ನಿಷ್ಪಾಪಿ ಸಸ್ಯಗಳು : ಸಂಚಿಕೆ - 139
Friday, February 13, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 139
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ನಾನು ಇತ್ತೀಚೆಗೆ ಮಂಗಳೂರಿನ ಹೃದಯ ಭಾಗದಲ್ಲಿದ್ದ ಒಂದು ಬಹು ಮಹಡಿ ಕಟ್ಟಡದ ಬಳಿ ನಡೆಯುತ್ತಿರುವಾಗ ಆ ಮಹಡಿ ಕಟ್ಟಡದ ನೆಲದ ಸಣಕಲು ಮೂಲೆಯೊಂದರಲ್ಲಿ ರಕ್ತಕೆಂಪು ವರ್ಣದ ಪುಷ್ಪರಾಶಿಯನ್ನು ಕಂಡೆ. ಅದು ಅತ್ತ ಬಳ್ಳಿಯೂ ಅಲ್ಲ ಇತ್ತ ಪೊದೆಯೂ ಅಲ್ಲವೇನೊ ಎಂಬಂತೆ ಬೆಳೆದಿತ್ತು. ಪಕ್ಕನೆ ವೀಳ್ಯದೆಲೆಯಂತೆ ಕಾಣಿಸುವ 6 - 7 ಸೆಂ.ಮೀ ಉದ್ದದ ಹೊಳಪಿನ ಹಸುರು ಎಲೆಗಳ ಕಂಕುಳಲ್ಲಿ ಹೂಗಳ ಗೊಂಚಲು..! "ಅದರಲ್ಲೇನು ವಿಶೇಷ? ಅದು ಸಾಮಾನ್ಯ ಸಂಗತಿ..ಯಲ್ವೇ?" ಅಂತ ನೀವು ಯೋಚಿಸಿದರೆ ಸ್ವಲ್ಪ ತಾಳಿ... ತಾಳಿ.
ಈ ಸಸ್ಯದಲ್ಲಿ ಶ್ವೇತ ರೂಪದಲ್ಲಿ ಐದೆಸಳಿನಂತಿದ್ದೂ ಪುಗ್ಗದಂತೆ ಉಬ್ಬಿರುವ ಭಾಗ ಈ ಸಸ್ಯದ ಹೂವು ಅಲ್ಲ!. ಇದು ಬರಿಯ ಪುಷ್ಪಪಾತ್ರೆ!. ದಿನಕಳೆದಂತೆ ಈ ಪುಷ್ಪಪಾತ್ರೆ ಬಿಳಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ.. ಒಣಗುತ್ತಾ ಕಂದು ಬಣ್ಣಕ್ಕೆ ತಿರುಗುತ್ತದೆ.. ಈ ಆಕರ್ಷಕ ಪುಷ್ಪಪಾತ್ರೆಯೊಳಗಿನಿಂದ ಉದ್ಭವಿಸುವ ರಕ್ತವರ್ಣದ ಐದೆಸಳಿನ ಹೂವೇ ನಿಜವಾದ ಹೂವು! ಅದರೊಳಗಿನಿಂದ ಹೊರಹೊಮ್ಮುವ ನಾಲ್ಕೈದು ಉದ್ದನೆಯ ಕೇಸರಗಳು ! ಇವುಗಳ ಸುಂದರ ಸಂಯೋಜನೆಯೇ Bleeding glory bower, Glory bower, Bag flower, Tropical bleeding heart, glory tree ಎಂದೆಲ್ಲ ಕರೆಸಿಕೊಳ್ಳಲು ಕಾರಣವಾಗಿದೆ!.
ಬಿಳಿ ಗಂಟೆಯಾಕಾರದ ಪುಷ್ಪ ಪಾತ್ರೆಯೊಳಗಿನಿಂದ ಹೊರ ಹೊಮ್ಮುವ ಗಾಢ ಕೆಂಪು ವರ್ಣದ ಚಪ್ಪಟೆ ಹೂವುಗಳು ರಕ್ತಸ್ರಾವದ ಕೆಂಪು ಹೃದಯದಂತೆ ಸಸ್ಯ ಪ್ರೇಮಿಗಳಿಗೆ ಕಂಡ ಕಾರಣ ಏಷ್ಯಾ ಯುರೋಪ್ ನಾದ್ಯಂತ ಉದ್ಯಾನವನದ ಖಾಯಂ ಸಸ್ಯವಾಗುವಲ್ಲಿ ಯಶ ಕಂಡಿದೆ.
ಉಷ್ಣವಲಯದ ಪಶ್ಚಿಮ ಆಫ್ರಿಕಾಕ್ಕೆ ಸ್ಥಳೀಯವಾದ ಈ ಸಸ್ಯವು ಕ್ಲೇರೋಡೆಂಡ್ರಮ್ ಕುಲಕ್ಕೆ ಸೇರಿದ್ದು ಲ್ಯಾಮಿನೇಸಿ ಕುಟುಂಬದ ಸದಸ್ಯ. ಕ್ಲೆರೋಡೆಂಡ್ರಮ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದುದಾಗಿದೆ. ಇದರ ಅರ್ಥ 'ಅವಕಾಶ ಮರ' ಎಂದಾಗಿದೆ. ನೈಜೀರಿಯಾದ ಮಿಷನರಿ ಮತ್ತು ವೈದ್ಯರಾಗಿದ್ದ ರೆವರೆಂಡ್ ವಿಲಿಯಂ ಕೂಪರ್ ಥಾಮ್ಸನ್ ಅವರ ಗೌರವಾರ್ಥ ಕ್ಲೆರೋಡೆಂಡ್ರಮ್ ಥಾಮ್ಸೋ ನಿಯ ಎಂಬ ಸಸ್ಯ ಶಾಸ್ತ್ರೀಯ ಹೆಸರು ಪಡೆದ ಈ ನಿಷ್ಪಾಪಿ ಸಸ್ಯ ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿಯ ಗಾರ್ಡನ್ ಮೆರಿಟ್ ಪ್ರಶಸ್ತಿ ಗಳಿಸಿದೆಯೆಂದರೆ ಇದರ ಹೂವುಗಳ ಸೌಂದರ್ಯದ ಅರಿವಾಗದಿರದು.
ಬಾಲ್ಕನಿ, ಬೇಲಿ, ದ್ವಾರ, ಕಮಾನು, ಕಂಬಗಳಿಗೆ ಹಬ್ಬಿಸಲೂ ಈ ಬಳ್ಳಿ ಸಹಕರಿಸಿದಷ್ಟೇ ಸಲೀಸಾಗಿ ಸಣ್ಣ ಚಟ್ಟಿಯಲ್ಲಿ, ಒಳಾಂಗಣ ಶೋಭೆಗಾಗಿಯೂ ಕಣ್ತುಂಬುತ್ತದೆ. ತುಂಬಾ ಬಿಸಿಲನ್ನಾಗಲೀ, ತುಂಬಾ ನೆರಳನ್ನಾಗಲೀ ಅಪೇಕ್ಷಿಸದ ಥಾಮ್ಸೇನಿಯಾ ವರ್ಷದ ಹೆಚ್ಚಿನ ಕಾಲದಲ್ಲಿ ಹೂಗಳಿಂದ ಅಲಂಕೃತವಾಗಿರುತ್ತವೆ. ಒಮ್ಮೆ ಕಾಣಿಸಿಕೊಂಡ ಹೂಗಳು ಕೆಲವೇ ದಿನವಿದ್ದರೂ ಪುಷ್ಪಪಾತ್ರೆ ಮಾತ್ರ ತಿಂಗಳವರೆಗೂ ಇರುತ್ತದೆ. ವಿರಳವಾಗಿ ಮೂಡುವ ಹಸಿರು ಕಾಯಿಗಳು ಪಕ್ವವಾದಾಗ ಕಡು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದರ ನೇರಳೆ ವರ್ಣದ ತಿರುಳಿನ ನಡುವೆ ನಾಲ್ಕು ಕಪ್ಪು ಬೀಜಗಳಿದ್ದರೂ ಹೊಸ ಗಿಡಗಳಾಗುವುದು ವಿರಳ.
ಇದರ ಕೊಂಬೆಗಳ ಮೂಲಕವೇ ಜಗತ್ತನ್ನಾವರಿಸುತ್ತಿದೆ!.
ಇದರ ಎಲೆ, ಬೇರುಗಳು ಸಾಂಪ್ರದಾಯಿಕ ಔಷಧ ಪದ್ದತಿಯಲ್ಲಿ ಉರಿಯೂತ, ಚರ್ಮರೋಗ, ಜ್ವರ, ನೋವು ಇತ್ಯಾದಿಗಳಿಗೆ ಬಳಕೆಯಲ್ಲಿದೆ. ಮಾತ್ರವಲ್ಲದೆ ಜೇನು, ಇರುವೆ, ಚಿಟ್ಟೆ, ಹಮ್ಮಿಂಗ್ ಬರ್ಡ್ ಇತ್ಯಾದಿಗಳಿಗೆ ಮಮತಾಮಯಿ ಮಾತೆಯಾಗಿದೆ. ನಗರವೋ, ಹಳ್ಳಿಯೋ, ಅಂಗಳವೋ, ಉದ್ಯಾನವೋ ಜನಾಕರ್ಷಣೆಗೆ ಜೀವತುಂಬುತ್ತದೆ.
19ನೇ ಶತಮಾನದ ಮಧ್ಯಭಾಗದಲ್ಲಿ ಥಾಮ್ಸೋನಿಯಾ ಬ್ಯೂಟಿಬುಷ್ ಎಂದೇ ಖ್ಯಾತಿ ಗಳಿಸಿತ್ತು ಎಂದರೆ ಇದರ ಇತಿಹಾಸದ ಬೇರನ್ನು ಅರ್ಥಮಾಡಿಕೊಳ್ಳಬಹುದಲ್ಲವೇ?
ಮಕ್ಕಳೇ, ಒಮ್ಮೆಗೆ ಸ್ಥಾಪಿತವಾದರೆ ಕನಿಷ್ಟ ಕಾಳಜಿ ಬಯಸುವ ಥಾಮ್ಸೇನಿಯಾ ಬಹುಕಾಲ ಒಡನಾಡಿಯಾಗುವ ಕಾರಣ ಬೆಳೆಸುವುದು ಬಹಳ ಸುಲಭ. ನೀವೂ ಈ ಬಳ್ಳಿ ಬೆಳೆಸಲು ಪ್ರಯತ್ನಿಸುವಿರಲ್ಲವೇ?
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************