ಸ್ಫೂರ್ತಿಯ ಮಾತುಗಳು : ಸಂಚಿಕೆ - 207
Wednesday, March 18, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 207
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಕಾಯಕವೇ ಕೈಲಾಸ ಎಂದವರು ಬಸವಣ್ಣ. ಅದೇ ಕಾಯಕದಲ್ಲಿ ಮೇಲು ಕೀಳೆಂದು ನಾವು ಗುರುತಿಸುವುದೆಷ್ಟು ಸರಿಯೆಂಬ ಎಂಬ ಸಣ್ಣ ಚಿಂತನವಿದು.
ಕಟ್ಟಡ ಕಟ್ಟುವ ಮೇಸ್ತ್ರಿ, ಮರದ ಬಾಗಿಲು ಕಿಟಕಿ ಜೋಡಿಸುವ ಶಿಲ್ಪಿ, ಬೆಳಕಿನ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ಇಲೆಕ್ಟ್ರಿಷಿಯನ್, ನಲ್ಲಿ ವ್ಯವಸ್ಥೆಯಲ್ಲಿ ದುಡಿಯುವ ಪ್ಲಂಬರ್ ಹಾಗೂ ಕಟ್ಟಡಕ್ಕೆ ಬಣ್ಣ ಬಳಿಯುವ ವರ್ಣಕಾರರಲ್ಲಿ ಯಾರು ಮೇಲೆ? ಇವರ ಜೊತೆ ಕೂಲಿಯಾಳಾಗಿ ಶ್ರಮಿಸುವ ಕಾರ್ಮಿಕನ ಸ್ಥಾನ ಮಾನವೇನು? “ನಾವೇ ಮೊದಲು” ಎಂದು ವಾದಿಸುವವರನ್ನು ನಿರಂತರ ನೋಡುತ್ತಿದ್ದೇವಲ್ಲವೆ..?
ಹೌದಲ್ಲ! ಯಾರು ಮೇಲು ಎಂಬ ಸಂಶಯವೆದ್ದರೆ ಆಶ್ಚರ್ಯವಿಲ್ಲ. ಆದರೆ ಇಲ್ಲಿರುವುದು ಮೇಲು ಕೀಳಿನ ಪ್ರಶ್ನೆಯಲ್ಲ. ಕಟ್ಟಡದ ಪೂರ್ಣತೆಯ ಪ್ರಶ್ನೆ. ಕೂಲಿಯಾಳು ಗುದ್ದಲಿ ಪೂಜೆಯ ಕಲ್ಲಿರಿಸುವ ಗುಂಡಿ ಮಾಡದೇ ಇದ್ದರೆ ಉಳಿದ ಕೆಲಸಗಳು ಆರಂಭವೇ ಆಗದು. ಪಂಚಾಂಗಕ್ಕೆ ಗುಂಡಿ ಮಾಡಲು ಶ್ರಮಿಕ ಕೂಲಿಯಾಳು ಬೇಕು ತಾನೇ? ಕೂಲಿಯಾಳಿನ ಕೆಲಸದ ನಂತರದಲ್ಲಿ ಉಳಿದವರು ಮುಂದುವರಿಯದೇ ಇದ್ದರೆ ಕಟ್ಟಡವು ಪೂರ್ಣವಾಗದು. ಕಟ್ಟಡದ ಪೂರ್ಣತೆಯಲ್ಲಿ ಎಲ್ಲರ ಶ್ರಮ, ಯೋಚನೆಯ ಶಕ್ತಿ ಜೋಡಣೆಯಾಗಲೇ ಬೇಕು. ಎಲ್ಲರ ಅನುಭವಗಳ ಸಂಯೋಜನೆಯೇ ಕಟ್ಟಡ ಹೊರತು ಮೇಲಾಟದಿಂದ ಸುಭದ್ರ ಕಟ್ಟಡ ವಾಗದು.
ಮದುವೆಯ ಕಾರ್ಯವು ಚಪ್ಪರದ ಕಂಬಕ್ಕೆ ಹೊಂಡ ತೆಗೆಯುವವನಿಂದ ಆರಂಭಿಸಿ ತಾಳಿ ಕಟ್ಟಿಸುವ ಪುರೋಹಿತನ ವೆರೆಗಿನ ಎಲ್ಲರ ಸಹಯೋಗದ ಕಾರ್ಯ. ಯಾರೂ, “ನಾನು ಮೇಲು” ಎಂದು ವಾದಿಸಿದರೆ ಮೂಢ ತನವಾಗುತ್ತದೆ. ಶಾಲೆಯಲ್ಲಿ ಘಂಟೆ ಬಾರಿಸುವ ʼಪಿಯೋನ್ʼ ನಿಂದ ತೊಡಗಿ ಮುಖ್ಯೋಪಾಧ್ಯಾಯರ ವರೆಗಿನ ಎಲ್ಲರ ಒಗ್ಗಟ್ಟಿನ ಪರಿಶ್ರಮದ ಫಲವೇ ಉತ್ತಮ ಶಿಕ್ಷಣ. ಮೇಲು ಕೀಳಿನ ಕಲಹ ಆರಂಭವಾದರೆ ವಿದ್ಯಾಲಯಗಳಿಂದ ಮಕ್ಕಳು ಉತ್ತಮ ಶಿಕ್ಷಣ ನೀರೀಕ್ಷಿಸಲು ಸಾಧ್ಯವೇ..?
ಕಾರ್ಖಾನೆಗಳಿಂದ ಉತ್ಪನ್ನಗಳು ಹೊರ ಬರುತ್ತವೆ. ಉತ್ಪನ್ನಗಳ ಪ್ಯಾಕೆಟುಗಳನ್ನು ಲಾರಿ ಏರಿಸುವ ತನಕ ದುಡಿಯುವ ವಿವಿಧ ಶ್ರಮಿಕರ ಪರಿಶ್ರಮವಿರುವುದರಿಂದ ಉತ್ಪಾದನೆಗಳಾಗುತ್ತವೆ. ಕಚ್ಚಾ ವಸ್ತುಗಳ ಪೂರೈಕೆ ದಾರರು, ಈ ಪೂರೈಕೆದಾರರ ಸಹಕಾರಿಗಳು, ಬಳಕೆದಾರರು ಮುಂತಾದವರೆಲ್ಲರೂ ಆಯಾ ಉತ್ಪನ್ನಗಳ ಕಾಯಕದ ಸಹಭಾಗಿಗಳು. ಇವರನ್ನು ಹೆಚ್ಚು ಕಡಿಮೆಯೆಂಬ ಪ್ರಬೇಧಮಾಡಿ ತೂಗುವುದು ಸಮುಚಿತವಲ್ಲ. ಮಾತೊಂದಿದೆ... ಐವತ್ತು ಸಾವಿರ ರೂಪಾಯಿಗಳ ಕಂತೆಯಲ್ಲಿ ತೊಂಭತ್ತ ಒಂಭತ್ತು 50ರ ನೋಟು, ಉಳಿದಂತೆ ವಿವಿಧ ನೋಟುಗಳು ಒಟ್ಟು ಸೇರಿ 500ರೂಗಳಿಗೆ ಸಮನಾದಾಗ ಅದು ರೂ 50000ದ ಮೌಲ್ಯಕ್ಕೆ ಸಮಾನವಾಗುತ್ತದೆ. ಪುಡಿಗಾಸೆಂದು ಸಣ್ಣ ಸಣ್ಣ ನೋಟುಗಳನ್ನು ನಿರ್ಲಕ್ಷಿಸಿದರೆ 49500 ರೂ ಮಾತ್ರವೇ ಆಗುತ್ತದೆ ಹೊರತು 50000 ರೂಗಳಾಗದು. ಉತ್ಪನ್ನ ಹಲವರ ಪ್ರಯತ್ನದ ಫಲವಾಗಿ ಹೊರಬರುವುದರಿಂದ ಆ ಪ್ರಾಡಕ್ಟ್ ಮುಖ್ಯವೇ ಹೊರತು ಕಾಯಕ ಮಾಡಿದವರ ಶ್ರೇಣಿ ಅಪ್ರಸ್ತುತವಾಗುತ್ತದೆ.
ಆದರೆ ಕಾಯಕದ ಗುಣಾಂಶವು ಬುದ್ಧಿಮತ್ತೆ, ಪರಿಶ್ರಮ ಮತ್ತು ಮನೋಭಾವಗಳನ್ನು ಆಧರಿಸುತ್ತದೆ. ಬದ್ಧಿಮತ್ತೆಯ ಸರಿಯಾದ ಬಳಕೆಯಾಗಬೇಕು ಮತ್ತು ಶ್ರದ್ಧಾ ಮನೋಭಾವದಿಂದ ಕಾಯಕದಲ್ಲಿ ತೊಡಗಲೇ ಬೇಕು. ಇವುಗಳಿಗೆ ಸಂವಾದಿಯಾಗಿ ಪರಿಶ್ರಮವೂ ಇರಬೇಕು. ಸೋಮಾರಿ ಯಾವುದೇ ಕಾಯಕ್ಕೆ ಪೂರಕನಾಗಲಾರ. ಬೌಧ್ಧಿಕವಾಗಿ ಚುರುಕುತನವಿರದವರ ಕಾಯಕ ಜಡವೇ ಆಗಿರುತ್ತದೆ. ಪರಿಶ್ರಮ ಪಡದೇ ಇರುವವರಿಂದ ಸಕಾಲದಲ್ಲಿ ಯಾವುದನ್ನೂ ನಿರೀಕ್ಷಿಸುವಂತಿಲ್ಲ. ಹಾಗಾಗಿ ತನ್ನ ಕರ್ತವ್ಯ ಬದ್ಧತೆಯ ಅರಿವಿರುವ ಕಾಯಕ ಯೋಗಿಯ ಕಾಯಕವೇ ಸರ್ವ ಶ್ರೇಷ್ಠವೆನಿಸುತ್ತದೆ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************