-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 203

ಸ್ಫೂರ್ತಿಯ ಮಾತುಗಳು : ಸಂಚಿಕೆ - 203

ಸ್ಫೂರ್ತಿಯ ಮಾತುಗಳು : ಸಂಚಿಕೆ - 203
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
            
ಪೂಜೆಯನ್ನೂ ಧ್ಯಾನವನ್ನೂ ಮಾಡದೆ ಇದ್ದರೂ, ನಾವು ಸತ್ಯಶೀಲರಾಗಿ ಬದುಕಿದರೆ, ದೇವರು ಸ್ವತಃ ನಮ್ಮ ಹೃದಯದಲ್ಲಿ ನೆಲೆಸುತ್ತಾನೆ.
ಅಂದರೆ, ದೇವರನ್ನು ಹುಡುಕಲು ದೊಡ್ಡದೊಡ್ಡ ವಿಧಿ-ವಿಧಾನಗಳ ಅವಶ್ಯಕತೆ ಇಲ್ಲ. ಸತ್ಯ, ಪ್ರಾಮಾಣಿಕತೆ, ಮತ್ತು ಮನುಷ್ಯತ್ವ ಇವೇ ದೇವರ ನಿಜವಾದ ಪೂಜೆ. ತಮಗೆ ಸಾಧ್ಯವಾದಷ್ಟು ಇತರರಿಗೆ ಒಳ್ಳೆಯದನ್ನು ಮಾಡಿದರೆ ಅಷ್ಟೇ ಸಾಕು. ದೇವರು ಮನುಷ್ಯತ್ವಕ್ಕೆ ಪ್ರಸನ್ನನಾಗುತ್ತಾನೆ.
‎ಒಳಿತು ಮಾಡುವುದರಲ್ಲೇ ಸನಾತನ ಧರ್ಮದ ಸೌಂದರ್ಯ ಅಡಗಿದೆ. ಅಲ್ಲದೆ ಎಲ್ಲರಿಗೂ ಬಲವಂತವಿರದೆ ಸ್ವಚಿಂತನೆಯ ಸ್ವನಿರ್ಧಾರದ ಸ್ವಾತಂತ್ರ್ಯವೂ ಇದೆ, ಒಟ್ಟಿನಲ್ಲಿ ಪ್ರತಿಯೊಬ್ಬರೂ ಅತ್ಯುತ್ತಮ ಮನುಷ್ಯರಾಗುವುದು ಮುಖ್ಯ. ಸೇವಾಪರತೆಯ ಜೊತೆಗೆ ಭಗವಂತನನ್ನೂ ಸ್ಮರಿಸಿದರೆ ನಮ್ಮ ಜೀವನದ ಆನಂದಕ್ಕೆ ಮಿತಿ ಇಲ್ಲ! 

ಸೇವೆಯು ಹೇಗಿರಬೇಕು? ಸೇವೆಯ ಸ್ವರೂಪವು ಹೇಗಿರಬೆಕೆಂಬುದು ನಮ್ಮ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಸನಾತನ ಸಿದ್ದಾಂತಗಳು ಕೆಲವು ಸೇವೆಗಳನ್ನು ಜೀವನದ ಧರ್ಮವಾಗಿರಬೇಕೆಂದು ಸಾರುತ್ತವೆ. ಹಿರಿಯರ ಸೇವೆ ಮಾಡು ಎಂಬ ವಿಶೇಷ ಸೇವೆಯು ಜೀವನದ ಅನುಪಾಲನೀಯ ವಿಚಾರ. ಹಿರಿಯರ ಸೇವೆ ಮಾಡದೇ ಯಾವುದೇ ಸಾಮಾಜಿಕ ಸೇವೆಗಳು ಸತ್ಫಲ ನೀಡುವುದಿಲ್ಲ. 

ಹಿರಿಯರೆಂದರೆ ಯಾರು? ಜನ್ಮ ಕೊಟ್ಟವರು, ಅವರ ಜನ್ಮದಾತರುಗಳು ಬದುಕಿದ್ದರೆ ಅವರೂ ಹಿರಿಯರೇ ಸರಿ. ಗುರುಗಳೂ ಹಿರಿಯರೇ ಆಗುತ್ತಾರೆ. ಅಣ್ಣ ಅಕ್ಕ ಅವರೂ ಹಿರಿಯರೇ ಆಗಿದ್ದಾರೆ. ಅಣ್ಣ ಅಕ್ಕ ಅಶಕ್ತರಾಗಿದ್ದರೆ ಮಾತ್ರ ಅವರು ಇತರರ ಸೇವೆಯನ್ನು ಬಯಸುತ್ತಾರೆ. ಅವರು ಸದೃಢರಾಗಿದ್ದರೆ ಅವರು ಅನ್ಯರ ಸೇವೆಯನ್ನು ಬಯಸುವುದಿಲ್ಲ. ವಯಸ್ಸಿನಲ್ಲಿ ಕಿರಿಯರಾದರೂ ಆಶಕ್ತತೆಯಿರುವುದಿದೆ. ಅಶಕ್ತ ಬಂಧುಗಳ ಸೇವೆಯೂ ಧರ್ಮವೇ ಆಗಿದೆ.

ನಮ್ಮ ಸಮಾಜದಲ್ಲಿ ಬಡತನವು ಹಾಸು ಹೊಕ್ಕಾಗಿದೆ. ಅವರಿಗೆ ಮಾಡುವ ನೆರವುಗಳು ಸೇವೆಯಾಗುತ್ತವೆ. ಮನೆಯಿಲ್ಲದವರಿಗೆ ಮನೆ, ಮನೆಗೆ ಜಾಗವಿಲ್ಲದವರಿಗೆ ಮನೆ ನೀವೇಶನ, ಆ ಮನೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುವುದು ಹೀಗೆ ಸೇವಾ ಮಾರ್ಗಗಳು ಅಸಂಖ್ಯ, ನಮ್ಮಿಂದ ದೊಡ್ಡ ಪ್ರಮಾಣದ ಸೇವೆ ಮಾಡಲಾಗದಿದ್ದರೆ ಇತರರ ಸಹಯೋಗ ಪಡೆದೂ ಸೇವೆ ಮಾಡಲು ಮನಸ್ಸು ಮಾಡಬೇಕಾಗುತ್ತದೆ. ಸಹಾಯ ಮಾಡಬಹುದಾದ ಇತರ ವ್ಯಕ್ತಿಗಳನ್ನು ತೋರಿಸಿಕೊಡುವುದೂ ಸೇವೆಯೇ ಆಗಿದೆಯೆಂಬುದನ್ನು ಮರೆಯಬಾರದು.

ಕುಟುಂಬದ ಸದಸ್ಯರ ದುಂದುವೆಚ್ಚದ ಕಾರಣದಿಂದ ಬಡತನ ಬರುವುದಿದೆ. ಅವರ ದುಂದುವೆಚ್ಚಗಳನ್ನು ನಿಯಂತ್ರಿಸಲು ಮಾರ್ಗದರ್ಶನ ನೀಡುವುದೂ ಸೇವೆಯೇ ಹೌದಲ್ಲವೇ? ಈ ಎಲ್ಲ ಸೇವೆಗಳೊಳಗೂ ಭಗವಂತನಿರುತ್ತಾನೆ ಎಂದರೆ ನಮಗೆ ಭಗವದನುಗ್ರವಾಗುತ್ತದೆ. ದೇವರು ಎಲ್ಲಿರುವನೆಂದರೆ ಒಳಿತು ಮಾಡುವ ಮನಸ್ಸಿನೊಳಗಿರುತ್ತಾನೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************



Ads on article

Advertise in articles 1

advertising articles 2

Advertise under the article