-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 117

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 117

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 117
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
    
ಪ್ರೀತಿಯ ಮಕ್ಕಳೇ... ನಿದ್ದೆಯ ಸಂದೇಶಗಳು ರಾಸಾಯನಿಕ ಸಂದೇಶಗಳು ಎಂದು ಹೇಳಿದ ಮೇಲೆ ಜೈವಿಕ ಗಡಿಯಾರವೂ ರಾಸಾಯನಿಕ ಸಂದೇಶವೆ ಆಗಬೇಕಲ್ಲ ಎಂದು ನೀವು ಕೇಳಬಹುದು. ಹೌದು ಹಾಗಾದರೆ ಈ ಜೈವಿಕ ಗಡಿಯಾರವು ದೇಹದ ಹೊಂದಾಣಿಕೆಯೇ ಅಥವಾ ರಾಸಾಯನಿಕ ಸಂದೇಶಗಳೇ ಎಂದು ನೀವು ಕೇಳಬಹುದು. ನಿದ್ದೆಯನ್ನು ನಿಯಂತ್ರಿಸುವುದು ರಾಸಾಯನಿಕಗಳೇ. ಮೆದುಳಿನಲ್ಲಿ ಪೀನಿಯಲ್ ಕಾಯ (penial body) ಎಂಬ ಗ್ರಂಥಿ ಇದೆ. ಅದು ಮೆಲಟೋನಿನ್ ಎಂಬ ಹಾರ್ಮೋನನ್ನು ಸೃವಿಸುತ್ತದೆ. ಅಂದರೆ ಮೆದುಳು ಒಂದು ನಿರ್ನಾಳ ಗ್ರಂಥಿಯೂ (endocrine gland) ಹೌದು. ಮೆದಳಿನಲ್ಲಿರುವ ಪಿಟ್ಯುಟರಿ ಮತ್ತು ಪೀನಿಯಲ್ ಕಾಯಗಳು ತಾವು ಸ್ರವಿಸುವ ರಾಸಾಯನಿಕಗಳನ್ನು ನೇರವಾಗಿ ರಕ್ತಕ್ಕೆ ಸೇರಿಸುತ್ತವೆ. ಇವು ರಕ್ತ ಪ್ರವಾಹದ ಗುಂಟ ಸಾಗಿ ತಾವು ಪ್ರಭಾವಿಸಬೇಕಾದ ಅಂಗಗಳ (target organs) ಮೇಲೆ ಪ್ರಭಾವ ಬೀರುತ್ತವೆ. ಇವುಗಳನ್ನು ನಿಯಂತ್ರಿಸುವುದು ಹೈಪೋಥಲಾಮಸ್ (hypothalamus). ಇದರ ಮೂಲಕ ಇಂದ್ರಿಯಗಳಿಂದ ಬರುವ ನರಗಳು ಹಾದುಹೋಗುತ್ತವೆ. ಕಣ್ಣಿನಿಂದ ಬರುವ ಅಕ್ಷಿ ನರಗಳು (optic nerves) hypothalamus ಗೆ ಬರುತ್ತದೆ. ಇಲ್ಲಿ ಎಡ ಬಲ ಕಣ್ಣುಗಳಿಂದ ಬರುವ ನರಗಳು ಪರಸ್ಪರ ಅಡ್ಡ ಹಾದು ಎಡ ಕಣ್ಣಿನ ನರ ಬಲ ಭಾಗಕ್ಕೂ ಬಲ ಕಣ್ಣಿನ ನರ ಎಡ ಭಾಗಕ್ಕೂ ಹೋಗುವಾಗ ಒಂದು ಕತ್ತರಿಯಂತಹ ರಚನೆಯಾಗುತ್ತದೆ. ಇದು ದೃಷ್ಟಿ ಕತ್ತರಿ (optic chiasm). ಇದರ ಕೇಂದ್ರದಲ್ಲಿರುವ ಒಂದಷ್ಷು ನರಕೋಶಗಳು (Supra Chiasmatic Neurons SCN) ಪೀನಿಯಲ್ ಗ್ರಂಥಿಗೆ ನರ ಸಂದೇಶ ಕಳುಹಿಸುತ್ತದೆ. ಇದೂ ರಾಸಾಯನಿಕವೇ. ಬೆಳಕಿನ ತೀವ್ರತೆಯನ್ನು ನಿಮ್ಮ ಕಣ್ಣು ಗ್ರಹಿಸುತ್ತವೆ. ಬೆಳಕು ಕಡಿಮೆಯಾಗುತ್ತಿದ್ದ ಹಾಗೆ ಪೀನಿಯಲ್ ಕಾಯ ಮೆಲಟೋನಿನ್ ಅನ್ನು ಸ್ರವಿಸುತ್ತದೆ. ಈ ಮೆಲಟೋನಿನ್ ನಿದ್ದೆಯ ಮತ್ತನ್ನು ಉಂಟು ಮಾಡುತ್ತದೆ. ನಿಮ್ಮ ದೇಹ ನಿದ್ದೆ ಎಚ್ಚರ ಚಕ್ರದ ನಿದ್ರಾವಸ್ಥೆಯನ್ನು ಪ್ರವೇಶಿಸುತ್ತದೆ. ಬೆಳಗಾಗುತ್ತಿರುವ ಹಾಗೆ ಕಣ್ಣು ಬೆಳಕನ್ನು ಸ್ವೀಕರಿಸುತ್ತದೆ. ಆಗ ನೀವು ಎಚ್ಚರಗೊಳ್ಳುತ್ತೀರಿ. ಅಂದರೆ ಎಚ್ಚರ. ಹೇಗೆ ರಾಸಾಯನಿಕಗಳ ಜಗತ್ತಿನಲ್ಲಿ ಜೈವಿಕ ಗಡಿಯಾರ ಲಯ ಕಂಡುಕೊಳ್ಳುತ್ತದೆ.

ಈ ಮೆಲಟೋನಿನ್ ಇಲ್ಲದೇ ಗಾಢ ನಿದ್ದೆ ಸಾಧ್ಯವಿಲ್ಲ. ಗಾಢ ನಿದ್ದೆ ಎಂದರೆ NREM ಮತ್ತು REM ಚಕ್ರಗಳು. ನೀವು ಆಲ್ಕೊಹಾಲ್ ಸೇವಿಸಿದಾಗಲೂ ಹಾಗೆಯೇ. ಆಲ್ಕೋಹಾಲ್ ನಿಮ್ಮ ಮೆದುಳಿನ ನಿಯಂತ್ರಣ ತಪ್ಪಿಸುವುದರಿಂದ ಮೆಲಟೋನಿನ್ ಸ್ರವಿಸುವುದಿಲ್ಲ. ಆದ್ದರಿಂದ ನಿಮಗೆ ಮಂಪರು ಇರಬಹುದೇ ಹೊರತು ಗಾಢ ನಿದ್ದೆ ಬಾರದು. ಈ ಆಲ್ಕೋಹಾಲ್ ಕೂಡಾ ಒಂದು ರಾಸಾಯನಿಕ. ಆದ್ದರಿಂದ ಒಂದು ಪೆಗ್ ಹಾಕಿ ಚಂದ ನಿದ್ದೆ ಮಾಡುತ್ತೇನೆ ಎನ್ನುವವರಿಗೆ ನಿದ್ದೆಯ ರಸಾಯನಶಾಸ್ತ್ರ (sleep chemistry) ಗೊತ್ತಿಲ್ಲ ಎಂದೇ ಅರ್ಥ. ಇನ್ನು ಹೊತ್ತು ಏರುವಾಗಿನ ನಿದ್ದೆ ಕೂಡಾ ಮೆಲಟೋನಿನ್ ರಹಿತ ನಿದ್ದೆ. ಇದು ಕೂಡಾ ಗಾಢತೆ ಇಲ್ಲದ್ದು. ಹೊತ್ತೇಳುವಾಗಿನ ನಿದ್ದೆ ಆಲಸ್ಯವನ್ನು ಹೆಚ್ಚಿಸಬಹುದೇ ಹೊರತು ಹೇಹಕ್ಕೆ ವಿಶ್ರಾಂತಿಯನ್ನು ನೀಡುವುದಿಲ್ಲ. ಆದ್ದರಿಂದ ಎಂಟು ಗಂಟೆಯ ವರೆಗೆ ಮಲಗಬೇಡಿ ಬದಲಾಗಿ ಬೇಗ ಏಳಿ.

ಬೆಳಕು ನಿಮ್ಮ ನಿದ್ದೆಯನ್ನು ಮುಂದೂಡುತ್ತದೆ ಎಂದಾಯಿತು. ಅದರಲ್ಲಿಯೂ ನೀಲಿ ಬೆಳಕು ನಿದ್ದೆಯ ಶತ್ರು. ಈಗ ಹೇಳಿ ನಿಮ್ಮ ನಿದ್ದೆಯ ಮೊದಲು ನೀಲಿ ಪರದೆ ವೀಕ್ಷಣೆಯ (ಟಿವಿ ಮತ್ತು ಮೊಬೈಲ್) ಪರಿಣಾಮ ಏನು? ನಿಮ್ಮ ಕೊಠಡಿಯಲ್ಲಿ ರಾತ್ರಿ ದೀಪ (night lamp) ಉರಿಸುವುದರಿಂದ ಏನಾಗುತ್ತದೆ? ಆದ್ದರಿಂದ ಇವತ್ತೇ ನಿಮ್ಮ ರಾತ್ರಿ ದೀಪ ಆರಿಸಿ ಕತ್ತಲೆಯಲ್ಲೇ ನಿದ್ದೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಮಗೆ ಬೇಕಾಗಿರುವುದು ನಿದ್ದೆಯಲ್ಲ ಬದಲಾಗಿ NREM ಮತ್ತು REM ಚಕ್ರವನ್ನು ಹೊಂದಿರುವ ಗಾಢ ನಿದ್ದೆ. ಮಕ್ಕಳಿಗಂತೂ ಸೂಚಕ ದೀಪದ (indicator lamp) ಸಣ್ಣ ಮಿಣುಕೂ ಗಾಢ ನಿದ್ದೆಯನ್ನು ತಡೆಯುತ್ತದೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************


Ads on article

Advertise in articles 1

advertising articles 2

Advertise under the article