ಸ್ಫೂರ್ತಿಯ ಮಾತುಗಳು : ಸಂಚಿಕೆ - 205
Tuesday, March 3, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 205
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಶರೀರ ಶೌಚಂ ವಾಕ್ ಶೌಚಂ ಶೌಚಂ ಪಂಚ ವಿಧಂ ಸ್ಮೃತಂ||
ಪಂಚಸ್ವೇತೇಷು ಶೌಚೇಷು ಹೃದಿ ಶೌಚಂ ವಿಶಿಷ್ಯತೇ|
ಹೃದಯಸ್ಯ ಚ ಶೌಚೇನ ಸ್ವರ್ಗಂ ಗಚ್ಛತಿ ಮಾನವಃ ||
ಶೌಚವೆಂದರೆ ಶುಚಿಯೆಂದರ್ಥ. ಎಲ್ಲರಿಗೂ ಆಪ್ಯಾಯಮಾನವಾದ ಅಂಶಗಳಲ್ಲಿ ಶುಚಿತ್ವಕ್ಕೆ ಪ್ರಥಮ ಸ್ಥಾನ. ಅಶೌಚವಾದುವುಗಳು ಹಂದಿಗಳಿಗೆ ಮಾತ್ರ ಪ್ರಿಯವಿರಬಹುದೇನೋ! ಪ್ರಮುಖವಾಗಿ ಪಂಚ ವಿಧದ ಶುಚಿತ್ವವನ್ನು ಈ ಉಪನಿಷತ್ತು ಎತ್ತಿಹಿಡಿದಿದೆ. ಮನಸ್ಸು, ಕೆಲಸ, ಕುಲ, ದೇಹ ಮತ್ತು ಮಾತು ಶುಚಿಯಾಗಿದ್ದರೆ ಬದುಕೇ ಚಂದ. ಈ ಐದು ಶುಚಿಗಳಲ್ಲಿ ಮನಸ್ಸಿನ ಶುಚಿತ್ವಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ. ಮನಸ್ಸಿನ ಶುಚಿತ್ವವೇ ಹೃದಯ ಶೌಚ.
ಕಣ್ಣಿಗೆ ಗೋಚರಿಸುವ ದೇಹದ ಶೌಚದ ಬಗ್ಗೆಯೂ ನಿಖರತೆ ನಮಗೆ ಸಿಗದು. ಕೈಕಾಲು ಮುಖ ತೊಳೆದು ಮಡಿಯುಟ್ಟು ಗಂಧ ಪೂಸಿಯೋ ಸುಗಂಧ ದ್ರವ್ಯ ಹಚ್ಚಿಯೋ ಶುಚಿಯೆಂಬ ಪ್ರದರ್ಶನ ಮಾಡುವವರಿಲ್ಲವೇ? ಕುಲದ ಶೌಚವೂ ಅಷ್ಟೇ. ಭ್ರಷ್ಠಾಚಾರದ ಈ ಯುಗದಲ್ಲಿ ವಾಮ ಚಿಂತನೆಗಳು ಕುಲವನ್ನು ಉದ್ಧರಿಸಲು ಸಾಧ್ಯವಿಲ್ಲ.
ಕೆಲಸದ ಶೌಚ, ಬಾಹ್ಯ ದೇಹದ ಶೌಚ, ಮಾತಿನ ಶೌಚ, ಕುಲದ ಶೌಚಗಳು ದೃಷ್ಟವಾಗುವ ಶೌಚಗಳು ಎಂದರೆ ಕಣ್ಣಿಗೆ ಕಾಣಿಸುವ ಅಥವಾ ಅನುಭವಕ್ಕೆ ಬರುವ ಸಂಗತಿಗಳಾಗಿವೆ. ಇವುಗಳನ್ನು ಶುಚಿಯಾಗಿಡುವ ಜಾಣ್ಮೆಯಲ್ಲಿ ನಾವು ಹಿಂಬೀಳುವುದಿಲ್ಲ. ನಾಟಕದ ನಟನಂತೆ ನಟಿಸಬಲ್ಲವರಾದ ನಾವು ಈ ನಾಲ್ಕು ವಿಭಾಗಗಳಲ್ಲಿ ಶುಚಿಯಾಗಿದ್ದೇವೆಯೆಂದು ತೋರಿಸಿ ಕೊಡಬಹುದು. ಭೇಷ್ ಅನ್ನಿಸಿಕೊಳ್ಳಬಹುದು. ಆದರೆ ಇವು ಸಹಜವಾಗಿಯೂ ಶುಚಿಯಾಗಿವೆಯೆಂಬುದನ್ನು ಖಾತ್ರಿಗೊಳಿಸಲು ಮನೋಶೌಚವೇ ಆಧಾರ. ಆದರೆ ಮನೋಶೌಚವನ್ನು ಅರಿಯುವುದೆಂತು? ಮನದೊಳಗೆ ಹೊಕ್ಕು ನೋಡಿ ಅರಿಯಲು ಅಸಾಧ್ಯ. ಮಾತಿನಿಂದ ವಿನಯವಂತರಾಗಿರುವ ಜೇಬು ಕತ್ತರಿಸುವವರ ನಡುವೆ ನಾವಿರುವುದು ತಾನೇ? ಎಂದರೆ ಮಾತು ಮನಃಪೂರ್ತಿಯಲ್ಲದವರ ವಿನಯ ನಟನೆಯೆಂದಾಗುತ್ತದೆ. ಅಂತಹ ಮಿಥ್ಯ ಮಾತಿನವರ ಹೃದಯದ ಶೌಚವನ್ನು ಮಾಪನ ಮಾಡಲು ಅಸಾಧ್ಯ. ಶುಚಿಯಾದ ಮನಸ್ಸೆಂದು ಕಾಣಿಸಿದರೂ ಒಳಗೆ ಅಶೌಚವೇ ಇರುತ್ತದೆ.
ನಮ್ಮ ಮನಸ್ಸಿನ ಶೌಚವನ್ನು ನಮಗೆ ತೀರ್ಮಾನಿಸ ಬಹುದು. ಅದರ ಶುದ್ದೀಕರಣವನ್ನೂ ಮಾಡಬಹುದು, ಮಾಡಲೇ ಬೇಕು. ಪ್ರತಿಯೊಬ್ಬರೂ ಆತ್ಮಶುದ್ಧಿ ಮಾಡಿಕೊಂಡಾಗ ಲೋಕ ಕಲ್ಯಾಣವಾಗುತ್ತದೆ. ಇತರರ ಮನಸ್ಸಿನ ಶೌಚವನ್ನು ಅಳೆಯಲು ಸಾಧ್ಯವಿಲ್ಲ. ಆದರೂ ಮನಸ್ಸಿನೊಳಗೆ ಇರುವ ಶೌಚದ ವಾಸನೆಯನ್ನು ಊಹಿಸಬಹುದು. ಅದರ ಪರಿಮಾಣದ ಕನಿಷ್ಠ ಗರಿಷ್ಠ ಮಟ್ಟಗಳು ಅರಿವಾಗದೇ ಇರಬಹುದು. ಮುಖವೇ ಮನಸ್ಸಿಗೆ ಕನ್ನಡಿಯೆಂಬ ಮಾತಿದೆ. ಮಾತಿನ ಕೊಂಕು ಮತ್ತು ಮುಖದ ಭಾವ ಮನಸ್ಸಿನ ಶೌಚ ಅಥವಾ ಅಶೌಚವನ್ನು ಬಿಂಬಿಸುತ್ತದೆ. ನಗುವಿನಲ್ಲಿರುವ ಮುಗ್ಧತೆ ಅಥವಾ ದುಗ್ಧತೆ, ಮಾತಿನ ಸ್ಪಷ್ಟತೆ ಅಥವಾ ಅಸ್ಪಷ್ಟತೆಗಳು ಮನದೊಳಗೆ ಏನಿದೆಯೆಂಬುದನ್ನು ಸರಿಯಾಗಿಯೇ ತಿಳಿಸುತ್ತದೆ. ಮನಸ್ಸಿನೊಳಗೆ ಇಣುಕಿ ನೋಡಲಾಗದು ಎಂಬ ಮಾತಿದೆಯಾದರೂ ಮನಸಿನೊಳಗಿರುವ ಗುಣ ವಿಶೇಷಗಳು ಮುಖದ ಮೂಲಕ ಇಣುಕುತ್ತವೆ ಎಂಬುದಂತೂ ಸತ್ಯ. ನುಡಿದಂತೆ ನಡೆ, ನಡೆದಂತೆ ನುಡಿ ಎಂಬ ಹೇಳಿಕೆಯಿದೆ. ಮಾತನಾಡಿದ ನಂತರ ಆ ವ್ಯಕ್ತಿಯ ನಡೆಯ ಪ್ರಾಮಾಣಿಕತೆಯೂ ಮನುಷ್ಯನ ಮನೋ ಶುಚಿತ್ವಕ್ಕೆ ದರ್ಪಣವಾಗುತ್ತದೆ.
ಚುನಾವಣೆಗಳ ಸಂದರ್ಭದಲ್ಲಿ ಹುರಿಯಾಳುಗಳು ಮತ್ತು ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಆಶ್ವಾಸನೆಗಳ ಸುರಿಮಳೆ ಗೈಯುತ್ತವೆ. ಫಲಿತಾಂಶ ಬಂದಾಗ ಗೆದ್ದವರು ಆಶ್ವಾಸನೆಗಳನ್ನು ಮರೆತೇ ಬಿಡುತ್ತಾರೆ. ಇದೂ ಮನೋ ಅಶೌಚದ ಕಾರಣದಿಂದಾಗುತ್ತದೆ. ಎಲ್ಲಿ ಸ್ವಹಿತಾಸಕ್ತಿಯ ಬೇರು ಮಾತ್ರ ಬಲವಾಗಿರುತ್ತದೆಯೋ ಅಲ್ಲಿ ಪರಿಶುದ್ಧತೆಯ ನೆರಳಿರದು. ಆದರೆ ನಾವು ಹೃದಯ ಶುಚಿಯುಳ್ಳವರಾಗಿ ಲೋಕಹಿತ ಮಾಡೋಣ ಆಗದೇ?
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************