-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 143

ನಿಷ್ಪಾಪಿ ಸಸ್ಯಗಳು : ಸಂಚಿಕೆ - 143

ನಿಷ್ಪಾಪಿ ಸಸ್ಯಗಳು : ಸಂಚಿಕೆ - 143
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
      
ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ..? ಪರೀಕ್ಷೆಗಳ ಜೊತೆಗಿಷ್ಟು ಒಡನಾಟದ ದಿನಗಳಿವು ಅಲ್ಲವೇ? ಇನ್ನೇನು.. ಕೆಲವೇ ದಿನಗಳಲ್ಲಿ ಹಕ್ಕಿಗಳಂತೆ ಹಾರಿ, ಮೀನುಗಳಂತೆ ಈಜಿ ರಜೆಯ ಮಜಾ ಅನುಭವಿಸಲಿದ್ದೀರಿ...

ಈ ಬಾರಿ ನೀವು ಅಜ್ಜೀ ಮನೆಗೆ ಅಥವಾ ಹಳ್ಳಿಗೆ ಹೋದಾಗ ಅಲ್ಲಿಯ ಕೆರೆ ಬಾವಿಗಳನ್ನು ಪರಿಶೀಲಿಸುವಿರಾ? ಅವುಗಳಿಂದ ನೀರೆತ್ತಲು ಹಾಕಿದ ಕಂಬಗಳು ಯಾವುವು? ನೀರಿನ ಬಣ್ಣವೇನು? ಇತ್ಯಾದಿಯಾಗಿ.

ನನ್ನ ಬಾಲ್ಯದಲ್ಲಿ ನನ್ನಜ್ಜೀಮನೆಯ ಬಾವಿ ನನ್ನನ್ನು ಬಹಳವಾಗಿ ಚಿಂತೆಗೋ ಚಿಂತನೆಗೋ ಹಚ್ಚುತ್ತಿತ್ತು. ಅದೀಗಲೂ ನನ್ನನ್ನು ಆಗಾಗ ಕಾಡುವುದುಂಟು. ಅದೊಂದು ಸಾಧಾರಣವಾದ, ವೃತ್ತಾಕಾರದ ಬಾವಿ. ಅದರ ದಂಡೆಮರಕ್ಕೆ ಆಧಾರವಾಗಿ ಇಬ್ಬದಿಯಲ್ಲಿ ಎರಡು ಕಂಬಗಳು. ಕಂಬಗಳೆಂದರೆ ಒಣಗಿದ ಮರಗಳಲ್ಲ. ಅಂಕುಡೊಂಕಾಗಿ ಬೆಳೆಯುವ ಗೋ ಸಂಪಗೆಯ ಮರಗಳು. ಅವುಗಳನ್ನು ಬೆಸೆದು ಕೊಂಡು ಕಟ್ಟಲ್ಪಟ್ಟ ಆವರಣ ಗೋಡೆ ಬಾವಿಗಿತ್ತು. ಚಳಿಗಾಲದಲ್ಲಿ ಎಲೆಯುದುರಿಸಿ ಅಭ್ಯಾಸವಾದ ಈ ಮರಗಳ ಎಲೆಗಳು ಬಾವಿಗೇ ಹೆಚ್ಚು ಬೀಳುತ್ತಿದ್ದವು. ಯಾರೂ ಅದರ ಬಗ್ಗೆ ಆಕ್ಷೇಪಿಸುತ್ತಿರಲಿಲ್ಲ. ಬೇಸಿಗೆ ಬಂತೆಂದರೆ ಸಾಕು... ಈ ಮರದ ತುದಿಗಳಲ್ಲಿ ಗುಚ್ಛದಂತೆ ಎಲೆಗಳು ಮೂಡತೊಡಗಿ ಬಿಳಿ ಬಣ್ಣದ ಗೊಂಚಲು ಹೂವುಗಳು ಎದ್ದು ನಿಲ್ಲುತ್ತಿದ್ದವು. ದಾಸವಾಳದಂತೆ ಅರಳಿದ ಈ ಐದೆಸಳಿನ ಹೂವಿನ ಮೊದಲರ್ಧ ಭಾಗ ಮೊಟ್ಟೆಯ ಹಳದಿ ಬಣ್ಣದಲ್ಲಿದ್ದರೆ ಉಳಿದರ್ಧ ಬಿಳಿ! ಇಡೀ ದಿನ ಸುಗಂಧವನ್ನು ಗಾಳಿಗೆ ಬೆರೆಸುತ್ತಿದ್ದ ಹೂವುಗಳು ಸಂಜೆಗೆ ಸುವಾಸನೆಯಿಂದ ಮತ್ತೇರುವಂತೆ ವಾತಾವರಣವನ್ನೇ ಬದಲಾಯಿಸುತ್ತಿದ್ದವು. ಹೂವುಗಳು ಉದುರಿ ಬಾವಿಗೇ ಬಿದ್ದು ಕರಗುತ್ತಿದ್ದವು. "ಹೂವು ಎಲೆ ಬಿದ್ದರೆ ನೀರು ಶುದ್ಧವಾಗ್ತದೆ" ಎನ್ನುತ್ತಿದ್ದರು! ಅಷ್ಟು ಮಾತ್ರವಲ್ಲದೇ ಮನೆಯಲ್ಲಿ ಅಕ್ಕಿ ಸೇಮಿಗೆ ಮಾಡುವಾಗ ಸೇಮಿಗೆಮಣೆಯಿಂದ ಬೀಳುವ ಸೇಮಿಗೆ ಹಿಡಿಯಲು ಇದರ ಎಲೆಯನ್ನೇ ಬಳಸುತ್ತಿದ್ದರು. ಎಲೆಯೂ ಮಕ್ಕಳು ಚಿತ್ರ ಬಿಡಿಸಿದಂತೆ ಸುಂದರವಾಗಿ ಅಂಡಾಕಾರವಾಗಿ ಸ್ವಲ್ಪ ಉದ್ದವಾಗಿದ್ದು ಅಗಲವಾಗಿಯೂ ಇರುತ್ತದೆ. ಆದ್ದರಿಂದ ಹಲಸಿನ ಗಟ್ಟಿಯ ಹಿಟ್ಟು ಮಡಚಿಡಲೂ ಇದೇ ಎಲೆಗಳ ಬಳಕೆ. ಈ ಹಲಸಿನ ಗಟ್ಟಿಗಳೂ ಅದರ ಹೂಗಳಂತೆಯೇ ಘಮ ತುಂಬಿರುತ್ತಿದ್ದವು. 

ಇನ್ನೂ ನಿಮಗೆ ಒಂದು ವಿಸ್ಮಯ ಹೇಳಲೇ ಬೇಕು. ಅದೇನೆಂದರೆ ಆ ಬಾವಿಯ ನೀರು ಬೆಳಗ್ಗೆ ಹನ್ನೊಂದು ಗಂಟೆ ಕಳೆಯುತ್ತಲೇ ದಪ್ಪ ಹಸಿರು ಬಣ್ಣವಾಗುತ್ತಿತ್ತು. ಬಾವಿ ಆಳವಿದ್ದುದರಿಂದಲೋ, ನನ್ನ ಬಾಲ್ಯದ ಬುದ್ದಿಯ ದೆಸೆಯಿಂದಲೋ ಕೆಲವೊಮ್ಮೆ ಅರಶಿನ ಸುಣ್ಣ ಬೆರೆತ ಕುರ್ದಿಯಂತೆಯೂ ಕಾಣಿಸುತ್ತಿತ್ತು. ಇದನ್ನು ನಮ್ಮಕ್ಕ "ನಾಗಬೀದಿ" ಅಂತ ತಿಳಿಹೇಳಿದ್ದರು. ಹಾಗೆಂದರೇನೆಂದು ಕೇಳಿದರೆ ನಾಗನ ನಡೆ ಈ ಬಾವಿಯ ಮೇಲಿಂದ ಹಾದು ಹೋಗುತ್ತದೆ.. ಆದ್ದರಿಂದಲೇ ಅದರ ದೋಷ ತಟ್ಟದಿರಲೆಂದು ಅಜ್ಜ ದೂರದಿಂದ ಗೋಸಂಪಗೆ ತಂದು ನೆಟ್ಟಿದ್ದಾರೆ ಎಂದಿದ್ದರು. ಬಾವಿ ನೀರಿನ ಬಣ್ಣ ಬದಲಾಗುತ್ತಿದ್ದುದು ಸತ್ಯ. ಬೆಳಗ್ಗೆ ಸಂಜೆ ಹಾಗೆ ಕಾಣುತ್ತಿರಲಿಲ್ಲ. ಕೊಡಪಾನದಲ್ಲಿ ಮಧ್ಯಾಹ್ನ ತೆಗೆದ ನೀರೂ ಇದಕ್ಕೆ ಸಾಕ್ಷಿಯಾಗುತ್ತಿತ್ತು. ಆದ್ದರಿಂದ ಈ ಬಾವಿಯ ನೀರು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿತ್ತು. ಶುದ್ಧಾಚಾರದಲ್ಲಿ ಬಾವಿಗೆ ನಡೆದುಕೊಳ್ಳುತ್ತಿದ್ದರು.

ನನ್ನಕ್ಕ ಆ ಗಿಡದ ಬಗ್ಗೆ ಇನ್ನೊಂದು ವಿಸ್ಮಯವನ್ನು ತೋರಿಸಿದ್ದರು. ಅಜ್ಜೀ ಮನೆಯಲ್ಲಿ ಬೆಂದ ಭತ್ತ ಒಣಗಿಸಲು, ಸಾಮಾನು ಇಡಲೆಂದು ಮಾಡಿದ 'ಅಟ್ಟ' ಕ್ಕೆ ಮುಚ್ಚಿಗೆ ಮಾಡಿದ್ದರು. ಅಟ್ಟಕ್ಕೆ ಹಾಸಿದ್ದ ಮರದ ಹಲಗೆಗಳ ಮೇಲೆ ಮಣ್ಣು ಮೆತ್ತಿದ್ದರು. ಈ ಮಣ್ಣು ಮತ್ತು ಹಲಗೆಗಳ ನಡುವೆ ಇದೇ ಗೋಸಂಪಗೆಯ ಎಲೆಗಳನ್ನು ಹಾಕಿದ್ದರಂತೆ! ಇದರಿಂದಾಗಿ ಮರದ ಹಲಗೆಗಳಿಗೆ ಗೆದ್ದಲು ಹಿಡಿಯುವುದಿಲ್ಲ ಅಲ್ಲದೆ ಹುಳ ಬೀಳುವುದಿಲ್ಲಂತೆ..! ಹಾಗಾಗಿ ಬಹುಕಾಲ ಬಾಳಿಕೆ ಬರಲು ಈ ಎಲೆಗಳು ಸಹಾಯಕವಂತೆ!! ಇದನ್ನೆಲ್ಲ ನಮ್ಮಜ್ಜನಿಗೆ ತಿಳಿಸಿದ ವಿಜ್ಞಾನಿಯಾದರೂ ಯಾರಾಗಿರಬಹುದು ಎಂದು ನನಗನಿಸಿತ್ತು.

ಈ ನಾಗ ದೋಷ ನಿವಾರಿಸುವ‌, ಕ್ರಿಮಿ ನಾಶಕ ಗುಣದ ಗೋ ಸಂಪಗೆ ಗಿಡದ ಬಗ್ಗೆ ನನಗೆ ಬಹಳ ಪ್ರೀತಿ ಮತ್ತು ಆಸಕ್ತಿಯಾಗಿತ್ತು. ನಸು ಬಿಳಿ ಬಣ್ಣದ ಅಷ್ಟಾವಕ್ರನಂತಿರುವ ಸಣ್ಣ ಮರದಲ್ಲಿ ತೆಳ್ಳಗಿನ ಕೈಗಳಂತಹ ಶಾಖೆಗಳು. ಅವುಗಳ ತುದಿಗಳಲ್ಲಿ ಹೂಗಳು ತುಂಬಿಕೊಂಡು ನಸುನಗುವಾಗ ನನಗೂ ಅವುಗಳ ಜೊತೆ ಒಂದು ಹೂವಾಗುವ ಬಯಕೆಯಾಗುತ್ತಿತ್ತು. ಮುಂಜಾನೆ ಎದ್ದು ಪ್ರತಿದಿನ ಅಜ್ಜಿ ಬಾವಿಯಿಂದ ನೀರು ಸೇದಿ ತುಳಸಿಗೆ, ಪಾರಿಜಾತ ಮರಕ್ಕೆ ನೀರೆರೆಯುತ್ತಿದ್ದರು. ಬಾವಿಕಟ್ಟೆಯ ಬಳಿ ಬಂದು ಹಗ್ಗಕ್ಕೆ ಕೊಡಪಾನ ಸಿಕ್ಕಿಸುವ ಮೊದಲು ಉದುರಿದ ಗೋ ಸಂಪಗೆಯ ಹೂವೊಂದನ್ನು ಹೆಕ್ಕಿ ಮುಡಿಯುತ್ತಿದ್ದರು. ಈ ಕ್ರಮ ಹೂವಿರುವ ಕಾಲದಲ್ಲಿ ಒಂದು ದಿನವೂ ತಪ್ಪುತ್ತಿರಲಿಲ್ಲ. ಕಾರಣವೇನೆಂದು ಅಜ್ಜಿಯಲ್ಲಿ ವಿಚಾರಿಸಿದಾಗ "ಕಾಲಡಿಗಿದ್ದ ಗೋ ಸಂಪಗೆಯ ಹೂವನ್ನು ಹೆಕ್ಕಿ ಮುಡಿಯದೆ ಮುಂದರಿದರೆ ಮರಕ್ಕೆ ಸಿಟ್ಟು ಬರುವುದಂತೆ. ಮರಕ್ಕೆ ಸಿಟ್ಟು ಬರಬಾರದಲ್ವಾ?" ಎಂದಿದ್ದರು.

ನಮ್ಮೂರಿನಲ್ಲಿ ಬೇಸಗೆ ಬೆಳದಿಂಗಳ ರಾತ್ರಿಗಳಲ್ಲಿ "ಪುರ್ಸೇರ್" ಎಂಬ ಜಾನಪದ ತಂಡಗಳು ವಿವಿಧ ವೇಷಗಳನ್ನು ಸೇರಿಸಿಕೊಂಡು ಬರುತ್ತಿದ್ದವು. ಅದರಲ್ಲಿ ಸಣ್ಣ ಸಣ್ಣ ಹುಡುಗರಿಗೂ ಒಂದು ಪಾತ್ರವಿರುತ್ತಿತ್ತು. ಅವರ ತಲೆಗೆ ಮುಂಡಾಸಿನಂತೆ ಅಡಕೆ ಹಾಳೆಯ ತೆಳುವಾದ ತುಂಡೊಂದನ್ನು ಸುತ್ತಿ ತೆಂಗಿನ ಮಡಲಿನ ಕಡ್ಡಿಗೆ ಈ ಗೋಸಂಪಿಗೆಯನ್ನು ಪೋಣಿಸಿ ನಾಲ್ಕು ಕಡೆಗೂ ಬಗ್ಗಿಸಿ ಕಟ್ಟಿದರೆ ಹೂವಿನ ಕಿರೀಟವಾಗುತ್ತಿತ್ತು. ಇದು ಆ ತಂಡದ ಸಾಂಪ್ರದಾಯಿಕ ವೇಷವೇ ಆಗಿತ್ತು.

ಏಕೋ ಏನೋ ಮನದ ಮೂಲೆಯಲ್ಲಿದ್ದ ಗೋಸಂಪಗೆ ಮರವೊಂದು ನನ್ನ ಶಾಲೆಯ ದಾರಿಯಲ್ಲಿ ಹೂವರಳಿಸಿ ನನ್ನನ್ನೇ ಕರೆದು "ಬಾ..ಬಾ..ಮಾತನಾಡುವ" ಅಂದಂತಾಗಿ ಸ್ಕೂಟರ್ ನಿಲ್ಲಿಸಿ ಮಾತನಾಡಿ ಫೋಟೋ ತೆಗೆದಿಟ್ಟುಕಂಡು ನಿಮ್ಮಲ್ಲೂ ಈ ಬಗ್ಗೆ ಮಾತನಾಡಬಯಸಿದೆ.

ನಮ್ಮಲ್ಲಿ ಗೋಸಂಪಗೆಯ ಮಹಾತ್ಮೆ ಇಷ್ಟು ಮಾತ್ರವೇ ಆದರೆ ಕೆಲವೆಡೆ ಸತಿಪತಿಯಾಗಲು ಮೊದಲ ಪರವಾನಗಿಯಾಗಿ ಗೋಸಂಪಗೆಯ ಹೂಹಾರ ಬದಲಾಯಿಸಿಕೊಳ್ಳುವುದೂ ಸಂಪ್ರದಾಯವಾಗಿತ್ತಂತೆ !. ಈ ಮರವು ಕಾಮದೇವನಿಗೆ ಸಮರ್ಪಿತ ಎಂಬ ನಂಬಿಕೆಯೂ ಇದೆ. ಮಾರಮ್ಮನ ಹಬ್ಬದಲ್ಲಿ ಕಡ್ಡಿಯಲ್ಲಿ ಪೋಣಿಸಿ ಶೃಂಗಾರಕ್ಕಾಗಿ... ವಟ ಸಾವಿತ್ರಿ ಪೂಜೆ, ಯುಗಾದಿ ಹಬ್ಬ ಗಳಲ್ಲಿ , ದೇವರ ಪೂಜೆಗೆ ಬಳಸಲ್ಪಡುತ್ತದೆ. ಬಾಂಗ್ಲಾದೇಶದ ಸಂಸ್ಕೃತಿಯಲ್ಲಿ ಇದರ ಹೂಗಳು ಅಂತ್ಯಕ್ರಿಯೆಯ ಭಾಗವಾಗಿದೆ. ಇತರ ಕೆಲ ಮತಗಳಲ್ಲಿ ಅಮರತ್ವದ ಸಂಕೇತವೆಂದು ಸಮಾಧಿಗಳ ಪಕ್ಕವೇ ನೆಡುತ್ತಾರಂತೆ. ಇದರ ಮರದಿಂದಲೇ ಬುದ್ಧನ ವಿಗ್ರಹವನ್ನು ತಯಾರಿಸುವರು.

ಅಮೆರಿಕ ಖಂಡದ ಉಷ್ಣವಲಯ ಪ್ರದೇಶದ ಕೂಸಾದ ಗೋಸಂಪಿಗೆ ನಿಕಾರಾಗುವ ದೇಶದ ರಾಷ್ಟ್ರೀಯ ಲಾಂಛನ!. Apocynaceae ಕುಟುಂಬದ Plumeria rubra ನಾಮಧೇಯದ ನಿಷ್ಪಾಪಿ ಸಸ್ಯ ಗೋ ಸಂಪಗೆಗೆ ಸಂಸ್ಕೃತದಲ್ಲಿ ಚಂಪಕ, ಕ್ಷೀರ ಚಂಪಕ ವೆಂದೂ, ಇಂಗ್ಲೀಷಲ್ಲಿ ಟೆಂಪಲ್ ಟ್ರೀ, ಪಗೋಡಾ ಟ್ರೀ ಯೆಂದೂ, ಕನ್ನಡದಲ್ಲಿ ಗೋಸಂಪಿಗೆ, ಗೋವೆ ಸಂಪಿಗೆ, ದೇವಗಣಿಗಲು, ವೆಳ್ಳೆ ಚಂಪಕ, ಕಾಶಿ ಸಂಪಿಗೆ, ದೇವ ಸಂಪಿಗೆ, ನಾಗ ಸಂಪಿಗೆಯೆಂದೂ, ತುಳು ಭಾಷೆಯಲ್ಲಿ ಗೋಸಂಪಾಯಿ, ಗೋಸಂಪಗೆಯೆಂದೂ ಕರೆಸಿಕೊಳ್ಳುತ್ತದೆ. ಗೋವೆಯ ಮೂಲಕ ಬಂದು ಗೋವೆ ಸಂಪಿಗೆ, ಸುಗಂಧ ತುಂಬಿರುವುದರಿಂದ ದೇವಗಣಿ, ಬೇರು ಸಹಿತ ಕಿತ್ತರೂ ಮತ್ತೆ ಚಿಗುರುವುದರಿಂದ ಅನಂತ ಮರ ಎಂಬ ಅನ್ವರ್ಥಕ ನಾಮಗಳಿವೆ.

ಸುರುಳಿ ಸುತ್ತಿದಂತಿರುವ ಇದರ ಮೊಗ್ಗುಗಳೇ ಬಹು ಸೊಗಸು. ಗೋಸಂಪಿಗೆ ಹೂಗಳು ಸಣ್ಣ ದಾಸವಾಳದಂತೆ ರೂಪ ಹೊಂದಿರುತ್ತವೆ. ಐದೆಸಳಿನ ಮೃದುವಾದ ಪುಷ್ಪದೆಸಳುಗಳದ್ದು ಅಪ್ಯಾಯಮಾನವಾದ ಸೌಂದರ್ಯ. ಈಗಂತೂ ಉದ್ಯಾನವನಗಳಲ್ಲಿ, ಕೈ ತೋಟಗಳಲ್ಲಿ ಕೆಂಪು, ಗುಲಾಬಿ, ನೇರಳೆ, ಕೆಂಪು, ಬಿಳಿ ಹೂಗಳ ಗಿಡಗಳಿವೆ. ಸಣ್ಣ ಕಾಯಿಗಳಾದರೂ ಗಿಡಗಳನ್ನು ಗೆಲ್ಲುಗಳ ಮೂಲಕ ಬೆಳೆಸುವುದು ಬಲು ಸುಲಭ. ಹವಾಮಾನದ ಏರಿಳಿತಗಳಿಗೆ ಹೊಂದಿಕೊಂಡು ಬೆಳೆಯಬಲ್ಲ ಗೋಸಂಪಿಗೆಯ ಶಾಖೆಗಳನ್ನು ಕಡಿದೆಸೆದಲ್ಲೂ ಚಿಗುರಿ ಹೂಗಳಾಗುವುದನ್ನು ಕಾಣಬಹುದು. ಹೂವು, ಎಲೆ, ತೊಗಟೆಗಳಲ್ಲೂ ಹಾಲು ಸುರಿಸುವ ಗೋಸಂಪಿಗೆ ಯ ಎಲೆ, ತೊಗಟೆ, ಹೂವು, ಹಾಲು ಔಷಧಯುಕ್ತವಾಗಿದೆ. ಹೂಗಳಿಂದ ಸುಗಂಧ ತೈಲವನ್ನೂ ತೆಗೆಯಲಾಗುತ್ತದೆ. ರಿಂಗ್ ವರ್ಮ್, ದೀರ್ಘಕಾಲದ ಗಾಯ ಹಾಗೂ ಚರ್ಮ ವ್ಯಾಧಿಗೆ ಉತ್ತಮ ಔಷಧಿ. ಸಂಧಿವಾತ, ಕಾಮಾಲೆ, ಹಾವಿನ ವಿಷಕ್ಕೂ ಇದು ಪರಿಣಾಮಕಾರಿಯೆಂದು ಕಂಡುಕೊಳ್ಳಲಾಗಿದೆ.

ಇಷ್ಟೆಲ್ಲ ಗುಣ ವಿಶೇಷ ಹೊಂದಿರುವ ಗೋಸಂಪಿಗೆ ಮರಗಳು ಹಿಂದೆ ದನಕರುಗಳ ಹಟ್ಟಿಯ ಬಾಗಿಲಲ್ಲಿ, ಕೆರೆ ಬಾವಿಯ ದಂಡೆಯಲ್ಲಿ, ದೇವಾಲಯಗಳ ವಠಾರಗಳಲ್ಲಿ, ಬೇಲಿ, ಮನೆ ಆವರಣ, ತೋಡು.. ಕಾಲುವೆಗಳ ದಂಡೆಯಲ್ಲಿ, ನಾಗ ಬನಗಳಲ್ಲಿ ಕಾಣಸಿಗುತ್ತಿತ್ತು. ನಾಗರೀಕತೆ ಬೆಳೆದಂತೆ ಈ ಮರಗಳು ಅಸಹ್ಯವೆನಿಸಿ ಕಡಿದೆಸೆಯಲ್ಪಟ್ಟು ಅಲ್ಲೆಲ್ಲ ಕಾಂಕ್ರೀಟ್ ಬಳಕೆ ಮಾಡಿ ದೊಡ್ಡಸ್ಥಿಕೆ ಮೆರೆದಿದ್ದೇವೆ. 

ಮಕ್ಕಳೇ ಪೋರ್ಚುಗೀಸರ ಮೂಲಕ ಭಾರತಕ್ಕೆ ಬಂದ ಈ ಸುಗಂಧಭರಿತ ಮೂಲ ತಳಿಯ ಗಿಡವೊಂದನ್ನು ನೀವೂ ನೆಡುವ ಮನಸ್ಸು ಮಾಡುವಿರಾ..?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************




Ads on article

Advertise in articles 1

advertising articles 2

Advertise under the article