-->
ನಾನು ಓದಿದ ಪುಸ್ತಕ : ಸಂಚಿಕೆ - 09

ನಾನು ಓದಿದ ಪುಸ್ತಕ : ಸಂಚಿಕೆ - 09

ನಾನು ಓದಿದ ಪುಸ್ತಕ : ಸಂಚಿಕೆ - 09
ಪುಸ್ತಕ : ನಿಗೂಢ ನಾಣ್ಯ
ಓದು ಮತ್ತು ಬರಹ : ಶ್ವೇತಾ ಹೆಗಡೆ ಬೆಂಗಳೂರು, ಸಹಶಿಕ್ಷಕಿ
ಸ. ಹಿ. ಪ್ರಾ. ಶಾಲೆ ದೊಡ್ಡದುನ್ನಸಂದ್ರ,
ಹೊಸಕೋಟೆ ತಾಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ
Mob : +91 94806 02950



ಕೃತಿ : ನಾಕೊಂದ್ಲ ನಾಕು...! (ನಗುವಿಗಿಲ್ಲ ಬ್ರೇಕು)
ಲೇಖಕಿ : ನಳಿನಿ ಟಿ. ಭೀಮಪ್ಪ
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಷನ್ಸ್

'ನಗುವುದು ಸಹಜ ಧರ್ಮ, ನಗಿಸುವುದು ಪರ ಧರ್ಮ' ಎಂಬುದು ಡಿ. ವಿ. ಜಿ. ಅವರ ಮಾತು. ಆದರೆ ನಗಿಸುವುದು ಸುಲಭವಲ್ಲ. ಆ ಸುಲಭವಲ್ಲದ್ದನ್ನೇ ಆಯ್ಕೆ ಮಾಡಿಕೊಂಡು ಸೈ ಎನಿಸಿಕೊಳ್ಳುತ್ತಿರುವುದು ಲೇಖಕಿ ನಳಿನಿ ಮೇಡಂ ಅವರ ವಿಶೇಷತೆ. ನಮಗೆ ಸಾಮಾನ್ಯ ಎನ್ನಿಸುವ ಎಲ್ಲಾ ವಿಷಯಗಳಲ್ಲೂ ಲೇಖಕಿಯವರಿಗೆ ಹಾಸ್ಯ ಕಾಣಿಸುತ್ತದೆ. ಅವರು ಪ್ರತೀ ವಿಷಯವನ್ನು ಹಾಸ್ಯದ ದೃಷ್ಟಿಯಿಂದ ವೀಕ್ಷಿಸುತ್ತ ಸಾಗುತ್ತಾರೆ. ಕಿರಿ ಕಿರಿ, ಗಂಭೀರ ಎನ್ನುವ ವಿಚಾರಗಳನ್ನು ಸಹ ಹಾಸ್ಯವಾಗಿ ಹೇಳಿ ಹಗುರಾಗಿಸುತ್ತಾರೆ. ಉದಾಸೀನ ಮನಸ್ಸಿಗೆ ಹುರುಪು ಹುಮ್ಮಸ್ಸು ತುಂಬುವಲ್ಲಿ ಯಶಸ್ವಿಯಾಗುತ್ತಾರೆ.

ಬಸ್ ನಲ್ಲಿ ಸಾಗುವ ಫಜೀತಿ, ವಾಹನ ಚಲಾಯಿಸುವವರು ಡಿಕ್ಕಿ ಹೊಡೆಯದೆ ಇರುತ್ತಾರಾ?, ತುರಿಕೆಯಲ್ಲಿರುವ ಸುಖ, ಮದುವೆಯಾಗಿ ಅದೆಷ್ಟೋ ವರ್ಷಗಳ ನಂತರ ಈಗಿನ ಫ್ಯಾಷನ್ ನಂತೆ ಪೋಸ್ಟ್ ಶೂಟ್ ಮಾಡಿಕೊಳ್ಳುವ ವಿಚಾರವಾಗಿ ಡಬಲ್ ಟಯರ್, ಡುಮ್ಮು ಹೊಟ್ಟೆ, ಇತ್ಯಾದಿ ವಿಚಾರಗಳನ್ನು ಕೂಲಂಕುಶವಾಗಿ ವಿವರಿಸುತ್ತಾ ನಗೆಗಡಲಲ್ಲಿ ತೇಲಿಸುತ್ತಾರೆ. ನಿಂಬೆ, ಟೊಮೆಟೊ ಬೆಲೆ ಏರಿಕೆಯಲ್ಲೂ ಹಾಸ್ಯದ ಹೊನಲನ್ನು ಹರಿಸುತ್ತಾರೆ. ಆರುಸಾವಿರ ವರ್ಷಗಳ ಇತಿಹಾಸ ಇರುವ ಬುರುಗುಬಟ್ಟು (ಸೋಪು) ಕೂಡ ತಮ್ಮ ವಿವಿಧ ರೂಪಗಳನ್ನು ತೋರುತ್ತ ಸಾಗುತ್ತವೆ. ಈಗ ಬಟ್ಟೆ ತೊಳೆಯುವ, ಮಡಚುವ ಜಂಜಾಟ ಗಮನಿಸಿದರೆ ಆದಿವಾಸಿಗಳ ಕಾಲದಲ್ಲೇ ಹೆಣ್ಣುಮಕ್ಕಳು ಆರಾಮಾಗಿ ಇರ್ತಿದ್ರು ಅನ್ಸುತ್ತೆ ಎನ್ನುತ್ತಾ ತೊಳೀತಾ ಇರಿ ತೊಳೀತಾ ಇರಿ ಎಂದು ಹಾಸ್ಯ ಮಾಡುತ್ತಾರೆ. ನಾಯಿ, ಹಂದಿಗಳಿಂದ ಇರುವ ಭಯವು ಹಾಸ್ಯದ ವಸ್ತುವಾಗಿದೆ.. ಕಿವಿಗೆ ಸಿಗುವ ಶಿಕ್ಷೆ ಕರ್ಣ ರೋಧನೆಯಾಗಿದೆ.. ಕುಳಿತುಕೊಳ್ಳುವ ವಿಚಾರವೂ ಹಾಸ್ಯಕ್ಕೆ ಒಳಗಾಗುತ್ತದೆ. ಶಾಪಿಂಗ್ ಗೆ ಹೋದಾಗ ಕಾರ್ ಪಾರ್ಕಿಂಗ್ ಗೆ ಉಂಟಾಗುವ ಸಮಸ್ಯೆಯೂ ಹಾಸ್ಯಕ್ಕೊಳಗಾಗುತ್ತದೆ. ಕತ್ತೆಗೊಂದು ಕಾಲ, ನಾಣ್ಯ, ಮದುವೆ, ಲಾಕ್ಕಾಲ(ಬೀಗ), ಸೀರೆ ವಿಲೇವಾರಿ, ನಖ, ಹಂಪ್, ಮೊಬೈಲ್ ಕೂಸು, ಕೆಲಸ ಮಾಡುತ್ತಾ ಹಾಡಿಕೊಳ್ಳುವ ಸಂಗೀತ, ರೈಲು ಹತ್ತಿದ ಮೇಲೆ.. ಹೀಗೆ ಪ್ರತೀ ವಿಚಾರಗಳೂ ಹಾಸ್ಯದ ವಸ್ತುಗಳು. ಇಲ್ಲಿ ನನಗೆ ತುಂಬಾ ಇಷ್ಟವಾದ ಲೇಖನ ನಾಕೊಂದ್ಲ ನಾಕು...?. ನಾಲ್ಕು ಮಾತಾಡೋದು, ನಾಲ್ಕು ಪಾತ್ರೆ ತೊಳೆಯೋದು, ನಾಲ್ಕು ಅಂಕದ ನಾಲ್ಕು ವಾಕ್ಯದಲ್ಲಿ ಉತ್ತರಿಸಿ ಪ್ರಶ್ನೆ, ಸ್ವರ್ಗಕ್ಕೆ ನಾಲ್ಕೇ ಮೆಟ್ಟಿಲು.. ಹೀಗೆ ನಾಲ್ಕನ್ನು ಹಾಸ್ಯದ ಹೊನಲಲ್ಲಿ ತೇಲಿಸಿ ನಮ್ಮನ್ನು ನಗಿಸುತ್ತಾರೆ.

ಹೀಗೆ ಪ್ರತೀ ವಿಚಾರಗಳಲ್ಲಿ ಹಾಸ್ಯವನ್ನು ಗುರುತಿಸುವ, ಇತರರನ್ನು ನಗಿಸುವ ಪ್ರವೃತ್ತಿ ಲೇಖಕಿಯವರದ್ದು. ಇಲ್ಲಿನ ಹಲವಾರು ವಿಷಯಗಳು ನಾವು ನಮ್ಮ ಬಾಲ್ಯ ಹಾಗೂ ಪ್ರಸ್ತುತದಲ್ಲಿ ಅನುಭವಿಸಿದ ಅನುಭವಗಳು. ಹಾಗಾಗಿ ಅವೆಲ್ಲವೂ ನಮಗೆ ಹೌದು ಎನ್ನಿಸುವುದರ ಜೊತೆಗೆ ಸ್ವಂತ ಅನುಭವವನ್ನು ಬರೆದು ಕೊಟ್ಟಂತೆ ಇರುವುದು ವಿಶೇಷ.
.......................... ಶ್ವೇತಾ ಹೆಗಡೆ ಬೆಂಗಳೂರು
ಸಹಶಿಕ್ಷಕಿ
ಸ. ಹಿ. ಪ್ರಾ. ಶಾಲೆ ದೊಡ್ಡದುನ್ನಸಂದ್ರ,
ಹೊಸಕೋಟೆ ತಾಲೂಕು, 
ಬೆಂಗಳೂರು ಗ್ರಾಮಾಂತರ ಜಿಲ್ಲೆ
Mob : +91 94806 02950
*****************************************

Ads on article

Advertise in articles 1

advertising articles 2

Advertise under the article