ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 120
Wednesday, March 18, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 120
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಕಳೆದ ವಾರ ನಾವು ನಿದ್ದೆಯ ನಡಿಗೆ ಮತ್ತು ಮಾತಿನ ಬಗ್ಗೆ ತಿಳಿದೆವು. ಈ ಹಿಂದೆ ಕನಸಿನ ವಿಧಗಳ ಬಗ್ಗೆ ತಿಳಿದಿದ್ದೆವು. ಈ ವಾರ ಕನಸು ಯಾವಾಗ ಬೀಳುತ್ತದೆಂದು ನೋಡೋಣ.
ನಮ್ಮ ನಿದ್ದೆಯನ್ನು NREM ಮತ್ತು REM ಹಂತ ಅಂತ ಗುರುತಿಸುತ್ತೇವೆ. NREM ಹೆಚ್ಚು ಸುದೀರ್ಘವಾಗಿರುವುದರಿಂದ ಇದನ್ನ ಪುನಃ N1 N2 ಮತ್ತು N3 ಅಂತ ವಿಭಜಿಸುತ್ತೇವೆ. ನಮ್ಮ ನಿದ್ದೆಯ ನಡಿಗೆ ಇರುವುದು NREM ನ ಗಾಢ ನಿದ್ದೆಯ ಹಂತವಾದ N3 ಯಲ್ಲಿ. ಇನ್ನು ಕನಸುಗಳು NREM ನಲ್ಲಿಯೇ ಅಥವಾ REM ನಲ್ಲಿಯೇ ಎಂದು ನೀವು ಕೇಳಬಹುದು. ಕನಸುಗಳು ಎರಡೂ ಹಂತಗಳಲ್ಲಿ ಬೀಳುತ್ತವೆ ಆದರೆ ಅವುಗಳು ಹಂತವನ್ನವಲಂಬಿಸಿಕೊಂಡು ಭಿನ್ನವಾಗಿರುತ್ತವೆ. NREM ಕನಸುಗಳು N1 ಮತ್ತು N2 ಹಂತದಲ್ಲಿ ಬೀಳುತ್ತವೆ. ಇವು ಮಂಪರು N1 ಮತ್ತು ಕಿರು ನಿದ್ದೆಯ N2 ಮತ್ತು ಗಾಢ ನಿದ್ದೆಯ N3 ಹಂತದಲ್ಲಿರುವುದರಿಂದ ನೀವು ಮಲಗುವಾಗ ಮಾಡುತ್ತಿರುವ ಯೋಚನೆಗಳ ಅಂದರೆ ಹಗಲಿನ ವ್ಯಾಪಾರಗಳ ಮುಂದುವರಿಕೆಯಂತೆ ಭಾಸವಾಗುತ್ತವೆ ಮತ್ತು ಹೆಚ್ಚು ಕಡಿಮೆ ಕಲ್ಪನಾತ್ಮಕ. ಇವುಗಳಲ್ಲಿ ನಿರಂತರತೆ ಇರುವುದಿಲ್ಲ. ಬದಲಾಗಿ ತುಂಡು ತುಂಡಾದ ಅನುಭವದ ಭಾಗಗಳಿರಬಹುದು.
ಅದೇ REM ಕನಸುಗಳು ಹಾಗಲ್ಲ. ಅವುಗಳು ಹೆಚ್ಚು ಗಾಢ, ಸ್ಪಷ್ಟ ವೈವಿದ್ಯಮಯ, ಒಂದು ಸಿನಿಮಾದ ಕಥೆಯಂತೆ ಅಖಂಡ, ಹೆಚ್ಚು ಭಾವನಾತ್ಮಕ. ನಿಮ್ಮ ದುಃಸ್ವಪ್ನಗಳು ಬೀಳುವುದು ಕೂಡಾ ಈ ಹಂತದಲ್ಲಿಯೇ. ಕನಸು ಕಾಣುವ ಹಂತದಲ್ಲಿ ನಿಮಗೆ ಎಚ್ಚರವಾಯಿತು ಎಂದಿಟ್ಟುಕೊಳ್ಳೋಣ ಆಗ ನೀವು REM ಕನಸುಗಳನ್ನು ನೆನಪಿಟ್ಟುಕೊಳ್ಳುವ ಸಾಧ್ಯತೆ 8O% ರಿಂದ 90%. ಆದರೆ NREM ಕನಸುಗಳು 43% ಕ್ಕಿಂತ ಕಡಿಮೆ ನೆನಪಿರಬಹುದು ಅದೂ ಗೋಜಲು ಗೋಜಲಾಗಿ.
ಈ ಎರಡು ಕನಸುಗಳನ್ನು ಒಂದಕ್ಕೊಂದು ಹೋಲಿಸ ಬೇಕು ಅಂದುಕೊಂಡರೆ REM ಕನಸುಗಳು ಹೆಚ್ಚು ಸ್ಪಷ್ಟ, ಗಾಢ ಮತ್ತು ಭ್ರಮಾತ್ಮಕ. ಇದು ಭಾವನಾತ್ಮಕ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ಈ ಹಂತದಲ್ಲಿ ಮೆದುಳಿನ ಚಟುವಟಿಕೆ ತೀವ್ರವಾಗಿರುವುದರಿಂದ ಮನಸ್ಸು ನಿಜವಾಗಿ ನಡೆಯುತ್ತದೆ ಎಂದು ಭಾವಿಸುತ್ತದೆ. ಈ ಕನಸುಗಳು ಬೆಳಗಿನ ಜಾವ ಸಾಮಾನ್ಯ.
ಇನ್ನು NREM ಕನಸುಗಳು ಯೋಚನೆಯ ಮುಂದುವರಿಕೆಗಳಾಗಿದ್ದು ಹೆಚ್ಚು ಗಾಢವಾಗಿಲ್ಲದ ತುಂಡು ತುಂಡಾದ ಅನುಭವಗಳ ಒಂದು ಸರಮಾಲೆ. ರಾತ್ರಿಯ ಪೂರ್ವಾರ್ಧದಲ್ಲಿ ಬೀಳುವ ಈ ಕನಸುಗಳನ್ನು ನೆನಪಿಡುವುದೂ ಕಷ್ಟವೇ. ಇವು ನಮ್ಮ ಬೌದ್ಧಿಕ ಜ್ಞಾನ ವಿಕಾಸಕ್ಕೆ ನೆರವಾಗುತ್ತವೆ.
ಈಗ ಗೊತ್ತಾಯಿತೆ ಕೆಲವು ಕನಸುಗಳು ನೈಜ ಅನುಭವಗಳಂತಿದ್ದರೆ ಕೆಲವು ಅಸ್ಪಷ್ಟವಾಗಿ ಗೊಂದಲಮಯವಾಗಿರುತ್ತದೆಂದು. ಅಂದರೆ ಕನಸು ಕಾಣುವ ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************