ಜೀವನ ಸಂಭ್ರಮ : ಸಂಚಿಕೆ - 231
Monday, March 2, 2026
Edit
ಜೀವನ ಸಂಭ್ರಮ : ಸಂಚಿಕೆ - 231
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ಮಹಾಪಾಪದ ಬಗ್ಗೆ ತಿಳಿದುಕೊಳ್ಳೋಣ. ಪಾಪ ಎಂದರೆ ಅನ್ಯಾಯ ಮಾಡುವುದು. ಮಹಾ ಪಾಪ ಎಂದರೆ ಅತಿ ದೊಡ್ಡ ಅನ್ಯಾಯ ಮಾಡುವುದು. ಹಾಗಾದರೆ ಮಹಾ ಪಾಪ ಯಾವುದು?. ಅತಿ ಆಸೆಯೇ ಮಹಾ ಪಾಪ. ಮಿತವಾಗಿ ಇರುವುದೇ ಸ್ವಚ್ಛ ಜೀವನ. ಅದೇ ಪುಣ್ಯ. ಬೇರೆ ಪಾಪ ಎಂಬುದೇ ಇಲ್ಲ. ಯಾವುದನ್ನು ಅತಿ ಮಾಡಬಾರದು. ಊಟ ಮಾಡಬೇಕು, ಅತಿಯಾಗದಂತೆ ಊಟ ಮಾಡಬೇಕು. ಮಲಗಬೇಕು, ಅದು ಅತೀ ಆಗಬಾರದು. ಎಚ್ಚರವಿರಬೇಕು, ಅದು ಅತೀ ಆಗಬಾರದು. 24 ತಾಸು ಎಚ್ಚರವಿದ್ದರೆ ಗತಿಯೇನು?. ಅತೀ ಆಸೆಯನ್ನು ಪಾಪ ಅಂತ ಭಾವಿಸಬೇಕು. ಯಾವುದು ನಮ್ಮ ಜೀವನವನ್ನು ಹೊಲಸು ಮಾಡುತ್ತದೆ?. ಅದೇ ಪಾಪ. ಬಹಳ ಬೇಕು ಅನ್ನುವುದೇ ನಮ್ಮ ಜೀವನವನ್ನು ಹೊಲಸು ಮಾಡುತ್ತದೆ.
ಎಲ್ಲದಕ್ಕೂ ಇತಿಮಿತಿ ಇರಬೇಕು."ಯುಕ್ತಾಹಾರ ವಿಹಾರಸ್ಯ, ಯುಕ್ತ ಚೇಷ್ಟಸ್ಯ ಕರ್ಮಸು. ಯುಕ್ತ ಸ್ವಪ್ನಾವ ಬೋಧಸ್ಯ, ಯೋಗೋ ಭವತಿ ದುಃಖಹ". ಯುಕ್ತ, ಯೋಗ್ಯ ಆಹಾರ, ಯೋಗ್ಯ ಪ್ರಮಾಣ, ಮಿತ ಪ್ರಮಾಣ ಬೇಕು. ಆಹಾರ ವಿಹಾರ ಬೇಕು. ಅಂದರೆ ದೇಹ ಚಲಿಸಬೇಕು, ದೇಹ ಕೆಲಸ ಮಾಡಬೇಕು. ಕೆಲಸ ಮಾಡುತ್ತೀವಿ ಅಂತ ಹಗಲು ರಾತ್ರಿ ಬಿಡದೆ ಮಾಡಬಾರದು. ಕರ್ಮ ಮಾಡುವುದಿದ್ದರೆ ಎಷ್ಟು ಮಾಡಬೇಕೊ, ಅಷ್ಟೇ ಮಾಡಬೇಕು.
ತಲೆಗೆ ಹಗುರ ಟೋಪಿ ಒಳ್ಳೆಯದು. ಬಂಗಾರದ್ದು ಕಿರೀಟ ಅಂತ ಬಹಳ ಬಹಳ ತೂಕದ್ದು ಹಾಕಿದರೆ, ಹಾಕಿಕೊಂಡವನಿಗೆ ತಾಪ. ನೋಡುವವನಿಗೆ ಅಲ್ಲ. ತಲೆ ಹೊತ್ತುಕೊಳ್ಳುವುದಕಲ್ಲ. ಹೊತ್ತುಕೊಳ್ಳುವುದಕ್ಕೆ ಭುಜ. ಎಷ್ಟೋ ಅಷ್ಟು. ಸುಂದರ ಕರ್ಮ ಮಾಡಬೇಕು. ಮಲಗಬೇಕು. ಎಚ್ಚರವಿರಬೇಕು. ಎಷ್ಟೋ ಅಷ್ಟು. ಯಾವುದು ಅತಿಯಾಗದಂತೆ ಮಾಡಿದರೆ, ಜೀವನ ಚಂದವಾಗುತ್ತದೆ. ಬಟ್ಟೆ ಬರೆಗಳು ಎಷ್ಟೋ ಅಷ್ಟು. ಮನೆ ಅತಿ ದೊಡ್ಡದು ಆಗಬಾರದು, ಅತಿ ಸಣ್ಣದು ಆಗಬಾರದು. ಮನೆಯಲ್ಲಿ ಸಾಮಾನು ಸಹಿತ ಬಹಳ ಆಗಬಾರದು. ಮನೆ ತುಂಬಾ ಬರೀ ಸಾಮಾನು, ಸೋಪ ಆದರೆ ಗತಿ ಏನು?. ಮನೆ ಅಂದರೆ ಖಾಲಿ ಇರಬೇಕು. ಸಾಮಾನು ತುಂಬುವುದಾದರೆ ಅದು ಗೋಡನ್. ಒಂದು ಕೋಣೆ ಇದೆ ಅಂತ ಭಾವಿಸಿ. ಅದರಲ್ಲಿ ಇರುವ ಸಾಮಾನು ಕಪಾಟಿನಲ್ಲಿ ಹೊಂದಿಸಿ ಇಟ್ಟಿದ್ದೇವೆ ಅಂಥ ಭಾವಿಸಿ. ಅದರಲ್ಲಿ ಇರುವ ಸಾಮಾನು ಎಷ್ಟು ಚೆಂದಾಗಿ ಕಾಣುತ್ತದೆ? . ಒಳಗಿರುವ ಸಾಮಾನು ಹೊರಗೆ ಬಂದರೆ ಗಲೀಜು ಕಾಣುತ್ತದೆ. ಅದಕ್ಕೆ ಹೇಳಿದ್ದು "Less laguage, more comfort". ಸಾಮಾನು ಬಹಳ ಇಲ್ಲದೆ ಇದ್ದರೆ, ನಾವು ಆರಾಮವಾಗಿ ಇರುತ್ತೇವೆ.
ಮನೆಯಲ್ಲಿ ಸಾಮಾನು ಕಡಿಮೆ ಇರಬೇಕು. ತಲೆ ತುಂಬಾ ಬಹಳ ಬಹಳ ತುಂಬಿಕೊಂಡಿದ್ದೇವೆ ಅಂದರೆ ತಾಪ ಬಹಳ. ಅದಕ್ಕೆ ಬಸವಣ್ಣ ಹೇಳಿದ್ದು "ಪರಚಿಂತೆ ನಮಗ್ಯಾಕಯ್ಯ, ನಮ್ಮ ಚಿಂತೆಯೇ ನಮಗೆ ಸಾಕಲ್ಲ" ಎಂದು. ಊರ ಉಸಾಬರಿ ಬೇಡ ಅಂದರು ನಮ್ಮ ಹಿರಿಯರು. ತಣ್ಣಗಿರು ಅನ್ನುತ್ತಿದ್ದರು. ಅವರು ಹಾಗೆ ಮಾಡಿದರು. ಅದು ತಿಳಿದು ನಮಗೇನು ಲಾಭ?. ವೇದ ಉಪನಿಷತ್ ಬರೆದವರೆಲ್ಲ ರೈತರೇ. ಊರ ಬಿಟ್ಟು ಹೊರಗೆ ಇದ್ದವರು. ಇವೆಲ್ಲ ಅಂತಹವರ ಮಾತು. ಅತಿ ಆಸೆ ಎಂಬುದೇ ಪಾಪ, ಬೇರೆ ಪಾಪವೆಂಬುದೇ ಇಲ್ಲ ಅಂದರು.
ನಾವು ತಿನ್ನುವ ಆಹಾರ, ಅದೇ ದಿನ ಖರ್ಚಾಗುವಂತೆ ಇದ್ದರೆ, ದೇಹದಲ್ಲಿ ಕೊಬ್ಬು ಉಂಟಾಗುವುದಿಲ್ಲ. ಅದನ್ನು ಬಿಟ್ಟು ಚೆನ್ನಾಗಿದೆ ರುಚಿಯಾಗಿದೆ ಎಂದು ಅತಿ ತಿಂದರೆ, ದೇಹಕ್ಕೆ ಮತ್ತು ಕೆಲಸಕ್ಕೆ ಎಷ್ಟು ಬೇಕೊ ಅಷ್ಟು ಖರ್ಚಾಗಿ, ಉಳಿದಿದ್ದು ಕೊಬ್ಬಾಗಿ ಮಾರ್ಪಟ್ಟು ಹೊಟ್ಟೆಯ ಸುತ್ತಳತೆ ಹೆಚ್ಚುತ್ತದೆ. ದೇಹ ದಡೂತಿಯಾಗುತ್ತದೆ. ಸ್ಥೂಲಕಾಯ ಸರ್ವ ರೋಗಗಳ ತಾಣ. ಸ್ಥೂಲಕಾಯ ಆಗುವ ಮೊದಲು ಹೃದಯದ ಬಡಿತ ರಕ್ತ ಸಂಚಾರ ಸಹಜವಾಗಿರುತ್ತದೆ. ಸ್ಥೂಲ ಕಾಯವಾದರೆ ಹೆಚ್ಚುವರಿ ಮಾಂಸ ಖಂಡಗಳಿಗೆ ಹೆಚ್ಚುವರಿ ರಕ್ತಸರಬರಾಜು ಮಾಡುವುದರಿಂದ ಹೃದಯಕ್ಕೆ ಹೆಚ್ಚು ಶ್ರಮವಾಗಿ ವಿಫಲವಾಗುತ್ತದೆ. ತೆಳು ದೇಹಕ್ಕೆ ಬೇಕಾಗುವಷ್ಟು ಇನ್ಸೂಲಿನ್ ಉತ್ಪತ್ತಿಯಾಗಿರುತ್ತದೆ. ಆದರೆ ಅದೇ ದೇಹ ಸ್ಥೂಲಾಕಾಯವಾದಾಗ, ಹೆಚ್ಚುವರಿ ಇನ್ಸುಲಿನ್ ಉತ್ಪತ್ತಿ ಆಗೋದಿಲ್ಲ. ಕೊರತೆಯಾಗುತ್ತದೆ. ಇದರಿಂದ ಮಧುಮೇಹ ರೋಗ ಶುರುವಾಗುತ್ತದೆ. ಹಾಗಾಗಿ ತಿನ್ನುವ ಆಹಾರ ಅತಿಯಾದರೆ ದೇಹದ ಅವಯವಗಳಿಗೆ ಮಾಡುವ ದೊಡ್ಡ ಪಾಪ. ಆದ್ದರಿಂದ ಖರ್ಚು ಮಾಡುವಷ್ಟೇ ತಿನ್ನುವುದು, ಇಲ್ಲವೇ ತಿಂದದ್ದನ್ನು ಹೆಚ್ಚು ಕೆಲಸ ಮಾಡಿ ಖರ್ಚು ಮಾಡಬೇಕು. ಅಷ್ಟಕ್ಕಷ್ಟೇ ಇದ್ದರೆ ಉತ್ತಮ. ಬದುಕು ಬಹಳ ಮಹತ್ವದ್ದು. ಬದುಕು ಕೇಂದ್ರವಾಗಬೇಕು. ಉಳಿದ ಎಲ್ಲಾ ಅಂದರೆ ಹಣ, ಆಸ್ತಿ , ಮನೆ, ಬಟ್ಟೆ ಮತ್ತು ಆಭರಣ ಎಲ್ಲಾ ಬದುಕಿಗಾಗಿ ಇರಬೇಕು. ಬದುಕೇ ಗಳಿಕೆಗಾಗಿ ಇರಬಾರದು. ಗಳಿಕೆ ಬದುಕಿಗಾಗಿ ಇರಬೇಕು. ಬದುಕು ಮನೆಗಾಗಿ ಅಲ್ಲ. ಬದುಕು ಆಸ್ತಿಗಾಗಿ, ಒಡೆವೆಗಾಗಿ, ಬಟ್ಟೆಗಾಗಿ ಅಲ್ಲ. ಅವು ಬದುಕಿಗಾಗಿ ಮಾತ್ರ ಇರಬೇಕು. ಬದುಕೇ ಇಲ್ಲ, ಬಳಿಕ ಉಳಿದವರಿಗೆ ಬೆಲೆ ಇಲ್ಲ.
ಒಬ್ಬ ಸ್ನೇಹಿತ ಹೆಚ್ಚು ಗಳಿಸಬೇಕು, ದೊಡ್ಡ ಮನೆ ಕಟ್ಟಬೇಕು, ಆಗ ನನಗೆ ಸಮಾಜದಲ್ಲಿ ಸ್ಥಾನ ಮಾನ ಸಿಗುತ್ತದೆ ಅಂತ ಹಗಲು-ರಾತ್ರಿ ದುಡಿಯುತ್ತಿದ್ದನು. ಊಟದ ಕಡೆ ನಿರ್ಲಕ್ಷ್ಯ. ವಿಶ್ರಾಂತಿಯಿಲ್ಲ. ಗಳಿಸಿ ಮತ್ತು ಸಾಲ ಮಾಡಿ ದೊಡ್ಡ ಮನೆ ಕಟ್ಟಿಸಿದನು. ಸಿಕ್ಕಿದಾಗ ಕೇಳಿದರೆ ಏನು ಊಟ ಎಂದರೆ ಗಂಜಿ ಚಟ್ನಿ ಎನ್ನುತ್ತಿದ್ದನು. ದೇಹಕ್ಕೆ ಬೇಕಾದ ಪೋಷಕಾಂಶ ಕೊರತೆಯಾಗಿ ಕೊನೆಗೆ ಕಾಯಿಲೆ ಬಿದ್ದನು. ವೈದ್ಯರು ಹೇಳಿದರು "ಚೆನ್ನಾಗಿ ಪೋಷಕಾಂಶ ಇರುವ ಆಹಾರ ವನ್ನು ಇತಿಮಿತಿಯಲ್ಲಿ ಸೇವಿಸು ಅಂತ ಹೇಳಿ ಪೋಷಕಾಂಶಗಳ ಟಾನಿಕ್ ಮಾತ್ರೆ ಬರೆದುಕೊಟ್ಟರು". ಆತ ಇದನ್ನೆಲ್ಲಾ ತೆಗೆದುಕೊಂಡರೆ ಮತ್ತೆ ಸಾಲ ಆಗುತ್ತದೆ ಅಂತ ಹೇಳಿ ತೆಗೆದುಕೊಳ್ಳಲಿಲ್ಲ. ಕೊನೆಗೆ ಪ್ರಾಣ ಬಿಟ್ಟಿದ್ದ. ಕಟ್ಟಿದ ಮನೆ ಅಲ್ಲೇ ಉಳಿದಿತ್ತು. ಜೀವ ಹೋಗಿತ್ತು. ಮನೆ ಸಂಪತ್ತಲ್ಲ. ಜೀವ ಸಂಪತ್ತು ಅನ್ನುವುದು ಕೊನೆಗೂ ಗೊತ್ತೇ ಆಗಲ್ಲ. ಮಕ್ಕಳೇ ಕೊರತೆ ಆಗಬಾರದು ಹಾಗೆ ಅತಿ ಆಗಬಾರದು. ಅದೇ ನೀತಿ ಅಲ್ಲವೇ ಮಕ್ಕಳೇ..?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
******************************************