ನಿಷ್ಪಾಪಿ ಸಸ್ಯಗಳು : ಸಂಚಿಕೆ - 138
Saturday, February 7, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 138
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಚೆನ್ನಾಗಿದ್ದೀರಿ ತಾನೆ? ನಾವಿಂದು ನಮ್ಮ ಸುತ್ತ ಮುತ್ತ ಇದ್ದು ಎಲ್ಲರಿಗೂ ಚಿರಪರಿಚಿತವಾಗಿರುವ ಒಂದು ಬಳ್ಳಿಯ ಬಗ್ಗೆ ತಿಳಿಯೋಣ.
ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳ ಬಹುಪಾಲು ಮನೆಗಳಲ್ಲಿ ಹಟ್ಟಿಗಳಿದ್ದುವು. ಹಟ್ಟಿಗಳಲ್ಲಿ ಜಾನುವಾರುಗಳು ತುಂಬಿರುತ್ತಿದ್ದವು. ಕೃಷಿಗೆ ಗೊಬ್ಬರದ ಅವಶ್ಯಕತೆಯನ್ನು ಮನೆಯ ದನಕರುಗಳೇ ಪೂರೈಸುತ್ತಿದ್ದವು. ಗೊಬ್ಬರವಾಗಬೇಕಿದ್ದರೆ ಹಟ್ಟಿಗೆ ಸೊಪ್ಪು, ತರಗೆಲೆಗಳನ್ನು ತಂದು ಹಾಕುವುದು ವಾಡಿಕೆ. ಹೀಗೆ ಹಾಕಲು ನಿತ್ಯ ನೆರವಾಗುತ್ತಿದ್ದ ಒಂದು ಸೊಪ್ಪೆಂದರೆ ಮಾದೆರ್ ಬಳ್ಳಿ. ಇದು ಗಟ್ಟಿ ಕಾಂಡದ ದೊಡ್ಡ ಗಾತ್ರದ ಹಬ್ಬುವ ಬಳ್ಳಿ. ಹಗ್ಗದಂತೆ ಮರಗಳನ್ನು ಸುತ್ತುತ್ತವೆ. ಕೈಗಳಂತೆ ಬಳ್ಳಿಯ ಇಕ್ಕೆಲಗಳಲ್ಲಿ ಮೂಡುವ ಕುಡಿಗಳಿಂದ ಆಧಾರವನ್ನು ಹಿಡಿಯುತ್ತಾ ಇದ್ದಲ್ಲೇ ಸಣ್ಣ ಪುಟ್ಟ ಪೊದೆ ಮರಗಳನ್ನು ಆವರಿಸಿಕೊಳ್ಳುತ್ತದೆ.
ರೈತರಿಗೆ ಈ ಬಳ್ಳಿ ಏಕಿಷ್ಟವೆಂದರೆ ಇದರ ಚರ್ಮದಂತಹ ದಪ್ಪ ಎಲೆಗಳ ಸಮೂಹ. ಬೇಗನೆ ಸೊಪ್ಪಿನ ಕಾರ್ಯ ಮುಗಿಸುತ್ತವೆ. ತುದಿಗಳು ಚೂಪಾದ ಹೊಳೆವ ಹಸಿರು ಅಂಡಾಕಾರದ ಅಭಿಮುಖವಾಗಿರುವ ಎಲೆಗಳಲ್ಲಿ ನಾಲ್ಕೈದು ಜೋಡಿ ನರಗಳಿದ್ದು ಚಿಗುರಾಗಿರುವಾಗ ಮೃದುವಾಗಿ ಹಾವಸೆ ಬಣ್ಣದಲ್ಲಿರುತ್ತದೆ.
ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಹೂಗಳು ಅರಳುವ ಕಾಲ. ಹೆಚ್ಚಿನ ಎಲೆಗಳು ಉದುರಿ ಹೂಗೊಂಚಲುಗಳಿಂದ ಬಳ್ಳಿಯು ತುಂಬಿರುತ್ತದೆ. ನಕ್ಷತ್ರದಂತಿರುವ ಹಸಿರು ಮಿಶ್ರಿತ ಬಿಳಿ ಪುಟಾಣಿ ಹೂಗಳಿಗೆ ಐದಳಗಳಿವೆ. ಪುಟ್ಟ ಹಣ್ಣುಗಳ ಒಳಗೆ ಎರಡು ಮೂರು ಬೀಜಗಳಿದ್ದು ಗಾಳಿಯಲ್ಲಿ ಪ್ರಸಾರವಾಗಲು ಅನುಕೂಲವಾಗಲು ರೆಕ್ಕೆಯಂತೆ ರಚನೆಯಿರುತ್ತದೆ. ಇದು ದೋಣಿಯ ಹುಟ್ಟಿನಂತೆ ಕಾಣುವುದರಿಂದ ಪೆಡಲ್ ಪಾಡ್ ಎಂಬ ಅನ್ವರ್ಥ ನಾಮವೂ ಇದೆ.
ಸೆಲಾಸ್ಟ್ರೇಸಿ (Celastraceae) ಕುಟುಂಬಕ್ಕೆ ಸೇರಿದ ಮಾದೆರ್ ಬಳ್ಳಿಯ ಸಸ್ಯ ಶಾಸ್ತ್ರೀಯ ಹೆಸರು ರೀಸಾಂಟಿಯಾ ಇಂಡಿಕಾ(Reissantia indica) . ಲೋಸೆನೆರಿಯೆಲ್ಲಾ ಅರ್ನೊಟ್ಟಿಯಾನಾ (Loeseneriella arnottiana) ಎಂಬುದು ಇನ್ನೊಂದು ಹೆಸರು. 19ನೇ ಶತಮಾನದ ಸ್ಕಾಟಿಷ್ ಸಸ್ಯಶಾಸ್ತ್ರಜ್ಞ, ಗ್ಲ್ಯಾಸ್ಗೋ ವಿಶ್ವ ವಿದ್ಯಾಲಯದ ಸಸ್ಯ ಶಾಸ್ತ್ರ ಪ್ರಾಧ್ಯಾಪಕ ಜಾರ್ಜ್ ಅರ್ನಾಲ್ಡ್ ವಾಕರ್ ಅರ್ನಾಟ್ ಅವರ ಹೆಸರನ್ನೆ ಈ ಸಸ್ಯಕ್ಕಿಡಲಾಗಿದೆಯಂತೆ.
ಅರೆ ನಿತ್ಯಹರಿದ್ವರ್ಣ, ತೇವಾಂಶವುಳ್ಳ ಪತನ ಶೀಲ ಕಾಡುಗಳಲ್ಲಿ ಈ ಸಸ್ಯ ಹುಲುಸಾಗಿ ಬೆಳೆಯುತ್ತದೆ. ಭಾರತ, ಶ್ರೀಲಂಕಾ, ಇಂಡೋನೇಷ್ಯಾ ಗಳಲ್ಲಿ ಕಾಣಿಸುವ ಮಾದೆರ್ ಬಳ್ಳಿ ಪಶ್ಚಿಮ ಘಟ್ಟದೆಲ್ಲೆಡೆ ಹರಡಿದೆ. ಈ ವಿಶಿಷ್ಟ ನಿಷ್ಪಾಪಿ ಸಸ್ಯ ಮಲಬಾರ್ ಪೆಡಲ್ ಪಾಡ್, ದೊಡ್ಡ ಮಾದೆರಿ ಬಳ್ಳಿ, ದೊಡ್ಡ ಮಾತ್ರೀ ಬಳ್ಳಿ , ಕಾಂಗುಣ ಬಳ್ಳಿ ಎಂದೂ ಕರೆಯಲ್ಪುತ್ತದೆ. ಇದು ಮೂಲದಲ್ಲಿ ಪೊದರಿನಂತಿದ್ದರೂ ಇದರ ಉದ್ದನೆಯ ಬಳ್ಳಿಗಳು ನಾರಿನಂತೆ ಇರುವುದರಿಂದ ಸೊಪ್ಪು, ಕಟ್ಟಿಗೆ ತರಲು ಕಾಡಿಗೆ ಹೋಗುವವರು ಹಗ್ಗ ಕೊಂಡೊಯ್ಯುವುದು ಬಲು ಅಪರೂಪ.
ಮಾದೆರ್ ಬಳ್ಳಿ ಯ ಸೊಪ್ಪು ಸವರಿದರೆ ಸೊಪ್ಪು ದೊರಕುತ್ತದೆ ಮಾತ್ರವಲ್ಲದೆ ಬಳಿಕ ಉಳಿಯುವುದು ಉದ್ದನೆಯ ಬಳ್ಳಿ. ಅದರಲ್ಲೇ ಸೊಪ್ಪು ಸದೆ ಕಟ್ಟುವುದು ರೂಢಿಯಾಗಿದೆ. ಬಳ್ಳಿ ಬಹಳ ಗಟ್ಟಿಯಾಗಿ ಕಂಡರೂ ಗಂಟುಗಳನ್ನು ಹಾಕಲು ಸಹಕರಿಸುವ ವಿಶೇಷತೆ ಅದಕ್ಕಿದೆ. ಆದ್ದರಿಂದಲೇ ರೈತರಿಗೆ ಈ ಸಸ್ಯದ ಮೇಲೆ ಬಲು ಪ್ರೀತಿ. ಇದರ ಕಾಯಿ, ಬೀಜ, ಬೇರು ಸಾಂಪ್ರದಾಯಿಕ ಔಷಧದಲ್ಲಿ ಕೆಮ್ಮು, ಅತಿಸಾರ, ಅಸ್ತಮಾ, ಮಧುಮೇಹ, ಉರಿಯೂತ, ಜೀರ್ಣಕ್ರಿಯೆ ವಿಚಾರಗಳಲ್ಲಿ ಬಳಸಲ್ಪಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಮೂತ್ರ ಪಿಂಡ, ಪಿತ್ತಜನಕಾಂಗದ ರಕ್ಷಕ ಎನ್ನಲಾಗುತ್ತದೆ. ಈ ಸಸ್ಯದ ಬಗ್ಗೆ ಸಾಕಷ್ಟು ಸಂಶೋಧನೆಗಳಾಗುತ್ತಿರುವ ಬಗ್ಗೆ ಮಾಹಿತಿಗಳಿವೆ.
ಅದೆಷ್ಟೋ ಕಾಲದಿಂದ ಇದ್ದ ಗುಡ್ಡ ಬೆಟ್ಟಗಳು ಇಂದು ಮಾನವನ ಧಾಳಿಗೀಡಾಗಿ ನೆಲಸಮವಾಗುತ್ತಿರುವ ಕಾಲಘಟ್ಟದಲ್ಲಿ ಈ ಮಾದೇರ್ ಬಳ್ಳಿಯು ನಮ್ಮಿಂದ ದೂರವಾಗುತ್ತಿದೆಯೆನ್ನಲು ದು:ಖವಾಗುತ್ತಿದೆ. ನೈಸರ್ಗಿಕವಾಗಿ ಬೆಳೆಯುವ ಇಂತಹ ಸಸ್ಯಗಳನ್ನು ಮನೆಹಿತ್ತಲಲ್ಲಿ ಬೆಳೆಸಲಾರೆವು. ಆದರೂ ಈ ನಿಸರ್ಗವನ್ನು ರಕ್ಷಿಸುವ ಕೆಲಸವನ್ನು ನಾವು ನಿತ್ಯ ನಿರಂತರವಾಗಿ ಮಾಡೋಣ ಅಲ್ಲವೇ?.
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************