ಮದ್ಯವ್ಯಸನಿ ಪೋಷಕರ ಮಕ್ಕಳಿಗೆ ಶಿಕ್ಷಕರ ಸ್ಪಂದನೆ
Wednesday, February 25, 2026
Edit
ಮಕ್ಕಳ ಜಗಲಿಯಲ್ಲಿ
ವಿಶೇಷ ಲೇಖನ : ಮದ್ಯವ್ಯಸನಿ ಪೋಷಕರ ಮಕ್ಕಳಿಗೆ ಶಿಕ್ಷಕರ ಸ್ಪಂದನೆ
ಲೇಖಕರು : ಗಿರೀಶ್ ಎಂ ಎನ್
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು
ಮಡಿಲು ಕೌನ್ಸಿಲಿಂಗ್ ಪಾಯಿಂಟ್ ಅಚ್ಲಾಡಿ
ಉಡುಪಿ ಜಿಲ್ಲೆ
Mob : 8722715472
ಮದ್ಯ ವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಈ ಲೇಖನ
ಮದ್ಯವ್ಯಸನಿ ಪೋಷಕರ ಮಕ್ಕಳು ಎಂದರೆ, ಒಬ್ಬ ಅಥವಾ ಇಬ್ಬರೂ ಪೋಷಕರು ಮದ್ಯಪಾನ ಅವಲಂಬನೆ (ಅಲ್ಕೊಹಾಲ್ ಅವಲಂಬನೆ) ಅಥವಾ ಅತಿಯಾದ ಮದ್ಯಪಾನ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬದಲ್ಲಿ ಬೆಳೆಯುತ್ತಿರುವ ಮಕ್ಕಳು ಎಂದು ಅರ್ಥ.
ಮದ್ಯವ್ಯಸನ ಮಾಡುವ ಪೋಷಕರ ಮಕ್ಕಳು ಹಲವು ಮಜಲುಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದರ ಕುರಿತಾಗಿ ಶಿಕ್ಷಕರು ತಿಳಿದುಕೊಂಡರೆ ವಿದ್ಯಾರ್ಥಿಗಳಿಗೆ ಸೂಕ್ತ ಸಾಮಾಜಿಕ ಬೆಂಬಲವನ್ನು ಕ್ಲಪ್ತ ವೇಳೆಯಲ್ಲಿ ಒದಗಿಸಬಹುದು. ಇಲ್ಲಿ ವಿದ್ಯಾರ್ಥಿಗಳು ಎದುರಿಸುವ ಸವಾಲುಗಳೆಂದರೆ...
ಅಭದ್ರತೆಯ ಕೌಟುಂಬಿಕ ಪರಿಸರ :
ಮದ್ಯ ವ್ಯಸನಿ ಪೋಷಕರ ಮಕ್ಕಳಿಗೆ ಮನೆಯಲ್ಲಿ ಕೌಟುಂಬಿಕ ಕಲಹ ಹಾಗೂ ವಿಚಿತ್ರ ನಡವಳಿಕೆಗಳಿಂದ ಶಾಂತಿ ಮತ್ತು ಭದ್ರತೆ ಕೊರತೆಯಾಗಿರುತ್ತದೆ. ಶಾಲೆಯೇ ಅವರಿಗೆ ಸುರಕ್ಷಿತ ಸ್ಥಳ ಎನಿಸಬಹುದು.
ಪರಿಹಾರ ಕ್ರಮ : ಇಂತಹ ಸಂದರ್ಭದಲ್ಲಿ ಶಿಕ್ಷಕರು ಸ್ಪಷ್ಟ ನಿಯಮಗಳು ಮತ್ತು ಸಮಾನ ವರ್ತನೆಯ ಮೂಲಕ ಸ್ಥಿರತೆ ಒದಗಿಸಿ, ಆಟ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಇಂತಹ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಳ್ಳುವುದು. ಅವರು ಮಾಡುವ ಸಣ್ಣ ತಪ್ಪುಗಳನ್ನು ಎತ್ತಿ ಹಿಡಿಯದೆ ಧನಾತ್ಮಕ ಪುನರ್ಬಲನಗಳನ್ನು ಬಳಸಿ ಭಾಗವಹಿಸುವೆಕೆಗೆ ಪ್ರೋತ್ಸಾಹಿಸುವುದು.
ಸಣ್ಣ ವಯಸ್ಸಲ್ಲೇ ಹೊಣೆಗಾರಿಕೆ :
ಇಂತಹ ಸವಾಲುಳ್ಳ ಮಕ್ಕಳು ತಮ್ಮ ಸಹೋದರರನ್ನು ನೋಡಿಕೊಳ್ಳುವುದು, ಮನೆಯ ಸಮಸ್ಯೆಗಳ ಜವಾಬ್ದಾರಿ ಹೊರುವುದು. ಶಾಲೆ ಬಿಟ್ಟು ನಂತರ ಕೆಲಸಕ್ಕೆ ಹೋಗುವುದು. ಇದರಿಂದ ಕಲಿಕೆಯಲ್ಲಿ ಬುದ್ಧಿವಂತರಾದರೂ ವಿದ್ಯಾಭ್ಯಾಸ ಮುಂದುವರಿಸುವಲ್ಲಿ ಅನಾಸಕ್ತಿ ತೋರಿಸಿ ಶಾಲೆಯಿಂದ ದೂರ ಉಳಿಯಬಹುದು.
ಪರಿಹಾರ : ಶಿಕ್ಷಕರು ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿಶೇಷ ಗಮನ ನೀಡಬೇಕು. ಮಕ್ಕಳೊಂದಿಗೆ ಸ್ನೇಹಿತರಂತಿದ್ದು ಅವರು ಹೇಳುವ ವಿಷಯಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ನಾಲಿಗೆಗಿಂತ ಕಿವಿ ಅವರಿಗೆ ಹೆಚ್ಚು ಸಮಾಧಾನ ನೀಡುತ್ತದೆ ಎಂಬುದು ತಿಳಿದಿರಲಿ. ಇಂತಹ ವಿದ್ಯಾರ್ಥಿಗಳ ಸಣ್ಣ ಪ್ರಗತಿ ಹಾಗೂ ಸಾಧನೆಗಳನ್ನು ಪ್ರೋತ್ಸಾಹಿಸಿ, ಯಶಸ್ಸಿನ ಅನುಭವವನ್ನು ನೀಡಬೇಕು.
ಭಯ, ನಾಚಿಕೆ ಮತ್ತು ಗೌಪ್ಯತೆ :
ಕುಟುಂಬದ ಸ್ಥಿತಿಯನ್ನು ಹೇಳಿಕೊಳ್ಳಲು ಭಯಪಡುವುದು ಬೇರೆ ವಿದ್ಯಾರ್ಥಿಗಳಿಗೆ ತಮ್ಮ ಮನೆಯ ವಿಷಯವೇನಾದರೂ ತಿಳಿದರೆ ಅವರೆಲ್ಲರೂ ನನ್ನನ್ನು ದೂರ ಇಡಬಹುದು ಎಂಬ ಆತಂಕ ಅವರನ್ನು ಗೆಳೆಯರೊಂದಿಗೆ ಬೆರೆಯಲು ಬಿಡುವುದಿಲ್ಲ. ತಾನು ತನ್ನ ಮನೆಯ ಸಮಸ್ಯೆಯನ್ನು ಯಾರೊಂದಿಗಾದರೂ ಹೇಳಿಕೊಂಡರೆ ತನ್ನನ್ನು ದೂರ ಮಾಡುವರು, ತೊಂದರೆ ಕೊಟ್ಟಾರು ಎಂದು ಯಾರೊಂದಿಗೂ ಹೇಳಿಕೊಳ್ಳದೆ ತಮ್ಮಲ್ಲಿಯೇ ಗೌಪ್ಯವಾಗಿಟ್ಟುಕೊಂಡು ನೋವನ್ನು ಅನುಭವಿಸುತ್ತಿರುತ್ತಾರೆ.
ಪರಿಹಾರ: ಮಕ್ಕಳಲ್ಲಿ ಇಂತಹ ಸಮಸ್ಯೆಯನ್ನು ಗಮನಿಸಿದ ಶಿಕ್ಷಕರು ಅವರೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸಬೇಕು. ಶಾಲೆಯಲ್ಲಿ ಭದ್ರತೆಯ ಪರಿಸರವನ್ನು ಒದಗಿಸುವುದು. ಮಕ್ಕಳಿಗೆ ಅವರ ಸಮಸ್ಯೆಗಳನ್ನು ಹಂಚಿಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಿಸುವುದು. ಮಕ್ಕಳಿಗೆ ಇತರ ಗೆಳೆಯರೊಂದಿಗೆ ಏರ್ಪಡುವ ಸವಾಲುಗಳನ್ನು ಗಮನಿಸಿ ಪರಿಹರಿಸುವುದು. ಗೆಳೆತನ ವೃದ್ಧಿಗೆ ಹೆಚ್ಚು ಪ್ರೇರೇಪಿಸುವುದು. ಅಗತ್ಯವಿದೆ ಎಂದು ಕಂಡುಬಂದಲ್ಲಿ ಮಾನಸಿಕ ಆರೋಗ್ಯ ಸಹಾಯಕರು (Counselor) ಮಕ್ಕಳಿಗೆ ಗುಪ್ತಸಾಮರಸ್ಯದಲ್ಲಿ ಮಾತನಾಡಲು ಅವಕಾಶ ಒದಗಿಸುವುದು. ಅತ್ಯಂತ ಮುಖ್ಯವಾದದ್ದು ಶಿಕ್ಷಕರು ಮಕ್ಕಳ ಕುರಿತು ತಿಳಿದುಕೊಂಡ ವಿಷಯದಲ್ಲಿ ಗೌಪ್ಯತೆಯನ್ನು ಕಾಪಾಡುವುದು.
ಕಡಿಮೆ ಆತ್ಮವಿಶ್ವಾಸ :
ಮನೆಯ ಸಮಸ್ಯೆಗಳಿಗೆ ತಾವೇ ಕಾರಣ ಎಂದು ಭಾವಿಸುವ ತಪ್ಪಿತಸ್ಥ ಭಾವನೆ ಇವರಲ್ಲಿ ಕಂಡುಬರುತ್ತದೆ. ಇದರಿಂದ ಮೂಡುವ ಕೀಳರಿಮೆಯಿಂದಾಗಿ ಅವರು ತಮ್ಮ ಮೇಲಿನ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ.
ಪರಿಹಾರ: ತನ್ನ ಪೋಷಕರಲ್ಲಿರುವ ಈ ಸಮಸ್ಯೆಗೆ ತಾನು ಕಾರಣವಲ್ಲ ಎಂಬುದನ್ನು ಸ್ಪಷ್ಟ ನಿದರ್ಶನಗಳ ಮೂಲಕ ಮನವರಿಕೆ ಮಾಡಿಕೊಡಬೇಕು. ಮದ್ಯ ವ್ಯಸನ ಒಂದು ಮಾನಸಿಕ ಕಾಯಿಲೆ ಇದನ್ನು ಮನೋವೈದ್ಯಕೀಯ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯ ಮೂಲಕ ತಡೆಹಿಡಿಯಬಹುದು ಹಾಗೂ ವ್ಯಸನಕ್ಕೆ ಒಳಗಾಗಿರುವ ವ್ಯಕ್ತಿಯು ಸಾಮಾನ್ಯ ಜನರಂತೆ ಸಮಾಜದಲ್ಲಿಉತ್ತಮ ಜೀವನ ನಡೆಸುವಂತೆ ಮಾಡಬಹುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು.
ವರ್ತನಾ ಬದಲಾವಣೆಗಳು:
ಮದ್ಯ ವ್ಯಸನ ಪೋಷಕರ ಮಕ್ಕಳು ತುಂಬಾ ಮೌನವಾಗಿರಬಹುದು, ಕೆಲವರು ಕೋಪ, ಆಕ್ರಮಣಶೀಲತೆ ತೋರಬಹುದು. ಸಮಾಜ ವಿರೋಧಿ ಮನೋಭಾವನೆ ತಾಳಬಹುದು, ಅತ್ಯಂತ ಸಣ್ಣ ವಯಸ್ಸಿನಲ್ಲೇ ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗಬಹುದು, ಪ್ರೀತಿ ಪ್ರೇಮವೆಂಬ ಕಾಲ್ಪನಿಕ ವಿಚಾರದಿಂದ ಲೈಂಗಿಕ ದೌರ್ಜನಕ್ಕೆ ಒಳಗಾಗಬಹುದು ಅಪರಾಧ ಎಸಗಿದಂತಹ ವ್ಯಕ್ತಿಗಳೊಂದಿಗೆ ಸ್ನೇಹ ಸಂಪಾದನೆ ಮಾಡಿಕೊಳ್ಳಬಹುದು.
ಪರಿಹಾರ: ಮಕ್ಕಳೊಂದಿಗೆ ನಿರಂತರವಾಗಿ ಸಂಹವನ ನಡೆಸುವ ಮೂಲಕ ಅವರ ಮೌನಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಪರಿಹರಿಸುವುದು ಹಾಗೂ ಅವರ ಮೌನ ಖಿನ್ನತೆಯ ಭಾಗವಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು. ಒಂದು ವೇಳೆ ಖಿನ್ನತೆಯ ಲಕ್ಷಣವಾಗಿದ್ದರೆ ಮನೋವೈದ್ಯಕೀಯ ಚಿಕಿತ್ಸೆಗೆ ಬೆಂಬಲಿಸುವುದು. ಕೋಪ ನಿಯಂತ್ರಣ ಕೌಶಲವನ್ನು ಬೆಳೆಸುವುದು. ಮಕ್ಕಳಲ್ಲಿ ಏರ್ಪಡುತ್ತಿರುವ ಸಮಾಜ ವಿರೋಧಿ ಆಲೋಚನೆಗಳನ್ನು ಗುರುತಿಸಿ ಅದರಿಂದ ಹೊರಬರಲು ಬದಲಿ ಯೋಚನೆಗಳನ್ನು ರೂಪಿಸಲು ಸಹಾಯ ಮಾಡುವುದು. ಮದ್ಯ ವ್ಯಸನಿ ಇರುವ ಮನೆಯ ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮದ ಬಲೆಗೆ ಬೀಳಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ವಿಚಾರವನ್ನು ನೈಜಘಟನೆಗಳ ಮೂಲಕ ಮನವರಿಕೆ ಮಾಡಿ ಕೊಡುವುದು. ಅಪರಾಧ ಎಸಗಿದಂತಹ ವ್ಯಕ್ತಿಗಳೊಂದಿಗೆ ಮಾತುಕತೆ ತನ್ನ ಬೆಳವಣಿಗೆಗೆ ಎಷ್ಟು ಮಾರಕ ಎಂಬುದನ್ನು ನಿದರ್ಶನಗಳ ಮೂಲಕ ಗೊತ್ತುಪಡಿಸುವುದು.
ಶೈಕ್ಷಣಿಕ ಸಮಸ್ಯೆಗಳು :
ಶಾಲೆಗೆ ಬರುವಂತಹ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ, ಗೈರುಹಾಜರಿ, ಮನೆಗೆಲಸ ನಿರ್ಲಕ್ಷ್ಯ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಕುಂಠಿತ ಕಾಣಬಹುದು.
ಪರಿಹಾರ : ಮಕ್ಕಳಲ್ಲಿ ಕಾಣಸಿಗುವಂತಹ ಏಕಾಗ್ರತೆಯ ಕೊರತೆಗೆ ನಿರ್ದಿಷ್ಟ ಕಾರಣಗಳನ್ನು ಪತ್ತೆ ಹಚ್ಚಿ ಅಗತ್ಯ ಪರಿಹಾರ ಕ್ರಮ ಕೈಗೊಂಡು ಏಕಾಗ್ರತೆ ಹೆಚ್ಚಿಸುವ ಚಟುವಟಿಕೆಗಳನ್ನು ನಿರಂತರವಾಗಿ ನೀಡುವುದು. ನಿರಂತರ ಗೈರುಹಾಜರಿಯಾಗುವ ಮಕ್ಕಳನ್ನು ನಿರ್ಲಕ್ಷಿಸದೆ ಅವರ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಚರ್ಚಿಸಿ ವಿದ್ಯಾರ್ಥಿಗೆ ಇದರಿಂದ ಉಂಟಾಗುವ ನಷ್ಟದ ಕುರಿತು ಮನವರಿಕೆ ಮಾಡುವುದು ಹಾಗೂ ವಿದ್ಯಾರ್ಥಿಯೊಂದಿಗೆ ಸಮಾಲೋಚಿಸಿ ಶಾಲೆಗೆ ಮರಳಿ ಬರಲು ಅನುಕೂಲಕರ ವಾತಾವರಣ ಒದಗಿಸುವುದಾಗಿ ಭರವಸೆ ನೀಡುವುದು.
ನಂಬಿಕೆಯ ಕೊರತೆ :
ಮನೆಯಲ್ಲಿನ ಮುರಿದ ಭರವಸೆಗಳಿಂದಾಗಿ ಇತರೆ ವ್ಯಕ್ತಿಗಳ ಮೇಲೆ ನಂಬಿಕೆ ಇಡುವುದು ಇವರಿಗೆ ಕಷ್ಟವಾಗುತ್ತದೆ. ಇದರಿಂದಾಗಿ ಯಾರೊಂದಿಗೂ ಬೆರೆಯದೆ ಏರ್ಪಡುವ ಸಾಮಾಜಿಕ ಒಂಟಿತನ ಇವರ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಪರಿಹಾರ : ವಿದ್ಯಾರ್ಥಿಯ ಮನೆಯಲ್ಲಿನ ಸಮಸ್ಯೆಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡ ನಂತರ ಸಾಮಾಜಿಕ ಬೆಂಬಲ ಪಡೆಯುವುದರ ಉಪಯೋಗ ಹಾಗೂ ಮಹತ್ವವನ್ನು ಸುಲಭ ರೂಪದಲ್ಲಿ ಅರ್ಥ ಮಾಡಿಸುವುದು ಹಾಗೂ ಶಾಲೆಯಲ್ಲಿ ಗುಂಪು ಚಟುವಟಿಕೆಗಳನ್ನು ರಚಿಸುವ ಮೂಲಕ ಸಾಮಾಜಿಕ ಒಂಟಿತನದಿಂದ ದೂರವಿರಲು ಉತ್ತೇಜಿಸುವುದು.
ಮಾನಸಿಕ ಆರೋಗ್ಯದ ಅಪಾಯ :
ಖಿನ್ನತೆ (ಡಿಪ್ರೆಷನ್), ಆತಂಕ, ಒತ್ತಡ, ಆತ್ಮಹತ್ಯೆಯ ಆಲೋಚನೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.
ಪರಿಹಾರ: ನಿರಂತರ ಸವಾಲುಗಳು ಎದುರಾಗುವ ಸಂದರ್ಭದಲ್ಲಿ ಉಂಟಾಗುವಂತಹ ಮಾನಸಿಕ ಕಾಯಿಲೆಗಳಾದ ಒತ್ತಡ, ಖಿನ್ನತೆ ಆತಂಕ ಹಾಗೂ ಆತ್ಮಹತ್ಯೆಯಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮನೋವೈದ್ಯರನ್ನು ಸಂಪರ್ಕಿಸಿ ಅವರು ಸಲಹೆ ನೀಡಿದಂತಹ ಔಷಧೋಪಚಾರಗಳನ್ನು ಪಡೆದುಕೊಳ್ಳಲು ಬೆಂಬಲಿಸುವುದು.
ಮಾದಕ ವ್ಯಸನಾ ಪೋಷಕರ ಮಕ್ಕಳಿಗೆ ಶಿಕ್ಷಕರು ತಿಳಿಸಲೇಬೇಕಾದ ಏಳು ಮುಖ್ಯ ಅಂಶಗಳು:
1. ನಿನ್ನ ತಂದೆ ಅಥವಾ ತಾಯಿಯ ಮದ್ಯ ವ್ಯಸನಕ್ಕೆ ನೀನು ಕಾರಣವಲ್ಲ :
ಇಂತಹ ಒಂದು ಪರಿಸ್ಥಿತಿ ನಿನ್ನ ಮನೆಯಲ್ಲಿ ಏರ್ಪಟ್ಟಿದೆ ಅಥವಾ ಒಂದೊಮ್ಮೆ ಆರೋಪವೇ ನಿನ್ನ ಮೇಲೆ (ನೀನು ಹುಟ್ಟಿದ ಗಳಿಗೆಯಿಂದ) ಬಂದಿದೆಯೆಂದಾದರೂ ವ್ಯಸನ ಒಂದು ಮಾನಸಿಕ ಕಾಯಿಲೆ. ಈ ಕಾಯಿಲೆಗೆ ಮಾದಕ ವಸ್ತುವನ್ನು ಬಳಸಲು ಪ್ರಾರಂಭಿಸಿದ ವ್ಯಕ್ತಿಯಷ್ಟೇ ಕಾರಣ ಹೊರತು ಇನ್ನಾರು ಅಲ್ಲ. ಇದು ಚಿಕಿತ್ಸೆಯಿಂದ ನಿಯಂತ್ರಣಕ್ಕೆ ಬರುತ್ತದೆ ಎಂಬುದು ತಿಳಿಸಿರಿ.
2. ನೀನು ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ: ನಿನ್ನ ಮೇಲೆ ಪೋಷಕರಿಗೆ ಎಷ್ಟೇ ಪ್ರೀತಿ ಮಮಕಾರವಿದ್ದರೂ ನಿನಗೆ ಕೊಡುವ ಮಾತಿನಿಂದಾಗಲಿ, ನೀನು ಮಾಡಿಸಿಕೊಳ್ಳುವ ಆಣೆ ಪ್ರಮಾಣದಿಂದಾಗಲಿ, ನೀನು ಮನೆಯ ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ಹೊರುವುದರಿಂದಾಗಲಿ ಇದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದೊಂದು ಮನೋರೋಗ. ಇದಕ್ಕೆ ಮನೋವೈದ್ಯಕೀಯ ಚಿಕಿತ್ಸೆಯ ನೆರವು ಅತ್ಯಗತ್ಯ ಎಂಬುದನ್ನು ಹೇಳಿರಿ.
3. ನೀನು ಇದನ್ನು ಗುಣಪಡಿಸಲು ಸಾಧ್ಯವಿಲ್ಲ :
ಇದೊಂದು ಸಾಮಾಜಿಕ, ಕೌಟುಂಬಿಕ ಹಾಗೂ ಮಾನಸಿಕ ಕಾಯಿಲೆ. ಹಾಗಾಗಿ ಇದು ನಿನ್ನೊಬ್ಬನ ಜವಾಬ್ದಾರಿ ಎಂದುಕೊಂಡರೆ ಅದು ಹೊರಲಾಗದಂತಹ ಭಾರವಾಗಬಹುದು. ಇದಕ್ಕೆ ಕುಟುಂಬದ ನೆರವು, ಮನೋವೈದ್ಯಕೀಯ ಸಹಾಯ ಹಾಗೂ ಸಮಾಜದ ಬೆಂಬಲ ದೊರೆತರೆ ಖಂಡಿತಾ ನಿಯಂತ್ರಣ ಸಾಧ್ಯ ಎಂಬುದು ತಿಳಿಸಿರಿ.
4. ನೀನು ನಿನ್ನನ್ನು ಕಾಳಜಿ ವಹಿಸಲು ಸಹಾಯ ಮಾಡಬೇಕು – ನಿನ್ನ ಸ್ನೇಹಿತರು, ಗುರುಗಳು, ಸಂಬಂಧಿಕರು ಹಾಗೂ ಪೋಷಕರೊಂದಿಗೆ ನಿನ್ನ ಯೋಚನೆಗಳನ್ನು ಹಾಗೂ ಗೊಂದಲಗಳನ್ನು ಮಾತನಾಡುವ ಮುಖಾಂತರ ಹಂಚಿಕೊಳ್ಳುವುದು. ನಿನಗೆ ಹೆಚ್ಚು ನೆಮ್ಮದಿಯನ್ನು ಹಾಗೂ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ ಎಂಬುದು ಹೇಳಿರಿ.
5. ನಿನ್ನ ಭಾವನೆಗಳನ್ನು ಹಂಚಿಕೊಳ್ಳುವುದು :
ನೋವು, ಕೋಪ, ಹತಾಶೆ, ಅಸಮಾಧಾನ, ಖುಷಿ ಎಲ್ಲಾ ಭಾವನೆಗಳನ್ನು ಸಂಕೋಚವಿಲ್ಲದೆ ವ್ಯಕ್ತಪಡಿಸಬೇಕು.. : ಇದು ನಿನ್ನೊಳಗಿನ ಭಾವನೆಗಳನ್ನು ಅರಿಯಲು ಮತ್ತು ಸಹಾಯ ಮಾಡಲು ಅನುವು ಮಾಡಿಕೊಟ್ಟು ಮನಸ್ಸಿಗೆ ಶಾಂತಿ ನೀಡುತ್ತದೆ. ಒತ್ತಡವನ್ನು ಕಮ್ಮಿ ಮಾಡಿ ಮಾನಸಿಕ ತೊಂದರೆಯಿಂದ ದೂರ ಉಳಿಸುತ್ತದೆ ಎಂಬುದನ್ನು ಮನದಟ್ಟು ಮಾಡಿರಿ.
6. ಆರೋಗ್ಯಕರ ಆಯ್ಕೆಗಳನ್ನು ಮಾಡುವುದು :
ನಿನ್ನ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡುವ ಚಟುವಟಿಕೆಗಳನ್ನು ಪಾಲಿಸುವುದು
ಉದಾಹರಣೆ: ಉತ್ತಮ ಆಹಾರ ಸೇವನೆ, ಯೋಗ, ವ್ಯಾಯಾಮ, ಸರಿಯಾದ ನಿದ್ರೆ, ಒತ್ತಡ ಕಡಿಮೆ ಮಾಡುವ ಹೊರಾಂಗಣ ಆಟಗಳು ಇವು ನಿನ್ನ ದೈಹಿಕ ಬಲವನ್ನು ಹೆಚ್ಚಿಸುತ್ತದೆ. ಸದೃಢ ದೇಹದಲ್ಲಿ ಆರೋಗ್ಯಕರವಾದ ಮನಸ್ಸಿರುತ್ತದೆ ಎಂಬುದನ್ನು ತಿಳಿಸಿರಿ.
7. ಪ್ರತಿ ವಿಷಯಗಳನ್ನು ಸಂಭ್ರಮಿಸುವುದು :
ನಿನ್ನ ಸಾಧನೆ, ಶ್ರಮ, ಮತ್ತು ನೀನು ಮಾಡಿದ ಉತ್ತಮ ಕಾರ್ಯಗಳನ್ನು ಹಂಚಿಕೊಳ್ಳುವುದು
ಉದಾಹರಣೆ: ನಿನ್ನ ಹಾಸ್ಯಮಯ ಕ್ಷಣಗಳು, ಹೊಸ ಗುರಿಗಳು, ನಿನ್ನ ಶಕ್ತಿ ಮತ್ತು ಪ್ರತಿಭೆಯನ್ನು ಗುರುತಿಸುವುದು. ಇದು ನಿನ್ನಲ್ಲಿ ಸ್ವಯಂ ಗೌರವ ಹೆಚ್ಚಿಸಲು ಹಾಗೂ ಕೀಳರಿಮೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಂಬುದನ್ನು
ಹೇಳಿರಿ.
ಶಿಕ್ಷಕರ ಮಾರ್ಗದರ್ಶನವು, ಸಾಮಾಜಿಕ ಬೆಂಬಲವೂ ಮಕ್ಕಳ ಜೀವನದಲ್ಲಿ ಒಂದು ಸುರಕ್ಷಿತ ವಾತಾವರಣವನ್ನು ಒದಗಿಸುತ್ತದೆ. ಸಕಾರಾತ್ಮಕ ಚಟುವಟಿಕೆಗಳಾದ ಕ್ರೀಡೆಗಳು, ಕಲಾಕೃತಿಗಳು, ಓದು ಮತ್ತು ಹವ್ಯಾಸಗಳು ಅವರಿಗೆ ಜೀವನದ ಉತ್ತಮ ಮಾರ್ಗಗಳನ್ನು ತೋರಿಸುವ ಪರ್ಯಾಯ ಸ್ನೇಹಿತರು ಎಂಬುದನ್ನು ಮನವರಿಕೆ ಮಾಡಿಕೊಡುವುದು. ಈ ರೀತಿಯ ಸಹಾಯ ಹಾಗೂ ನಿರಂತರ ಮಾರ್ಗದರ್ಶನ ಕೊಡುವ ಮೂಲಕ ಮದ್ಯ ವ್ಯಸನ ಪೋಷಕರ ಮಕ್ಕಳು ಸುರಕ್ಷಿತ, ಮತ್ತು ಯಶಸ್ವಿ ಜೀವನ ಕಟ್ಟಿಕೊಳ್ಳಲು ಶಿಕ್ಷಕರು ನೆರವಾಗಬಹುದು.
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು
ಮಡಿಲು ಕೌನ್ಸಿಲಿಂಗ್ ಪಾಯಿಂಟ್ ಅಚ್ಲಾಡಿ
ಉಡುಪಿ ಜಿಲ್ಲೆ
Mob : 8722715472
*****************************************