ಸ್ಫೂರ್ತಿಯ ಮಾತುಗಳು : ಸಂಚಿಕೆ - 202
Wednesday, February 4, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 202
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಅರ್ಥಾತುರಾಣಾಂ ನ ಗುರುಂ ನ ಬಂಧುಃ
ಕಾಮಾತುರಾಣಾಂ ನಭಯಂ ನ ಲಜ್ಜಾ
ವಿದ್ಯಾತುರಾಣಾಂ ನ ಸುಖಂ ನ ನಿದ್ರಾ
ಕ್ಷುಧಾತುರಾಣಾಂ ನ ರುಚಿ: ನ ಪಕ್ವಂ
ಅರ್ಥ ಎಂದರೆ ಹಣ ಅಥವಾ ಸಂಪತ್ತು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ದಿನ ನಿತ್ಯ ಸಂಪತ್ತು ಕೊಡು ಎಂದು ಪ್ರಾರ್ಥಿಸದವರು ಯಾರೂ ಇರಲಾರರು. ಜೀವನದ ನಿರ್ವಹಣೆಯಲ್ಲಿ ಹಣ ಕಾಸು ಬೇಕೇ ಬೇಕು. ಆದರೆ ಇರಬೇಕಾದ ಅಥವಾ ನಾವು ಬಯಸುವ ಸಂಪತ್ತಿಗೂ ಮಿತಿ ಬೇಕು. ಅತಿಯಾದರೆ ಅಮೃತವೂ ವಿಷವಾಗಿ ನಮ್ಮನ್ನು ಬಲಿತೆಗೆದುಕೊಳ್ಳುತ್ತದೆಂಬ ಹಿರಿಯರ ನುಡಿಯಿದೆ. ಸಂಪತ್ತು ಕೂಡಾ ಅತಿಯಾಗಿ ನಮ್ಮೊಡನೆ ಸೇರಿದರೆ ನಮ್ಮ ಬದುಕಿನ ನೈತಿಕತೆಗೆ ಸಂಚಕಾರ ತರಬಹುದು. ನಮ್ಮ ಭಾವನೆಗಳು ವಿಕೃತವಾಗಬಹುದು. ಮತ್ತೂ ಬೇಕೆಂಬ ಅತಿಯಾಸೆಗೆ ಬಲಿಯಾಗಿ ನಮ್ಮತನವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ವಚನ ಭ್ರಷ್ಠತೆ ಮತ್ತು ನೀತಿ ಭ್ರಷ್ಟತೆಗೆ ನಾವು ವಶರಾಗಬಹುದು.
ಅರ್ಥಾರ್ಥಿ ಅಥವಾ ಹಣದ ಅತ್ಯಾಕಾಂಕ್ಷಿಯು ಜಿಪುಣನಾಗುತ್ತಾನೆ. ಅವನು ಸಂಪತ್ತು ಗಳಿಸಲು ಗುರುಗಳು ಬಂಧು- ಮಿತ್ರರೆಂಬ ಗೌರವ ಅಥವಾ ಸಂಬಂಧಗಳನ್ನು ಗೌರವಿಸದೆ ಅವರಿಗೂ ಮೋಸದ ಕುಕಾರ್ಯಗಳನ್ನು ಮಾಡುತ್ತಾನೆ. ಸಂಪತ್ತಿನ ಮುಂದೆ ಆತನಿಗೆ ಸಂಬಂಧಗಳು ಗೌಣವಾಗುತ್ತವೆ. ಇದರಿಂದಾಗಿ ಅವನು ಅವರನ್ನು ಕಳೆದುಕೊಳ್ಳುವ ಭಯವೇ ಅಧಿಕವಾಗಿರುತ್ತದೆ.
ಕಾಮ ಎಂದರೆ ಬಯಕೆ ಅಥವಾ ಅಪೇಕ್ಷೆ. ಉತ್ತಮವಾದುದು ಬೇಕು ಅವುಗಳನ್ನು ಪಡೆಯಲು ಪ್ರಯತ್ನಿಸುವುದು ತಪ್ಪಲ್ಲ. ಕಾಮನೆಗಳು ಬಲವಾದಾಗ ಅರ್ಥಗಳಿಕೆಯಲ್ಲಿ ಅನುಸರಿಸುವ ಎಲ್ಲ ಅನಿಷ್ಟಗಳನ್ನೂ ಅನುಸರಿಸುತ್ತಾನೆ. ಕಾಮನೆಗಳನ್ನು ಈಡೇರಿಸುವ ಚಪಲದಲ್ಲಿ ಅವನು ಮಾನ, ಮರ್ಯಾದೆ, ನಾಚಿಕೆಗಳಂತಹ ಮೌಲ್ಯಗಳಿಗೆ ಬೆಲೆ ನೀಡುವುದಿಲ್ಲ. ಅವನಿಗೆ ಸರಿಯಾಗಿ ನಿದ್ದೆಯನ್ನಾಗಲೀ ವಿರಾಮವನ್ನಾಗಲೀ ಅನುಭವಿಸಲಾಗದು. ಇದರಿಂದಾಗಿ ಆರೋಗ್ಯವೂ ಹಾಳಾಗುತ್ತದೆ. ಇವರು ಮಾಡುವ ತಪ್ಪುಗಳು ಮಿತಿ ಮೀರುತ್ತವೆ. ಬದುಕು ಕಳಂಕಮಯವಾಗುತ್ತದೆ.
ಹಾಗೆಯೇ ವಿದ್ಯಾತುರತೆಯೂ ಇರುವವರಿದ್ದಾರೆ. ವಿದ್ಯೆಯು ಜ್ಞಾನಕ್ಕೆ ಹೇತುವಾದುದು. ಸರಿಯಾಗಿ ಕಲಿತು ಪ್ರಾಜ್ಞನಾಗಲು ಬಯಸುವವನು ಆಲಸಿಯಾಗಿರುವುದಿಲ್ಲ. ಹೆಚ್ಚು ವಿಶ್ರಾಂತಿ ಮತ್ತು ನಿದ್ದೆ ಇದ್ದವರಿಗೆ ಜ್ಞಾನ ಲಭಿಸದು. ಬದುಕಿನ ಉತ್ಕರ್ಷಕ್ಕೆ ಜ್ಞಾನ ಅಗತ್ಯ. ವಿದ್ಯಾತುರನು ಸುಖ ಮತ್ತು ಆರಾಮಗಳನ್ನು ಬಯಸುವಂತಿಲ್ಲ ಮತ್ತು ಅನುಭವಿಸುವಂತಿಲ್ಲ. ಆದರೆ ಪಡುವ ಪಾಡಿನಿಂದ ಮುಂದಿನ ಬದುಕು ಸವಿಯಾಗುತ್ತದೆ.
ಕ್ಷುಧಾ ಎಂದರೆ ಹಸಿವು. ಬಹಳ ಹಸಿದವನು ಗಬ ಗಬನೆ ತಿನ್ನುವುದನ್ನು ಗಮನಿಸಿದ್ದೇವೆ. ಹಸಿದವನು ಆಹಾರವು ಬೆಂದಿದೆಯೋ ಇಲ್ಲವೋ, ರುಚಿಯಾಗಿದೆಯೋ ಇಲ್ಲವೋ ಮುಂತಾದುವಗಳನ್ನು ಗಮನಿಸುವುದಿಲ್ಲ. ಅಂತಹವರು ಆಹಾರದ ಬಗ್ಗೆ ಕೊರತೆಗಳನ್ನು ಹೇಳುವುದೇ ಇಲ್ಲ. ಹೊಟ್ಟೆತುಂಬಿದವನಿಗೆ ಲೋಕವೇ ಕೊರತೆಯಿಂದ ತುಂಬಿದೆ ಎಂಬ ಭಾವವಿರುತ್ತದೆ. ಹಸಿವುಳ್ಳವನು ಎಲ್ಲದಕ್ಕೂ ಎಲ್ಲರಿಗೂ ಹೊಂದಿಕೊಂಡು ಇರುವುದರಲ್ಲಿಯೇ ತೃಪ್ತನಾಗಿರುತ್ತಾನೆ.
ಆದುದರಿಂದ ಉಪನಿಷತ್ತನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅಳವಡಿಸಿಕೊಂಡಾಗ ನಮ್ಮ ಜೀವನ ರಸಭರಿತವಾಗುತ್ತದೆ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************