-->
ಪಯಣ : ಸಂಚಿಕೆ - 84 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 84 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 84 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ' ಕ್ಕೆ ಪಯಣ ಮಾಡೋಣ ಬನ್ನಿ....
     
ಬಂಡೀಪುರ ಕರ್ನಾಟಕದ ಪ್ರಾಣಿ ಪಕ್ಷಿ ಸಂಕುಲಗಳ ಸಂಗಮ ತಾಣವೆಂದು ಪರಿಗಣಿತವಾಗಿದೆ. ರಕ್ಷಿತಾರಣ್ಯ ಪ್ರದೇಶವೆಂದು ಘೋಷಿಸಲಾಗಿರುವ ಬಂಡೀಪುರ ಅರಣ್ಯದಲ್ಲಿ ಆನೆಗಳ ಮೇಲೆ ಕಾಡಿನಲ್ಲಿ ಸವಾರಿ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಆನೆಗಳ ತಾಣವೆಂದೇ ಗುರುತಿಸಲಾಗುವ ಬಂಡೀಪುರ ಪ್ರವಾಸಿಗರಿಗೆ ಅಪರೂಪವಾದ ಮತ್ತು ಮರೆಯಲಾಗದ ಅನುಭವ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ಬಹು ಹೆಸರುವಾಸಿಯಾಗಿದ್ದು, ಈ ಅರಣ್ಯಪ್ರದೇಶವನ್ನು ಅಭಯಾರಣ್ಯವನ್ನಾಗಿ ರೂಪಿಸಲು, ಮೈಸೂರು ಒಡೆಯರು ಆಲೋಚಿಸಿದರು. ಆ ನಂತರ ಭಾರತ ಸರಕಾರ ಸ್ವಾತಂತ್ರ್ಯಾನಂತರ ಇದನ್ನು ಅಭಯಾರಣ್ಯವನ್ನಾಗಿ ಬದಲಾಯಿಸಿತು. ಪಶ್ಚಿಮ ಘಟ್ಟಗಳು ಹಾಗೂ ನೀಲಗಿರಿ ಅರಣ್ಯಪ್ರದೇಶಗಳ ನಡುವೆ ಇರುವ ಬಂಡೀಪುರ ಅಭಯಾರಣ್ಯ ಸುಮಾರು 800 ಚ.ಕಿ.ಮೀ. ಗಳಿಗಿಂತ ಹೆಚ್ಚು ವಿಸ್ತಾರವಾಗಿದೆ.      
ಮೈಸೂರಿನಿಂದ ಹೊರಟಾಗ ಗುಂಡ್ಲುಪೇಟೆವರೆಗೆ ಕೇವಲ ಬಯಲು, ಗದ್ದೆ, ತೆಂಗಿನ ತೋಟಗಳು ಕಣ್ಣಿಗೆ ಬೀಳುತ್ತವೆ. ಆದರೆ ಈ ಅರಣ್ಯಪ್ರದೇಶದ ವ್ಯಾಪ್ತಿ ಮಾತ್ರ ಅಚ್ಚ ಹಸಿರು. ಗವ್ವೆನ್ನುವ ಕಾಡು. ಈ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಪ್ರವಾಸಿಗರ ಅನುಕೂಲಕ್ಕಾಗಿ ಅಲ್ಲಲ್ಲಿ ಪ್ರಾಣಿಗಳ ಚಿತ್ರ ಇರುವ ಫಲಕಗಳನ್ನು ಕರ್ನಾಟಕ ಸರಕಾರ ನಿಲ್ಲಿಸಿ ಇಟ್ಟಿದೆ. ಅರಣ್ಯದ ಒಳಗೆ ಹೋದಂತೆಲ್ಲ ಹುಲಿ, ಕಾಡೆಮ್ಮೆ, ಆನೆ, ಜಿಂಕೆಗಳ ವಲಯ ನಿಮ್ಮನ್ನು ಸೆಳೆಯುತ್ತವೆ. ಈ ಅರಣ್ಯವಂತೂ ಜಿಂಕೆಗಳಿಗೆ ತವರು ಮನೆಯಿದ್ದಂತೆ. ನೀವು ಸಾಗುತ್ತಿರುವ ವಾಹನದ ಪಕ್ಕದಲ್ಲೇ ನಿಂತು ಅವು ಹುಲ್ಲು ತಿನ್ನುತ್ತಿರುತ್ತವೆ. ಆನೆಗಳೂ ಅಷ್ಟೆ ರಸ್ತೆ ಪಕ್ಕದಲ್ಲಿಯೇ ತಮ್ಮ ಬಿಡದಿಯನ್ನು ಹಾಕಿರುತ್ತದೆ.

ಈ ಕಾಡಿನಲ್ಲಿ ಗಲಾಟೆ ನಿಷೇಧಿಸಲಾಗಿದೆ. ಹಾಗೆಯೇ ಕಾಡಿನಲ್ಲಿ ಬೆಂಕಿ ಹಾಕುವುದೂ ನಿಷಿದ್ಧ. ಇದರ ಜೊತೆಗೆ ಈ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರವೂ ನಿಷಿದ್ಧ, ಪ್ಲಾಸ್ಟಿಕ್ ಬಳಸಲೂ ಅನುಮತಿ ಇಲ್ಲ. ಹಾಗೂ ಈ ಪ್ರದೇಶದಲ್ಲಿ ವೇಗವಾಗಿ ವಾಹನ ಚಾಲನೆ ಮಾಡುವಂತಿಲ್ಲ. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಭಯಾರಣ್ಯದ ವೀಕ್ಷಣೆ ಮಾಡಬೇಕು. ಆಗಸದಲ್ಲಿ ನಿಧಾನವಾಗಿ ಮೇಲೇರಿ ಬರುವ ಸೂರ್ಯನ ಕಿರಣಗಳು ಮಂಜನ್ನು ಸೀಳಿಕೊಂಡು ಬರುವ ದೃಶ್ಯವಂತೂ ಬಣ್ಣಿಸಲಸದಳ.

ಆ ಮುಂಜಾವಿನಲ್ಲಿ ಪ್ರಾಣಿ ಪಕ್ಷಿಗಳೂ ಸೂರ್ಯನ ಕಿರಣಗಳಿಗೆ ಮೈ ಒಡ್ಡಿ ನಿಂತಿರುತ್ತವೆ. ನೀವು ಸದ್ದು ಮಾಡದೇ ಹೋದರೆ ಹೊಸ ಅನುಭವ ನಿಮಗೆ ಸಿಗಬಲ್ಲದು. ಪ್ರವಾಸಿಗರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಅರಣ್ಯ ಸಫಾರಿ ವ್ಯವಸ್ಥೆಯನ್ನು ಮಾಡಿದೆ. ಬಂಡೀಪುರದ ಮುಖ್ಯ ಕಛೇರಿಯಲ್ಲಿ ಅನುಮತಿ ಪಡೆದುಕೊಂಡರೆ ಅವರೇ ನಿಮ್ಮನ್ನು ಸಫಾರಿಗೆ ಕರೆದೊಯ್ಯುತ್ತಾರೆ. ಕಾಡಿನೊಳಗಣ ಹೊಸ ಲೋಕಕ್ಕೆ ನಿಮ್ಮನ್ನು ಸೆಳೆದೊಯ್ಯುತ್ತಾರೆ.

ಹುಲಿಗಳ ಗತ್ತು ಗಾಂಭೀರ್ಯವನ್ನು ಮೈಸೂರಿನಿಂದ ಪ್ರೇಮಿಗಳ ಸ್ವರ್ಗ ಊಟಿಗೆ ಹೋಗುವ ಮಾರ್ಗ ತನಕ ನೋಡಬಹುದು. ಆನೆ ಸಫಾರಿ ಸವಿ ಸವಿಯಲಿಕ್ಕೆ, ಜಿಂಕೆ, ವೀಕ್ಷಿಸಲಿಕ್ಕೆ ಈಗಲೇ ಹೊರಡಿ ಬಂಡೀಪುರಕ್ಕೆ, ಮಧ್ಯವೇ ಇದೆ ಬಂಡೀಪುರ. ಹೀಗಾಗಿ ಅಲ್ಲಿಗೆ ತೆರಳುವುದು ಕಷ್ಟವಲ್ಲ.

ನೀಲಗಿರಿ ಬೆಟ್ಟಸಾಲಿನ ಪದತಲದಲ್ಲಿರುವ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ 1931ರಲ್ಲಿ ಮೈಸೂರು ಮಹಾರಾಜರಿಂದ ಸ್ಥಾಪನೆಯಾಯಿತು. ದೇಶದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಮೈಸೂರು ಮಹಾರಾಜರ ಪ್ರಮುಖ ವಿಹಾರ ತಾಣವಾಗಿದ್ದ ಈ ಅಭಯಾರಣ್ಯದಲ್ಲಿ ಹುಲಿ, ಆನೆ, ಕಡವೆ, ಚಿರತೆ ಮುಂತಾದ ವೈವಿಧ್ಯಮಯ ವನ್ಯಜೀವಿಗಳಿವೆ. ಅಸಂಖ್ಯ ಪಕ್ಷಿ ಸಂಕುಲವಿದೆ. ಅಲ್ಲದೆ, ಸ್ತೋತ್, ಸ್ಯಾಂಬರ್, ಜಿಂಕೆ, ಕಾಡುನಾಯಿ, ದೈತ್ಯ ಅಳಿಲು ಮುಂತಾದ ಪ್ರಾಣಿಗಳನ್ನೂ ಇಲ್ಲಿ ಕಾಣಬಹುದು.

ಈ ಕಾಡಿನಲ್ಲಿ ಸ್ವಚ್ಛಂಧವಾಗಿ ವಿಹರಿಸುವ ಪ್ರಾಣಿಗಳನ್ನು ಇಲ್ಲಿ ಹತ್ತಿರದಿಂದ ವೀಕ್ಷಿಸಲು ಅವಕಾಶವಿದೆ. ಆನೆ ಮೇಲೆ ಇಲ್ಲವೇ ಜೀಪ್‌ಗಳಲ್ಲಿ ನೋಡುಗರನ್ನು ಕಾಡಿನೊಳಗೆ ಕರೆದೊಯ್ಯಲಾಗುತ್ತದೆ. ತಮಿಳು ನಾಡಿನ ಮಧುಮಲೈ ಅಭಯಾರಣ್ಯ ಮತ್ತು ಬಂಡೀಪುರ ಅಭಯಾರಣ್ಯವನ್ನು ಕಾಡಿನ ಮಧ್ಯೆ ಹರಿಯುವ ಮೊಯಾರ್ ನದಿ ಬೇರ್ಪಡಿಸುತ್ತದೆ. ಪ್ರವಾಸಿಗರು ಹತ್ತಿರದ ಮಧುಮಲೈ ಅಭಯಾರಣ್ಯಕ್ಕೂ ಭೇಟಿ ನೀಡಬಹುದು.

'ಪ್ರಾಣಿ ಸಂಕುಲಗಳ ತಾಣ, ಗಿಡಮರಗಳ ಸರಮಾಲೆಗಳ ಜೊತೆಗೆ ರಾಷ್ಟ್ರೀಯ ಹೆದ್ದಾರಿಯ ಪಯಣ ಒಂದು ಅದ್ಭುತ ಅನುಭವ ನೀಡಬಹುದು' ಬನ್ನಿ ಒಮ್ಮೆ ಪ್ರವಾಸಕ್ಕೆ...

"ಪ್ರವಾಸವು ಜೀವನಕ್ಕೆ ವಿಶ್ರಾಂತಿ ಮತ್ತು ಸಂತೋಷ ನೀಡುತ್ತದೆ. ದಿನನಿತ್ಯದ ಕೆಲಸಗಳ ಒತ್ತಡದಿಂದ ದೂರವಾಗಿ ಮನಸ್ಸಿಗೆ ನೆಮ್ಮದಿ ಕೊಡುತ್ತದೆ."

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article