-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 206

ಸ್ಫೂರ್ತಿಯ ಮಾತುಗಳು : ಸಂಚಿಕೆ - 206

ಸ್ಫೂರ್ತಿಯ ಮಾತುಗಳು : ಸಂಚಿಕೆ - 206
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
            
ಬಹಳ ಸುಂದರವಾದ ಮಾತೊಂದಿದೆ. ಎಂತಹ ಬಲಿಷ್ಠವಾದ ಕಬ್ಬಿಣವಾದರೂ ತುಕ್ಕು ಹಿಡಿದರೆ ಅದು ನಾಶವಾಗುತ್ತದೆ. ತುಕ್ಕು ಹಿಡಿಯುವುದು ಗಮನಕ್ಕೆ ಬಂದಾಗ ಅದನ್ನು ಕಿತ್ತು ಪುನಃ ಹೊಳಪು ನೀಡಿದರೆ ಆ ಕಬ್ಬಿಣದ ಆಯುಷ್ಯ ದೀರ್ಘವಾಗುತ್ತದೆ. ತುಕ್ಕು ಹಿಡಿಯದಂತೆ ಆವರಣವೊಂದಿದ್ದರೆ ಕಬ್ಬಿಣದ ಬಾಳ್ವೆಗೆ ಗಟ್ಟಿಯಾದ ನೆಲೆಗಟ್ಟು ಒದಗುತ್ತದೆ. ನಾವು ಬೆಳಕಿಗಾಗಿ ಬಳಸುವ ವಿದ್ಯುದ್ದೀಪಕ್ಕೆ ಅಳವಡಿಸುವ ಗಾಜಿನ ಕವಚ ಬೆಳಕಿನ ಶುಭ್ರತೆಯ ರಕ್ಷಣೆ ಮತ್ತು ಬಾಳಿಕೆಗೆ ಕಾರಣವಾಗುತ್ತದೆ. ಚಿಮಿಣಿಯ ದೀಪದ ಜ್ಯೋತಿಗೆ ಬೆಳಕು ನೀಡುವ ಶಕ್ತಿ ಇರುವಂತೆ ಸರ್ವವನ್ನೂ ಧ್ವಂಸ ಮಾಡಬಲ್ಲ ಶಕ್ತಿಯೂ ಇದೆ. ಅದೇ ದೀಪವನ್ನು ಬಲವಾಗಿ ಬೀಸಿದ ಗಾಳಿಯು ನಂದಿಸಿ ನಾಶ ಮಾಡುತ್ತದೆ. ಅದಕ್ಕೊಂದು ಗಾಜಿನ ಆವರಣವಿದ್ದರೆ ಗಾಳಿಯು ಜ್ಯೋತಿಯನ್ನು ಏನೂ ಮಾಡದು. ಆವರಣವಾಗಿ ನಾವು ಬಳಸುವ ಗಾಜು ರಕ್ಷಾ ಕವಚವಾಗುತ್ತದೆ. ಹಾಗೆಯೇ ಕಬ್ಬಿಣಕ್ಕೆ ಹಾಕುವ ರಕ್ಷಾಕವಚವು ಅದನ್ನು ತುಕ್ಕಿನ ದಾಳಿಯನ್ನು ಪ್ರತಿರೋದಿಸುತ್ತದೆ.  
ಮನುಷ್ಯನು ಎಷ್ಟೇ ಬಲಾಢ್ಯನಾಗಿದ್ದರೂ ಮನಸ್ಸಿನೊಳಗೆ ಸೊಕ್ಕು ತುಂಬಿದರೆ ಅವನ ವಿನಾಶವೂ ಶತಃಸಿದ್ಧ. 

ಸೊಕ್ಕು ಎಂಬುದು ವಿಷ. ಸೊಕ್ಕೆಂಬ ವಿಷವು ಆತ್ಮಗತವಾಗಿದ್ದರೆ ಆತ್ಮವು ಸಾಯುತ್ತದೆ. ಆತ್ಮವು ನಶಿಸಿದಾಗ ತೆರವಾದ ಜಾಗವನ್ನು ದುರಾತ್ಮವು ಸೇರಿಕೊಳ್ಳುತ್ತದೆ. ದುರಾತ್ಮವು ವ್ಯಕ್ತಿತ್ವದ ವಿನಾಶಕ್ಕೆ ಕಾರಣವಾಗುತ್ತದೆ. ವ್ಯಕ್ತಿತ್ವವು ನಾಶವಾದಾಗ ಸಜ್ಜನಿಕೆಯು ದಿಕ್ಕಾಪಾಲಾಗುತ್ತದೆ.

ಅರಿತು ಕಲ್ಲಿನ ಗುಣವ ಶಿಲ್ಪ ಕೆತ್ತಲು ಬಹುದು
ಪರ ಮನಸಿನಿಂಗಿತವ ಅರಿವುದತಿ ಕಷ್ಟ|
ಯಾವ ಹುತ್ತದ ಹಾವು ಎಂತು ಬುಸುಗುಟ್ಟುವುದೋ
ಮನಸು ಗುಟ್ಟಿನ ಬುಟ್ಟಿ-ಮುದ್ದುರಾಮ

ಮನಸ್ಸಿನೊಳಗಿನ ಸೊಕ್ಕು ವ್ಯಕ್ತಿಯ ವರ್ತನೆಯಲ್ಲಿ ಕಾಣುತ್ತದೆ. ಮಾತಿನಲ್ಲಿಯೂ ಗೋಚರವಾಗುತ್ತದೆ. ಜೀವನ ಶೈಲಿಯೇ ಸೊಕ್ಕಿನ ಪ್ರಮುಖ ದರ್ಪಣ. ಮನಸ್ಸು ಗುಟ್ಟಿನ ಬುಟ್ಟಿಯಾಗಿರುವುದರಿಂದ ಅಲ್ಲಿ ಯಾವ ರೀತಿಯ, ಎಷ್ಟು ಪ್ರಮಾಣದ ಸೊಕ್ಕು ತುಂಬಿದೆಯೆಂಬುದನ್ನು ಅರ್ಥೈಸಲಾಗದು ಮತ್ತು ಅಳೆಯಲಾಗದು. ಸೊಕ್ಕು ಬಂದಾಗ ಏನಾಗುತ್ತದೆಂಬುದಕ್ಕೆ ಪುಟ್ಟ ಕತೆ ಹೀಗಿದೆ.

ಎರೆಹುಳವು ಮಳೆಗಾಲದಲ್ಲಿ ಸರಿಯಾಗಿ ತಿಂದು ದಷ್ಟ ಪುಷ್ಟವಾಗಿ ಕೊಬ್ಬುತ್ತದೆ. ದೇಹ ಕೊಬ್ಬಿದಾಗ ಅದರ ಮನಸ್ಸಿನೊಳಗೂ ಅಹಂಕಾರ ನೆಲೆಯಾಗುತ್ತದೆ. ಹೀಗೆ ಕೊಬ್ಬಿದ ಎರೆಹುಳ ಮದುವೆಯಾಗಲು ಸರ್ಪರಾಜನ ಮಗಳನ್ನು ಕೇಳುತ್ತಾನೆ. ಸರ್ಪವು ಒಲ್ಲೆನೆನ್ನುವುದಿಲ್ಲ ಬೇಸಗೆಯಲ್ಲಿ ಹೆಣ್ಣು ನೋಡುವ ಕೊಡುವ ಶಾಸ್ತ್ರ ಮಾಡೋಣ ಎಂದು ಒಪ್ಪಿಗೆ ಕೊಡುತ್ತದೆ. ಬೇಸಗೆಯಲ್ಲಿ ಎರೆ ಹುಳ ಸಹಜವಾಗಿ ಕೃಷವಾಗುತ್ತದೆ. ಕೃಷ ದೇಹಿ ಎರೆಹುಳವು ಮಗಳನ್ನು ಮದುವೆ ಮಾಡಿಕೊಡೆಂದು ಸರ್ಪರಾಜನನ್ನು ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಹಾಗೆಯೇ ಮನುಷ್ಯನೂ ಸೊಕ್ಕಿನಿಂದ ಕೊಬ್ಬುತ್ತಾನೆ. ಆದರೆ, “ಕಾಲಾಯ ತಸ್ಮೈ ನಮಃ” ಎನ್ನುವಂತೆ ಅವನ ಸೊಕ್ಕು ಇಳಿಯುವ ಸಂಕಟದ ದಿನಗಳೂ ಎದುರಾಗುತ್ತವೆ. ಸೊಕ್ಕು ಇಳಿದ ಮೇಲೆ ಅವನಲ್ಲಿ ದೈನ್ಯತೆ ಸಹಜವಾಗಿ ಮೂಡಲಾರಂಭಿಸುತ್ತದೆ. ಸೊಕ್ಕಿದ್ದಾಗ ಆತ ತೋರಿದ ದರ್ಪ ಈಗ ಮಾಯವಾಗಿದ್ದರೂ ಜನರು ಅವನನ್ನು ದೂರವಿಡುವ ಸಂದರ್ಭಗಳೇ ಅಧಿಕ. ಅವನು ಒಂಟಿಯಾಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಆದುದರಿಂದ ರೂಪ, ಶಕ್ತಿ, ಹಣ, ಅಧಿಕಾರ ಇದ್ದಾಗ ಸೊಕ್ಕಿನಿಂದಿರದೆ ಜನ ಸಾಮಾನ್ಯರ ಹತ್ತಿರದ ಬಂಧುವಾಗಿ ಬಾಳುವುದು ಶ್ರೇಷ್ಠತೆಯಾಗುತ್ತದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************



Ads on article

Advertise in articles 1

advertising articles 2

Advertise under the article