-->
ಜೀವನ ಸಂಭ್ರಮ : ಸಂಚಿಕೆ - 230

ಜೀವನ ಸಂಭ್ರಮ : ಸಂಚಿಕೆ - 230

ಜೀವನ ಸಂಭ್ರಮ : ಸಂಚಿಕೆ - 230
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
               
ಮಕ್ಕಳೇ, ಇಂದು ಪಂಚಶಿಖಾಮುನಿ ಬದುಕನ್ನು ಕುರಿತು ಹೇಳಿರುವುದನ್ನು ತಿಳಿದುಕೊಳ್ಳೋಣ. ಪಂಚಶಿಖಾಮುನಿ ಒಬ್ಬ ಋಷಿ. ಈತನ ಬಳಿ ಒಬ್ಬ ಮಹಾರಾಜ ಬರುತ್ತಾನೆ. ಈ ಮಹಾರಾಜ ಜನಾನುರಾಗಿ. ಜನರ ಹಿತಕಾಗಿ ಅನೇಕ ಉಪಯೋಗಿ ಕಾರ್ಯಕ್ರಮ ಹಾಕಿಕೊಂಡಿದ್ದನು. ಜನ ನಿತ್ಯ ಸಂತೋಷವಾಗಿರಬೇಕು. ಆ ಸಂತೋಷ ಸ್ಥಿರವಾಗಿ ಇರಬೇಕೆಂದು, ಯಾರೊಬ್ಬರೂ ದುಃಖಿಯಾಗಿರಬಾರದು ಅಂತ ಭಾವಿಸಿ ಯೋಜನೆ ರೂಪಿಸಿದ್ದನು. ಆದರೆ ಕೆಲವು ಜನ ಸಂತೋಷವಾಗಿರಲಿಲ್ಲ. ಪ್ರತಿದಿನ ಒಂದಲ್ಲ ಒಂದು ಸಮಸ್ಯೆ ಹೊತ್ತು ಬರುತ್ತಿದ್ದರು. ರಾಜ ಮಾಡಿದ ಒಳ್ಳೆಯ ಕಾರ್ಯಗಳ ನೆನಪೇ ಇರಲಿಲ್ಲ. ಜನರಿಗೆ ಏಕೆ ಹೀಗೆ ಎಂದು ಚಿಂತಿಸುತ್ತಿದ್ದನು? ಮೂವತ್ತು ವರ್ಷ ಕಷ್ಟಪಟ್ಟು ಮಾಡಿದರೂ ಸಮಸ್ಯೆ ಹಾಗೆ ಇದೆ, ಕಡಿಮೆಯಾಗುತ್ತಿಲ್ಲ. ಇದಕ್ಕೆ ಏನು ಮಾಡೋದು? ಎಂದು ಚಿಂತಿಸುತ್ತಿದ್ದಾಗ, ಪಂಚಶಿಖಾಮುನಿಯ ನೆನಪಾಗಿ, ಋಷಿಯ ಬಳಿ ಬಂದು, ತನ್ನ ಸಮಸ್ಯೆಗೆ ಪರಿಹಾರ ಕೇಳಿದ. ಆಗ ಪಂಚಶಿಖಾಮುನಿ ಬದುಕನ್ನು ಕುರಿತು ಹೇಳಿದ ಮಾತು....

"ನಾವು ಇರುವ ಜಗತ್ತು ಚಲನಶೀಲ. ಅದಕ್ಕೆ ಮರ್ತ್ಯ ಎನ್ನುವರು. ಈ ಜಗತ್ತಿನಲ್ಲಿ ಯಾವ ವಸ್ತು ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದಿಲ್ಲ. ಅಂದರೆ ನಿರಂತರವಾಗಿ ಚಲಿಸುತ್ತಾ ಇರುತ್ತದೆ. ಸೂರ್ಯ ಭೂಮಿಯಿಂದ ಸುಮಾರು 15 ಕೋಟಿ ಕಿಲೋ ಮೀಟರ್ ಇದೆ. ಅಲ್ಲಿಂದ ಹೊರಟ ಬೆಳಕಿನ ಕಿರಣ ಸುಮಾರು 8 ರಿಂದ 8:30 ನಿಮಿಷಕ್ಕೆ ಬರುತ್ತದೆ. ಅಷ್ಟು ವೇಗದಲ್ಲಿ ಚಲಿಸುತ್ತದೆ ಬೆಳಕಿನ ಕಿರಣ. ಭೂಮಿ 1 ಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಆದ್ದರಿಂದ ಇದಕ್ಕೆ ಜಗತ್ತು ಎನ್ನುವರು. 'ಜಂ ಗಚ್ಚತಿ ಇತಿ ಜಗತ್' ಅಂದರೆ ಸದಾ ಚಲಿಸುತ್ತಿರುವುದು. ಹಾಗಾಗಿ ಇಂದಿನ ರೂಪ, ಆಕಾರ ನಾಳೆ ಇರುವುದಿಲ್ಲ. ಒಂದು ಕಡೆ ನಿರ್ಮಾಣ, ಇನ್ನೊಂದು ಕಡೆ ವಿನಾಶ ಕಂಡುಬರುತ್ತದೆ. ಈ ಭೂಮಿಯಂತಹ 10 ಲಕ್ಷ ಭೂಮಿಯನ್ನು ಹಾಕಿದರೆ ಸಮವಾಗುವಂತಹ ನಕ್ಷತ್ರಗಳನ್ನು ನುಂಗಿ ಹಾಕುವ ನಕ್ಷತ್ರಗಳಿವೆ. ಇದರಲ್ಲಿ ಯಾವುದನ್ನು ನಿಲ್ಲಿಸಲು ಆಗುವುದಿಲ್ಲ. ಸೂರ್ಯ, ಭೂಮಿ, ಗ್ರಹಗಳು ಮತ್ತು ಉಪಗ್ರಹಗಳ ಚಲನೆ ನಿಲ್ಲಿಸಲು ಆಗುವುದಿಲ್ಲ. ಜಗತ್ತಿನಲ್ಲಿ ನಡೆದಿರುವುದನ್ನು ಸ್ವಲ್ಪವೂ ಬದಲಿಸಲು ಆಗುವುದಿಲ್ಲ. ಇಂತಹ ಮಹಾವಿಶ್ವದಲ್ಲಿ ಬಂದಿದ್ದೀವಲ್ಲ ಇದೇ ಒಂದು ಸೌಭಾಗ್ಯ. ನಮ್ಮ ಸಾಮರ್ಥ್ಯ ಎಷ್ಟು?. ನಮ್ಮ ಬುದ್ಧಿ ಎಷ್ಟು?. ಇದನ್ನೆಲ್ಲ ತಿಳಿದುಕೊಳ್ಳುತ್ತೇವೆಯಲ್ಲ, ಅದೇ ನಮ್ಮ ವೈಭವ. ಇಂತಹ ಬದಲಾಗುವ ಜಗತ್ತಿನಲ್ಲಿ ನಗುತಾ ಬಾಳುವುದೇ ನಮ್ಮ ಧ್ಯೇಯ. ಭೂಮಿ, ಸೂರ್ಯನ ಜೊತೆ ನಾವೂ ಚಲಿಸುತ್ತಾ ಇದ್ದೇವೆ. ನಾವು ಮರ್ತ್ಯರು. ಯಾಕೆಂದರೆ ನಮ್ಮಲ್ಲಿರುವುದು ನಮಗೆ ಕಾಣುವುದು. ಯಾವುದು ಖಾಯಂ ಆಗಿ ಇರುವುದಿಲ್ಲ. ನಮ್ಮ ಮನಸ್ಸು, ಬುದ್ಧಿ, ಶರೀರ ಬದಲಾಗುತ್ತದೆ. ಹೊಸದು ಹೊಸದು ತಿಳಿದಂತೆ ಹಳೆಯದು ಹೋಗುತ್ತದೆ. ಇದೇ ಜೀವನ. ಇದೇ ಜೀವನದ ವೈಭವ. ಮಹಾರಾಜನೇ ಇದೇ ಜಗತ್ತು, ಇದು ನಿನ್ನ ಜಗತ್ತು ಅಲ್ಲ. ಈ ಜಗತ್ತಿಗೆ ನೀನು ಬಂದವನು. ಜಗತ್ತಿನಲ್ಲಿ ಜೀವನ ಹೇಗೆ ನಡೆಯುತ್ತದೆ ಗೊತ್ತಿರಲಿ. ಜೀವನ ಎನ್ನುವುದು ಒಂದು ಪ್ರವಾಹ. ಈ ಪ್ರವಾಹದಲ್ಲಿ ದೊಡ್ಡ ದೊಡ್ಡ ತಿಮಿಂಗಲ, ಶಾರ್ಕ್, ಮೀನು, ಮೊಸಳೆ ಸೇರಿದಂತೆ ಅಸಂಖ್ಯ ಪ್ರಾಣಿಗಳಿವೆ. ಇಂತಹ ಪ್ರವಾಹದಲ್ಲಿ ಜೀವನ ಎಂದರೆ ಈಜಿಕೊಂಡು ಹೋಗುವುದು. ಇದು ಈಜುಕೊಳವಲ್ಲ. ಈಜುಕೊಳದಲ್ಲಿ ಬರೀ ನೀರು. ಅದು ಸ್ವಚ್ಛವಾಗಿರುತ್ತದೆ. ಆದರೆ ಇದು ಹಾಗಲ್ಲ. ಇದು ಪ್ರವಾಹ. ನಾವು ಇದರ ಜೊತೆ ಈಜಿ ಸಾಗುವುದು. ಮಹಾರಾಜನೇ, ನಾವೆಲ್ಲ ಈಜುಗಾರರು. ಈಜುವಾಗ ಯಾವಾಗ, ಯಾವ ಹಂತದಲ್ಲಿ, ಯಾವ ಪ್ರಾಣಿ?. ನುಂಗುತ್ತೋ ಗೊತ್ತಿಲ್ಲ. ದಂಡೆಯನ್ನು ಮುಟ್ಟುತ್ತೇವೆಂಬ ಭರವಸೆ ಇಲ್ಲ. ಬದುಕು ಎಂದರೆ ಅಸಂಖ್ಯಾ ಕ್ರೂರ ಪ್ರಾಣಿಗಳು ಸೇರಿದಂತೆ ಪ್ರಾಣಿಗಳು ಇರುವ ಪ್ರವಾಹದಲ್ಲಿ ಈಜಿದಂತೆ." ಎಂದನು.

ಎರಡನೇ ಮಾತು ಬದುಕು ಅಂದರೆ ಧರ್ಮಶಾಲೆ. ಧರ್ಮಶಾಲೆಯಲ್ಲಿ ಯಾರು ಖಾಯಂ ಇರುವುದಿಲ್ಲ. ಬರುತ್ತಾರೆ ಒಂದು ರಾತ್ರಿ ತಂಗಿದ್ದು, ಮರುದಿನ ಎದ್ದು ಹೊರಡುತ್ತಾರೆ. ಇರುವವರಿಗೆ ಧರ್ಮ ಶಾಲಾ ಅಲ್ಲ, ಹೋಗುವವರಿಗೆ ಧರ್ಮಶಾಲ. ನಾವೆಲ್ಲ ಯಾತ್ರಿಕರು. ನಾವು ಯಾತ್ರಿಕರ ಹಾಗೆ ಅಂತ ಗೊತ್ತಿದ್ದರೂ, ನಾವು ನಮ್ಮ ಹೆಸರಿಗೆ ಮಾಡಿಕೊಳ್ಳಬೇಕೆಂದು ಬಯಸುತ್ತೇವೆ. ನಾವು ಇರೋದಕ್ಕೆ ಬಂದಿದ್ದಲ್ಲ , ಹೋಗೋದಕ್ಕೆ ಬಂದು ನಿಂತಿದ್ದು ಅಷ್ಟೇ. ನಿಂತಾಗ ಇವರು ನಮ್ಮವರು, ಅವರು ನಮ್ಮವರು ಅಂತ ಹಚ್ಚಿಕೊಳ್ಳುತ್ತೇವೆ. ನಮ್ಮ ಹಾಸಿಗೆ ಹಾಸಿ ಖುಷಿಯಾಗಿ ಇರುತ್ತೇವೆ. ಹೋಗುತ್ತೀವಿ ಅಂತ ತಲೆ ಕೆಡಿಸಿಕೊಳ್ಳಬಾರದು. ಇರೋವರಿಗೆ ಆರಾಮಾಗಿದ್ದು ಹೋಗೋದು. ಇರ್ತೀವಿ ಅಂದಾಗ ಸ್ವಚ್ಛ ಮಾಡಿಕೊಂಡು, ಹಾಸಿಗೆ ಹಾಕಿಕೊಂಡು, ಅವರು ಇವರೊಂದಿಗೆ ನಗುತ್ತಾ, ಒಂದು ರಾತ್ರಿ ಕಳೆದು ಹೋಗುವುದು. ನಾವು ಹಾಗೆ ಇರಬೇಕು ಎಂದ ಪಂಚಶಿಖಾಮುನಿ.

ಮೂರನೇ ಮಾತು ಜೀವನ ಅಂದರೆ ಆಕಾಶದಲ್ಲಿ ತೇಲಿ ಬರುವ ಮೇಘದಂತೆ. ಮೇಘ ಸ್ವಲ್ಪ ಮಳೆ ಸುರಿಸಿದಂತೆ ಮಾಡಿ ಮರೆಯಾಗುತ್ತದೆ. ಯಾವ ಮೋಡವು ಕಾಯಂ ಇರುವುದಿಲ್ಲ. ಕೆಲವು ಮೋಡ ಮಳೆ ಸುರಿಸುವುದಿಲ್ಲ. ಗಾಳಿಯೊಂದಿಗೆ ಹೋಗಿ ಮರೆಯಾಗುತ್ತದೆ. ಹಾಗೆ ಕೆಲವರು ಮೋಡದಂತೆ ಮಳೆ ಸುರಿಸುತ್ತಾರೆ. ಕೆಲವರು ಹಾಗೆ ಹೊರಟು ಹೋಗುತ್ತಾರೆ. ಆದಷ್ಟು ಮಾಡು. ಉಳಿಯಿತು ಅಂತ ಅನ್ನಬೇಡ. ನಮಗೆ ಎಷ್ಟು ಸಾಧ್ಯ ಇದೆ ಅಷ್ಟು ಮಾಡುವುದು. ಉಳಿದಿದ್ದರ ಬಗ್ಗೆ ಚಿಂತಿಸಬೇಡ. ಎಂದನು ಏಕೆಂದರೆ ಪ್ರತಿದಿನ ಕಸ ಬಂದು ಬೀಳುತ್ತದೆ. ನಮ್ಮ ಸಾಮರ್ಥ್ಯದಂತೆ ನಮಗೆ ಸಾಧ್ಯವಾದಷ್ಟು ಸ್ವಚ್ಛ ಮಾಡುವುದು. ಅಲ್ಲವೇ ಮಕ್ಕಳೇ..
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************





Ads on article

Advertise in articles 1

advertising articles 2

Advertise under the article