ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 121
Wednesday, March 25, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 121
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಪರೀಕ್ಷೆಗಳ ನಡುವೆ ಎಲ್ಲರೂ ಕಳೆದು ಹೋಗಿದ್ದೀರಿ ಎಂದು ನನಗೆ ಗೊತ್ತು. ಆದ್ದರಿಂದ ತುಂಬಾ ಗಂಭೀರ ವಿಷಯಗಳನ್ನು ನಾನಿವತ್ತು ಹೇಳುವುದಿಲ್ಲ. ನೀವು ಪರೀಕ್ಷೆಯನ್ನು ಬರೆದುದಾಗಿದೆ ಫಲಿತಾಂಶ ಹೇಗೋ ಏನೋ ಎಂದು ದುಸ್ವಪ್ನ ಕಾಣಬೇಡಿ. ಅದರ ಬದಲಾಗಿ ನಿಮ್ಮ ಮುಂದಿನ ದಿನಗಳ ಬಗ್ಗೆ ಹಗಲುಗನಸುಗಳನ್ನು ನೋಡಿ. ರಜೆಯನ್ನು ಯೋಜಿಸಿ. ರಜೆಯಲ್ಲಿ ಅಜ್ಜಿಯ ಮನೆಗೆ ಹೋಗುವುದು ನಿಮ್ಮ ಯೋಜನೆಯ ಒಂದು ಭಾಗವಾಗಿರಲಿ.
ಅಜ್ಜಿಯ ಮನೆಯ ವಾಸ ನಿಮ್ಮ ಜೀವನದ ಏಕತಾನತೆಯನ್ನು ನಿವಾರಿಸುವ ಒಂದು ದಿವ್ಯೌಷಧಿ ಎಂಬುದು ನಿಮಗೆ ನೆನಪಿರಲಿ. ಅಜ್ಜಿ ಮಾಡುವ ತಿಂಡಿಗಳು, ಅದರ ಹಿಂದಿರುವ ಪ್ರೀತಿ, ಒತ್ತಡ ಮುಕ್ತ ವಾತಾವರಣ ಗ್ರಾಮೀಣ ಬದುಕು, ಅಲ್ಲಿನ ಆಟಗಳು ನಿಮ್ಮ ಬದುಕಿಗೆ ಹೊಸ ಚೈತನ್ಯವನ್ನು ಮೂಡಿಸುತ್ತದೆ. ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕಲ್ಪನಾ ಶಕ್ತಿ ಇಮ್ಮಡಿಯಾಗುತ್ತದೆ.
ಹೀಗೆ ಅಜ್ಜಿಯ ಮನೆಗೆ ಅಥವಾ ಪಿಕ್ನಿಕ್ ನಮಗೆ ಹೇಗೆ ಉತ್ಸಾಹ ತುಂಬುತ್ತದೆ ಅಂತ ಕೇಳುತ್ತೀರಾ? ಪ್ರತಿ ಬಾರಿ ಜೀವಜಾಲದ ಬದಲಾವಣೆ ರಾಸಾಯನಿಕ ಎನ್ನುತ್ತೀರಲ್ಲ ಪ್ರವಾಸಕ್ಕೆ ಹೋಗಿಬಂದ ಮೇಲೆ ನಮ್ಮಲ್ಲಿ ತುಂಬುವ ಹುಮ್ಮಸ್ಸು ಕೂಡಾ ರಾಸಾಯನಿಕವೇ ಎಂದು ಕೇಳುತ್ತೀರಾ? ಅದೂ ಸರಿಯೇ ಇದೂ ರಾಸಾಯನಿಕವೇ. ಇಂತಹ ಸಂದರ್ಭಗಳಲ್ಲಿ ದೇಹದಲ್ಲಿ ಒಂದು ರಾಸಾಯನಿಕ ಸ್ವಲ್ಪ ಜಾಸ್ತಿ ಬಿಡುಗಡೆಯಾಗುತ್ತದೆ. ಈ ರಾಸಾಯನಿಕದ ಹೆಸರು ಸೆರಟೋನಿನ್. ಇದೊಂದು ನರ ಚೋದಕ (neurotransmitter) ಮತ್ತು ಒಂದು ಹಾರ್ಮೋನ್. ಇದನ್ನು ರಾಸಾಯನಿಕವಾಗಿ 5 - HT ಅಂದರೆ 5 - HydroxyTriptophane. ಇದನ್ನು ಸಂತಸದ ಹಾರ್ಮೋನ್ (happiness harmone) ಎಂದು ಕರೆಯುತ್ತೇವೆ. ಈ ಸೆರಟೋನಿನ್ ಮೂಲತಃ ನಿಮ್ಮ ಭಾವನೆಗಳನ್ನು (mood), ಹಸಿವು (appetite), ಜೀರ್ಣಕ್ರಿಯೆ (digestion), ಮತ್ತು ನಿದ್ದೆಯನ್ನು (sleep) ಪ್ರಭಾವಿಸುತ್ತದೆ. ಇಂತಹ ರಾಸಾಯನಿಕ ಹೆಚ್ಚುವರಿಯಾಗಿ ಸ್ರವಿಸಿದರೆ ನಿಮ್ಮ ಸಂತೋಷ ಮತ್ತಷ್ಟು ಹೆಚ್ಚುತ್ತದೆ. ಅಜ್ಜಿಮನೆಗೆ ಹೋದಾಗ ನಿಮ್ಮಜ್ಜಿ ಮೊಮ್ಮಕ್ಕಳು ಬರುತ್ತಾರೆಂದು ಗೇರು ಬೀಜ ಸುಟ್ಟು ರುಚಿಯಾಗಿ ಸಿದ್ದಪಡಿಸಿ ನೆಲಗಡಲೆಯ ಉಂಡೆ, ಚಕ್ಕುಲಿ ಹೀಗೆ ಒಣ ಹಣ್ಣುಗಳು ಮತ್ತು ಬೀಜಗಳ ದಾಸ್ತಾನನ್ನು ನಿಮಗಾಗಿ ಸಂಗ್ರಹಿಸಿಟ್ಟಿರುತ್ತಾರೆ. ಇವುಗಳು ನಿಮಗೆ ತಿನ್ನಲು ಯಥೇಚ್ಛವಾಗಿ ಲಭ್ಯ.
ಈ ಸೆರಟೋನಿನ್ ಇದೆಯಲ್ಲ ಇದು ತಯಾರಾಗಲು ಅವಶ್ಯಕ ಅಮೈನೋ ಆಮ್ಲವಾದ (essential amino acid) ಟ್ರಿಪ್ಟೋಫೇನ್ (tryptophane) ಬೇಕು. ಅಂದರೆ ಇದನ್ನು ನಮ್ಮ ದೇಹ ತಯಾರಿಸಲಾರದು. ಆಹಾರದ ಮೂಲಕ ನಾವೇ ಒದಗಿಸಬೇಕು. ಇದು ನಾವು ಬಳಸುವ ಮೊಟ್ಟೆ, ಹಾಲು, ಒಣ ಹಣ್ಣುಗಳು ಮತ್ತು ಬೀಜಗಳು (dry fruits and nuts), ಮಾಂಸ, ಬೆಣ್ಣೆಗಳಲ್ಲಿ ದೊರೆಯುತ್ತದೆ. ಪಿಕ್ನಿಕ್ ಗಳಿಗೆ, ಅಜ್ಜಿ ಮನೆಗೆ ಹೋದಾಗ ಇವುಗಳು ನಿಮ್ಮ ಹೊಟ್ಟೆ ಸೇರಲು ಕಾಯುತ್ತಿರುತ್ತವೆ ಅಲ್ಲವೇ. ಆದ್ದರಿಂದ ಮಕ್ಕಳ ರಜೆಯು ಅಜ್ಜಿಯ ಮನೆಯ ಪ್ರವಾಸವಿಲ್ಲದೇ ಪೂರ್ಣವಾಗುವುದಿಲ್ಲ. ಏಕೆಂದರೆ ಅಜ್ಜಿ ಮನೆಯ ಯಾತ್ರೆ ನಮಗೆ ಹೊಸ ಹುಮ್ಮಸ್ಸು ತುಂಬುತ್ತದೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************