-->
ಜೀವನ ಸಂಭ್ರಮ : ಸಂಚಿಕೆ - 233 Jeevana sambhrama jnanesh m p

ಜೀವನ ಸಂಭ್ರಮ : ಸಂಚಿಕೆ - 233 Jeevana sambhrama jnanesh m p

ಜೀವನ ಸಂಭ್ರಮ : ಸಂಚಿಕೆ - 233
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        

               ಸಂಖ್ಯಾ ಬಡವರು
            --------------------------- 
ಮಕ್ಕಳೇ... ಇಂದು ನಾವು ಸಂಖ್ಯಾ ಬಡವರು ಎಂದರೇನು? ನೋಡೋಣ. ಬಡವರೆಂದರೆ ಗೊತ್ತು. ಹಾಗಾದರೆ ಸಂಖ್ಯಾ ಬಡವರ ಬಗ್ಗೆ ನೋಡೋಣ. ನಾವೆಲ್ಲರೂ ಸಂಖ್ಯಾ ಬಡವರೇ. ಯಾವ ಒಂದು ಗಿಡ, ಪಕ್ಷಿಯು ಬಡವ ಅಂತ ಹೇಳುವುದಿಲ್ಲ. ಆದರೆ ಮನುಷ್ಯ ಮಾತ್ರ ಬಡವ ಅಂತ ಹೇಳುತ್ತಾನೆ. ಇದು ಏನನ್ನು ತೋರಿಸುತ್ತದೆ ಅಂದರೆ, ಮನುಷ್ಯನಲ್ಲಿ ಬದುಕುವ ಕಲೆ ಇಲ್ಲ.

ಯಾವುದಕ್ಕೆ ಮಹತ್ವ ಕೊಡಬೇಕು?. ಯಾವುದಕ್ಕೆ ಮಹತ್ವ ಕೊಡಬಾರದು?. ಅನ್ನೋದು ಇನ್ನೂ ಪಕ್ಕಾ ಗೊತ್ತಾಗಿಲ್ಲ. ಮನುಷ್ಯ ಜಾಣ ಇದ್ದಾನೆ. ಈ ಮಾತು ಬೇರೆ. 10 ಡಾಕ್ಟರೇಟ್ ತೆಗೆದುಕೊಂಡಿದ್ದಾನೆ. ಆದರೆ ಹೇಗೆ ಬದುಕಬೇಕು?. ಹೇಗೆ ಬದುಕನ್ನು ಶ್ರೀಮಂತ ಮಾಡಬೇಕು? ಗೊತ್ತಿಲ್ಲ. ನಾವೇನು ಸಂಬಳ ಪಡೆದುಕೊಳ್ಳುತ್ತೇವೆ? ಅದು ಕಲಿತ ಶಿಕ್ಷಣದ ಬೆಲೆ. ಒಬ್ಬ ನೆಲೆಗಾರ, ಹೂಗಂಟಿಗೆ ಕೇಳಿದ "ನಿನ್ನ ಬೆಲೆ ಎಷ್ಟು" ಅಂದನು. ಅದಕ್ಕೆ ಹೂಗಂಟಿ ಹೇಳಿತು "ನನಗೆ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ, ಯಾಕೆಂದರೆ ನಾನಿಲ್ಲ ಅಂದರೆ ನೀವೆಲ್ಲ ಬಡವರು. ನಿಮ್ಮ ಸೌಂದರ್ಯ ಹೆಚ್ಚಿಸುವವ ನಾನು. ದೇವರ ಸೌಂದರ್ಯ ಹೆಚ್ಚಿಸುವವ ನಾನು. ನಾನು ಎಷ್ಟು ಅದ್ಭುತ ಮಾಡುತ್ತೇನೆ? ಜಗತ್ತಿನಲ್ಲಿ". ಅದಕ್ಕೆ ಅದರ ಬೆಲೆ, ಭಾವ ಇಲ್ಲ .ಆದರೆ ನಮಗೆ ನಮ್ಮ ಬೆಲೆ, ಭಾವ ಇದೆ. ಕೈಯಿದೆ, ಕಾಲಿದೆ, ಕಣ್ಣಿದೆ, ಕಿವಿಯಿದೆ, ಮೂಗಿದೆ, ನಾಲಿಗೆ ಇದೆ, ಮನಸ್ಸಿದೆ, ಬುದ್ದಿಯಿದೆ. ಎಲ್ಲಾ ಇಟ್ಟುಕೊಂಡು ನಾನು ಬಡುವ. ಹೊರಗೆ ಜಗತ್ತಿದೆ. ಪ್ರಾಣಿ, ಪಕ್ಷಿಗಳಿವೆ. ಹಚ್ಚ ಹಸಿರಾದ ಮಹಾವಿಶ್ವ ಇದೆ. ಇಷ್ಟೆಲ್ಲ ಇದ್ದರೂ ಸಹಿತ ನಾನು ಬಡವ. ಯಾಕೆ?. 

ನನ್ನನ್ನು ಅಳೆಯುವುದು ಸಂಖ್ಯೆ. ಸಂಖ್ಯೆ 50 ಲಕ್ಷ, 2 ಲಕ್ಷ, ಅವು ನಮ್ಮನ್ನು ಅಳೆಯುತ್ತದೆ. ಸಂಖ್ಯೆಯಿಂದ ಅಳೆದರೆ ಸಂಖ್ಯೆಗೆ ಕೊನೆ ಇರುವುದಿಲ್ಲ. ಒಂದು ಲಕ್ಷ,+1 ಆಗ ಒಂದು ಲಕ್ಷ ಕಡಿಮೆ ಆಯಿತು. ನಿಮಗೆ ಬೇಕಾದ ಒಂದು ದೊಡ್ಡ ಸಂಖ್ಯೆ ಇಡಿ ಅದರ ಮುಂದೆ +1 ಮಾಡಲಾಗುತ್ತದೆ. ಅಧಿಕ ಒಂದು ಆದರೆ ಅದು ಸಣ್ಣದಾಗುತ್ತದೆ. ಅಂದರೆ ಏನು ಗಳಿಸಿದರೂ ಬಡತನ ಬಿಡುವುದಿಲ್ಲ. ಎಣಿಕೆಯಲ್ಲಿ. ಒಬ್ಬರಿಗೆ ಒಂದು ಲಕ್ಷ ,ಇನ್ನೊಬ್ಬರಿಗೆ 90 ಸಾವಿರ ಇದೆ ಅಂದರೆ 10,000 ಕಡಿಮೆ. ಹೀಗೆ ಹೋಲಿಸುತ್ತಾ ಹೋದರೆ ಒಬ್ಬರು ಸಿರಿವಂತರು, ಇನ್ನೊಬ್ಬರು ಬಡವರು ಇರುತ್ತಾರೆ. 

ಒಬ್ಬರ ಮನೆಯಲ್ಲಿ ಬಹಳ ಫರ್ನಿಚರ್ ಇರುತ್ತದೆ. ಅವರು ಫರ್ನಿಚರ್ ಶ್ರೀಮಂತರು. ಇನ್ನೊಬ್ಬರು ದೊಡ್ಡ ಮನೆ ಕಟ್ಟಿದ್ದರೆ ಅವರು ದೊಡ್ಡ ಮನೆ ಶ್ರೀಮಂತರು. ಅದನ್ನು ನೋಡಿದರೆ ನಮ್ಮ ಮನೆ ಅಷ್ಟಿಲ್ಲ. ಅವರ ಕೊಠಡಿ ,6x8=48 ಅಡಿ. ನಮ್ಮ ಕೊಠಡಿ 5x7=35ಅಡಿ. 13ಅಡಿ ಕಡಿಮೆಯಾಯಿತು. ನಾವು 13ಅಡಿ ಬಡವರು. ಹೀಗೆ ಸಂಖ್ಯೆ ಮೇಲೆ ಬಡತನ, ಶ್ರೀಮಂತಿಕೆ. ಅಳತೆ ಮಾಡುತ್ತ ಹೋದರೆ ಯಾವ ಮನುಷ್ಯನು ಶ್ರೀಮಂತ ಆಗುವುದಿಲ್ಲ. ಆದುದರಿಂದ ಮನುಷ್ಯರಲ್ಲಿ ಕೊರತೆಯ ಭಾವ. 

ಯಾಕೆ ಇಷ್ಟು ಹೋರಾಟ ಮಾಡುತ್ತೀವಿ?. ಒಂದು ಇದ್ದವ ಎರಡನ್ನು ಮಾಡುತ್ತಾನೆ, ಮೂರು ಮಾಡುತ್ತಾನೆ, ನಾಲ್ಕು ಮಾಡುತ್ತಾನೆ. ಒಂದು ಊರಲ್ಲಿ ಒಬ್ಬ ಬಡವ ಇದ್ದನು. ಆತ ಕೂಲಿ ಮಾಡಿಕೊಂಡಿದ್ದ. ಜೀವಮಾನವೆಲ್ಲ ಕೂಲಿಯಲ್ಲಿ ದುಡಿದು ದುಡಿದು, ಉಳಿಸಿ ಉಳಿಸಿ ನೂರು ಎಕರೆ ಜಮೀನು ತೆಗೆದುಕೊಂಡನು. ಆತನಿಗೆ ನಾಲ್ಕು ಮಂದಿ ಮಕ್ಕಳು. ಸಾಯುವ ಕ್ಷಣ ಬಂದಿತ್ತು. ಮಕ್ಕಳು ಅಪ್ಪನಿಗೆ ನಿಮ್ಮ ಕಡೆಯ ಆಸೆ ಏನು? ಅಂತ ಕೇಳಿದರು. ಆತ ಹೇಳಿದ, "ನನ್ನ ಆಸೆ ಒಂದಿದೆ. ನಾನು ಸಣ್ಣವನಿದ್ದಾಗ ಅತ್ಯಂತ ಬಡವ. ಕಷ್ಟಪಟ್ಟು ಬೆಳೆಸುತ್ತಾ ಬೆಳೆಸುತ್ತಾ, ನೂರು ಎಕರೆ ಮಾಡಿದ್ದೇನೆ." ಅದಕ್ಕೆ ಮಕ್ಕಳು ಹೌದು, ನಮ್ಮನ್ನು ಶ್ರೀಮಂತ ಮಾಡಿದ್ದೀಯಲ್ಲ ಸಂತೋಷ ಅಂದ್ರು. ಆಗ ಮುದುಕ ಹೇಳಿದ್ದ ಹಾಗಲ್ಲ , ಇನ್ನೂ ಸಮೀಪದಲ್ಲಿ ಏನೇನೋ ಹೊಲಗಳಿದ್ದವಲ್ಲ ಅವುಗಳೆಲ್ಲವನ್ನು ತೆಗೆದುಕೊಳ್ಳಬೇಕೆಂಬ ಇಚ್ಛೆ ಇತ್ತು. ಆದರೆ ಏನು ಮಾಡೋದು ನಾನು ಹೊರಟುಬಿಟ್ಟಿದ್ದೇನೆ. ನೀವು ಅದನ್ನು ಪೂರ್ಣ ಮಾಡುತ್ತೇನೆ ಅಂತ ಮಾತು ಕೊಡಿ ಅಂದನು. ಅಂದರೆ ನೂರು ಎಕರೆ ಮಾಡಿದರು ಸಮಾಧಾನ ಆಗಲಿಲ್ಲ. ಯಾಕೆ ಅಂದರೆ ಬಡತನ ಒಳಗೆ ಇತ್ತು. ಅಂದರೆ ಹೊರಗೆ ಎಷ್ಟಾದರೇನು ಸಂಖ್ಯಾ ಬಡತನ. ಏನು ಇಲ್ಲದ್ದು ನೂರಾಯ್ತಲ್ಲ ಅಂತ ವಿಚಾರ ಮಾಡಲಿಲ್ಲ. ಪಕ್ಕದಲ್ಲಿದ್ದವಲ್ಲ ಅವನು ತೆಗೆದುಕೊಂಡಿಲ್ಲವಲ್ಲ ಅಂತ ವಿಚಾರ ಮಾಡಿದ್ದನು. ಈತನೇ ಹೋದ ಮೇಲೇ ಅವುಗಳನ್ನು ತೆಗೆದುಕೊಂಡರೇನು? ಬಿಟ್ಟರೇನು?. ತನಗೇನು ಲಾಭವಿಲ್ಲ ಆದರೂ ಮನುಷ್ಯ ಸಾಯುವಾಗಲು ನಾನು ಸಿರಿವಂತನಾಗಬೇಕು ಅಂತ ಆಸೆ. ಹಾಗಂದರೇನು? ನಾನಿನ್ನೂ ಬಡವ ಇದ್ದೀನಿ ಅಂತ. ನೂರು ಎಕರೆ ಮಾಡಿದ್ದು ಸಹಿತ ಬಡತನ ಹೋಗಲಿಲ್ಲ. ಯಾಕೆ ಅಂದರೆ ಒಳಗೆ ಬಡತನ ಇದೆ. ಸಾವಿರ ಎಕರೆ ಮಾಡಿದರೇನು?. ಕೋಟಿ ಎಕರೆ ಮಾಡಿದರೇನು?. ಬಡತನ ಒಳಗೆ ತುಂಬಿತ್ತು ಅಂದರೆ ಏನು ಮಾಡಲು ಆಗುವುದಿಲ್ಲ .

ಹಿಂದೆ ಊರಿನ ಜಾತ್ರೆಯಲ್ಲಿ ಒಂದು ಹೊಸ ಮಣ್ಣಿನ ಗಡಿಗೆ ನೆಲದಲ್ಲಿ ಹಾಕುತ್ತಿದ್ದರು. ಅದಕ್ಕೆ ಎಷ್ಟು ನೀರು ಹಾಕಿದರು ತುಂಬುತ್ತಲೆ ಇರಲಿಲ್ಲ. ಬೇಕಾದಷ್ಟು ಕೊಡಗಟ್ಟಲೆ ಹಾಕಿ. ಅದು ತುಂಬುತ್ತಿರಲಿಲ್ಲ ಏಕೆಂದರೆ. ಆ ಗಡಿಗೆ ತಳ ಭಾಗ ಸುಡುತ್ತಿರಲಿಲ್ಲ. ಅದು ನೀರಿಗೆ ಕರಗಿ ಹೋಗಿ, ಮೇಲೆ ಹಾಕಿದ ನೀರೆಲ್ಲ ಭೂಮಿ ಸೇರುತ್ತಿತ್ತು. ಅದು ಖಾಲಿನೇ ಇರುತ್ತಿತ್ತು. ಇದಕ್ಕೆ ಪವಾಡ ಅನ್ನುತ್ತಿದ್ದರು. ಇದನ್ನು ಪಾಠ ಕಲಿಸಲು ಮಾಡುತ್ತಿದ್ದರು. ನಿನಗೆ ಎಷ್ಟು ಕೊಟ್ಟರು ಸಹಿತ ಖಾಲಿ. ದೇವರು ಎಲ್ಲಾ ಕೊಟ್ಟಿದ್ದಾನೆ ಆದರೂ ಖಾಲಿ. ಯಾರಿಗೆ ನಮ್ಮ ಕೊಡ ತುಂಬಿತ್ತು ಅಂತ ಅನಿಸುತ್ತದೆ. ನಮ್ಮ ಮನಸ್ಸು ಈ ಕೊಡದಂತೆ ಇದೆ. ಮಾವ ಕೊಟ್ಟರೂ ಸರಿ. ಸರ್ಕಾರ ಕೊಟ್ಟರೂ ಸರಿ. ಅವರಿವರು ಕೊಟ್ಟರು ಸರಿ, ಆ ಮನಸ್ಸು ತುಂಬುವುದಿಲ್ಲ. ನಮಗೆ ಎಲ್ಲಾ ಕಡೆಯಿಂದ ಸಹಾಯ ಬರುತ್ತದೆ. ಆದರೆ ತುಂಬುತ್ತದೆ ಏನು?. ಮನುಷ್ಯನ ಮನಸ್ಸಿನ ಗಡಿಗೆ ಇನ್ನೂ ತುಂಬಿಲ್ಲ. ಸಾಕಪ್ಪ ನನಗೆ ಆನಂದ ಆಯ್ತು ಅಂತ ಹೇಳ್ಯಾರೇನು? ಯೋಚಿಸಿ. ನಮ್ಮ ಬುದ್ಧಿ ಇರೋದು ಏತಕ್ಕೆ?. ವಿಚಾರ ಮಾಡೋದಿಕ್ಕೆ. ವಿಚಾರ ಮಾಡಿ ಗೊತ್ತಾಗುತ್ತೆ. ಇನ್ನು ತುಂಬಿಲ್ಲ. ಈಗ ಒಂದು ಲಕ್ಷ ವೇತನ ಇದ್ದರೂ ಸಾಲೋದಿಲ್ಲ. ಯಾಕೆ? ಅಂದರೆ ಗಡಿಗೆ ತುಂಬಿಲ್ಲ. ಮನಸ್ಸೇ ಈ ಗಡಿಗೆಯಂತಾದರೆ ಯಾರು ನಮ್ಮನ್ನು ಶ್ರೀಮಂತ ಮಾಡೋದಿಲ್ಲ. ಮಾವ ಅಳಿಯನಿಗೆ ಎಲ್ಲಾ ಕೊಟ್ಟಿರುತ್ತಾನೆ. ಮನೆ ಕಟ್ಟಿಕೊಟ್ಟಿರುತ್ತಾನೆ. ಯಾರು ಕಟ್ಟಿಕೊಟ್ಟಿದ್ದು ಅಂದರೆ ಮಾವ ಬರೀ ಮನೆ ಕಟ್ಟಿಕೊಟ್ಟಿದ್ದಾನೆ, ಇದರ ಜೊತೆ ಒಂದು ಬೈಕ್ ಕೊಟ್ಟಿದರೆ ಆಗುತ್ತಿತ್ತು ಅಂತ ಅನ್ನುತ್ತಾನೆ. ಮನೆ ಅಂದ ಬಳಿಕ ಗಾಡಿ ಬೇಡವೆ ಅಂತಾನೆ. ಹಾಗೆ ಹೇಳುತ್ತಾ ಮಾವನ ಮನೆಗೆ ಹೋಗಿ ಕುಳಿತ. ಗಾಡಿ ಕೊಡುವ ತನಕ ಹೋಗುವುದಿಲ್ಲ ಅಂದ. ಮಾವ ಹೇಳಿದ ಈ ಭಿಕ್ಷುಕನಿಗೆ ಮಗಳು ಕೊಡುವುದಕ್ಕಿಂತ ತಾಜಾ ಭಿಕ್ಷುಕನಿಗೆ ಕೊಟ್ಟಿದ್ದರೆ ಚೆನ್ನಾಗಿತ್ತು ಅಂದ. ಏನು ಇರುವುದಿಲ್ಲ ಬಿಕ್ಷುಕ. ಹಾಡಿಕೊಂಡು ಹೊರಟಿರುತ್ತಾನೆ. ಕೊನೆಗೆ ಬೇಸತ್ತು ಗಾಡಿ ತೆಗೆದುಕೊಂಡು ಹೋಗು ಅಂತ ಮಾವ ಅಳಿಯನಿಗೆ ಹಣ ಕೊಟ್ಟ. ಅದಕ್ಕೆ ಪೆಟ್ರೋಲ್ ಬೇಕಲ್ಲ ‌ಆಗ ಹೆಂಡತಿಗೆ ಹೇಳಿದ. ನಿಮ್ಮ ತಂದೆ ಮನೆಗೆ ಹೋಗು. ವರ್ಷಕ್ಕೆ ಎಷ್ಟು ಪೆಟ್ರೋಲ್ ಬೇಕು ಅಷ್ಟು ಮತ್ತು ಅದರ ಬಡ್ಡಿಗೆ ಆಗುವಂತೆ ಪಡೆದುಕೊಂಡು ಬಾ ಅಂದನು. ಈತ ಶ್ರೀಮಂತ ಅಳಿಯನೇನು. ಇಂತಹವರಿಗೆ ಹೆಣ್ಣು ಕೊಟ್ಟರೆ ಬಡತನ ಅನುಭವಿಸಬೇಕೇ ವಿನಹ ಶ್ರೀಮಂತಿಕೆಯನ್ನಲ್ಲ. 

ಎಷ್ಟೇ ಇರಲಿ ಅಷ್ಟರಲ್ಲಿ ಮಜಾದಲ್ಲಿರಬೇಕು. ಪ್ರಾಣಿಗಳಿಗೆ ಏನೂ ಇರುವುದಿಲ್ಲ. ಎಷ್ಟು ಚೆನ್ನಾಗಿ ಬದುಕುತ್ತವೆ. ಪ್ರಾಣಿಗಳು ಏನು ಬ್ಯಾಂಕಲ್ಲಿ ಹಣ ಇಟ್ಟಿದ್ದಾವೆ ಏನು?. ಯಾವುದಾದರೂ ಹೊಲ ತೆಗೆದುಕೊಂಡಿದ್ದೇವೆಯೆ..? ಊಟಕ್ಕೆ ಬೇಕು ಅಂತ. ಅವುಗಳ ಹೆಸರಿನಲ್ಲಿ ಹೊಲ ಇಲ್ಲ. ಹಣ ಇಲ್ಲ. ಏನೇನು ಇಲ್ಲ. ಆದರೆ ಮಜವಾಗಿರುತ್ತವೆ. ನಮಗೆ ಬ್ಯಾಂಕಿನಲ್ಲಿ ಹಣವಿದೆ. ಮನೆ ಇದೆ. ಹೊಲ ಇದೆ. ಆದರೂ ಬಡವರಾಗಿದ್ದೇವೆ. ಪ್ರಾಣಿ, ಡಾಕ್ಟರ್ ಹತ್ರ ಹೋಗಿ ನನಗೇನಾಗಿದೆ ಅಂತ ಕೇಳಿಲ್ಲ. ನಮಗೆ ಡಾಕ್ಟರ್ ಇದ್ದಾರೆ‌. ನಮಗೆ ದೇವಸ್ಥಾನ ಇದೆ. ಅಲ್ಲಿ ಹೋಗಿ ಬೇಡಿಕೆ ಸಲ್ಲಿಸುತ್ತೇವೆ. ಆದರೆ ಯಾವುದಾದರೂ ಪ್ರಾಣಿ ದೇವಸ್ಥಾನಕ್ಕೆ ಹೋಗಿ ಬೇಡಿಕೆ ಇಟ್ಟಿದೆಯೇನು?. ಅದೇ ದೇವಸ್ಥಾನದ ಮೇಲೆ ಕುಳಿತಿರುತ್ತದೆ. ಹಾಡಿಕೊಳ್ಳುತ್ತಾ ಇರುತ್ತವೆ. ಮನುಷ್ಯ ಬೇಡಿಕೊಳ್ಳುತ್ತಾ ಇರುತ್ತಾನೆ.

ಮನಸ್ಸು ಶ್ರೀಮಂತವಾಗದೆ, ಯಾವುದು ಸಂಪತ್ತು ಅಂತ ತಿಳಿಯಲಾರದೆ, ನಾವು ಶ್ರೀಮಂತರು ಆಗೋದಿಲ್ಲ. ಅದಕ್ಕೆ ಸಂಪತ್ತು ಯಾವುದು ಅಂದರೆ ಶರೀರ ಸಂಪತ್ತು. ಭಾವ ಸಂಪತ್ತು ಮತ್ತು ಜ್ಞಾನ ಸಂಪತ್ತು. ಈ ಮೂರು ನಿಜವಾದ ಸಂಪತ್ತುಗಳು. ಈ ಮೂರು ಚೆನ್ನಾಗಿತ್ತು ಅಂದರೆ ಗುಡಿಸಲಿನಲ್ಲಿಯೂ ನಾವು ಶ್ರೀಮಂತರೇ, ಅರಮನೆಯಲ್ಲಿಯೂ ನಾವು ಶ್ರೀಮಂತರೇ, ಅಲ್ಲವೇ ಮಕ್ಕಳೇ...?
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************

Ads on article

Advertise in articles 1

advertising articles 2

Advertise under the article