಎಲೆ ಸೇರಿ ರಚನೆಯಾದಂತೆ ಮಧ್ಯೆ ಆಳ ವಿಭಜಿತವಾಗಿ ಆಕರ್ಷಕವಾಗಿರುತ್ತವೆ. ಅದಕ್ಕೇ ಇದನ್ನು ಬಸವನ ಪಾದದ ಗಿಡ ಎನ್ನುತ್ತಾರೆ. ಎಲೆಗಳು ಕ್ಯಾಲ್ಸಿಯಂ ಮತ್ತು ಕಬ್ಬಿಣದಂಶಗಳ ಆಗರ. ಇದರ ಬೇರು, ತೊಗಟೆ, ಹೂವು, ಮೊಗ್ಗು ಎಲ್ಲವೂ ಔಷಧಿಗಾಗಿ ಬಳಕೆ ಇದೆ. ಸಂಶೋದನೆಗಳೂ ನಡೆಯುತ್ತಿವೆ. ಬ್ಯಾಕ್ಟೀರಿಯಾ ವಿರೋಧಿ. ಮಧುಮೇಹ, ಥೈರಾಯ್ಡ್, ಸ್ತ್ರೀರೋಗ, ದೊಡ್ಡ ಕರುಳಿನ ಸಮಸ್ಯೆ, ಭೇದಿ, ಅತಿಸಾರ ಇತ್ಯಾದಿಗಳಿಗಲ್ಲದೆ ಮುಖದ ಕ್ಯಾನ್ಸರ್ ಗೆ ಅದ್ಭತ ಪರಿಣಾಮ ಬೀರುತ್ತದೆಯೆನ್ನುತ್ತಾರೆ.
ಇದು ಒಮ್ಮೆ ನೆಟ್ಟರೆ ಬಹಳ ವರ್ಷ ಉಳಿಯುವ ಗಿಡ. ಬೀಜಗಳಿಂದ ಗಿಡ ಪಡೆಯುವುದು ಸುಲಭ. ಈ ಗಿಡದ ಹೂವು ಗಣಪತಿಗೆ ಪ್ರಿಯವಂತೆ. ಗಣಪತಿಯ ಆವಾಸ ಹಳದಿ ಮಂದಾರದ ಮರವೆನ್ನುತ್ತಾರೆ. ಶಮೀ ಮತ್ತು ಹಳದಿ ಮಂದಾರ ಒಟ್ಟಿಗಿದ್ದು ಬೆಳಗ್ಗೆ ದರ್ಶಿಸುವುದು ಅತಿ ಶ್ರೇಷ್ಠ ವೆನ್ನಲಾಗಿದೆ. ಕೈತೋಟ, ಉದ್ಯಾನ, ಬೇಲಿಗಳಲ್ಲೂ ಸಾಮಾನ್ಯವಾಗಿ ಬೆಳೆಯುವ ಹಳದಿ ಮಂದಾರದ ಮಕರಂದ, ಪರಾಗಕ್ಕಾಗಿ ಪಕ್ಷಿ, ಜೇನು, ಚಿಟ್ಟೆಗಳು ಹಾತೊರೆಯುತ್ತವೆ.
ಮಕ್ಕಳೇ ಸುಗಂಧ ಭರಿತ ತಿಳಿ ಹಸಿರ ಈ ಮಂದಾರಪುಷ್ಪವನ್ನು ಎಲ್ಲೇ ಕಂಡರೂ ನೀವೀಗ ಗುರುತಿಸಬಲ್ಲಿರಿ. ಜಾಗವಿದ್ದರೆ ಒಂದು ಸಸಿ ನೆಡುವ ಪ್ರೀತಿಯನ್ನೂ ಬೆಳೆಸಿಕೊಳ್ಳಬಲ್ಲಿರಲ್ಲವೇ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************