ಪಯಣ : ಸಂಚಿಕೆ - 81 (ಬನ್ನಿ ಪ್ರವಾಸ ಹೋಗೋಣ)
Saturday, February 14, 2026
Edit
ಪಯಣ : ಸಂಚಿಕೆ - 81 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ''ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ' ಕ್ಕೆ ಪಯಣ ಮಾಡೋಣ ಬನ್ನಿ....
ಮಲೆಮಹದೇಶ್ವರ ಬೆಟ್ಟಗಳು ಚಾಮರಾಜನಗರ ಜಿಲ್ಲೆಯಲ್ಲಿವೆ. ಇವು ಪೂರ್ವ ಘಟ್ಟಗಳಿಗೆ ಸೇರುತ್ತವೆ. ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ. ಎಂ. ಹಿಲ್ಸ್ ಎಂದು ಖ್ಯಾತವಾದ ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ. ಈ ವಿಶಾಲ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ದೇವಾಲಯವಿದೆ. ಬೆಟ್ಟ ಹತ್ತಲು ಸರ್ಪನ ದಾರಿ. ಬಸವನ ದಾರಿ ಎಂಬ ಎರಡು ಮಾರ್ಗಗಳಿವೆ. ಸ್ಥಳ ಪುರಾಣದ ಪ್ರಕಾರ ಈ ಬೆಟ್ಟಕ್ಕೆ ಸೇರಿದಂತೆ ಆನೆಮಲೆ, ಜೇನುಮಲೆ, ಕಾನುಮಲೆ, ಪಚ್ಚೆಮಲೆ, ಪವಳ ಮಲೆ ಪೊನ್ನಾಚಿಮಲೆ, ಕೊಂಗುಮಲೆ ಮೊದಲಾಗಿ 77 ಮಲೆಗಳಿವೆ.
ಈ ಪೈಕಿ ಮಹದೇಶ್ವರ ಬೆಟ್ಟದಲ್ಲಿ ಇರುವ ಶಿವ ದೇವಾಲಯವೇ ಪ್ರಧಾನವಾದದ್ದು. ಗಿರಿಜನರ, ಸೋಲಿಗರ ಹಾಗೂ ಸುತ್ತಮುತ್ತಲ ಪ್ರದೇಶದ ಹಲವು ವಂಶಗಳ ಕುಲದೈವವಾಗಿ ಪೂಜಿಸಲ್ಪಡುವ ಮಹದೇಶ್ವರರು 15ನೇ ಶತಮಾನದಲ್ಲಿ ಜೀವಿಸಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ. ಲೋಕಕಲ್ಯಾಣಾರ್ಥ ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ಪರಿಹರಿಸಿದ ಪವಾಡಪುರುಷ ಮಹದೇಶ್ವರರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದು ತಿಳಿದುಬರುತ್ತದೆ.
ಸುಮಾರು 600 ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು, ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ತಪವನ್ನಾಚರಿಸಿದರೆಂದೂ ತಮ್ಮ ದಿವ್ಯ ಹಾಗೂ ತಪಃಶಕ್ತಿಯಿಂದ ಜನರ ಕಷ್ಟವನ್ನು ನಿವಾರಿಸುತ್ತಿದ್ದರೆಂದೂ ಹೇಳಲಾಗುತ್ತದೆ. ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ. ಮಾದೇಶ್ವರರ ಬಗ್ಗೆ ನೂರಾರು ಜಾನಪರ ಪ್ರಸಂಗಗಳಿವೆ.
ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾಪುರುಷ, ಪವಾಡ ಪರುಷ ಎಂಬುದು ಕಾವ್ಯಗಳಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಾದೇಶ್ವರರು ಜನ್ಮ ತಳೆದರೆಂಬ ಪ್ರತೀತಿ ಇದೆ. ಇವರಲ್ಲಿ ಅಸಾಮಾನ್ಯವಾದ ಅಲೋಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ ಕಾಲದ 1761ರ ಒಂದು ಶಾಸನದಲ್ಲಿ ಮಾದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ.
"ಪ್ರವಾಸ ಜ್ಞಾನ ವಿಸ್ತಾರಗೊಳಿಸುತ್ತದೆ - ಭೌಗೋಳಿಕ ಹಾಗೂ ಸಾಂಸ್ಕೃತಿಕ ಅರಿವು ಹೆಚ್ಚಿಸುತ್ತದೆ. ಪ್ರವಾಸ ಅನುಭವವೇ ಬದುಕಿನ ಸಂಪತ್ತು. ಬೆಟ್ಟ - ಕಾಡು, ಶಿವನ ಆಲಯ, ಭಕ್ತಿಯ ಪರಾಕಾಷ್ಠೆ ದಿವ್ಯ ಅನುಭವ ನೀಡುವ ಧಾರ್ಮಿಕ ನೆಲೆಯಾಗಿದೆ".
ಬನ್ನಿ ಒಮ್ಮೆ ಪ್ರವಾಸಕ್ಕೆ
[ಮುಂದುವರಿಯುವುದು...]
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************