-->
ಜೀವನ ಸಂಭ್ರಮ : ಸಂಚಿಕೆ - 232

ಜೀವನ ಸಂಭ್ರಮ : ಸಂಚಿಕೆ - 232

ಜೀವನ ಸಂಭ್ರಮ : ಸಂಚಿಕೆ - 232
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                      

ಮಕ್ಕಳೇ, ಈ ಹೆಸರು ಹೆಣ್ಣು ಮಗುವಿನ ಹೆಸರು. ಇದು ಬುದ್ಧ ಬದುಕಿದ್ದ ಕಾಲದಲ್ಲಿ ನಡೆದ ಘಟನೆ. ಪಟಾಚಾರ, ಈಕೆ ಶ್ರೀಮಂತ ಕುಟುಂಬದ ಮಗಳು. ಅವರ ತಂದೆ ತಾಯಿಗಳಿಗೆ ಶ್ರೀಮಂತನಿಗೆ ಕೊಟ್ಟು ಮದುವೆ ಮಾಡಬೇಕು ಅಂತ ಆಸೆ. ಆದರೆ ಈಕೆ ದುಡಿಯುವ ಬಡವನನ್ನು ಪ್ರೀತಿಸಿದ್ದಳು. ಆತ ಬಡವನಾದರೂ ಸ್ವಾಭಿಮಾನಿ. ಪಟಾಚಾರನ ಪೋಷಕರು ಆತನಿಗೆ ಆಸ್ತಿ ಸಂಪತ್ತು ನೀಡಲು ಬಯಸಿದರೂ, ತಿರಸ್ಕರಿಸಿದಂತಹವನು. ಆಕೆಯ ಇಚ್ಛೆಯನ್ನು ತಿರಸ್ಕರಿಸದೆ ಮದುವೆ ಮಾಡಿ ಮನೆಯಿಂದ ಹೊರಹಾಕಿದರು. ಆತ ತನ್ನ ಹೆಂಡತಿಯನ್ನು ಕರೆದುಕೊಂಡು ಹೊರಟನು. ಏಕೆಂದರೆ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದುದರಿಂದ, ಅವರಿಗೆ ಪೋಷಕರು ಹೇಳಿದರು. ಲಗ್ನವಾದ ಮೇಲೆ ಮನೆಗೆ ಬರಬೇಡ. ಹಾಗಾಗಿ ಇಬ್ಬರು ದೂರ ಹೋಗಿ, ಜೀವನ ಚೆಂದವಾಗಿ ಸಾಗಿಸುತ್ತಿದ್ದರು. 

ಇಬ್ಬರು ದುಡಿಮೆಯನ್ನು ಪ್ರೀತಿಸಿದವರೇ ವಿನಃ ದುಡ್ಡನ್ನು ಪ್ರೀತಿಸಿದವರಲ್ಲ. ಇಬ್ಬರು ಸುಂದರ ಜೀವನ ಸಾಗಿಸಿದ್ದರು. ಇವರಿಗೆ ಎರಡು ಮಕ್ಕಳು ಹುಟ್ಟಿದರು. ಚೆನ್ನಾಗಿ ಬೆಳೆದಿದ್ದರು. ಆಗ ಪಟಾಚಾರಗಳಿಗೆ ಅನ್ನಿಸಿತು, ಈ ಮಕ್ಕಳನ್ನು ತಂದೆ ತಾಯಿಗೆ ತೋರಿಸಬೇಕು ಅಂತ. ಗಂಡ ಚೆನ್ನಾಗಿ ದುಡಿಯುತ್ತಿದ್ದ ಹಾಗಾಗಿ ಯಾವುದೇ ಕೊರತೆ ಇರಲಿಲ್ಲ. ಇಬ್ಬರು ಅಷ್ಟೇ ಆರೋಗ್ಯವಾಗಿದ್ದರು. ಸಶಕ್ತರಾಗಿದ್ದರು. ಅನನ್ಯವಾಗಿದ್ದರು. 

ಪಟಾಚಾರ ಪತಿಗೆ ಹೇಳಿದಳು "ಏಕೋ ಏನೋ ಗೊತ್ತಿಲ್ಲ, ನಾನು ನನ್ನ ಮನೆಗೆ ಹೋಗಬೇಕು, ಹೋಗಿ ಮಕ್ಕಳನ್ನು ತಂದೆ ತಾಯಿಗೆ ತೋರಿಸಬೇಕು. ನಮ್ಮ ಜೀವನ ಎಷ್ಟು ಚೆನ್ನಾಗಿದೆ ಅವರಿಗೆ ಗೊತ್ತಾಗಲಿ, ಜೊತೆಗೆ ತಾಯಿ ತಂದೆ ನೆನಪಾಗಿದೆ, ಹೋಗೋಣ" ಅಂದಳು. ಆಗ ಗಂಡ ಹೇಳಿದ "ಅವರು ಬರಬೇಡ ಅಂತ ಹೇಳಿದ್ದಾರೆ, ಬರಬೇಡ ಅಂದ ಮನೆಗೆ ಹೋಗೋದು ಹೇಗೆ?". ಆತ ಸ್ವಾಭಿಮಾನಿ ಆಕೆ ಹೇಳಿದಳು "ಆಗ ಏನೋ ಹುರುಪಿನಾಗೆ ಯಾವುದೋ ಭಾವನೆಯಿಂದ ಅಂದಿರುತ್ತಾರೆ, ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಸಾಧಿಸುವುದೇನು?. ಈಗಾಗಲೇ ನಾಲ್ಕೈದು ವರ್ಷ ಆಗಿದೆ. ಎಲ್ಲಾ ಮರೆತು ಹೋಗಿರುತ್ತದೆ" ಹೋಗೋಣ ಎಂದಳು. ಆತ, ಹೆಂಡತಿ ಮಕ್ಕಳು ಕರೆದುಕೊಂಡು ಹೆಂಡತಿಯ ತವರು ಮನೆಗೆ ಹೊರಟನು. ಈ ಊರಿನಿಂದ ಆ ಊರಿಗೆ ಹೋಗಲು ಮಧ್ಯದಲ್ಲಿ ಅರಣ್ಯ ಇತ್ತು. ಅರಣ್ಯ ದಾಟಿ ಹೋಗಬೇಕಾಗಿತ್ತು. ಅರಣ್ಯದ ಭಾಗಕ್ಕೆ ಬಂದಾಗ ಮಳೆ ಬೀಳಲು ಶುರುವಾಯಿತು. ಕತ್ತಲೆ ಆಯಿತು. ಮಳೆ ನಿಂತಿತ್ತು. ಚಳಿ ಹೆಚ್ಚಾಯ್ತು. 

ದೇಹ ಬಿಸಿ ಮಾಡಿಕೊಳ್ಳಲು ಕಟ್ಟಿಗೆ ತರಲು ಪಟಾಚಾರಳ ಗಂಡ ಹೋದನು. ಇವರನ್ನು ಒಂದು ಕಡೆ ಕುಳ್ಳಿರಿಸಿ ಹೋದನು. ಪತ್ನಿ ಕಲ್ಲನ್ನು ಜೋಡಿಸಿ ಇಟ್ಟುಕೊಂಡಿದ್ದಳು. ಕಟ್ಟಿಗೆ ತರಲು ಹೋದವನು ಬರಲಿಲ್ಲ. ಅರಣ್ಯ, ಯಾರು ಇಲ್ಲ, ಗಾಬರಿಯಾದಳು. ಕತ್ತಲೆ, ತನ್ನ ಎರಡು ಮಕ್ಕಳು. ಆತನನ್ನು ಹುಡುಕುವುದು ಹೇಗೆ? ಈಗ ಬರುತ್ತಾನೆ. ಆಮೇಲೆ ಬರುತ್ತಾನೆ, ಅಂತ ಇಡೀ ರಾತ್ರಿ ಕಾದಳು. ಬೆಳಗ್ಗೆ ಆಯ್ತು ಹುಡುಗರು ನಿದ್ರೆಯಿಂದ ಎದ್ದರು. ಮಕ್ಕಳೊಂದಿಗೆ ಗಂಡನನ್ನು ಹುಡುಕಲು ಹೊರಟಳು. ಸ್ವಲ್ಪ ದೂರ ಹೋಗುವುದರೊಳಗೆ ಗಂಡನ ಹೆಣ ಬಿದ್ದಿತ್ತು. ಆತ ಕಟ್ಟಿಗೆ ಮುರಿಯುವಾಗ ಅಲ್ಲಿದ್ದ ಹಾವು ಕಚ್ಚಿ ಸತ್ತು ಬಿದ್ದಿದ್ದನು. ಬಾಯಲ್ಲಿ ನೊರೆ ಬಂದಿತ್ತು. ಎಂತಹ ಸ್ವರ್ಗದ ಜೀವನ ಇತ್ತು! ಇದನ್ನು ನೋಡಿದ ಕ್ಷಣವೇ ಮರೆಯಾಯ್ತು. ಸುಖದ ಜೀವನದಲ್ಲಿ ದುಃಖ ತಲೆದೋರಿತ್ತು. 

ಈಗ ಎಲ್ಲಿ ಹೋಗಬೇಕೆಂದು ಗೊತ್ತಾಗಲಿಲ್ಲ. ಅರಣ್ಯ, ಅದು ಕಣ್ಣೀರು ಸುರಿಸುವ ಹೊತ್ತಲ್ಲ. ಯಾವಾಗ ಏನಾಗುತ್ತೋ ಗೊತ್ತಿಲ್ಲ. ತಕ್ಷಣ ಅಲ್ಲಿಂದ ಹೊರಟು ಹೋಗಬೇಕು. ಎಂತಹ ಕಷ್ಟ. ಎರಡು ಮಕ್ಕಳನ್ನು ಕಟ್ಟಿಕೊಂಡು ತವರು ಮನೆ ಕಡೆ ಹೊರಟಳು. ಇನ್ನು ಗಂಡನೇ ಹೋದ ಮೇಲೆ ಮತ್ತಿನ್ನೇನು?. ಆ ಹೆಣವನ್ನು ಏನು ಮಾಡಲು ಆಗದೆ, ಕಣ್ಣೀರು ಸುರಿಸಿಕೊಂಡು, ಒಂದು ಮಗುವನ್ನು ಕಂಕುಳಲ್ಲಿ ಇರಿಸಿ, ಇನ್ನೊಂದನ್ನು ಕೈಯಲ್ಲಿ ಹಿಡಿದು ನಡೆಸುತ್ತಾ ತವರಿನ ಕಡೆ ಹೊರಟಳು. ತವರಿನ ಊರಿಗೆ ಹೋಗುವ ಮೊದಲು ಹೊಳೆ ಹರಿಯುತ್ತಿತ್ತು. ತುಂಬಿ ಹರಿಯುತ್ತಿದೆ. ಗಂಡ ಇಲ್ಲ, ಅನಾಥಳಾಗಿದ್ದಾಳೆ. ತಂದೆ ತಾಯಿ ಇದ್ದಾರೆ, ಶ್ರೀಮಂತರಿದ್ದಾರೆ. ಈ ಮಕ್ಕಳ ಸಲುವಾಗಿಯಾದರೂ ಹೋಗೋಣ ಅಂತ ಹೊರಟಿದ್ದಾಳೆ. ನದಿ ದಾಟಬೇಕು. ಮಳೆ ಜಾಸ್ತಿಯಾಗಿ ಹೊಳೆ ತುಂಬಿ ಹರಿಯುತ್ತಿತ್ತು. ಒಂದು ಮಗು ಕಂಕಳಲ್ಲಿ ಇಟ್ಟುಕೊಂಡು. ಇನ್ನೊಂದು ಮಗುವನ್ನು ಕೈಯಲ್ಲಿ ಹಿಡಿದು ನದಿ ದಾಟಲು ಪ್ರಾರಂಭಿಸಿದಳು. ನದಿ ಮಧ್ಯಕ್ಕೆ ಬಂದಿದ್ದಾಳೆ ಪ್ರವಾಹ ಹೆಚ್ಚಾಯಿತು. ಕೈಯಲ್ಲಿ ಹಿಡಿದಿದ್ದ ಮಗು ಸೆಳೆತಕ್ಕೆ ಸಿಲುಕಿ ಕೈತಪ್ಪಿತ್ತು. ಆ ಮಗನು ಹಿಡಿಯಲು ಹೋಗಿ ಕಂಕುಳಲ್ಲಿದ್ದ ಮಗು ಜಾರಿ ನೀರು ಪಾಲಾಯಿತು. ಈಗ ಎರಡು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋದರು. ಈಗ ಒಬ್ಬಳೇ ನದಿ ಮಧ್ಯದಲ್ಲಿ ನಿಂತಿದ್ದಾಳೆ. 

ಪತಿ ಸತ್ತಿದ್ದ. ಎರಡು ಮಕ್ಕಳು ಹೋದರು, ಒಬ್ಬಳೇ ಇದ್ದಾಳೆ. ಇದು ಜೀವನ. ಸ್ವರ್ಗದಂತಹ ಜೀವನ ಸ್ವಲ್ಪ ಸಮಯದಲ್ಲಿ ನರಕವಾಗಿತ್ತು. ದಿಗ್ಬ್ರಮೆಯಾಗಿದ್ದಳು. ಯಾರೂ ಇಲ್ಲ ಎಲ್ಲಾ ಕನಸು. ಕನಸು...!! ಏನು ಮಾಡಲು ಆಗಲಿಲ್ಲ. ಹಾಗೆ ನದಿ ದಾಟಿ ಹೊರಗೆ ಬಂದಳು. ನದಿ ದಡದಲ್ಲಿ ಸಾವಿರಾರು ಜನ ಸೇರಿದ್ದಾರೆ. ಅಲ್ಲಿ ಶವ ಸಂಸ್ಕಾರ ಮಾಡಿದ್ದಾರೆ. ಅಲ್ಲಿದ್ದ ಜನರನ್ನು ಕೇಳಿದಳು. ಏಕೆ ಇಷ್ಟು ಜನ? ಅಂತ .ಆಗ ಅಲ್ಲಿದ್ದವರು ಹೇಳಿದರು "ಈ ಊರಿನ ದೊಡ್ಡ ಸಾವುಕಾರ, ಮನೆ ಬಿತ್ತು. ಆ ಮನೆಯಲ್ಲಿ ಇದ್ದವರು ಮಲಗಿದ್ದರು. ಮನೆ ಅವರ ಮೇಲೆ ಬಿತ್ತು. ಯಾರು ಉಳಿಯಲಿಲ್ಲ. ಅದು ಬೇರೆ ಯಾರದೋ ಮನೆ ಆಗಿರಲಿಲ್ಲ ಅದು ಇವರದೇ ಮನೆ". ಪತಿ ಹೋದ. ಮಕ್ಕಳು ಹೋದರು. ತಾಯಿ ತಂದೆ ಹೋದರು. ಯಾರ್ಯಾರು ಇಲ್ಲ. ದುಃಖ ಹೇಗೆ ಇರಬೇಕು? ಭಾವಿಸಿ, ದುಃಖದ ಮೂರ್ತಿ ಆಗಿದ್ದಳು. ಎಲ್ಲಾ ಮುಗಿಯಿತು. 

ಅಲ್ಲೇ ಆಮ್ರ ವನದಲ್ಲಿ ಬುದ್ಧ ಇದ್ದನು. ಅದೇ ಸಮಯಕ್ಕೆ ಅಲ್ಲೇ ಇದ್ದನು. ಅಲ್ಲಿಗೆ ಪಟಾಚಾರ ಹೋದಳು. ಹೋಗಿ ಬುದ್ಧನಿಗೆ ನಮಸ್ಕಾರ ಮಾಡಿ, ತನ್ನ ಕಥೆ ಹೇಳಿದಳು. ಬುದ್ಧ ನಕ್ಕು ಹೇಳಿದ "ಇಲ್ಲೇ ಇರು, ಇಲ್ಲಿ ಕುಳಿತುಕೋ" ಎಂದು ಹೇಳಿದ. ಅದು ಸಂಜೆ ವೇಳೆ ಉಪದೇಶದ ಸಮಯ, ಜನ ಸೇರಿದ್ದಾರೆ. ಪಟಾಚಾರ ಕುಳಿತಿದ್ದಾಳೆ. ಕಣ್ಣಲ್ಲಿ ನೀರು ಸಹಿತ ಬಾರದಷ್ಟು ದುಃಖವಾಗಿತ್ತು. ಕಲ್ಲು ಕಲ್ಲಾಗಿ ಕುಳಿತಿದ್ದಳು. ಬುದ್ಧ ಆಕೆಗೆ ಒಂದು ಕೆಲಸ ಹೇಳಿದನು. "ನೋಡಲ್ಲಿ , ದೀಪ ಉರಿಯುತ್ತಾ ಇದೆ ಅದನ್ನು ರಕ್ಷಣೆ ಮಾಡು" ಎಂದನು. ಆಕೆ ದೀಪದ ನೋಡಿಕೋತ ಕುಳಿತಿದ್ದಳು. ಬುದ್ಧ ಉಪದೇಶ ಮಾಡುತ್ತಾ ಇದ್ದ. ನೂರಾರು ಜನ ಕೇಳುತ್ತಿದ್ದರು. ಆಕೆಗೆ ದೀಪದ ಕಡೆ ಲಕ್ಷ್ಯ ಇತ್ತು. ಆಕೆ ನೋಡುತ್ತಾ ನೋಡುತ್ತಾ ಇರುವಾಗಲೇ ದೀಪ ಆರಿತು. ಏನು ದುಃಖದಿಂದ ಕೂತಿದ್ದಳಲ್ಲ, ದೀಪ ಹಚ್ಚಿ, ನಕ್ಕಳು. ಬುದ್ಧ ಹೇಳಿದ "ಯಾಕೆ ನಕ್ಕಿದ್ದು" ಅಂತ. ಆಗ ಆಕೆ ಹೇಳಿದಳು. "ಗೊತ್ತಾಯ್ತು ಬುದ್ಧ ಮಹಾನುಬಾವರೇ, ಜೀವನ ಅಂದರೆ ದೀಪ ಇದ್ದಂತೆ. ನಾವು ಏನೇ ಮಾಡಿದರು ದೀಪ ಆರುತ್ತದೆ." ಎಣ್ಣೆ ಕಡಿಮೆಯಾಗಬಹುದು, ಬತ್ತಿ ಉರಿದು ಮುಗಿಯಬಹುದು, ಗಾಳಿ ಬೀಸಬಹುದು. ಹೇಗಾದರೂ ದೀಪ ಆರುತ್ತದೆ. ಇದನ್ನು ಪರಿಸರ ಕಲಿಸಿತ್ತು. ನಾವೇನೆ ಪ್ರಯತ್ನ ಪಟ್ಟರೂ ದೀಪ ಆರುತ್ತದೆ. ಈಗ ಪಟಾಚಾರಳ ಮುಖದಲ್ಲಿ ನಗು ಇತ್ತು. ಹೀಗೆ ಜೀವನ ದರ್ಶನವಾಗಿತ್ತು. ಪರಿಸರದ ಪರಿಣಾಮ ಪಟಾಚಾರ ಮುಂದೆ ಶ್ರೇಷ್ಠ ಸನ್ಯಾಸಿ ಆಗಿದ್ದಳು. ಜ್ಞಾನಿಯಾಗಿದ್ದಳು. ದುಃಖ ಯಾವ ದೇಹದಲ್ಲಿ ತುಂಬಿತ್ತೋ, ಅಲ್ಲಿ ಶಾಂತಿ ತುಂಬಿತ್ತು. ಬುದ್ದನ ಸಂಘ, ದೀಪದ ಪರಿಸರ, ಹಾಗೆ ಮಾಡಿತ್ತು.

ಒಂದು ಘಟನೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ. ದುಃಖವನ್ನು ತೆಗೆದು ಹಾಕುತ್ತದೆ. ಹಾಗೆ ಕಲಿಯುವುದಿದೆ. ಜಗತ್ತಿನ ಪರಿಸರ, ವ್ಯಕ್ತಿಗಳ ಸಂಘ, ನಮ್ಮನ್ನು ಜ್ಞಾನಿಯನ್ನಾಗಿ ಮಾಡುತ್ತದೆ. ಇದು ಸತ್ಸಂಗ. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************




Ads on article

Advertise in articles 1

advertising articles 2

Advertise under the article