-->
ಪಯಣ : ಸಂಚಿಕೆ - 86 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 86 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 86 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಪಾದೆಕಲ್ಲು ಜಲಪಾತ' ಕ್ಕೆ ಪಯಣ ಮಾಡೋಣ ಬನ್ನಿ....

             
ಕೊಡಗಿನ ಜಲಪಾತಗಳಲ್ಲಿ ಅತ್ಯಂತ ಮನೋಹರವಾಗಿ ಕಂಡುಬರುವ ಪಾದೆಕಲ್ಲು ಜಲಪಾತ ಮಡಿಕೇರಿ ತಾಲ್ಲೂಕಿನಲ್ಲಿದೆ. ಈ ಜಲಪಾತದ ಸೊಬಗು ಸವಿಯಲು ಮಳೆಗಾಲ ಕಳೆಯಬೇಕು. ದಟ್ಟ ಕಾನನದ ನಡುವೆ ಭೋರ್ಗರೆಯುತ್ತ ಧುಮ್ಮಿಕ್ಕಿ ಹರಿಯುವ ಪಾದೆಕಲ್ಲು ಜಲಪಾತ ಪ್ರವಾಸಿಗರ ಕಣ್ಣಿನಿಂದ ಮಾತ್ರ ದೂರವೇ ಉಳಿದಿದೆ. ಸುತ್ತಮುತ್ತಲ ಅರಣ್ಯವಾಸಿಗಳು ಇದರ ಸೌಂದರ್ಯ ಸವಿಯುತ್ತಾರೆ. ಇಲ್ಲಿಗೆ ಬಸ್ ಸೌಲಭ್ಯಗಳಿಲ್ಲ.

ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ 25 ಕಿ.ಮೀ. ಕ್ರಮಿಸಿದಾಗ ಕಲ್ಲುಗುಂಡಿ ಎಂಬ ಚಿಕ್ಕ ಊರು ಸಿಗುತ್ತದೆ. ಇಲ್ಲಿಂದ 7 ಕಿ.ಮೀ. ದೂರವಿರುವ ಚೆಂಬು ಗ್ರಾಮದ ಕಾಂತಬೈಲಿನಲ್ಲಿ ಪಾದೆಕಲ್ಲು ಜಲಪಾತವಿದೆ. ಕಲ್ಲುಗುಂಡಿಯಿಂದ ಜೀಪು ಮಾಡಿಕೊಂಡು ಬರಬೇಕು. ಕಾಂತಬೈಲು ರವಿ ಎಂಬುವರ ಮನೆ ಪಕ್ಕ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಎದುರು ಕಾಣುವ ಹೊಳೆಯನ್ನು ದಾಟಬೇಕು. ಮಳೆಗಾಲದಲ್ಲಿ ಹೊಳೆ ದಾಟಲು ಬಿದಿರಿನಿಂದ ಮಾಡಿದ ತೂಗುಸೇತುವೆಯ ಸೌಲಭ್ಯವಿದೆ. ಇದರಲ್ಲಿ ಪ್ರಯಾಣಿಸುವಾಗ ಮೈ ಜುಂ ಅನ್ನುತ್ತದೆ. ಅಲ್ಲಿಂದ ಬೆಟ್ಟದ ತಪ್ಪಲಿನಲ್ಲಿ ಹತ್ತಾರು ಮೀಟ‌ರ್ ನಡೆದಾಗ ಮೂರು ಮನೆಗಳು ಕಾಣಸಿಗುತ್ತವೆ. ಈ ಮನೆಗಳ ಅಂಗಳದಲ್ಲಿ ಹಾಗೆಯೇ ಮುಂದೆ ಹೋದರೆ ಕಿವಿಗಡಚಿಕ್ಕುವ ಜಲಪಾತದ ಆರ್ಭಟ ಕೇಳಿಸುತ್ತದೆ. ಈ ಸದ್ದನ್ನು ಅನುಸರಿಸಿ ದುರ್ಗಮ ಹಾದಿಯಲ್ಲಿ ಬಿದಿರು ಮೆಳೆಗಳ ನಡುವೆ ದಾರಿ ಮಾಡಿಕೊಂಡು ಸ್ವಲ್ಪ ದೂರ ಕ್ರಮಿಸಿದಾಗ ಎದುರಿಗೆ ಭವ್ಯ ಜಲಪಾತ ಕಾಣಿಸುತ್ತದೆ. ಅದುವರೆಗೆ ಪಟ್ಟ ಶ್ರಮ ಸಾರ್ಥಕವೆನಿಸುತ್ತದೆ. 
  
ಸುಮಾರು 80 ಅಡಿ ಎತ್ತರದಿಂದ ಬೃಹತ್ ಬಂಡೆಯ ಮೇಲಿನಿಂದ ಬೆಳ್ನೊರೆಯಂತೆ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಈ ನೀರು ತೊರೆಯಾಗಿ ಹರಿದು ಹೊಳೆಯನ್ನು ಸೇರುತ್ತದೆ. ಮಳೆಗಾಲದಲ್ಲಿ ಅತ್ಯಂತ ರಭಸದಿಂದ ನೀರು ಹರಿಯುತ್ತದೆ ಹಾಗೂ ಬಂಡೆಗಲ್ಲುಗಳು ಜಾರುತ್ತವೆ. ಸ್ವಲ್ಪ ಎಡವಿದರೂ ಪ್ರಾಣಕ್ಕೆ ಅಪಾಯ. ಹಾಗಾಗಿ ಜೂನ್‌ನಿಂದ ಆಗಸ್ಟ್ ತನಕ ಜಲಪಾತದ ವೀಕ್ಷಣೆ ಕಷ್ಟ. ಉಳಿದಂತೆ ಸೆಪ್ಟೆಂಬರ್‌ನಿಂದ ಮಾರ್ಚ್ ತನಕ ಈ ನಯನ ಮನೋಹರ ಜಲಪಾತದ ಸೊಬಗನ್ನು ಸವಿಯಬಹುದು. ಮೈಯಿಡೀ ಎಣ್ಣೆ ಹಚ್ಚಿ ಇಲ್ಲಿರುವ ಬಂಡೆಗಲ್ಲುಗಳ ಮೇಲೆ ಮಲಗಿ ಸುತ್ತಲಿನ ಪ್ರಕೃತಿ ಸೌಂದರ್ಯದ ವೀಕ್ಷಣೆ ಮಾಡಬಹುದು. ಜಲಪಾತದ ತಂಪಾದ ನೀರಿಗೆ ತಲೆಯೊಡ್ಡಿ ಸ್ನಾನ ಮಾಡಬಹುದು. ಇಲ್ಲಿ ಸಿನಿಮಾ ಚಿತ್ರೀಕರಣವನ್ನೂ ಮಾಡಬಹುದು.

ನಗರ ಜೀವನದಿಂದ ಮುಕ್ತರಾಗಿ ಕೆಲಸಮಯ ಹಾಯಾಗಿ ಕಾಲ ಕಳೆಯಲು ಇದು ಉತ್ತಮ ತಾಣ. ಈ ಜಲಪಾತದ ವಿಶೇಷವೆಂದರೆ ಏಪ್ರಿಲ್, ಮೇನಲ್ಲೂ ನೀರಿರುತ್ತದೆ. ಪ್ರಮಾಣ ಮಾತ್ರ ಕಡಿಮೆ. ಸುತ್ತಮುತ್ತ ಹೋಟೆಲ್ ಇಲ್ಲದಿರುವುದರಿಂದ ಪ್ರವಾಸಿಗರೇ ಊಟ ತಿಂಡಿಯನ್ನು ತರಬೇಕಾಗುತ್ತದೆ.

"ಹಸಿರು ಮಡಿಲಲ್ಲಿ ಜಲಧಾರೆಗಳ ಪಯಣ - ಧುಮ್ಮಿಕುವ ನೀರು, ಕಾನನಗಳ ನಡುವೆ ಸದ್ದು ಮಾಡುತ್ತಾ ಮನಸ್ಸಿಗೆ ಮುದ ನೀಡುವ ಈ ಜಲಪಾತ ಅದ್ಭುತವಾಗಿದೆ. ಬನ್ನಿ ಪ್ರವಾಸಕ್ಕೆ.."

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************


Ads on article

Advertise in articles 1

advertising articles 2

Advertise under the article