ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 85
Friday, January 16, 2026
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 85
ಲೇಖಕರು : ರಮ್ಯಾ ಆರ್ ಭಟ್
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
ಮಕ್ಕಳ ಜಗಲಿಯ ಎಲ್ಲರಿಗೂ ನನ್ನ ನಮಸ್ಕಾರಗಳು.. ಶಿಕ್ಷಕ ವೃತ್ತಿ ಎಷ್ಟು ಬೆಲೆಯುಳ್ಳದ್ದು ಎಂದರೆ, ಅದನ್ನು ವರ್ಣಿಸಲಾಗದು, ಆದರೆ ಅದನ್ನು ಕೇವಲ ವೃತ್ತಿಯಾಗಿ ನಿರ್ವಹಿಸಿದಾಗ ಅಷ್ಟು ತೃಪ್ತಿ ಇರುವುದಿಲ್ಲ.. ಧ್ಯೇಯವಾಗಿ ನಿರ್ವಹಿಸಿದಾಗ ಮಾತ್ರ, ಎನ್ನುವುದು ನನ್ನ ಅನಿಸಿಕೆ. ಶಿಕ್ಷಕರಾದವರು ಕೇವಲ ಪಾಠ ಹೇಳಿಕೊಡಲು ಕಲಿತರೆ ಸಾಲದು ಜೊತೆಗೆ, ಸಾಮಾಜಿಕ ಕಳಕಳಿ, ಜವಾಬ್ದಾರಿಗಳು, ಎಷ್ಟೋ ಸಂದರ್ಭದಲ್ಲಿ ಪೋಷಕರಿಂದ ಆಗದ ಕೆಲಸಗಳನ್ನು ಅವರು ಶಿಕ್ಷಕರಿಂದಲೇ ನಿರೀಕ್ಷಿಸುತ್ತಾರೆ. ಹಾಗಾಗಿ ಪೋಷಕರ ಶಿಕ್ಷಕರ ನಡುವಿನ ಬಾಂಧವ್ಯವು ಅತೀ ಅವಶ್ಯ. ಇದಕ್ಕೆ ಸೂಕ್ತ ಮಾರ್ಗ ಎಂದರೆ... ವರ್ಷದಲ್ಲೊಮ್ಮೆ ವಿದ್ಯಾರ್ಥಿಗಳ ಮನೆ ಭೇಟಿ. ಇದರಿಂದ ಮಗುವಿನ ಕುಟುಂಬದ ವಾತಾವರಣದ ಚಿತ್ರಣ ನಮ್ಮ ಮುಂದೆ ಬರುತ್ತದೆ. ಆಗ ನಾವು ಯಾವ ಮಗುವಿನ ಜೊತೆ ಯಾವ ರೀತಿಯ ಒಡನಾಟ ಸೂಕ್ತ ಎಂದು ತಿಳಿಯಲು ಸಾಧ್ಯ. ಹೀಗೆ ಮನೆ ಭೇಟಿಗೆ ಹೋದಾಗ ನಡೆದ ಒಂದು ಭಾವನಾತ್ಮಕ ಘಟನೆಯನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ...
ಮಕ್ಕಳ ಮನೆ ಭೇಟಿಯ ಸಂದರ್ಭ, ಎಲ್ಲ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಅವರ ಪೋಷಕರ ಬಳಿ ಮಾತನಾಡುವಾಗ, ಕೆಲವರದ್ದು ಸಾಮಾನ್ಯ ಸಂಭಾಷಣೆಯಾದರೆ ಇನ್ನು ಕೆಲವರದ್ದು, ಮಕ್ಕಳ ಮೇಲಿನ ದೂರುಗಳ ದಾಖಲೆ. ಕೆಲವರದ್ದು ಮನೆಯಲ್ಲಿ ನಮ್ಮ ಮಗು ನಮ್ಮ ಮಾತೇ ಕೇಳುವುದಿಲ್ಲ, ನೀವಾದರೂ ಹೇಳಿ ಬದಲಾಯಿಸಿ ಮಾತಾಜಿ ಎಂಬ ಗೋಗರೆಯುವಿಕೆ. ಇನ್ನು ಕೆಲವರದ್ದು, "ನಮ್ಮ ಮಗು ಈ ಬಾರಿ 95 ಅಂಕ ಪಡೆದಿದೆ, ತುಂಬಾ ಕಡಿಮೆ ಆಯಿತು ಎನ್ನುವ ಅತೃಪ್ತಿ. ಹೀಗೆ ಹಲವು ರೀತಿಯ ವಿಚಾರ ವೈಖರಿಗಳು ಕಣ್ಮುಂದೆ ಬಂದು ನಡೆಯುತ್ತಿದ್ದರೂ, ಆ ವಿಚಾರಗಳಿಗೆ ಸರಿಯಾದ ಪ್ರತಿಕ್ರಿಯೆ ನೀಡುತ್ತಾ ಅಂತೂ ಇಂತೂ ನಮ್ಮ ಗುರಿಯನ್ನು ಮುಟ್ಟುವುದೊಂದೇ ನಮ್ಮ ಉದ್ದೇಶ. ಹೀಗೆ ಮಧ್ಯಾಹ್ನವಾಯಿತು. ಉರಿ ಬಿಸಿಲು, ಹಸಿವು ಜೋರಾಗಿತ್ತು. ಹಳೆ ಕಾಲದ ಹಂಚಿನ ಮನೆ, ಒಳಗೆ ಹೊಗ್ಗಿದೊಡನೆ AC ಅನುಭವದ ವಾತಾವರಣ, "ಮಾತಾಜಿ ಬನ್ನಿ, ಕುಳಿತುಕೊಳ್ಳಿ, ನೀವು ಬಂದದ್ದು ಖುಷಿಯಾಯಿತು, ಕುಡಿಯಲು ನೀರು ತರುತ್ತೇನೆ, ಎಂದು ಒಳಗೆ ಹೋದರು ನನ್ನ ವಿದ್ಯಾರ್ಥಿಯ ಪೋಷಕರು.." ಪುಟ್ಟ.... ಇಲ್ಲಿ ನೋಡು ಬಾ ಯಾರೂ ಬಂದಿದ್ದಾರೆ? ಎಂದು ಕೂಗಿಡೊಡನೆ ಓಡಿ ಬಂದು ನಮ್ಮ ಮುಂದೆ ನಿಂತು, ನಾಚಿಕೆಯ ನಗುವ ಬೀರಿ, ಮತ್ತೆ ಅಮ್ಮನ ಹಿಂದೆ ಹೋಗಿ ನಿಂತ. ಹೀಗೆ ಉಬಯ ಕುಶಲೋಪಹಾರಿ ಮಾತನಾಡುತ್ತಾ.. ಮಗುವಿನ ಕಲಿಕೆಯ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿ.. ನಮಗೆ ಕುಡಿಯಲು ಹಾಲು ಬಿಸಿ ಮಾಡಲು ಮಗುವಿನ ಅಜ್ಜಿ ಒಳಗೆ ಹೋದರು. ಆಗ ಮಗುವನ್ನು ಕರೆದು, ಮಾತನಾಡಿಸತೊಡಗಿದೆ. ಹೀಗೆ ತುಂಬಾ ಸೆಕೆ ಇದ್ದ ಕಾರಣ, ಮನೆಯ ಒಳಗೆಲ್ಲ ಕಣ್ಣಾಡಿಸಿದೆ, ಕೈಯಲ್ಲೇ ಇದ್ದ ಪುಸ್ತಕದಿಂದ ಗಾಳಿ ಬೀಸಿಕೊಂಡೆ. ಅಷ್ಟರಲ್ಲಿ ಆ ಮಗು ಓಡಿ ಹೋಗಿ, ಅಲ್ಲೇ ಇದ್ದ ಪುರಾತನ ಕಾಲದ, ಮರದ ಕುರ್ಚಿಯನ್ನು ಹತ್ತಿದ. ನಾನು ಕೂಗಿದೆ ಹೇ.... ಅಲ್ಲೆಲ್ಲ ಹತ್ತಬೇಡ ಮಾರಾಯ, ನೀನು ಮನೆಯಲ್ಲೂ ಹೀಗೆ 'ಸ್ಪೇಡರ್ ಮ್ಯಾನ್' ಅಲ್ವಾ? ಎಂದು ಅಣಕಿಸಿದೆ.. "ಅವನು ನನ್ನ ನೋಡಿ ಮುಗುಳ್ನಕ್ಕೂ, ಅಲ್ಲೇ ಇದ್ದ ಫ್ಯಾನ್ ಸ್ವಿಚ್ ಆನ್ ಮಾಡಿದ. ಒಮ್ಮೆ, ಒಂದೇ ದೃಷ್ಟಿಕೋನದಿಂದ ನೋಡಿ ಅವನ ಬುದ್ದಿಯನ್ನು ನಿರ್ಣಯಿಸಿದ ನನ್ನ ಬಾಯಿ, ಪಟ್ಟನೆ ಮುಚ್ಚಿತು...! ಅವನ ಆ ಮೌನದ ಮುಗುಳ್ನಗೂ ನನ್ನ ಪ್ರಶ್ನೆಗೆ ಹಲವು ಉತ್ತರ ನೀಡಿತ್ತು..! ಯಾರನ್ನೂ ತುಂಬಾ ಕಡಿಮೆ ಸಮಯದಲ್ಲಿ ತೂಗಬಾರದು ಎನ್ನುವ ದೊಡ್ಡ ಪಾಠವನ್ನು, ನನಗೆ ಕಲಿಸಿದಂತಿತ್ತು..! ಆ ಕ್ಷಣ ಏನನ್ನು ಮಾತನಾಡದೆ.. ಅಲ್ಲಿಂದ ಹೊರಟೆವು. ಆದರೆ ಅವನ ಆ ಒಂದು ಪ್ರೌಢ ನಡವಳಿಕೆ ನನ್ನನ್ನು ಮೌನಗೊಳಿಸಿದ್ದಂತು ಹೌದು.
ನಂತರ ಮಾರನೇ ದಿನ ಶಾಲೆಗೆ ಬಂದಾಗ ಅವನನ್ನು ನನ್ನ ಬಳಿ ಕರೆದು ಕೇಳಿದೆ, "ನೆನ್ನೆ ನಿನ್ನ ಮನೆಗೆ ನಾವು ಬಂದಾಗ ನೀ ಓಡಿ ಹೋಗಿ ಕುರ್ಚಿ ಹತ್ತಿದ ರಭಸ ನೋಡಿ ನೀ ಏನೋ ಸರ್ಕಸ್ ಮಾಡ್ತಿಯಾ ಅನ್ಕೊಂಡೆ ಮಾರಾಯ, ಆದ್ರೆ ನೀನು ಫ್ಯಾನ್ ಸ್ವಿಚ್ ಆನ್ ಮಾಡಿದೆ. ನನಗೆ ತುಂಬಾ ಖುಷಿ ಆಯಿತು. ನೀ ತುಂಬಾ ಜಾಣ ಇದ್ದೀಯ. ನಿನಗೆ ಹೇಗೆ ಗೊತ್ತಾಯಿತು ನಮಗೆ ಸೆಕೆ ಆಗಿದ್ದು?ಎಂದು ಕೇಳಿದ್ದಕೆ ಅವನು ಹೇಳಿದ... "ನೀವು ಪುಸ್ತಕದಿಂದ ಗಾಳಿ ಬೀಸಿ ಕೊಳ್ಳುವುದನ್ನು ನಾನು ನೋಡಿದೆ, ಹಾಗೆ ನಾವು ದಿನ ತರಗತಿಗೆ ಬಂದಾಗ ನಮ್ಮನ್ನು ಕೇಳದೆಯೇ ನೀವೇ ತಿಳಿದು ಫ್ಯಾನ್ ಸ್ವಿಚ್ ಆನ್ ಮಾಡ್ತೀರಲ್ಲ ಮಾತಾಜಿ, ಅದಕ್ಕೆ ನಮ್ಮ ಮನೆಗೆ ನೀವು ಬಂದಾಗ ನಾನು ನಿಮ್ಮಂತಯೇ ಮಾಡಿದೆ.." ಎಂಬ ಆ 4 ವರ್ಷದ ಮಗುವಿನ ಉತ್ತರದೊಳಗೆ, ದಶಮಾನಗಳನ್ನು ಕಳೆದರು ಕೆಲವು ಸೂಕ್ಷ್ಮಗಳನ್ನು ಅರಿಯದ ಕೆಲವರಿಗೆ ರಾಮ ಬಾಣದಂತಿತ್ತು... ಅವನಿಗೆ ತಲೆ ಸವರಿ, ಬೆನ್ನು ತಟ್ಟಿ, 'ಗುಡ್ ಬಾಯ್' ಎಂದು ಹೇಳಿ ಕಳಿಸುವಷ್ಟು ಮಾತ್ರ ಪದಗಳು ನನ್ನಲ್ಲಿ ಉಳಿದಿದ್ದವು...!!
ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ ಎನ್ನುವುದು ಎಷ್ಟು ಸತ್ಯ..! ಸಂಸ್ಕಾರ ಮನೆಯಲ್ಲಿ ಎಷ್ಟು ಮುಖ್ಯವೋ ಶಾಲೆಯಲ್ಲೂ ಅಷ್ಟೇ ಮುಖ್ಯ. ಮೌಲ್ಯ ಶಿಕ್ಷಣದ ಅವಶ್ಯಕತೆ ಮತ್ತು ಅನಿವಾರ್ಯತೆ ಎಷ್ಟಿದೆ ಎಂಬುದನ್ನು ನಾವು ಇಲ್ಲಿ ತಿಳಿಯಬಹುದು... ಧನ್ಯವಾದಗಳು.
ಸಹ ಶಿಕ್ಷಕಿ.
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ, ಉಡುಪಿ ಜಿಲ್ಲೆ
Mob: +91 96634 64621
*******************************************