-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 140

ನಿಷ್ಪಾಪಿ ಸಸ್ಯಗಳು : ಸಂಚಿಕೆ - 140

ನಿಷ್ಪಾಪಿ ಸಸ್ಯಗಳು : ಸಂಚಿಕೆ - 140
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

     
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಬೇಸಿಗೆಯ ಸ್ಪರ್ಶ ಈಗ ತಾನೇ ಅನುಭವಕ್ಕೆ ಬರುತ್ತಿದೆ... ಉರಿದುರಿದು ಬೀಳುವ ಸೂರ್ಯದೇವನಿಗೆ ಒಂದಿಷ್ಟೂ ಕರುಣೆ ಬಾರದ ಬೇಸಗೆಯ ದಿನಗಳನ್ನು ಎಣಿಸುವಾಗಲೇ ಒಂದಿಷ್ಟು ಚಿಂತೆ ಕಾಡದಿರದು. ಆಗೆಲ್ಲ ನಮ್ಮ ನೆತ್ತಿ ತಂಪಾಗಿಸುವ ವಸ್ತುಗಳೆಂದರೆ ಕಲ್ಲಂಗಡಿ, ಪಪ್ಪಾಯಿಯಂತಹ ಹಣ್ಣುಗಳಲ್ಲವೆ? ಕಲ್ಲಂಗಡಿ ಮಧುರವಾದ ನೀರನ್ನು ಹೆಚ್ಚು ನೀಡಿದರೆ ವರ್ಷವಿಡೀ ಸುವಾಸನೆ, ಸ್ವಾದ ಭರಿತ ತಿರುಳಿನ ಜೊತೆ ಹೊಟ್ಟೆ ತುಂಬಿಸುವ ಹಣ್ಣು ಪಪ್ಪಾಯಿ. ಹಣ್ಣುಗಳ ವಿಚಾರದಲ್ಲಿ ಪಪ್ಪಾಯಿ ಅಗ್ರಸ್ಥಾನದಲ್ಲಿದೆ. ಪಕ್ವವಾದಾಗ ಕಾಣಿಸುವ ಅದರ ಹೊರನೋಟದ ಹಳದಿ ಮನ ಸೆಳೆದರೆ ಸೀಳಿದಾಗ ಬೊಗಸೆದುಂಬುವ ನುಣುಪಾದ ಬೀಜಗಳು, ಕೆಂಪು ಗುಲಾಬಿ ವರ್ಣದ ಸಂಪೂರ್ಣ ತಿನ್ನ ಬಹುದಾದ ತಿರುಳಿಗೆ ಸೋಲದವರಾರು? 
ಕ್ಯಾರಿಕೇಸಿ ಕುಟುಂಬದ ಪಪ್ಪಾಯಿ ಕ್ಯಾರಿಕಾ ಕುಲದ ಕೂಸು!. ಕ್ಯಾರಿಕಾ ಪಪ್ಪಾಯಿ ಎಂದೇ ಅದರ ಶಾಸ್ತ್ರೀಯ ನಾಮಧೇಯ. ಉಷ್ಣವಲಯದ ಹವಾಮಾನದ ಬೆಳೆಯಾದರೂ ಭಾರತದಲ್ಲಿ ಬೆಳೆಯದ ಜಾಗವಿಲ್ಲ. ಜೌಗು ಮಣ್ಣು, ಜಂಬಿಟ್ಟಿಗೆ ಮಣ್ಣೆಂದರೆ ಪಪ್ಪಾಯಿಗಾಗದು. ಅದಕ್ಕೇನಿದ್ದರೂ ಮೇಲ್ಮಣ್ಣು ಸಾಕು. ಬೇರು ಆಳಕ್ಕಿಳಿಯದ ಕಾರಣ ಮೇಲ್ಮಣ್ಣೇ ಆದರೂ ಅದು ಫಲವತ್ತಾದ ಮಣ್ಣು ಆಗಿರಬೇಕು. ಮೆಕ್ಕಲು ಮಣ್ಣೆಂದರೆ ಬಲು ಇಷ್ಟ. ಸಾಕಷ್ಟು ಫಸಲು ನೀಡಬಲ್ಲದು. ಪಪ್ಪಾಯಿಗೆ ಇನ್ನೊಂದು ಬೇಸರದ ವಿಷಯವೆಂದರೆ ಗಾಳಿ. ಬರಿಯ ಗಾಳಿಯಾದರೆ ಪರವಾಗಿಲ್ಲ... ಈ ಸುಳಿಗಾಳಿ, ಚಂಡಮಾರುತ, ಆಲಿಕಲ್ಲು ಮಳೆಯೆಲ್ಲ ಬಂದರೆ ಅರೆ ಘಳಿಗೆಯಲ್ಲೇ ಎಲ್ಲಾ ಅಧ್ವಾನ.. ಅನಾಹುತವೇ ಸಂಭವಿಸಿಬಿಡುತ್ತದೆ!. ಹೆಚ್ಚು ಉಷ್ಣ, ಹೆಚ್ಚು ಶೀತವನ್ನೂ ಸಹಿಸದು. ತೆಳ್ಳಗಿನ 
ಉದ್ದನೆಯ ಟೊಳ್ಳು ಮರಕ್ಕೆ ಉದ್ದುದ್ದನೆಯ ಟೊಳ್ಳು ತೊಟ್ಟುಗಳ ತುದಿಗಳಲ್ಲಿ ಮನುಷ್ಯನ ಕೈಬೆರಳಿನಂತಹ ರಚನೆಯ ಅಗಲಗಲದ ಎಲೆಗಳು. ಚಿಗುರಿ ನಿಧಾನಕ್ಕೆ ಬೆಳೆಯುತ್ತಾ ಬಾನಿಗೆ ಮುಖಮಾಡಿ ಹರಡಿಕೊಳ್ಳುವ ಹಸಿರಿನ ಎಲೆಗಳ ಶೃಂಗಾರ ಮರಕ್ಕೊಂದು ಕಿರೀಟವನ್ನೇ ಕಟ್ಟಿದಂತಿರುತ್ತದೆ. ಈ ಎಲೆಗಳು ಹಣ್ಣಾಗಿ ಒಣಗಿ ಬೀಳುತ್ತಾ ಗಿಡವು ಮೇಲೇರುತ್ತದೆ. ಬೂದು ಬಣ್ಣದ ಪಪ್ಪಾಯಿ ಮರದ ಮೈತುಂಬಾ ಈ ಎಲೆಗಳ ದಂಟಿನ ಗುರುತು ಅಚ್ಚೊತ್ತಿರುತ್ತದೆ.

ಇತ್ತೀಚಿನ ದಿನಗಳಲ್ಲಿ ವಿಶ್ವದ ಮಾರುಕಟ್ಟೆಯಲ್ಲಿ ಭಾರತವೇ ಪ್ರಮುಖ ಉತ್ಪಾದಕ.16ನೇ ಶತಮಾನದ ಮಧ್ಯಭಾಗದಲ್ಲಿ ಭಾರತಕ್ಕೆ ಪಪ್ಪಾಯಿಯ ಆಗಮನವಾದರೂ ಹಳ್ಳಿಗಳಲ್ಲಿನ ಪ್ರತಿ ಮನೆಯಲ್ಲೂ ಒಂದು ಜಾಗವನ್ನು ಪಡೆದಿದೆ. ಹಣ್ಣು ಮಾಡಿ ತಿನ್ನುವುದೇ ಅಲ್ಲದೆ ಬಸಳೆಯ ಜೊತೆ, ಹುರುಳಿಯ ಜೊತೆ ಪಪ್ಪಾಯಿ ಹಾಕಿ ಸಾಂಬಾರು ಮಾಡುವುದು ಇಂದಿಗೂ ಪಾರಂಪರಿಕವಾಗಿ ಬಳಕೆಯಲ್ಲಿದೆ. 

ಪಪ್ಪಾಯಿ ಸಸಿ ನೆಟ್ಟ ಐದಾರು ತಿಂಗಳಲ್ಲಿ ಹೂ ಬಿಡುವುದಾದರೂ ಕಾಯಿ ಕಟ್ಟುವ ಬಗ್ಗೆ ಸಂಶಯ ಇದ್ದೇ ಇರುತ್ತದೆ. ಏಕೆಂದರೆ ಪಪ್ಪಾಯಿಯು ಒಂದು ವಿಶಿಷ್ಟವಾದ ಸಸ್ಯ. ಇದರಲ್ಲಿ ಹೂಬಿಡುವ ವರೆಗೆ ಮರಗಳ ಲಿಂಗ ನಿರ್ಣಯ ಕಷ್ಟಸಾಧ್ಯ. ಗಿಡದ ತುದಿಯಲ್ಲಿ ಎಲೆಗಳ ಬುಡದಲ್ಲೇ ಹೂ ಕಾಯಿಗಳಾಗಿ ಎಲೆ ಉದುರುತ್ತಾ ಹೋದಂತೆ ಬರಿಯ ಕಾಯಿಗಳೇ ಕಾಣಿಸುತ್ತವೆ. ಹೆಣ್ಣು ಹೂ ಗಾತ್ರದಲ್ಲಿ ದೊಡ್ಡದು. ತಿಳಿ ಹಳದಿ ಹೂಗಳು ಮುದ್ದಾಗಿರುತ್ತವೆ. ಪುಷ್ಪಪಾತ್ರೆಯೊಳಗೆ ಐದು ಮೃದುವಾದ ದಪ್ಪನೆಯ ದಳಗಳನ್ನು ಹೊಂದಿದ ಪಪ್ಪಾಯಿ ಹೂವು ವಿವಿಧ ಕೀಟಗಳನ್ನು ಆಕರ್ಷಿಸುತ್ತವೆ. ಈ ಹೆಣ್ಣು ಹೂವು ಒಂಟಿಯಾಗಿಯೂ ಕೆಲವೊಮ್ಮೆ ಎರಡು ಮೂರು ಹೂಗಳು ಜೊತೆಯಾಗಿಯೂ ಇರುವುದುಂಟು. ಅಂಡಾಕಾರದ ಅಂಡಾಶಯವಿದ್ದು ಐದು ಕವಲಿನ ಶಲಾಕಾಗ್ರವಿರುತ್ತದೆ.

ಗಂಡು ಹೂಗಳು ಗಾತ್ರದಲ್ಲಿ ಸಣ್ಣವು. ಹಲವಾರು ಹೂಗಳಿರುವ ಗೊಂಚಲುಗಳು ಉದ್ದನೆಯ ತೊಟ್ಟಿಗೆ ಜೋಡಣೆಯಾಗಿರುತ್ತದೆ. ಇಲ್ಲಿಯೂ ಪುಷ್ಪ ಸ್ವರೂಪ ಹೆಣ್ಣಿನಂತೇ ಇದ್ದರೂ ಕಾಯಿಗಳಾಗುವುದಿಲ್ಲ. ಹೂವಿನ ಗೊಂಚಲುಗಳು ಮರದ ಸುತ್ತಲೂ ಹರಡಿರುತ್ತವೆ. ಕೆಲವೊಮ್ಮೆ ಪ್ರಕೃತಿಯ ವಿಸ್ಮಯವೆಂಬಂತೆ ಇಲ್ಲೂ ಕಾಯಿಗಳಾಗುವುದಿದೆ! ಇದಕ್ಕೆ ಕೆಲವು ಹೂಗಳು ಅಂಡಾಶಯ ಪಡೆಯುವುದೇ ಕಾರಣವಾಗಿರುತ್ತದೆ!. ಆದರೆ ಈ ರೀತಿ ಬಿಟ್ಟ ಹಣ್ಣುಗಳ ಆಕಾರ ಸಣ್ಣದಾಗಿರುತ್ತದೆ. ಪಪ್ಪಾಯಿಯಲ್ಲಿ ಇನ್ನೂ ಒಂದು ಪ್ರಕಾರದ ಹೂಗಳು ಅರಳುತ್ತವೆ. ಅವು ದ್ವಿಲಿಂಗಿಗಳು. ಗಾತ್ರ ಮತ್ತು ಆಕಾರದಲ್ಲಿ ಹೆಣ್ಣು ಹೂವಿನಂತೆ ಇದ್ದರೂ ಈ ಹೂಗಳಲ್ಲಿ ಗಂಡು, ಹೆಣ್ಣು ಎರಡೂ ಲಿಂಗಗಳಿವೆ. ಹೆಣ್ಣು ಹೂವಿನಿಂದ ಗುಂಡಾಗಿ ದಪ್ಪನೆಯ ಹಣ್ಣು ಬೆಳೆದರೆ ಈ ದ್ವಿಲಿಂಗಿ ಹೂವಿನಿಂದ ಸಣ್ಣ ಗಾತ್ರದ ಉದ್ದನೆಯ ಹಣ್ಣು ಬೆಳೆಯುತ್ತದೆ. ದ್ವಿಲಿಂಗಿ ಹೂಗಳ ಪಪ್ಪಾಯಿ ಮರಗಳು ಮುಂದಿನ ಪೀಳಿಗೆಗೂ ದ್ವಿಲಿಂಗತನವನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಪಪ್ಪಾಯಿ ಹಣ್ಣಿನಲ್ಲಿ ಪಪೈನ್ ಎಂಬ ನೈಸರ್ಗಿಕ ಜೀರ್ಣಕಿಣ್ವ ಇರುವುದರಿಂದ ಮಾನವನ ಜೀರ್ಣಾಂಗ ವ್ಯೂಹಕ್ಕೆ ಸಹಕಾರಿಯಾಗಿದೆ. ಸರಿಯಾದ ಪ್ರಮಾಣದಲ್ಲಿ ಸರಿಯಾದ ವೇಳೆಯಲ್ಲಿ ಸೇವನೆ ಮಾಡಿದರೆ ಮಾತ್ರ ಪಪ್ಪಾಯಿ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂದು ತಜ್ಞರ ಅಭಿಪ್ರಾಯ. ಕೊಲೆಸ್ಟರಾಲ್‌ ಮಟ್ಟ ನಿಯಂತ್ರಣ, ಹೃದಯದ ರಕ್ತನಾಳಗಳ ಆರೋಗ್ಯಕ್ಕೆ ಸಹಕಾರಿ. ರಕ್ತದೊತ್ತಡ ಸಮತೋಲನ, ಚರ್ಮದ ಆರೋಗ್ಯದ ರಕ್ಷಕ. ಕ್ಯಾನ್ಸರ್, ಕಿಡ್ನಿ ಸ್ಟೋನ್ ಇತ್ಯಾದಿಗೆ ಅಮೃತ. ಜೀವಸತ್ವ, ಫೈಬರ್, ಖನಿಜಗಳನ್ನು ಒಳಗೊಂಡಿರುವ ಕಾರಣ ಫಿಟ್ನೆಸ್ ಜಗತ್ತಿಗೆ ಪ್ರವೇಶಿಸುವವರಿಗೆ ಸಹಕಾರಿಯಾಗಬಲ್ಲದು. ಮಲಬದ್ಧತೆ, ಬೊಜ್ಜು ನಿಯಂತ್ರಣಕ್ಕೆ ಸಹಕರಿಸಬಲ್ಲದು. ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರಕ್ಕೆ ಪಪ್ಪಾಯಿ ಸೊಪ್ಪಿನ ರಸವನ್ನು ಔಷಧಿಯೆನ್ನುತ್ತಾರಾದರೂ ಯಾವುದೇ ಸಂಶೋಧನಾ ವರದಿಗಳಿಲ್ಲ. ಪಪ್ಪಾಯಿ ಹಣ್ಣನ್ನು ಎಷ್ಟೇ ಉತ್ತಮವೆಂದುಕೊಂಡರೂ ತಜ್ಞರ ಮಾತಿನಂತೆ ಪ್ರಮಾಣ ಗಮನದಲ್ಲಿರಲೇ ಬೇಕು. ಅಲರ್ಜಿ, ಗ್ಯಾಸ್ರ್ಟಿಕ್, ಅಸ್ತಮಾ, ಹೃದಯದ ತೊಂದರೆಗೀಡಾದವರು, ಗರ್ಭಿಣಿಯರು ಪಪ್ಪಾಯಿಯನ್ನು ತುಂಬಾ ಪ್ರೀತಿಸುವಂತಿಲ್ಲ. ಕ್ಯಾರೊಟಿನೋಯಿಡ್ಸ್ ಎಂಬ ನೈಸರ್ಗಿಕ ಆಹಾರವರ್ಣಕವು ಪಪ್ಪಾಯಿಗೆ ಕಿತ್ತಳೆ, ಹಳದಿ, ಗುಲಾಬಿ ಬಣ್ಣವನ್ನು ನೀಡುತ್ತದೆ. ಇದು ಕ್ಯಾರೆಟ್ ನಂತೆ ಬೀಟಾ ಕ್ಯಾರೋಟಿನ್ ಹೊಂದಿದೆ. ದೇಹ ಇದನ್ನು ವಿಟಮಿನ್ A ಯಾಗಿ ಪರಿವರ್ತಿಸುವ ಕಾರಣ ಕಣ್ಣಿನ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ.

ಜನಪದರಲ್ಲಿ ಕೆಲವೊಂದು ಸಸ್ಯಗಳ ಬಗ್ಗೆ ಶುಭ ಅಶುಭ ಫಲಗಳ ನಂಬಿಕೆಯಿದೆ. ಮನೆಯ ಎದುರಲ್ಲಿ ಪಪ್ಪಾಯಿ ಮರವಿರಬಾರದು, ಮನೆಯ ಮಾಡಿನಿಂದ ಎತ್ತರ ಬೆಳೆಯಬಾರದು ಎಂಬೆಲ್ಲಾ ನಂಬಿಕೆ ಇರುವ ಪಪ್ಪಾಯಿಯನ್ನು ರೈತರು ಧಾರಾಳವಾಗಿ ಬೆಳೆದು ಹಣ ಗಳಿಸುತ್ತಿರುವುದು ವರ್ತಮಾನದ ಸತ್ಯ. ಒಂದು ಎಕ್ರೆಗೆ ಒಂಭೈನೂರು ಗಿಡ ನೆಟ್ಟು ಮಾರುಕಟ್ಟೆ ಚೆನ್ನಾಗಿದ್ದರೆ ಒಂದು ಲಕ್ಷ ದಾಟಿ ಸಂಪಾದನೆ ಮಾಡುತ್ತೇವೆನ್ನುವ ರೈತರು ನಮ್ಮ ನಾಡಿನ ಹೆಮ್ಮೆಯಾಗುತ್ತಾರೆ. ಪಪ್ಪಾಯಿ ಯಲ್ಲೂ ಹಲವಾರು ಉತ್ಕೃಷ್ಟ ತಳಿಗಳಿವೆ. ರೆಡ್ ಲೇಡಿ ತಳಿ ರೈತರ ನಂಬಿಕೆ ಹುಸಿಗೊಳಿಸುವುದಿಲ್ಲ. ಅದೇ ರೀತಿ ಸಿಹಿ ಬೆಲ್ಲ ಅನ್ನುವ ತಳಿ ಪ್ರಾಣಿ ಪಕ್ಷಿಗಳಿಂದ ಬೀಜ ಪ್ರಸಾರವಾಗುತ್ತಾ ನೂರಾರು ವರ್ಷಗಳಿಂದ ಕಾಡು, ನದೀ ಬದಿಗಳ ಪ್ರದೇಶಗಳಲ್ಲಿ ಬೆಳೆಯುತ್ತಾ ಅತ್ಯುತ್ತಮ ಸಿಹಿಗೆ ಹೆಸರಾಗಿದೆ. ವಾಷಿಂಗ್ಟನ್‌ ಎಂಬುದರ ಎಲೆಯ ಕಾಂಡ, ಎಲೆತೊಟ್ಟು, ಹಣ್ಣು ಕೂಡ ಕಡು ಕೆಂಪು. ತಿರುಳು ಕಿತ್ತಳೆ, ವಿಶಿಷ್ಠವಾದ ವಾಸನೆ. ಹನಿಡ್ಯೂ ಕೊಡಗಿನ ಮುಖ್ಯ ತಳಿ. ಉದ್ದನೆಯ ಹಣ್ಣು, ಸಿಹಿಯಾದ ತಿರುಳು, ಬೀಜ ಕಡಿಮೆ. ಗುಜರಾತ್ ನಲ್ಲಿ ಇದನ್ನೇ ಮಧುಬಿಂದು ಎನ್ನುವರು. ಎಲೆ ತೊಟ್ಟು, ಎಳೆ ಮರದ ಬಣ್ಣವೂ ಕಪ್ಪಾಗಿರುವ ಪಪ್ಪಾಯಿ ಮರವೂ ನನಗೆ ಕಾಣ ಸಿಕ್ಕಿದೆ. ಅದರ ಹೇಸರೇನೋ ನಾನರಿಯೆ. ಅಧಿಕ ಫಲ, ಬಣ್ಣ, ವಾಸನೆ, ಅಧಿಕ ದಿನ ಬಾಳಿಕೆ ಬರುವ ತಳಿಗಳು ರೈತರ ಮೆಚ್ಚುಗೆ ಗಳಿಸುತ್ತವೆ. ಹಣ್ಣೆಂದೂ, ತರಕಾರಿಯೆಂದೂ ಬಳಸಬಹುದಾದ ಪಪ್ಪಾಯಿಯ ಒಂದು ಮರವಿದ್ದರೆ ಮನೆಯ ಸದಸ್ಯರ ಆರೋಗ್ಯಕ್ಕೆ ಒಳಿತೇ ಸರಿ.

ನೀರೊಂದಿದ್ದರೆ ಸದಾ ಹಣ್ಣು ನೀಡುತ್ತಿರುವುದನ್ನು ನಾವು ಎಲ್ಲೆಡೆಯೂ ನೋಡುತ್ತಿದ್ದೇವೆ. ಅಳಿಲು, ಮಂಗ, ಪಕ್ಷಿಗಳು, ಬಾವಲಿ ಹೀಗೆ ಮರಹತ್ತಬಲ್ಲ ಕ್ರಿಮಿ ಕೀಟಗಳಿಗೂ ಔತಣವಾಗಬಲ್ಲ ನಿಷ್ಪಾಪಿ ಸಸ್ಯವಿದು ಅಲ್ಲವೇ?

ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************

Ads on article

Advertise in articles 1

advertising articles 2

Advertise under the article