ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 115
Wednesday, February 4, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 115
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಕಳೆದ ವಾರಗಳಲ್ಲಿ ನಿದ್ದೆ ಮನುಷ್ಯನಿಗೆ ಅದರಲ್ಲೂ ಮಕ್ಕಳಿಗೆ ನಿದ್ದೆ ಎಷ್ಟು ಪ್ರಾಮುಖ್ಯವಾದುದು ಎಂದು ನೋಡಿದೆವು. ಕೆಲವರಿಗೆ ಬಸ್ಸಿನಲ್ಲೂ ನಿದ್ದೆ, ಕೆಲವರಿಗೆ ತರಗತಿಯಲ್ಲಿ, ಕೆಲವರಿಗೆ ಪುಸ್ತಕ ಹಿಡಿದರೆ ಹೀಗೆ. ಎಷ್ಟೆಂದರೆ ಅಧ್ಯಾಪಕರು ಕಣ್ಣು ಬಿಟ್ಟರೂ, ಎದ್ದು ನಿಲ್ಲಿಸಿದರೂ, ಬಸ್ಸಿನಲ್ಲಿ ನಿಮ್ಮ ಪಕ್ಕದಲ್ಲಿ ಕುಳಿತವರು ವಾಲುವ ನಿಮ್ಮ ತಲೆಯನ್ನು ದೂಡಿ ಗದರಿಸಿದರೂ ಈ ಒತ್ತರಿಸಿಕೊಂಡು ಬರುವ ನಿದ್ದೆ ಇಳಿಯುವುದೇ ಇಲ್ಲ. ಅಂದರೆ ನಿದ್ದೆ ನಿಮ್ಮ ನಿಯಂತ್ರಣದಲ್ಲಿಲ್ಲದ ಯಾಂತ್ರಿಕ ಕ್ರಿಯೆ ಅನ್ನಿಸಬಹುದು. ಆದರೆ ಒಂದು ನೆನಪಿಡಿ ಜೀವ ಜಾಲದಲ್ಲಿ ಯಾಂತ್ರಿಕ ಎಂಬುದಿಲ್ಲ. ಎಲ್ಲ ಕ್ರಿಯೆಗಳೂ ರಾಸಾಯನಿಕ ಅಂದರೆ ಜೀವ ರಾಸಾಯನಿಕ (biochemical). ಅಂದರೆ ರಸಾಯನಶಾಸ್ತ್ರ ಅಧ್ಯಯನವಿಲ್ಲದೇ ಜೀವಜಾಲದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುವುದು ಸಾದ್ಯವೇ ಇಲ್ಲ. ಹಾಗಾದರೆ ನಿದ್ದೆಯ ವಿಷಯದಲ್ಲಿ ರಾಸಾಯನಿಕಗಳ ಪಾತ್ರವೇನು ನೋಡೋಣ ಬನ್ನಿ.
ನಮಗೆ ನಿದ್ದೆ ಬಾರದೇ ಎಚ್ಚರಿರುವುದು ಹೇಗೆ ಎಂದು ಕೇಳಿದರೆ ಮೆದುಳಿನಲ್ಲಿ ಕೆಲವೊಂದು ನರಕೋಶಗಳಿವೆ (neurons). ಇವು ಮೆದುಳಿನ ಎಚ್ಚರಿಕೆಯ ಸ್ಥಿತಿಯನ್ನು ಪ್ರಚೋದಿಸುತ್ತಿರುತ್ತವೆ (wake promoting neurons). ಇವುಗಳು ಕೆಲಸ ಮಾಡುವ ವರೆಗೆ ನಾವು ಎಚ್ಚರದಿಂದಿರುತ್ತೇವೆ ಅಂದರೆ ಮೆದುಳು ಕೆಲಸ ಮಾಡುತ್ತಿರುತ್ತದೆ. ಮೆದುಳು ಕೆಲಸ ಮಾಡಲು ಶಕ್ತಿ ಬೇಕು. ಈ ಶಕ್ತಿ ದೊರೆಯುವುದು ಉಸಿರಾಟದಿಂದ. ನಾವು ಉಸಿರಾಡುವಾಗ ಬಿಡುಗಡೆಯಾಗುವ ಶಕ್ತಿ ADP ಯನ್ನು (Adinosine DiPhoshate) ATP ಯಾಗಿ (Adinosine TriPhosphate) ಬದಲಾಯಿಸುತ್ತದೆ. ಮತ್ತು ನಮಗೆ ಶಕ್ತಿ ಬೇಕಾದಾಗ ಈ ATP ADP ಯಾಗಿ ಪರಿವರ್ತನೆಯಾಗುವುದನ್ನು ಮೊದಲೇ ನಿಮಗೆ ಹೇಳಿದ್ದೇನೆ. ಈ ಕ್ರಿಯೆಯಲ್ಲಿ ಬರುವ ಅಡಿನೋಸಿನ್ ಇದೆಯಲ್ಲ ಅದು ಮೆದುಳಿನ ಕೋಶಗಳಲ್ಲಿ ಸಂಗ್ರಹಗೊಳ್ಳುತ್ತಾ ಹೋಗುತ್ತದೆ ನಮ್ಮ ಎಚ್ಚರದ ಸ್ಥಿತಿಯಲ್ಲಿ. ಈ ಅಡಿನೋಸಿನ್ ಅಡಿನೋಸಿನ್ ಗ್ರಾಹಕಗಳಲ್ಲಿ (A1 ಮತ್ತು A2A) ಬಂಧಿಯಾಗುತ್ತದೆ. ಅಡಿನೋಸಿನ್ ಹೊಂದಿರುವ ಈ ಗ್ರಾಹಕಗಳು ಎಚ್ಚರಿಕೆ ಪ್ರಚೋದಕ ನರಕೋಶಗಳು ತಮ್ಮ ಕೆಲಸ ನಿಲ್ಲಿಸತೊಡಗಿದರೆ ನಿದ್ದೆ ಪ್ರಚೋದಕ ನರಕೋಶಗಳು (sleep promoting neurons) ಚುರುಕಾಗುವುದರಿಂದ ನಿಮ್ಮ ಕಣ್ಣು ಮುಚ್ಚಿಕೊಳ್ಳುತ್ತದೆ. ನೀವು ನಿದ್ದೆ ಹೋಗಿ ಬಿಡುತ್ತೀರಿ. ನೀವು ಹೆಚ್ಚು ಸಮಯ ಎಚ್ಚರವಾಗಿದ್ದರೆ ನಿಮ್ಮ ಮೆದುಳಿನಲ್ಲಿ ಸಂಚಯಗೊಳ್ಳುವ ಅಡಿನೋಸಿನ್ ನ ಪ್ರಮಾಣವೂ ಹೆಚ್ಚುತ್ತಾ ಹೋಗುವುದರಿಂದ ನಿದ್ದೆಯ ಸೆಳೆತವೂ ಹೆಚ್ಚುತ್ತದೆ. ನಿಮ್ಮ ಕಣ್ಣುಗಳು ಎಳೆಯುತ್ತವೆ. ನಿದ್ದೆ ಮಾಡುತ್ತಿರುವಾಗ ನಿಮ್ಮ ಮೆದುಳಿನಲ್ಲಿರುವ ಅಡಿನೋಸಿನ್ ಪ್ರಬಲತೆ ಕಳೆದುಕೊಳ್ಳುವುದರಿಂದ ನಿದ್ದೆ ತಿಳಿಯಾಗುತ್ತದೆ.
ನೀವು ಹರಕೆ ಯಕ್ಷಗಾನ ಬಯಲಾಟಗಳಿಗೆ ಹೋದಾಗ ನಿಮಗೆ ಚಟ್ಟಂಬಡೆ ಚಹಾ ಕೊಡುತ್ತಾರೆ ಅಲ್ಲವೇ? ಚಹಾ ಕುಡಿದರೆ ನಿದ್ದೆ ಓಡಿ ಹೋಗುತ್ತದೆ ಎನ್ನುವುದು ನಿಮ್ಮ ಅನುಭವವೂ ಆಗಿರಬಹುದಲ್ಲವೇ? ಇದು ನಿಜ. ಏಕೆಂದರೆ ಚಹಾ ಮತ್ತು ಕಾಫಿಗಳಲ್ಲಿ ಕೆಫಿನ್ (caffeine) ಇರುತ್ತದೆ. ಈ ಕೆಫಿನ್ ಯಶಸ್ವಿ ಅಡಿನೋಸಿನ್ ಗ್ರಾಹಕ. ಈ ಕೆಫಿನ್ ಮೆದುಳಿನಲ್ಲಿರುವ ಅಡಿನೋಸಿನ್ ಗ್ರಾಹಕಗಳಾದ A1 ಮತ್ತು A2A ಗಳಿಗಿಂತ ಹೆಚ್ಚು ಪರಿಣಾಮಕಾರಿಯಾದುದರಿಂದ ಅವುಗಳಿಂದ ಅಡಿನೋಸಿನ್ ಅನ್ನು ಕಸಿದುಕೊಳ್ಳುತ್ತದೆ. ಆದ್ದರಿಂದ ಅಡಿನೋಸಿನ್ ಎಚ್ಚರಿಕೆ ಪ್ರಚೋದಿಸುವ ನ್ರಾನ್ ಗಳನ್ನು ಪ್ರಭಾವಿಸುವುದಿಲ್ಲ ಆದ್ದರಿಂದ ನಿಮ್ಮ ನಿದ್ದೆ ಓಡಿ ಹೋಗುತ್ತದೆ.
ನಿದ್ದೆಯನ್ನು ಪ್ರಭಾವಿಸುವ ಇನ್ಯಾವುದಾದರೂ ರಾಸಾಯನಿಕಗಳಿವೆಯೇ? ಮುಂದಿನ ವಾರ.....
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************