-->
ಜೀವನ ಸಂಭ್ರಮ : ಸಂಚಿಕೆ - 227

ಜೀವನ ಸಂಭ್ರಮ : ಸಂಚಿಕೆ - 227

ಜೀವನ ಸಂಭ್ರಮ : ಸಂಚಿಕೆ - 227
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                       

ಮಕ್ಕಳೇ, 2021ರ ಬಸವ ಜಯಂತಿಯಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಬದುಕಿನ ಬಗ್ಗೆ ಹೇಳಿದ್ದು. ತುಂಬಾ ಚೆನ್ನಾಗಿದೆ. ಓದಿ....

ನಮ್ಮ ಎದುರಿಗೆ ಜಗತ್ತು ಹರಡಿಕೊಂಡಿದೆ. ಅದಕ್ಕೆ ಆದಿ ಅಂತ್ಯವಿಲ್ಲದಂತೆ ವಿಸ್ತಾರವಾಗಿದೆ. ಈ ಜಗತ್ತಿನಲ್ಲಿ ಎಲ್ಲಾ ಇದೆ. ನಮ್ಮ ಕೆಳಗೆ ಭೂಮಿ, ಮೇಲೆ ಅನಂತ ಆಕಾಶ, ಇವುಗಳ ಮಧ್ಯೆ ಕೋಟ್ಯಾಂತರ ನಕ್ಷತ್ರ, ಗ್ರಹ, ಉಪಗ್ರಹಗಳು. ವಿಶ್ವದ ತುಂಬಾ ಹರಿದಾಡುವ ಕಿರಣಗಳು, ಬೆಳಕು. ಭೂ ಮಂಡಲದ ಮೇಲೆ ಸಾಗರಗಳು, ತುಂಬಿ ತುಂಬಿ ಹರಿಯುವ ಹೊಳೆಗಳು, ತಂಪಾದ ಅಥವಾ ಬಿಸಿ ಗಾಳಿ. ಹಸಿರಿನಿಂದ ತುಂಬಿದ ಭೂಮಿ. ಎಂತಹ ಅದ್ಭುತ ಈ ಜಗತ್ತು! ಇದನ್ನು ಮನುಷ್ಯ ಮಾಡಲು ಸಾಧ್ಯವಿಲ್ಲ. ಮನುಷ್ಯ ಇದೆಲ್ಲಾ ಆದಮೇಲೆ ಇತ್ತೀಚಿಗೆ ಬಂದನು. ಇದನ್ನೆಲ್ಲ ನೋಡುವ ಅವಕಾಶ ಪಡೆದನು. ಇದೇ ಪುಣ್ಯ. ಇದೇ ಸೌಭಾಗ್ಯ. ಒಂದು ವೇಳೆ ನೋಡುವ ಕಣ್ಣು ಇಲ್ಲದಿದ್ದರೆ, ಕೇಳುವ ಕಿವಿಗಳು ಇಲ್ಲದಿದ್ದರೆ, ಜೀವನ ಏನಾಗುತ್ತಿತ್ತು?. ಹೇಳಿ. ಜಗತ್ತೆಲ್ಲ ಶೂನ್ಯವಾಗುತ್ತಿತ್ತು. ಜೀವ ಬರುಡಾಗುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಬದುಕು ಹಚ್ಚ ಹಸಿರಾಗಿದೆ. ಇಂತಹ ಅದ್ಭುತ, ವೈವಿಧ್ಯಪೂರ್ಣ ಜಗತ್ತನ್ನು ನೋಡುವ ಅವಕಾಶ ದೊರಕಿದೆ. ಒಂದೆರಡು ದಿನ ಅಲ್ಲ. ನೂರು ವರ್ಷಗಳವರೆಗೆ. ಇದು ನಿಸರ್ಗದೇವತೆ ನೀಡಿದ ಅದ್ಭುತ ಅವಕಾಶ. ಆದ್ದರಿಂದ ಕಣ್ಣ ಮುಚ್ಚಿ ಬದುಕಬಾರದು, ಕಿವಿ ಮುಚ್ಚಿ ಬದುಕಬಾರದು. ನಡೆಯಬೇಕು, ಮಾತನಾಡಬೇಕು, ಕಣ್ಣಿನಿಂದ ನೋಡಬೇಕು, ಕಿವಿಯಿಂದ ಕೇಳಬೇಕು, ಕೈಯಿಂದ ಸುಂದರ ಕಾರ್ಯ ಮಾಡಬೇಕು, ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡಿರಬೇಕು, ಅವಾಗ ಜೀವನ ಸಾರ್ಥಕವಾಗುತ್ತದೆ. 

ಕೂಡಿಸುವಂತದು ಏನಿದೆ?. ಕಟ್ಟುವಂತದ್ದು ಏನಿದೆ ?. ಎಲ್ಲಾ ಇದೆ. ನಿಸರ್ಗ ಇಂತಿಂಥ ವಸ್ತು ನಿರ್ಮಿಸಿ, ನಮ್ಮೆದುರಿಗೆ ಹರಡಿದೆ. ಆ ವಸ್ತುಗಳನ್ನು ನೋಡುವ ವೈಭವ. ಅವುಗಳನ್ನು ನೆನೆಸಿಕೊಳ್ಳುವುದೇ ವೈಭವ. ಒಬ್ಬ ವಿದೇಶಿ ಸಂತ ಹೇಳುತ್ತಾನೆ. "ನಾನು ಬದುಕನ್ನು ಪಡೆದು ಬಂದೆ ದೇವನೆ. ನಿನಗೆ ಧನ್ಯವಾದಗಳು. ನಾನು ಕುಡಿಯುವುದು ಒಂದು ಬೊಗಸೆ ನೀರು, ನೀನು ಕೊಟ್ಟಿದ್ದು ಸಾಗರ. ನೀನು ಆಗಸದಿಂದ ಸುರಿಸುವುದು ಧಾರಾಕಾರ ಮಳೆ. ನೋಡಲು ಬೇಕಾದದ್ದು ಒಂದು ಸಣ್ಣ ದೀಪ. ನೀನು ಹಚ್ಚಿದ್ದು ಪ್ರಚಂಡ ಪ್ರಕಾಶ ಕೊಡುವ ಸೂರ್ಯ. ನನಗೆ ಬೇಕಾದವರು ನಾಲ್ಕು ಜನ. ನೀನು ಕೊಟ್ಟಿದ್ದು ಲಕ್ಷ ಜನರನ್ನು. ನಾನೊಬ್ಬನೇ ಅಲ್ಲ, ಈ ಜಗತ್ತಿನಲ್ಲಿ ಎಷ್ಟು ಪ್ರಾಣಿಗಳು?. ಎಷ್ಟು ತರಹದ ಪಕ್ಷಿಗಳು?. ಎಷ್ಟು ತರಹದ ಧ್ವನಿಗಳು?. ಇವೆಲ್ಲ ನನಗಾಗಿ ಸೃಷ್ಟಿಸಿ ಕೊಟ್ಟಿದೆಯಲ್ಲ ಭಗವಂತನೇ, ನಿನಗೆ ಧನ್ಯವಾದಗಳು". ಇಷ್ಟೆಲ್ಲ ಕೊಟ್ಟಾಗ ಬಡವನಂತೆ ಬದುಕುತ್ತೀವಲ್ಲ ನಮ್ಮ ದುರ್ದೈವ. ಎಂತಹ ಐಶ್ವರ್ಯ ಸುತ್ತಮುತ್ತ ಇದೆ ! ಯಾವುದಕ್ಕೂ ಕೊರತೆ ಇಲ್ಲ ಈ ಜಗತ್ತಿನೊಳಗೆ. ಇಂತಹ ಪ್ರಚಂಡ ಜಗತ್ತಿನೊಳಗೆ ಒಂದು ದಿನವಲ್ಲ, ಎರಡು ದಿನವಲ್ಲ, ನೂರು ವರ್ಷಗಳ ಕಾಲ ಅವಕಾಶ ಇದೆಯಲ್ಲ. ಅದು ಪುಕ್ಕಟೆ. ಜಗತ್ತನ್ನು ನೋಡಲು ಖರ್ಚು ಮಾಡುವುದಿಲ್ಲ. ಆಕಾಶದಿಂದ ಧಾರಾಕಾರವಾಗಿ ಬೀಳುವ ಸ್ವಚ್ಛಮಳೆ. ನಾವೇನು ಕೊಡುತ್ತೇವೆ?. ಭೂಮಿ ಒಂದು ಬೀಜದಿಂದ ಸಾವಿರ ಸಾವಿರ ಹಣ್ಣು, ಧಾನ್ಯ ನೀಡುತ್ತದೆ. ಭೂಮಿಗೆ ನಾವೇನು ಕೊಡುತ್ತೇವೆ ?. ಈ ಜಗತ್ತಲ್ಲಿ ಭಗವಂತನ ವಸ್ತುಗಳನ್ನು ನೋಡುವ, ಕೇಳುವ , ಮುಟ್ಟುವ, ಗ್ರಹಿಸುವ, ರುಚಿಸುವ ವಸ್ತು ಸಂಚಯ ಈ ಜಗತ್ತು. ಇಂತಹದರಲ್ಲಿ ಬದುಕುವುದೇ ಒಂದು ಭಾಗ್ಯ ಎಂದು ಭಾವಿಸಬೇಕು. 

ಜೀವನ ಕೀಳು ಅನ್ನುವ ಭಾವನೆ ತೆಗೆಯಬೇಕು. ಎಷ್ಟೇ ವರ್ಷ ಬದುಕಲಿ, ನಾವು ಹೇಗೆ ಬದುಕಿರಬೇಕು? ಅಂದರೆ ಸಿರಿವಂತರಾಗಿ ಬದುಕು ಬೇಕಂತಲ್ಲ , ಬಡವರಾಗಿ ಬದುಕಬೇಕಂತಲ್ಲ , ಬದುಕುವವರಾಗಿ ಬದುಕಬೇಕು. ನೋಡುವವರಾಗಿ, ಕೇಳುವವರಾಗಿ, ಬದುಕಬೇಕು. ಒಂದು ಹಕ್ಕಿ ಆಕಾಶಕ್ಕೆ ಹಾರುತ್ತದೆ. ಸುತ್ತಮುತ್ತ ಎಲ್ಲವನ್ನು ನೋಡುತ್ತದೆ. ಆ ಬಳಿಕ ಅದರ ಹೃದಯದ ತುಂಬ ನಿಸರ್ಗದ ಸೌಂದರ್ಯ, ಮಾದುರ್ಯ, ಸುಗಂಧ ತುಂಬಿರುತ್ತದೆ. ಆಗ ಹೇಳುತ್ತದೆ, ಎಂತಹ ಅವಕಾಶ ನನಗೆ !. ಕೇವಲ ಎರಡು ರೆಕ್ಕೆ, ಆಕಾಶಕ್ಕೆ ಏರುತ್ತೇನೆ. ಮನುಷ್ಯ ಎಷ್ಟು ಬುದ್ಧಿವಂತನಾದರೇನು ?. ನೆಲ ಹಿಡಿದಿದ್ದಾನೆ. ನಾನು ಆಕಾಶಕ್ಕೆ ಏರಿದ್ದೇನೆ ದೇವನೆ. ಇದೊಂದು ಅವಕಾಶ ನನಗೆ. ಇಷ್ಟು ಎತ್ತರ ಏರುವ ಅವಕಾಶ. ಜಗತ್ತನ್ನು ನೋಡುವ ಅವಕಾಶ. ಅಷ್ಟೇ ಅಲ್ಲ ದೇವನೇ ನನ್ನ ಆನಂದವನ್ನು ಹಾಡಾಗಿ ಹರಿಸುವಂತಹ ಅವಕಾಶ. ನಾನು ಹಾಡುತ್ತಾ ಇರಬೇಕು ನೀನು ಕೇಳುತ್ತಾ ಇರಬೇಕು. ಭಗವಂತನೇ ನೀನು ನನಗೇನು ಕೊಡಬೇಕಾಗಿಲ್ಲ. ಎಲ್ಲವನ್ನು ಕೊಟ್ಟಿದ್ದೀಯಾ. ನೀನು ಕೊಟ್ಟಿದ್ದನ್ನೇ ಬಳಸಿಕೊಂಡು ಆನಂದದಿಂದ ಹಾಡು ಹಾಡುತ್ತೇನೆ ಭಗವಂತನೇ ಎಂದಿತು ಪಕ್ಷಿ. ಇದನ್ನು ಕೇಳಿ. ಭಗವಂತನಿಗೆ ಎಷ್ಟು ಆನಂದವಾಗಿರಬೇಡ!. ಮನುಷ್ಯ ಕಡಿಮೆ ಇದೆ, ಕೊಡು ಅನ್ನುತ್ತಾನೆ. ಪಕ್ಷಿಗಳು ಸಂತೋಷದ ಹಾಡನ್ನು, ಭಾವವನ್ನು ಕೊಡುತ್ತವೆ. ಜೀವನ ಅಂದರೆ ಭಿಕ್ಷೆ ಬೇಡುವುದಲ್ಲ, ಸ್ವಚ್ಛಂದವಾಗಿ ಹಂಚಿಕೊಳ್ಳುವುದು. ಹಾಡುವ ಜೀವನ, ಮನಸ್ಸಿನಲ್ಲಿ ನಲಿಯುವ ಜೀವನ. ಕಣ್ಣರಳಿಸಿ ನೋಡುವ ಜೀವನ. ಇಂತಹ ಅದ್ಭುತ ಜೀವನ ನಮಗೆಲ್ಲ ದೊರೆತಿದೆ. ಇದನ್ನು ಬಳಸಿಕೊಳ್ಳಬೇಕು ಕೆಡಿಸಬಾರದು. ಬದುಕು ಅನ್ನುವುದು ಪರುಷಮಣಿ ಇದ್ದಂತೆ. ಈ ಬದುಕು ವಿಷಯಗಳ ಹಿಂದೆ ಹರಿಯಬಾರದು ಎಂದರು ಬಸವಣ್ಣ. ಸಣ್ಣಪುಟ್ಟ ವಸ್ತುಗಳಿಗಾಗಿ ಈ ವೈಭವದ ಬದುಕು ನಾಶವಾಗಬಾರದು‌ ಜಗತ್ತು ಇರಬೇಕು ಮನಸ್ಸು ಸ್ವಚ್ಛವಾಗಿರಬೇಕು. ಎಲ್ಲಾ ಕಡೆ ಸೌಂದರ್ಯ ತುಂಬಿರಬೇಕು. ಮನಸ್ಸಿನಲ್ಲಿ ಕಾಮ ಇರಬಾರದು. ಮನಸ್ಸಿನಲ್ಲಿ ಸಂತೋಷ ಇರಬೇಕು. ಹೃದಯದ ಮಧ್ಯೆ ಆನಂದ ತುಂಬಿರಬೇಕು. ಹಾಗೆ ಬದುಕಬೇಕು. ವ್ಯಾಮೋಹ ಕಳೆದುಕೊಂಡು ಬದುಕಬೇಕು. ಮನಸ್ಸು ಮುಕ್ತವಾಗಿ ಸಂತೋಷದಿಂದ ಬದುಕಬೇಕು. ಬದುಕಲು ಬಂದವರೆ ವಿನಹ ಬೇರೆ ಏನೋ ಮಾಡಲು ಬಂದವರಲ್ಲ. ಬರಿ ಹೂ ತೆಗೆದುಕೊಳ್ಳಿ. ಎಷ್ಟು ಹೂಗಳು ?. ನಮ್ಮ ಕಲ್ಪನೆಗೆ ಮೀರಿದಷ್ಟು , ಬೇರೆ ಬೇರೆ ಬಣ್ಣಗಳು, ಬೇರೆ ಬೇರೆ ಆಕಾರಗಳು, ಬೇರೆ ಬೇರೆ ವಾಸನೆಗಳು. ಎಷ್ಟು ಅದ್ಭುತ!. ಇಷ್ಟೆಲ್ಲಾ ಮನುಷ್ಯ ಮಾಡಲು ಸಾಧ್ಯವೇ?. ಮಾನವ ಅದನ್ನು ಕಿತ್ತು ತಂದು ಮಾರುಕಟ್ಟೆಯಲ್ಲಿ ಮಾರಬಹುದು ವಿನಃ ಇನ್ನೇನು ಮಾಡಲು ಸಾಧ್ಯ.

ನಿಸರ್ಗ ಹೇಳುತ್ತದೆ ನಾನು ಹೂ ಅರಳಿಸುತ್ತೇನೆ, ನೀನು ವಾಸನೆ ತೆಗೆದುಕೊಂಡು ಅನುಭವಿಸು. ನಾನು ಹಣ್ಣುಗಳನ್ನು ತಯಾರು ಮಾಡುತ್ತೇನೆ, ನೀನು ರಸ ಸವಿದು ಆನಂದ ಪಡು. ನಾನು ಜಗತ್ತಿನಲ್ಲಿ ಅದ್ಭುತ ಸೌಂದರ್ಯ ತಯಾರು ಮಾಡುತ್ತೇನೆ, ನೀನು ಸೌಂದರ್ಯ ನೋಡಿ ಸಂತೋಷ ಪಡು. ನಿನ್ನಿಂದ ಏನೂ ನಿರೀಕ್ಷಿಸುವುದಿಲ್ಲ. ನಿನ್ನನ್ನು ಸಂತೋಷ ಪಡಲು ನಿರ್ಮಿಸಿದ್ದು ಎಂದು ನಿಸರ್ಗ ಹೇಳುತ್ತದೆ. ಇದಕ್ಕೆ ಬಸವಣ್ಣ ಹೇಳಿದ ಸುಬುದ್ದಿ ಬಳಸು ಎಂದು. ಜಗತ್ತಿನಲ್ಲಿ ತಿಳಿದುಕೊಳ್ಳುವಂತದ್ದು ಎಲ್ಲ ಇದೆ. ಬರೀ ಕೆಟ್ಟದ್ದನ್ನೇ ಏಕೆ ತಿಳಿದುಕೊಳ್ಳುತ್ತಿ? ಬರೀ ಕೆಟ್ಟದ್ದನ್ನೇ ಏಕೆ ಆಲೋಚಿಸುತ್ತೀರಿ?. ಒಳ್ಳೆಯದು ಒಳ್ಳೆಯದು ಎಷ್ಟಿಲ್ಲ?. ರಾತ್ರಿ ಇದೆ. ರಾತ್ರಿಯಲ್ಲಿ ಕತ್ತಲೆ ಕಡೆ ನೋಡದೆ, ಕತ್ತಲೆಯೊಳಗೆ ನಕ್ಷತ್ರಗಳ ಕಡೆ ನೋಡು. ಇದು ಸುಬ್ಬುದ್ದಿ. ಒಳ್ಳೆಯದು ಸಾಕಷ್ಟು ಇದೆ. ಜೀವನದ ದಾರಿಯಲ್ಲಿ ನಡೆಯುವಾಗ ಅನೇಕ ಕವಲುದಾರಿಗಳು ಬರುತ್ತವೆ. ಕವಲಿನಲ್ಲಿ ಹೋಗಬಾರದು. ಯಾವ ದಾರಿ ಎನ್ನುವುದನ್ನು ಸುಬುದ್ದಿಯಿಂದ ನಿರ್ಣಯಿಸು. 

ದಾರಿಯಲ್ಲಿ ಎರಡು ಬಗೆ ಪ್ರೇಯಸ್ಸು ಮತ್ತು ಶ್ರೇಯಸ್ಸು, ಪ್ರೇಯಸ್ಸು ಕೇವಲ ಇಂದ್ರಿಯ ಸುಖ ನೀಡುತ್ತದೆ. ಶ್ರೇಯಸ್ಸು ಪರಮ ಶಾಂತಿ ನೀಡುತ್ತದೆ. ಒಂದು ಬರೀ ಸಂಗ್ರಹಿಸುವುದು, ಇನ್ನೊಂದು ಸುಂದರ ಜೀವನಕ್ಕಾಗಿ ಬಳಸುವುದು. ಒಂದು ಬಂಧನದ ಮಾರ್ಗ, ಇನ್ನೊಂದು ಮುಕ್ತಿ ಮಾರ್ಗ. ಒಂದು ಅಶಾಂತಿಯ ಮಾರ್ಗ, ಇನ್ನೊಂದು ಶಾಂತಿಯ ಮಾರ್ಗ. ಜಗತ್ತನ್ನು ನೋಡಿ ಬದುಕನ್ನ ವೈಭವೀಕರಿಸುವ ಮಾರ್ಗ. ಶಾಂತಿ, ಜ್ಞಾನ ಮತ್ತು ಮುಕ್ತಿ ಮಾರ್ಗ ಒಳ್ಳೆಯ ಬದುಕು. (ಬದುಕು ಪವಿತ್ರ ಕೆಡಿಸಬಾರದು. ಜಗತ್ತು ಅದ್ಬುತ ವಿಸ್ತಾರ ಇದನ್ನು ಆನಂದವಾಗಿ ನೋಡುವುದೇ ಧರ್ಮ. ದೇವರ ನೆನಪು ಮಾಡಿಕೊಂಡು ಬದುಕುವುದೇ ಧರ್ಮ. ಜಗತ್ತೆಲ್ಲ ದೇವನದೆಂದು ಭಾವಿಸುವುದೇ ಧರ್ಮ. ಆನಂದ ಪಡುವುದೇ ಧರ್ಮ. ಬದುಕಿನಲ್ಲಿ ಶಾಂತಿ ತುಂಬುವುದೇ ಧರ್ಮ. ಇಂತಹ ಧರ್ಮದ ಜೀವನ ಸಾಧಿಸಬೇಕು. ಮತ್ತೆ ಮತ್ತೆ ಮಾನವ ಜೀವನದ ಅವಕಾಶ ಸಿಗುತ್ತದೆಯೇ?. ಈಗಿರುವುದೇ ಅದ್ಭುತ ಅವಕಾಶ. ದೇಹ, ಮನಸ್ಸು ಹೊಲಸಾಗದಂತೆ, ಸ್ವಚ್ಛವಾಗಿ ಇರಿಸುವುದೇ ಜೀವನ. ಸಮಾಧಾನ, ತೃಪ್ತ ಜೀವನ. ಇದೆ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ. ಈ ರೀತಿ ಶುದ್ಧ ಇದ್ದರೆ ದೇವನೊಲಿವನು ಎಂದು ಬಸವಣ್ಣ ಹೇಳಿದ.  

ಕೈ ಇರೋವರೆಗೆ ಕೆಲಸ ಮಾಡು. ಕಾಲು ಇರೋವರೆಗೆ ನಡೆ. ಮಾತು ಇರುವ ತನಕ ಸುಂದರ ಮಾತನಾಡು. ತಲೆ ಇರುವ ತನಕ ತಿಳಿದುಕೋ. ಎದೆ ಇರುವ ತನಕ ಪ್ರೇಮಿಸು ಈ ಜಗತ್ತನ್ನು. ಪ್ರತಿಯೊಂದು ಕೆಲಸದಲ್ಲಿ ಆನಂದ ನಿರೀಕ್ಷಿಸುವುದು. ಗ್ರಾಮೀಣ ಭಾಗದಲ್ಲಿ ಹಾಡಿಕೊಂಡು ಬೀಸುತ್ತಿದ್ದರು. ಒಳ್ಳೆಯದನ್ನು ಮಾತನಾಡಿಕೊಂಡು ನೀರು ತರುತ್ತಿದ್ದರು. ಭೂಮಿ ಉಳುಮೆ, ನಾಟಿ, ಕೊಯ್ಲುಗಳನ್ನು ಹಾಡಿಕೊಂಡು ಮಾಡುತ್ತಿದ್ದರು. ಅದೇ ಜೀವನ. ಗಂಭೀರವಾಗಿ ಗಂಟು ಮೋರೆ ಹಾಕಿಕೊಂಡು ಬದುಕಬಾರದು. ಯಾವುದೇ ಕೆಲಸ ಮಾಡು, ಉತ್ಸಾಹದಿಂದ, ಆನಂದ ವ್ಯಕ್ತ ಮಾಡುತ್ತಾ ಬದುಕಬೇಕು. ನಗುನಗುತ್ತಾ ಹಾಡುತ್ತಾ ಕೆಲಸ ಮಾಡಬೇಕು. ಅದು ಧರ್ಮ. ದೊಡ್ಡ ಅರಮನೆ, ಭಾರಿ ಸಿಂಹಾಸನ, ಮುತ್ತು ರತ್ನದಿಂದ ಮಾಡಿದೆ. ಅದರಲ್ಲಿ ಕುಳಿತಿದ್ದಾನೆ. ಸಿಂಹಾಸನ ಚುಚ್ಚುತ್ತಾ ಇದೆ. ಇಳಿಯಲು ಮನಸ್ಸಿಲ್ಲ.. ಏಕೆ?.. ಅದು ಬಂಗಾರ. ಕುಳಿತುಕೊಳ್ಳಲು ಕಷ್ಟ ಅದು ಚುಚ್ಚುತ್ತದೆ. ಇದೇ ಪ್ರಪಂಚ. ಅದರ ಮೇಲೆ ಕೆಟ್ಟ ಮುಖ ಮಾಡಿಕೊಂಡು ಕುಳಿತುಕೊಳ್ಳುವುದಕ್ಕಿಂತ ಇಳಿಯುವುದೇ ಲೇಸು. ಯಾವುದರಿಂದ ಸಂತೋಷ ಸಿಗುವುದಿಲ್ಲ ಅದರಿಂದ ದೂರ ಇರಬೇಕು. ಉತ್ಪನ್ನದ ಕೆಲಸ ಮಾಡಬೇಕು. ಏನು ನಿಸರ್ಗ ದೇವತೆ ಕೊಡುತ್ತೋ ಅದನ್ನು ಚೆನ್ನಾಗಿ ಊಟ ಮಾಡು. ಮಂದಿಗೂ ಊಟ ಮಾಡಿಸು. ಅನ್ನ ನೀಡಿದಾಗ ಆಗುವ ತೃಪ್ತಿ ಬೇರೆ ಯಾವುದರಿಂದಲೂ ಆಗುವುದಿಲ್ಲ. ಏನಾದರೂ ಕೊಟ್ಟು ಮನುಷ್ಯನ ಸಮಾಧಾನ ಮಾಡಲು ಆಗಲ್ಲ. ಸಾಕು ಅನ್ನುವುದು ಕೇವಲ ಊಟ ಮಾಡುವಾಗ. ತಿನ್ನೋದಕ್ಕೆ ಊಟ ಮಾಡುವುದಲ್ಲ, ಆನಂದಕ್ಕಾಗಿ ಊಟ ಮಾಡುವುದು. ಏನೋ ತಿನ್ನಬೇಕಲ್ಲ ಅಂತ ತಿನ್ನುವುದು ಬೇರೆ. ಸಂತೋಷಕ್ಕಾಗಿ ತಿನ್ನುವುದು ಬೇರೆ. 

ಒಂದು ಮಗುವಿಗೆ ತಾಯಿ ಹುಣಸೆ ಹಣ್ಣನ್ನು ಉಪ್ಪು ಹಾಕಿ ಒಂದು ಕಡ್ಡಿಗೆ ಚುಚ್ಚಿ ನೀಡಿರುತ್ತಾರೆ. ಆ ಮಗು ನೋಡಿದವರಿಗೆಲ್ಲ ಹುಚ್ಚು ಹಿಡಿಸುತ್ತದೆ. ಮಗು ಕೇವಲ ಅಷ್ಟರಲ್ಲೇ ಆನಂದ ಪಡುತ್ತದೆ. ನಮಗೆ ಏನೆಲ್ಲಾ ಇದ್ದರೂ ಸಂತೋಷವಿಲ್ಲ. ಸಂತೋಷಕ್ಕೆ ಕೋಟಿ ಕೋಟಿ ಬೇಕಾಗಿಲ್ಲ. ಸಂತೋಷಕ್ಕಾಗಿ ಬೆಟ್ಟದಷ್ಟು ವಸ್ತು ಬೇಕಾಗಿಲ್ಲ. ಒಂದು ತುತ್ತು ಸಾಕು. ಬದುಕುವ ರೀತಿ ಮಕ್ಕಳಿಗೆ ಗೊತ್ತಿದೆ. ದೊಡ್ಡವರು ಮರೆತಿದ್ದಾರೆ. ಇದು ತೃಪ್ತಿ. ಇದನ್ನು ಹಂಚಿಕೊಳ್ಳಬೇಕು. ಕೆಟ್ಟ ಮುಖದೊಂದಿಗೆ ಊಟಕ್ಕೆ ಕೂರಬಾರದು. ಪಕ್ಷಿಗಳು ಕಾಳುಗಳು ಆಗಿದ್ದಾಗ ಹೊಲಕ್ಕೆ ತಿನ್ನಲು ಬರುತ್ತವೆ. ಎರಡು ಕಾಳು ತಿಂದು ಕುಣಿದು ಕುಪ್ಪಳಿಸಿ ಹಾಡನ್ನು ಹಾಡುತ್ತದೆ. ಫಲ ಕಾಯುವವನ ಕವನಯಿಂದ ಕಲ್ಲು ಹೊಡೆದು ದಣಿದಿರುತ್ತಾನೆ. ಅವು ಕೇವಲ ನಾಲ್ಕು ಕಾಳು ತಿಂದು ಕುಣಿಯುತ್ತವೆ. ಅವು ಈತನ ಕಡೆ ನೋಡಿಲ್ಲ ಹಾಗೂ ಆತ ಬೀಸಿದ ಕಲ್ಲು ಈ ಪಕ್ಷಿಗೆ ತಾಕಿಲ್ಲ. ಇದಕ್ಕೆ ಬಸವಣ್ಣ ದಾಸೋಹ ಅಂತ ಹೆಸರಿಟ್ಟನು. ಎಲ್ಲರೂ ಕೂಡಿ ಸಹ ಭೋಜನ ಮಾಡುತ್ತಿದ್ದರು. ಇದು ಜನರ ಮನಸ್ಸನ್ನು ಒಂದುಗೂಡಿಸುತ್ತದೆ. ಆತ್ಮೀಯತೆ ಬೆಳೆಸುತ್ತದೆ. ಇದು ದೇವರು ಕೊಟ್ಟ ಪ್ರಸಾದ. ದೇವ ತೃಪ್ತಿಯನ್ನು ಕೊಡುವಂತೆ ಅನ್ನದ ರೂಪದಲ್ಲಿ ಬರುತ್ತಾನೆ. ಆನಂದ ಹಂಚಿಕೊಳ್ಳುವುದು, ವಿಚಾರ ಇದ್ದರೆ ವಿಚಾರ ಹಂಚಿಕೊಳ್ಳುವುದು, ಏನೂ ಇಲ್ಲದಿದ್ದರೆ ಒಂದು ಒಳ್ಳೆಯ ಮಾತು ಹೇಳುವುದು ಚೆನ್ನಾಗಿ ಕೆಲಸ ಮಾಡಿದವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮಾಡಿದ ದಣಿವು ಹೋಗುತ್ತದೆ. ಒಳ್ಳೆಯದನ್ನು ಅನುಭವಿಸಬೇಕು. ಸಂತೋಷ ಪಡಬೇಕು. 

ಶುಭ ಅಂದರೆ ನಗುತ್ತಾ ಇರುವುದು ಯಾರಲ್ಲಿ ಏನದೆ ಅದನ್ನು ಹಂಚಿಕೊಳ್ಳುವುದು. ಆಡುವವರು ಆಡುತ್ತಿರಬೇಕು ಕೇಳುವವರು ಕೇಳುತ್ತಿರಬೇಕು ನೋಡಿ ಸಂತೋಷ ಪಡುವುದು ಧರ್ಮ. ಅದನ್ನು ನೋಡಿ ನನ್ನ ಹೆಸರಿಗೆ ಮಾಡಿಕೊಂಡರೆ ಸಂತೋಷ ಅಂದರೆ ಧರ್ಮವಲ್ಲ. ತಕರಾರು ಮಾಡುವುದಾದರೆ ಕಣ್ಣುಮುಚ್ಚುವುದು ಲೇಸು, ಸಂತೋಷ ಹಂಚುವುದೇ ದಾಸೋಹ. ಮತ್ತೆ ಸತ್ಸಂಗ ಮಾಡಬೇಕು. ಒಳ್ಳೆಯದನ್ನು ಮೆಲುಕು ಹಾಕುವುದು. ಎಲ್ಲರಲ್ಲೂ ಎಲ್ಲ ಇರುವುದಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಇರುತ್ತದೆ. ಅದನ್ನು ಹಂಚಿಕೊಂಡು ಸಂತೋಷಪಡುವುದೇ ದಾಸೋಹ ಅಲ್ಲವೇ ಮಕ್ಕಳೇ...?
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
Mob : +91 94485 72723
******************************************




Ads on article

Advertise in articles 1

advertising articles 2

Advertise under the article