ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 86
Sunday, March 8, 2026
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 86
ಲೇಖಕರು : ಶ್ರೀಮತಿ ಸುಪ್ರಿಯಾ
ಸಹಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
ದಿನದ ಕೊನೆಯ ಅವಧಿ (8th period) ನಾನು 3ನೇ ತರಗತಿಗೆ ಕಾಲಿಡುವಾಗಲೇ ಮಕ್ಕಳಿಂದ ಬಂದಂತಹ ವಿನಂತಿ ಇದು!! ನನಗೂ ಸ್ವಲ್ಪ ಕಸಿವಿಸಿ ಆಯಿತು!. ಏನಿದು ತರಗತಿಗೆ ಕಾಲಿಡುವಾಗಲೇ ಮಕ್ಕಳು ಈ ರೀತಿ ಹೇಳ್ತಾ ಇದ್ದಾರಲ್ವಾ!!?
ಇನ್ನೆರಡು ದಿನಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ಆರಂಭ ಆಗುತ್ತಿದೆ. ಇವರು ನೋಡಿದ್ರೆ ಬರೆಯೋಕೆ ಏನೂ ಕೊಡಬೇಡಿ ಅಂತಿದ್ದಾರೆ! ಎಂದೆಲ್ಲ ಯೋಚಿಸುತ್ತಾ ವಿದ್ಯಾರ್ಥಿಗಳನ್ನೇ ಕೇಳಿದೆ.. 'ಅಲ್ಲಾ, ಪರೀಕ್ಷೆಗೆ ಇನ್ನು ಎರಡೇ ದಿನಗಳು ಬಾಕಿ ಇದೆ. ನೀವು ನೋಡಿದ್ರೆ ಏನೂ ಬರೆಯೋದಕ್ಕೆ ಕೊಡಬೇಡಿ ಹೇಳ್ತಾ ಇದ್ದೀರಲ್ಲ! ಏನು ಕಥೆ ನಿಮ್ದು?' ಎಂದೆ.
ತಕ್ಷಣ ಒಬ್ಬಳು ಹುಡುಗಿ, 'ಮಾಮ್ ಬೆಳಗಿನಿಂದ ಎಲ್ಲಾರೂ ರಿವಿಷನ್ ಮಾಡಿದ್ರು ನಮಗೂ ಬರೆದು, ಬರೆದು ಸಾಕಾಯ್ತು ಮಾಮ್ ಅದಕ್ಕೆ ನೀವು ಬರೆಯೋಕೆ ಕೊಡಬೇಡಿ ಅಂದಿದ್ದು.'
ರಿವಿಷನ್ ಆದ್ರೆ ಒಳ್ಳೇದಲ್ವಾ? ರಿವಿಷನ್ ಬೇಡ ಅಂದ್ರೆ, ಮತ್ತೆ ಏನು ಮಾಡೋದು ಇವಾಗ? ನಿಮ್ಮ ಅಪ್ಪ, ಅಮ್ಮ ರಿವಿಷನ್ ಯಾಕೆ ಮಾಡಿಲ್ಲಾ ಅಂತ ಕೇಳಿದ್ರೆ ಏನು ಹೇಳೋದು?" ಅಂದೆ. "ಇಲ್ಲಾ ಮಾಮ್, ನಾವು, ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ತೆಗಿತೇವೆ ಅವಾಗ ಪೇರೆಂಟ್ಸ್ ಏನೂ ಅನ್ನಲ್ಲ" ಅಂದ್ರು..
ನನಗೂ ಮಕ್ಕಳ ಮುಖ ನೋಡಿದಾಗಲೇ ಯಾಕೋ ಇವತ್ತು ಮಕ್ಕಳು ಎಂದಿನಂತೆ ಇಲ್ಲ ಎಂಬ ಭಾವನೆ ಬಂತು. ಹಾಗಾಗಿ ನಾನು ತರಗತಿಯಲ್ಲಿ ಏನು ಮಾಡಬೇಕು ಅಂದುಕೊಂಡಿದ್ದೇನೆ ಅದನ್ನೇ ಮಾಡಲು ಹೊರಟರೆ ಬಹುಶಃ ಬಹುತೇಕ ಮಕ್ಕಳು ಪಾಠವನ್ನು ಆಲಿಸುವ ಸ್ಥಿತಿಯಲ್ಲಿಲ್ಲ ಎಂಬುದರ ಅರಿವಾಯಿತು. ತರಗತಿಗಾಗಿ ನಾನು ಮಾಡಿಕೊಂಡು ಬಂದಿದ್ದ ತಯಾರಿಯನ್ನೆಲ್ಲಾ ಬದಿಗಿರಿಸಿದೆ.
'ಸರಿ, ಹಾಗಾದ್ರೆ ನೋಡೋಣ ಎಷ್ಟು ಮಕ್ಕಳು ಚೆನ್ನಾಗಿ ಓದಿ ಒಳ್ಳೆ ಅಂಕ ಪಡೀತೀರಾ ಅಂತ, ಆದರೆ ಈವಾಗ ಏನು ಮಾಡೋದು? ಎಂದು ಕೇಳಿದ್ದೇ ತಡ ಮಕ್ಕಳ ಮಾಮೂಲಿ ಬೇಡಿಕೆ "ಕಥೆ ಹೇಳಿ ಮಾಮ್ " ಅಂದ್ರು.
ಮಕ್ಕಳ ಬೇಡಿಕೆಯಂತೆ ಕಥೆ ಹೇಳಿ, ನಂತರ ಪಾಠಕ್ಕೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಸಣ್ಣ ಆಟದ ಮೂಲಕ ಪುನರಾವರ್ತನೆಯನ್ನೂ ಮಾಡಿಸಿದೆ. ಎಲ್ಲಾ ಮಕ್ಕಳು ಚುರುಕಾಗಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಮಕ್ಕಳ ಉತ್ಸಾಹ ನೋಡಿದ ಮೇಲೆ ನನ್ನ ದಣಿವು ಮಾಯವಾಯಿತು.
ಅಂತೂ ಶಾಲೆಯ ಘಂಟೆ ಬಾರಿಸಿತು. ಮಕ್ಕಳು ಸಾಲಾಗಿ ತರಗತಿಯಿಂದ ಹೊರಬರುತ್ತಿರಬೇಕಾದರೆ ಒಬ್ಬ ವಿದ್ಯಾರ್ಥಿನಿ ನನ್ನ ಕೈಯನ್ನು ಎಳೆದು ಬಲವಂತವಾಗಿ ಒಂದು ಚೀಟಿಯನ್ನು ನನ್ನ ಕೈಗಿತ್ತು, ನನ್ನತ್ತ ತಿರುಗಿಯೂ ನೋಡದೆ ಓಡಿಬಿಟ್ಟಳು!!..
ಅಬ್ಬಾ! ಈ ಮಕ್ಕಳು ಯಾಕೆ ಇಷ್ಟೊಂದು ಅವಸರ ಮಾಡ್ತಾರಪ್ಪ! ಓಡಬೇಡ ನಿಲ್ಲು, ಅಂದರೂ ಕೇಳದೇ ಹೋದ ಆ ಹುಡುಗಿಯ ಕಡೆಗೆ ನೋಡುತ್ತಲೇ ನನ್ನ ಕೈಯೊಳಗಿದ್ದ ಚೀಟಿ ಯನ್ನು ತೆರೆದು ನೋಡಿದೆ..
ಒಂದು ಪುಸ್ತಕದ ಪುಟವೊಂದರ ಮೂಲೆಯನ್ನು ಕೈಯಲ್ಲೇ ಹರಿದು ಅದರಲ್ಲಿ "Thank you ma'am , I Love you m'aam" ಎಂದು ಪೆನ್ಸಿಲ್ ನಲ್ಲಿ ಬರೆದಿತ್ತು!! ಅದನ್ನು ಓದಿದಾಗ ನನಗೆ ಸಂತೋಷದ ಜೊತೆಗೆ ಮಕ್ಕಳು ತಮ್ಮ ಓದು ಬರಹದ ನಡುವಿನ ಬಿಡುವಿಗಾಗಿ ಅದೆಷ್ಟು ಹಪಹಪಿಸುತ್ತಾರೆಂದು ತಿಳಿದು ಆಶ್ಚರ್ಯವೂ ಆಯಿತು.
ಮಾತ್ರವಲ್ಲದೆ, ನಮ್ಮ ವೃತ್ತಿ ಜೀವನದಲ್ಲಿ ಉಂಟಾಗುವ ಯಾವುದೇ ಕಿರಿಕಿರಿ, ಬೇಸರವನ್ನು ನಿವಾರಿಸುವ ಶಕ್ತಿ ಆ ಪುಟಾಣಿ ಮಕ್ಕಳ ನಿಷ್ಕಲ್ಮಶ ಮೆಚ್ಚುಗೆಯ ಮಾತುಗಳಲ್ಲಿದೆ ಎಂಬುದರ ಅರಿವಾಯಿತು.
ಶಿಕ್ಷಕರಿಗೆ ಹೊಸ ಚೈತನ್ಯವನ್ನು ನೀಡಬಲ್ಲ ಶಕ್ತಿ ಮಕ್ಕಳಿಗಿದೆ. ಹಾಗೆಯೇ ಮಕ್ಕಳಲ್ಲಿ ಚೈತನ್ಯ ಹೆಚ್ಚಿಸುವುದು, ಕಲಿಕೆ ನೀರಸವಾಗದೆ, ಓದು ಬರಹ ಏಕತಾನತೆಯಾಗದೆ.. ಲವಲವಿಕೆಯ ಪ್ರಕ್ರಿಯೆಯಾಗುವಂತೆ ಮಾಡುವುದೂ ಶಿಕ್ಷಕರ ಕೈಯಲ್ಲಿಯೇ ಇದೆ. ಕಲಿಸುವುದು ಮಾತ್ರ ಮುಖ್ಯವಲ್ಲ. ಮಕ್ಕಳು ಕಲಿಯುವಂತೆ ಮಾಡುವುದು ಕೂಡಾ ಶಿಕ್ಷಕರಾದ ನಮ್ಮ ಕರ್ತವ್ಯ ಎಂಬುದನ್ನು ಈ ಸಂದರ್ಭ ಮನವರಿಕೆ ಮಾಡಿತು.
ಸಹಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
Mob : +91 94820 45181
*****************************************