-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 116

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 116

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 116
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ಕಳೆದ ವಾರ ನಿದ್ದೆ ಎಂಬುದು ರಾಸಾಯನಿಕ ಸಂದೇಶ ಎಂಬುದನ್ನು ನೋಡಿದ್ದೇವೆ. ನಮ್ಮ ಮೆದುಳು ಚಟುವಟಿಕೆಯಿಂದಿರಲು ಶಕ್ತಿಯ ಬಳಕೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಅಡಿನೋಸಿನ್ ಮೆದುಳಿನಲ್ಲಿ ಸಂಚಯಗೊಳ್ಳುತ್ತಾ ಹೋಗುತ್ತದೆ. ಅಡಿನೋಸಿನ್ ನ ಪ್ರಬಲತೆ ಎಚ್ಚರದ ನ್ಯೂರಾನ್‌ಗಳನ್ನು ನಿದ್ದೆಯ ಮತ್ತಿಗೆ ತಳ್ಳುತ್ತದೆ. ನೀವು ನಿದ್ದೆ ಮಾಡುತ್ತಿದ್ದ ಹಾಗೆ ಮೆದುಳಿನ ವ್ಯಾಪಾರ ಕಡಿಮೆಯಾಗಿ ಅಡಿನೋಸಿನ್ ನ ಮತ್ತು ಇಳಿಯುತ್ತದೆ. ಹಾಗೆ ಜಾಗೃತಿಗೊಳ್ಳುವ ಎಚ್ಚರದ ಕೋಶಗಳು ಮೆದುಳಿನ ಕೋಶಗಳ ವ್ಯಾಪಾರವನ್ನು ಮರು ಆರಂಭಿಸುತ್ತವೆ. ಅಂದರೆ ನೀವು ಎಚ್ಚರಗೊಂಡು ಚಟುವಟಿಕೆ ಆರಂಭಿಸುತ್ತೀರಿ. ಈಗ ಪುನಃ ಅಡಿನೋಸಿನ್ ಮೆದುಳಿನಲ್ಲಿ ಸಂಚಯನ ಮುಂದುವರಿಯುವುದರಿಂದ ಮತ್ತೆ ನಿದ್ರಾ ದೇವಿಗೆ ಶರಣಾಗುತ್ತೀರಿ. ಇದೇ ನಿದ್ದೆ ಮತ್ತು ಎಚ್ಚರದ ಚಕ್ರ (sleep wake cycle). ಅಂದರೆ ನಿಮ್ಮ ನಿದ್ದೆ ನಿಮ್ಮ ನಿಯಂತ್ರಣದಲ್ಲಿಲ್ಲ. ಅಂದರೆ ನಿಮ್ಮ ತರಗತಿಯಲ್ಲಿ ಯಾಕೋ ನಿದ್ದೆ ಮಾಡ್ತಿದ್ದಿಯಾ ಎಂದು ಕೇಳುವುದು ತಪ್ಪು. ಮಗೂ ನಿದ್ದೆ ಕಾಡ್ತಿದೆಯಾ ಎಂದು ಕೇಳಿದರೆ ಸರಿ. 

ನನಗೆ ಕತ್ತಲಾಗುತ್ತಿದ್ದಂತೆ ಕಣ್ಣೆಳೆಯಲು ಶುರುವಾಗುತ್ತದೆ. ನಿದ್ದೆ ಆವರಿಸಿಕೊಳ್ಳುತ್ತದೆ. ಅಂದರೆ ಅಡಿನೋಸಿನ್ ಅಲ್ಲದೇ ಇನ್ನೇನಾದರೂ ಕಾರಣಗಳಿವೆಯೇ ಎಂದು ನೀವು ಕೇಳಬಹುದು. ಹೌದು ಹಗಲು ಚಟುವಟಿಕೆಯಿಂದಿದ್ದಷ್ಟೂ ನಿದ್ದೆ ಕಣ್ಣುಗಳನ್ನಾವರಿಸುವುದು ರಾತ್ರಿಯೇ. ಏಕೆ ಹೀಗೆ ಎಂಬ ಕೌತುಕ ನಿಮಗಿರಬಹುದು. ಹೀಗೆ ಹಗಲು ರಾತ್ರಿಯ ಚಕ್ರ ಮತ್ತು ನಿದ್ದೆ ಎಚ್ಚರದ ಚಕ್ರಗಳು ಒಂದರೊಡನೊಂದು ಹೊಂದಿಕೊಂಡಿವೆ. ಅಂದರೆ ಇದು ಒಂದು ಗಡಿಯಾರದಂತೆ ಹೇಗೆ ಹಗಲು ರಾತ್ರಿಗಳು ಒಂದನ್ನೊಂದು ಹಿಂಬಾಲಿಸುತ್ತದೆಯೋ ಹಾಗೆಯೇ ಎಚ್ಚರ ಮತ್ತು ನಿದ್ದೆ. ಹಗಲು ಎಚ್ಚರ ರಾತ್ರಿ ನಿದ್ದೆ. ಇದನ್ನೇ ನಾವು ಜೈವಿಕ ಗಡಿಯಾರ (biological clock/ circadian rhythm) ಎನ್ನುವುದು. 

ನಿಮ್ಮ ಮನೆಯಲ್ಲಿ ಅಮೇರಿಕಾದಲ್ಲಿದ್ದ ಸಂಬಂಧಿಕರು ಊರಿಗೆ ಬಂದಾಗ ನಿದ್ದೆ ಮತ್ತು ಎಚ್ಚರದ ಚಕ್ರವನ್ನು ಮರುಸ್ಥಾಪಿಸಿಕೊಳ್ಳಲು ಎರಡು ಮೂರು ದಿನ ತೆಗೆದುಕೊಳ್ಳುವುದನ್ನು ನೀವು ಕಂಡಿರಬಹುದು. ಇದು ಹಗಲು ರಾತ್ರಿಯ ಸಮಯದಲ್ಲಾಗುವ ವ್ಯತ್ಯಾಸದಿಂದ ಜೈವಿಕ ಗಡಿಯಾರ ಹೊಂದಿಕೊಳ್ಳಲು ತೆಗೆದುಕೊಳ್ಳುವ ಅವಧಿ. ಅಂದರೆ ಜೈವಿಕ ಗಡಿಯಾರ ಕೂಡಾ ನಿದ್ದೆಯನ್ನು ನಿಯಂತ್ರಿಸುವುದೆಂದಾಯಿತು. ಈ ನಿಯಂತ್ರಣ ಹೇಗಾಗುತ್ತದೆ ನೋಡೋಣ ಮುಂದಿನ ವಾರ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************


Ads on article

Advertise in articles 1

advertising articles 2

Advertise under the article