ಸ್ಫೂರ್ತಿಯ ಮಾತುಗಳು : ಸಂಚಿಕೆ - 204
Monday, February 23, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 204
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಪ್ರಸನ್ನ ಚೇತಸೋ ಹ್ಯಾಶು, ಬುದ್ಧಿಃ ಪರ್ಯವತಿಷ್ಠತೇ ||
ಅಂತಃಕರಣದಲ್ಲಿ ಪ್ರಸನ್ನತೆ ಅಥವಾ ನಿರ್ಮಲತೆಯನ್ನು ಪಡೆದವನ ಸಕಲ ದುಃಖಗಳೂ ನಾಶವಾಗುತ್ತವೆ. ಅವನ ಬುದ್ಧಿಯು ಬಹಳ ಬೇಗ ಭಗವಂತನಲ್ಲಿ ಸ್ಥಿರವಾಗುವುದು ಇದು ಶ್ಲೋಕಾರ್ಥ.
ಮನಸ್ಸು ಚಂಚಲ. ಅದರ ವೇಗ ಬೆಳಕಿಗಿಂತಲೂ ಅಧಿಕ. ಸದಾ ಅತ್ತಿತ್ತ ಓಡುತ್ತಿರುವ ಮನಸ್ಸುಗಳನ್ನು ಒಳ್ಳೆಯದರ ಕಡೆಗೂ ಕೆಡುಕಿನ ಕಡೆಗೂ ಸಾಗಿಸುತ್ತದೆ. ಹಠಮಾರಿ ಮನಸ್ಸು ಕೆಟ್ಟವುಗಳ ಕಡೆಗೆ ಸಾಗಿ ಅವುಗಳ ಬಲೆಯೊಳಗೆ ಸಿಲುಕಿದರೆ ಅದು ಮಲಿನವಾಗಿ ಭಗವಂತನಿಗೆ ಅಪ್ರಿಯವಾಗುತ್ತದೆ.
ಸೌಮ್ಯಗುರುಕಾರ್ಲೆಯವರ ಮುಕ್ತಕವೊಂದು,
'ಹಠಮಾರಿ ಮನಸನ್ನು ವಾಂಛೆಗಳ ಸುಳಿ ಸೆಳೆಯೆ'
'ತಟದೆಡೆಗೆ ತರುವಂತ ಯತ್ನವಂ ಮಾಡು'
'ಕಟುದಿಟವು ಕಹಿಯಲ್ಲ ಅಪರಿಮಿತ ಸುಖವಿಹುದು'
'ಸೆಟೆದು ನಿಲ್ಲುತ ಸೆಣಸು ಭಾವಲತೆಯೇ' ಎಂದು ವಿವರಿಸುತ್ತದೆ.
ಕೆಟ್ಟ ಸುಳಿಗಳತ್ತ ಧಾವಿಸಿ ದುಃಖಮಯವಾಗುವ ಮನಸನ್ನು ನಿಯಂತ್ರಣಕ್ಕೆ ತರುವಂತಹ ಪ್ರಯತ್ನವಾದರೆ ಅಪರಿಮಿತ ಸುಖಪ್ರಾಪ್ತಿಯಾಗುತ್ತದೆ. ಎಂಬುದು ಈ ಮುಕ್ತಕದ ತಿರುಳು.
ದುಃಖ ಎಂದರೆ ಮನಸ್ಸಿಗೆ ತಗಲುವ ಕಿಲುಬು. ಕಿಲುಬು ತೆಗೆಯದೆ ಇದ್ದರೆ ಭಗವಂತನೆಂದೆಂದಿಗೂ ಹೃನ್ಮಂಡಲಕ್ಕೆ ಬರಲಾರ. ಕುಳಿತುಕೊಳ್ಳುವ ಮುನ್ನ ನಾವು ಆಸನದ ಶುಚಿತ್ವವನ್ನು ಪರಿಶೀಲಿಸುತ್ತೇವೆ. ಆಸನವು ನೆಲವಿರಲಿ, ಕುರ್ಚಿಯಿರಲಿ, ಮಣೆಯಿರಲಿ, ಬಂಡೆ ಕಲ್ಲೇ ಆಗಿರಲಿ; ಸಣ್ಣ ಪುಟ್ಟ ಅಶುಚಿತ್ವವಿದ್ದರೆ ಶಲ್ಯವನ್ನೋ, ವರ್ತಮಾನಪತ್ರಿಕೆಯನ್ನೋ ಹಾಸಿ ಕುಳಿತುಕೊಳ್ಳುತ್ತೇವೆ. ಹಿತಕರವಾಗದೇ ಇದ್ದರೆ ನಾವು ಆ ಜಾಗದಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಶುಚಿತ್ವದ ಕಡೆಗೆ ನಶ್ವರ ದೇಹಿಗಳಾದ ನಾವೇ ಅಷ್ಟೊಂದು ಶ್ರದ್ಧೆ ವಹಿಸುವಾಗ ಅವಿನಾಶಿಯಾದ ಭಗವಂತನು ಕಿಲುಬು ಭರಿತವಾದ ನಮ್ಮ ಮನದಲ್ಲಿ ಪೀಠಸ್ಥನಾಗುವನೇ...?
ಬಾಹ್ಯವಾಗಿ ನಾವು ಶುಚಿರ್ಭೂತರು ಮತ್ತು ಸುಗಂಧಿತರಾಗಿ ಇದ್ದು ಅಂತರಂಗ ಕಲುಷಿತ ವಾಗಿದ್ದರೆ….? ಅಂತರಂಗದ ಕಿಲುಬಿಗೆ ಕಾರಣವಾಗುವ ಅಂಶಗಳು ಹಲವು. ತಾಮ್ರದ ಪಾತ್ರೆಗಳಿಗೆ ಕಿಲುಬು ಯಾಕೆ ಬರುತ್ತದೆಂಬುದು ನಮಗೆ ಗೊತ್ತು. ಪಾತ್ರೆಯನ್ನು ಬಳಸಬಹುದಾದ ರೀತಿಯಲ್ಲಿ ಬಳಸದಿರುವುದು ಎಂದರೆ ಅಡುಗೆ ಮಾಡುವಾಗ ನೀಡುವ ಅಧಿಕ ಶಾಖ, ಆಮ್ಲೀಯ ವಸ್ತುಗಳನ್ನು ತುಂಬಿಡುವುದು, ಉಪ್ಪಿನಂತಹ ಕ್ಷಾರೀಯ ವಸ್ತುಗಳನ್ನು ದಾಸ್ತಾನಿಡುವುದು ಇವೆಲ್ಲ ಕಿಲುಬಿಗೆ ಕಾರಣವಾಗುತ್ತದೆ. ಈ ಕಿಲುಬನ್ನು ತೆಗೆದು ಶುಚಿಗೊಳಿಸಲು ಕಲಾವು ಬೇಕಾಗುತ್ತದೆ. ಮನಸ್ಸನ್ನೂ ನಾವು ಬಳಸಬೇಕಾದ ರೀತಿಯಲ್ಲಿ ನಿಯಂತ್ರಿತವಾಗಿ ಬಳಸದೇ ಇದ್ದಾಗ ಮನಸ್ಸಿಗೂ ಕಿಲುಬು ಹಿಡಿಯುವುದು ಸಹಜ. ಮನಸ್ಸಿನ ಕಿಲುಬನ್ನು ತೆಗೆದು ಶುಚಿಗೊಳಿಸಲು ದೇವರ ಧ್ಯಾನ, ಪೂಜೆ, ಆಧ್ಯಾತ್ಮಿಕ ಸತ್ಸಂಗಗಳಂತಹ ಕಲಾವು ಬೇಕೇ ಬೇಕು. ಮನಸಿನಲ್ಲಿರುವ ಕಶ್ಮಲ ಶೂನ್ಯವಾಗಬೇಕು. ಆ ಶೂನ್ಯದ ಬಲ ಪಕ್ಕದಲ್ಲಿ ದೇವರೆಂಬ ಬೃಹತ್ ಅಂಕೆ ನೆಲೆಯಾದಾಗ ಜೀವನವೂ ಮೌಲ್ಯಯುತವಾಗಿ ದುಃಖದ ಛಾಯೆ ಅಳಿಯುತ್ತದೆ.
ಮನಸ್ಸನ್ನು “ಅಂಕೆ” ಯಲ್ಲಿಡಬಲ್ಲವನು, ಎಂದರೆ ಅದನ್ನು ಸದಾ “ನಿರ್ಮಲ” ವಾಗಿರಿಸುವವನು ದುಃಖ ಮುಕ್ತನಾಗಿ ಭಗವಂತನ ಪ್ರಸನ್ನತೆಯೊಂದಿಗೆ ಸುಖಿಯಾಗಿರುತ್ತಾನೆ. ಎಂಬ ಸಂದೇಶವನ್ನು ಗೀತೆಯ ಈ ಶ್ಲೋಕವು ಸಾರುತ್ತದೆ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************