-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 208

ಸ್ಫೂರ್ತಿಯ ಮಾತುಗಳು : ಸಂಚಿಕೆ - 208

ಸ್ಫೂರ್ತಿಯ ಮಾತುಗಳು : ಸಂಚಿಕೆ - 208
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    

             
ಪರಾಭವ ಎಂದರೆ ಸೋಲು, ಅಪಜಯ ಎಂದೂ ಅರ್ಥವಿದೆ. ಚಾಂದ್ರಮಾನ ಸಂಪ್ರದಾಯದ ಅರುವತ್ತು ವರ್ಷಗಳಲ್ಲಿ ನಲುವತ್ತನೇ ಸಂವತ್ಸರಕ್ಕೂ ಪರಾಭವ ಎಂಬ ಹೆಸರಿದೆ. ಮಾರ್ಚ್‌ ಹತ್ತೊಂಭತ್ತರಿಂದ ಈ ಸಂವತ್ಸರವು ಪ್ರಚಲಿತದಲ್ಲಿದೆ. ಮುಂದಿನ ಯುಗಾದಿಗೆ ಮತ್ತೊಂದು ಸಂವತ್ಸರ ಕಾಲಿಡುತ್ತದೆ. “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ“ ಎಂದು ಶ್ರೇಷ್ಠ ಕವಿ ದ.ರಾ ಬೇಂದ್ರೆ ಹೇಳಿದ್ದಾರಲ್ಲ. ಯುಗವೆಂದರೆ ಒಂದು ಕಾಲಮಾನ.

ಪರಾಭವ ಸಂವತ್ಸರದ ಗುಣ ಲಕ್ಷಣಗಳನ್ನು ವ್ಯಾಖ್ಯಾನಿಸುತ್ತಾ ಜ್ಯೋತಿಷಿಗಳು ಒಳಿತು ಕೆಡುಕುಗಳ ಮಿಶ್ರ ಫಲವನ್ನು ಹೇಳಿದ್ದಾರೆ. ಆದರೆ ಕಾಲಮಾನದಲ್ಲಿ ಕೆಡುಕುಗಳಿಲ್ಲ. ಮಾನವನ ಅಥರ್ವಣ ಗುಣ ಸ್ವ-ಭಾವಗಳು ಕೆಡುಕಿದ್ದಾಗ ಒಳಿತುಗಳು ಮರೆಯಾಗುತ್ತವೆ. “ಪರಾಭವ” ಜನಜೀವನಕ್ಕೆ ಪ್ರಬಲ ಅಥವಾ ಗುಣಾತ್ಮಕ ಕಾಲವಾಗಲು ಏನೇನು ಆಗಬೇಕೆಂಬ ತನ್ನ ಆಶಯಗಳನ್ನು ಕವಿಯೊಬ್ಬರು ಬಹಳ ಸೊಗಸಾಗಿ ಹೇಳಿದ್ದಾರೆ. “ಪರಾಭವ” ಸಂವತ್ಸರ ಮಾನವನ ಬದುಕಿಗೆ ವರದಾಯಕವಾಗುವಂತೆ ಮಹತ್‌ದಾಯಕವಾಗುವಂತೆ ಆ ಕವಿ ಪ್ರಾರ್ಥಿಸಿದ್ದಾರೆ. ಯಾವುದೇ ಕಾಲವನ್ನು ವರದಾಯಕ ಗೊಳಿಸುವ ಬುದ್ಧಿಮತ್ತೆ ಮತ್ತು ಚಾಣಾಕ್ಷತನಗಳನ್ನು ಮಾನವನಿಗೆ ಭಗವಂತ ನೀಡಿದ್ದಾನೆ. ಕಾಲ ಕೆಟ್ಟದ್ದೆಂದು ಕಾಲವನ್ನು ದೂರುತ್ತಾ ತಾನು ತಪ್ಪು ಮಾಡುವುದು ಮಾನವನ ಹೇಯ ಸ್ವಭಾವ.

ಪರಾಭವ ಸಂವತ್ಸರ ಅರ್ಥಪೂರ್ಣವಾಗಲು ಅಸತ್ಯದ ಪರಾಭವವಾಗಬೇಕು, “ಸತ್ಯಮೇವ ಜಯತೇ” ಎಂಬ ಮಾತಿಗೆ ತೂಕ ಬರಬೇಕು. ದಿನವು ಆರಂಭಗೊಂಡು ಮುಗಿಯುವ ತನಕ ಸುಳ್ಳಿನ ಕಂತೆ ಹಿಡಿದು ಬದುಕ ಹೊರಟ ಮಂದೆಯ ಮುಂದೆ ಅಸತ್ಯವು ಸೋಲುವುದು ಖಂಡಿತ. ಸತ್ಯವನ್ನು ಸೋಲಿಸಿ ಮೆರಯುವ ಮಿಥ್ಯದ ಅಧಿಪತಿಗಳನ್ನು ಭಗವಂತ ಸೋಲಿಸಿದರೆ ಜನಜೀವನ ಹಸನಾಗಿ ಬೆಳಗುವುದು.

ಅಧರ್ಮವು ಎಲ್ಲ ರಂಗಗಳಲ್ಲೂ ಕುಣಿದು ಮಾನವನೂ ಸೇರಿದಂತಿರುವ ಪರಿಸರವನ್ನು ದಣಿಸುತ್ತಿದೆ. ಅಧರ್ಮಿಗಳ ಪರಾಭವಾಗಬೇಕು. ಧರ್ಮದ ವಿಜಯಪತಾಕೆ ಹಾರಾಡಬೇಕು. ಅದೇ ರೀತಿಯಲ್ಲಿ ನ್ಯಾಯಕ್ಕೆ ಜಯವಾಗಿ ಅನ್ಯಾಯಿಗಳು ಧರಾಶಾಹಿಗಳಾಗಬೇಕು. ಶಾಂತಿ ಮುಕುಟ ಮಿನುಗಿ ಅಶಾಂತಿಯು ಕರಗಬೇಕು. ಕರುಣಾವಂತರಿಗೆ ಜಯವಾಗಿ ದೌರ್ಜನ್ಯ ಪ್ರಿಯರಿಗೆ ಪರಾಜಯವಾಗಬೇಕು. ಕುಕೃತ್ಯಗಳು ಸೋತು ಸುಕೃತ್ಯಗಳೇ ಮೆರೆಯಬೇಕು. ನಮಗೆ ಏಕಾಗ್ರತೆಯ ಕೊರತೆಯಿದೆ. ಏಕಾಗ್ರತೆಗೆ ದೇವರ ಧ್ಯಾನ ಜಪ ತಪಗಳು ಅಗತ್ಯ. ಮನಸ್ಸು ಕೇಂದ್ರೀಕರಣವಾಗಲು ನಮ್ಮ ಪುರಾತನ ಋಷಿ ಮುನಿಗಳು ಸಾಧುಗಳು ಭಕ್ತಿಯಿಂದ ಭಗವಂತನನ್ನು ತಪಸ್ಸು ಮಾಡುತ್ತಿದ್ದರು. ಇಂದಿನ ನಾಗರಿಕ ಪ್ರಪಂಚದಲ್ಲಿ ಅಂತಹ ಬುದ್ಧಿ ನಮಗಿಲ್ಲ. ಅದರಿಂದಾಗಿ ಯಾವುದೂ ಸಿದ್ಧಿಯಾಗುತ್ತಿಲ್ಲ. ಆದರೆ ಮನಸನ್ನು ನಿಯಂತ್ರಿಸದೇ ಇದ್ದರೆ ನಾನಾ ಅನಾಹುತಗಳು ನಿಶ್ಚಿತ. ಷಡ್ವೈರಿಗಳನ್ನು ಗೆಲ್ಲಲು ಮನಸ್ಸೇ “ಮನಸ್ಸು ಮಾಡಬೇಕಲ್ಲವೇ?”. ಆದುದರಿಂದ ಪರಾಭವ ಸಂವತ್ಸರದಲ್ಲಿ ಚಂಚಲತೆಗೆ ಪರಾಭವವಾಗಿ ನಿಶ್ಚಿತತೆಗೆ ಗೆಲುವಾಗಲಿ.

ಪ್ರಪಂಚವೇ ವಿದ್ಯೆಯಿಂದ ವಿದ್ಯಾವಂತರಿಂದ ತುಂಬಿದೆ. ಆದರೆ ಈ ವಿದ್ಯೆಯು ಲೋಕ ಕಲ್ಯಾಣಕರವಾಗಿದೆಯೋ ಎಂಬ ಸಂದೇಹವೇಳುವುದು ಸಹಜ. ಇಂದಿನ ಗೊಂದಲಗಳು, ಸಮಸ್ಯೆಗಳು, ಭ್ರಷ್ಟ ಚಿಂತನೆಗಳು, ಜಗಳಗಳು, ಸ್ಫೋಟಗಳು, ದಾಳಿಗಳು, ಕೊಲೆ ಸುಲಿಗೆಗಳು, ಯುದ್ಧಗಳು ಇವೆಲ್ಲವನ್ನೂ ಅವಲೋಕಿಸಿದಾಗ ವಿದ್ಯಾವಂತರಲ್ಲೂ ಅವಿದ್ಯೆ ಹಾಗೆಯೇ ಉಳಿದಿದೆ. ವಿದ್ಯಾವಂತ ಬುದ್ಧಿವಂತರಿದ್ದಾರೆ. ಆದರೆ ಸುಮತಿಗಳು, ಸುಸಂಸ್ಕೃತರು ಕಾಣೆಯಾಗಿದ್ದಾರೆ. ಇದ್ದರೂ ಅವರು ಬಲಹೀನರಾಗಿದ್ದಾರೆ. ಸಂಸ್ಕೃತಿ ಈ ಸಂವತ್ಸರದಲ್ಲಿ ಪರಾಭವ ಹೊಂದದಿರಲಿ. 
ಅದೇ ರೀತಿ ಮಕ್ಕಳಲ್ಲಿರುವ ಕೀಳರಿಮೆಗಳಿಗೆ ಪರಾಭವವಾಗಲಿ. ಅವರನ್ನು ಸೋಲಿಸುವ ಎಲ್ಲ ದುಷ್ಟ ಶಕ್ತಿಗಳು ನಶಿಸಲಿ. ಮಕ್ಕಳನ್ನು ಈ ಸಮಾಜದ ಬಲಿಷ್ಟ ಶಕ್ತಿಯನ್ನಾಗಿ ಪರಾಭವ ಸಂವತ್ಸರವು ಮೆರೆಸಲಿ. ನವ ಸಂವತ್ಸರವು ಕೆಡುಕುಗಳನ್ನು ಪರಾಭವಗೊಳಿಸಿ ಒಳಿತುಗಳ ನಾನಾ ಒಸಗೆಗಳನ್ನು ನೀಡಲಿ ಎಂಬುದೇ ಭಗವಂತನಲ್ಲಿ ನಮ್ಮ ನಿತ್ಯದ ಪ್ರಾರ್ಥನೆಯಾಗಿರಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************


Ads on article

Advertise in articles 1

advertising articles 2

Advertise under the article