ಜೀವನ ಸಂಭ್ರಮ : ಸಂಚಿಕೆ - 234
Monday, March 23, 2026
Edit
ಜೀವನ ಸಂಭ್ರಮ : ಸಂಚಿಕೆ - 234
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಈ ಘಟನೆ ಓದಿ. ನಾನು ದಿವ್ಯಾನುಭವ ಪುಸ್ತಕ ಓದುತ್ತಿದ್ದಾಗ ಅಲ್ಲಿದ್ದ ವಿವರ ಇದು. ಮಹಾರಾಷ್ಟ್ರದಲ್ಲಿ ನಡೆದ ಘಟನೆ. ಆ ಒಂದು ಘಟನೆ ಆತನನ್ನು ದೊಡ್ಡ ಸಂತನನ್ನಾಗಿ ಮಾಡಿತು. ಸಂತನಾದ ವ್ಯಕ್ತಿ ಮೊದಲು ಕೊಲೆ, ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದನು. ಈ ರೀತಿಯ ಕೆಲಸಗಳಿಂದ ಆತನ ಜೀವನ ಸಾಗಿತ್ತು. ಸಾಕಷ್ಟು ಸಂಪತ್ತು ಗಳಿಸಿದ್ದನು. ಮಾರು ವೇಷದಲ್ಲಿ ಊರು ಊರು ಅಲೆಯುತ್ತಿದ್ದನು. ಒಂದು ದಿನ ಒಂದು ಹಳ್ಳಿಗೆ ಬಂದು ಊರ ಹೊರಗಿನ ಗುಡಿಯ ಮುಂದೆ ವಿಶ್ರಾಂತಿ ಪಡೆಯುತ್ತಿದ್ದನು. ಓರ್ವ ತಾಯಿ ತನ್ನ ಮಗುವನ್ನು ಎತ್ತಿಕೊಂಡು ಆ ದೇವಸ್ಥಾನಕ್ಕೆ ಬಂದಳು. ದೇವರ ದೀಪಕ್ಕೆ ಎಣ್ಣೆ ಎರೆದು, ಬತ್ತಿ ಹಚ್ಚಿ, ಕಣ್ಣಮುಚ್ಚಿ ಕೈ ಮುಗಿಯುತ್ತಿದ್ದಳು. ಅಷ್ಟರಲ್ಲಿ ಆ ತಾಯಿಯ ಕಂಕಳಿನಲ್ಲಿ ಇದ್ದ ಮಗು ಅಪ್ಪ, ಅಪ್ಪ, ಅಪ್ಪ ಎಂದು ಕರುಳು ಕಿತ್ತು ಬರುವಂತೆ ಅಳುತ್ತಿತ್ತು. ಆ ಎಳೆಯ ಮಗುವಿನ ಅಳುವನ್ನು ಕೇಳಿ, ತಾಯಿ ಕಣ್ಣಲ್ಲಿ ನೀರು ದಾರಿ ಇಟ್ಟಿತು. ಬಿಕ್ಕಿ ಬಿಕ್ಕಿ ಅಳುತ್ತಾ ತಾಯಿ ದೇವರಿಗೆ ಪ್ರಾರ್ಥಿಸಿದಳು. ದೇವರೇ, ತಿಂಗಳ ಹಿಂದೆ ಕೊಲೆಗಡುಕನೊಬ್ಬ ಈ ಮಗುವಿನ ತಂದೆಯನ್ನು ಕೊಂದು ಸಂಪತ್ತನ್ನೆಲ್ಲ ದೋಚಿಕೊಂಡು ಹೋದ. ಈಗ ಈ ಮಗುವಿಗೆ ಹೇಗೆ ಹೇಳಲಿ?. ಅದರ ತಂದೆಯನ್ನು ನಾನು ಹೇಗೆ? ಎಲ್ಲಿಂದ? ತಂದು ತೋರಿಸಲಿ. ತಾಯಿಯ ಈ ನುಡಿಯನ್ನು ಕೇಳಿದ ಕಲ್ಲು ದೇವರ ಕಣ್ಣಿನಿಂದಲೂ ಒಂದೆರಡು ಹನಿ ನೀರು ಉದುರಿದಂತೆ ಆಯಿತು.
ತಾಯಿ ಮಗುವಿನ ಅಳು ಮಂದಿರದ ತುಂಬಾ ಹೊರಸೂಸಿ ಹೊರಗಿದ್ದ ವ್ಯಕ್ತಿ ಎದಗೆ ಅಪ್ಪಳಿಸಿತು. ಆಗ ಆ ವ್ಯಕ್ತಿಯ ಕಣ್ಣು ತೇವಗೊಂಡಿತ್ತು. ತಾಯಿ ಮಗು ಹೊರ ಬರುತ್ತಲೆ ಆ ವ್ಯಕ್ತಿ ಕೇಳಿದ. ತಾಯಿ ನಿನ್ನ ದುಃಖದ ಕಾರಣವೇನಮ್ಮ?. ನಡೆದ ಘಟನೆಯನ್ನು ಹೇಳುತ್ತಾ ಗೋಳಾಡಿದಳು. ಆಗ ಈ ಮಗುವಿನ ತಂದೆಯನ್ನು ಕೊಂದವನು ಯಾರು ಎಂದು ತಿಳಿಯಲು ಆ ವ್ಯಕ್ತಿಗೆ ತಡವಾಗಲಿಲ್ಲ. ಆ ವ್ಯಕ್ತಿಯೇ ಕೊಂದಿದ್ದು. ತಕ್ಷಣ ತನ್ನಲ್ಲಿದ್ದ ಸಂಪತ್ತನ್ನು ಆ ತಾಯಿಗೆ ಕೊಟ್ಟು ಇದರಿಂದ ನಿನ್ನ ಮಗುವಿನ ರಕ್ಷಣೆ ಮಾಡಮ್ಮ ಎಂದು ಹೇಳಿ ಕಳುಹಿಸಿದನು.
ಬಳಿಕ ಮಂದಿರದ ಒಳಗೆ ಹೋಗಿ ದೇವರಿಗೆ ಕೈ ಮುಗಿದು ಹೇಳಿದನು. ತಂದೆಯೇ ನೀನು ನನ್ನನ್ನು ಕ್ಷಮಿಸು. ನನ್ನ ಪಾಪಗಳನ್ನೆಲ್ಲ ತೊಳೆದು ಬಿಡು. ಇಂದಿನಿಂದ ನಾನು ನಿನ್ನ ಚರಣ ಸೇವೆಯಲ್ಲಿ ಉಳಿದುಬಿಡುತ್ತೇನೆ ಎಂದು ಬೇಡಿಕೊಂಡನು. ಆ ವ್ಯಕ್ತಿಯ ಮಾತು ಕೇಳಿ ಆ ಕಲ್ಲು ದೇವರ ಕಣ್ಣಲ್ಲಿ ಆನಂದ ಭಾಷ್ಪ ಉದರಿತು. ಆತನೇ ಮುಂದೆ ದೊಡ್ಡ ಸಂತನಾದನು. ಅಖಂಡ ಮಹಾರಾಷ್ಟ್ರ ಇಂದು ಆತನನ್ನು ದೇವರೆಂದು ಗೌರವಿಸುತ್ತದೆ. ಈ ಲೇಖನ ಓದಿದ ನಿಮಗೆ ಹೇಳಬೇಕೆಂದೆನಿಸಿತು. ಏಕೆಂದರೆ ಮನಸು ತೆರೆದಿದ್ದರೆ ನಮ್ಮನ್ನು ಬದಲಾಯಿಸುವ ಘಟನೆಗಳು ಪ್ರತಿನಿತ್ಯ ನಡೆಯುತ್ತಿರುತ್ತದೆ. ಸ್ವಚ್ಛ ಮನಸ್ಸಿನಿಂದ ಮಧುರ ಭಾವದಿಂದ ಈ ಘಟನೆಗಳನ್ನು ನೋಡಿದರೆ ಕೇಳಿದರೆ ನಾವು ದೊಡ್ಡವರಾಗಬಹುದು ಅಲ್ಲವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************