ಪಯಣ : ಸಂಚಿಕೆ - 79 (ಬನ್ನಿ ಪ್ರವಾಸ ಹೋಗೋಣ)
Friday, January 30, 2026
Edit
ಪಯಣ : ಸಂಚಿಕೆ - 79 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ ''ಬೈಲಕುಪ್ಪೆ 'ಗೆ (ಭಾಗ : 2) ಪಯಣ ಮಾಡೋಣ ಬನ್ನಿ....
ಲಾಮಾ ಆಗುವ ಎಲ್ಲರಿಗೂ ವಸತಿ, ಶಿಕ್ಷಣ ಸೌಲಭ್ಯವನ್ನೆಲ್ಲಾ ಧರ್ಮಶಾಲೆ ನೋಡಿಕೊಳ್ಳುತ್ತದೆ. ಇಲ್ಲಿ ಧರ್ಮವನ್ನೇ ಮುಖ್ಯವಾಗಿ ಬೋಧಿಸಲಾಗುತ್ತದೆ. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಕಾಲೇಜುವರೆಗೆ ಪಾಠ ಪ್ರವಚನ ನಡೆಯುತ್ತದೆ. ಶಿಕ್ಷಣ ಪಡೆದ ಲಾಮಾಗಳು ಧರ್ಮ ಪ್ರಚಾರಕ್ಕಾಗಿ ವಿವಿಧ ದೇಶಗಳಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಾರೆ.
ಮೈಸೂರು - ಮಡಿಕೇರಿ ರಸ್ತೆಯಲ್ಲಿ ಸಾಗಿದರೆ ಕುಶಾಲನಗರಕ್ಕೆ ಒಂದು ಕಿ.ಮೀ. ಮೊದಲು ಕೊಪ್ಪ ಎಂಬ ಊರು ಸಿಗುತ್ತದೆ. ಅಲ್ಲಿಂದ ಎರಡೂವರೆ ಕಿ.ಮೀ. ಸಾಗಿದರೆ ಸುಂದರ ಸುವರ್ಣ ಮಂದಿರ ನಿಮ್ಮನ್ನು ಎದುರುಗೊಳ್ಳುತ್ತದೆ. ಸ್ವರ್ಣ ಮಂದಿರ ಎದುರಾದಂತೆ ಅಲ್ಲಿ ಬೌದ್ಧ ಸನ್ಯಾಸಿಗಳು ಸಿಗುತ್ತಾರೆ. ಸ್ವಲ್ಪ ಮುಂದೆ ಸಾಗಿದರೆ ಸನ್ಯಾಸಿಗಳು ಶಾಂತಿ ಮಂತ್ರ ಜಪಿಸುತ್ತಿರುವುದನ್ನು ಕಾಣಬಹುದು. ಇಲ್ಲಿನ ರಮಣೀಯ ಪರಿಸರ ಹಾಗೂ ಬುದ್ಧ ಸಂದೇಶ ಬಹುಜನರನ್ನು ಆಕರ್ಷಿಸಿದೆ. ಹಿರಿಯ-ಕಿರಿಯ ಬೌದ್ಧ ಸನ್ಯಾಸಿಗಳು ಕೈಯಲ್ಲೊಂದು ಜಪ ಮಾಲೆ ಮತ್ತು ಪುಸ್ತಕ ಹಿಡಿದು ಆಚೀಚೆ ಹೋಗುವುದನ್ನು ನೋಡಬಹುದು. ಸುತ್ತಲೂ ಟಿಬೆಟ್ ಆಭರಣಗಳು, ಫ್ಯಾಷನ್ ವಸ್ತುಗಳನ್ನು ಮಾರುವ ಅಂಗಡಿಗಳೂ ಇವೆ. ಒಂದರ್ಥದಲ್ಲಿ ಬೈಲುಕುಪ್ಪೆ ಮಿನಿ ಟಿಬೆಟ್ ಆಗಿದೆ ಎಂದೇ ಹೇಳಬಹುದು.
ಭಾರತದಲ್ಲಿ ಅತಿ ದೊಡ್ಡ ಟಿಬೆಟಿಯನ್ ಸಮುದಾಯದ ನಿರಾಶ್ರಿತ ತಾಣ ಬೈಲುಕುಪ್ಪೆ ಮೈಸೂರಿನಿಂದ 90 ಕಿ.ಮೀ. ದೂರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಬೈಲುಕುಪ್ಪೆಯಲ್ಲಿರುವ ಸುವರ್ಣ ಮಂದಿರ ಪ್ರಮುಖ ಪ್ರವಾಸೀ ತಾಣವಾಗಿ ಹೆಸರು ಗಳಿಸಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣಕ್ಕೆ ಸೇರಿದ್ದರೂ ವ್ಯಾವಹಾರಿಕ ದೃಷ್ಟಿಯಿಂದ ಕೊಡಗಿನೊಂದಿಗೆ ನಿಕಟ ಸಂಪರ್ಕ ಹೊಂದಿದೆ.
ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಮಠ ಅಥವಾ ಟಿಬೆಟಿಯನ್ ಕ್ಯಾಂಪ್ ಕುಶಾಲನಗರದಿಂದ 3 ಕಿ.ಮೀ. ದೂರದಲ್ಲಿದೆ. ಟಿಬೆಟಿಯನ್ ಮಠದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಸನ್ಯಾಸಿಗಳು ಮತ್ತು ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿನ ಮಠ ಕೇವಲ ಯುವ ಸನ್ಯಾಸಿಗಳನ್ನು ಮಾತ್ರವಲ್ಲ ದೇಶದೆಲ್ಲೆಡೆಯ ಪ್ರವಾಸಿಗರನ್ನು ಆಕರ್ಷಿಸಿದೆ.
ನೇಪಾಳದಿಂದ ಗಡಿಪಾರು ಮಾಡಿದ ಸಂದರ್ಭದಲ್ಲಿ ಭಾರತಕ್ಕೆ ಬಂದ ನಿರಾಶ್ರಿತರು ವಸತಿ ನೆಲಯನ್ನು ಕಂಡುಕೊಂಡಿದ್ದು ಇಲ್ಲಿಯೇ. ರಾಜ್ಯದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಟಿಬೆಟಿಯನ್ನರಿಗೆ ಆಶ್ರಯ ಕಲ್ಪಿಸಿದ್ದರು. ಟಿಬೆಟಿಯನ್ ನಿರಾಶ್ರಿತರು ಈಗ ಹತ್ತು ಸಾವಿರಕ್ಕೂ ಹೆಚ್ಚುಮಂದಿ ಇದ್ದಾರೆ. ಬೈಲುಕುಪ್ಪೆಯಲ್ಲಿ ಟಿಬೆಟಿಯನ್ ಬೌದ್ಧ ಸಂಪ್ರದಾಯದ ಮಠಗಳು, ಮಹಿಳಾ ಸನ್ಯಾಸಿಗಳ ಮಠಗಳು, ದೇವಾಲಯಗಳಿವೆ. ದೊಡ್ಡ ಶೈಕ್ಷಣಿಕ ಸಂಸ್ಥೆ ಸೆರಾ ತುಂಬಾ ಆಕರ್ಷಣೀಯವಾಗಿದೆ. ಟಿಬೆಟಿಯನ್ ಬೌದ್ಧಿಕ ಪರಂಪರೆಯಂತೆ ಇಲ್ಲಿನ ಗೋಡೆಗಳಲ್ಲಿ ದೇವರು ಮತ್ತು ದೆವ್ವದ ಚಿತ್ರಗಳನ್ನು ಆಕರ್ಷಕವಾಗಿ ಚಿತ್ರಿಸಲಾಗಿದೆ.
ಬೈಲಕುಪ್ಪೆಯಲ್ಲಿ ಗೋಲ್ಡನ್ ಟೆಂಪಲ್ ಪ್ರಮುಖ ಆಕರ್ಷಣೀಯ ಕೇಂದ್ರ. ದೇವಾಲಯದ ಒಳಗೆ ಹೋದಂತೆ ಇನ್ನೊಂದು ಪ್ರಪಂಚಕ್ಕೆ ಕಾಲಿಟ್ಟಂತಹ ಅನುಭವ. ಪ್ರಶಾಂತ ವಾತಾವರಣ. ಸುವರ್ಣ ಮಂದಿರದಲ್ಲಿ 40 ಅಡಿ ಎತ್ತರದ ಮೂರು ಚಿನ್ನದ ಪ್ರತಿಮೆಗಳನ್ನು ಕಾಣಬಹುದು. ಪದ್ಮಸಂಭವ ಮತ್ತು ಅಮಿತಾಯುಷ್ ಮೂರ್ತಿಯ ಮಧ್ಯದಲ್ಲಿ ಬುದ್ಧನ ಮೂರ್ತಿ ಶೋಭಿಸುತ್ತಿದೆ. ಬಲಿಪೀಠದಿಂದ ಸಂದರ್ಶಕರನ್ನು ನೋಡಿದಂತೆ ಕಾಣುತ್ತದೆ. ಅಲ್ಲಿಯ ಗೋಡೆಗಳನ್ನು ಬಣ್ಣದ ಪೇಂಟಿಂಗ್‌ನಿಂದ ಚಿತ್ರಿಸಲಾಗಿದೆ. ಬಲಿಪೀಠವನ್ನು ಹೂವು, ಕ್ಯಾಂಡಲ್, ಧೂಪದ್ರವ್ಯಗಳಿಂದ ಅಲಂಕರಿಸಲಾಗಿದೆ. ಒಳಗಡೆ ತಂಪಾದ ವಾತಾವರಣವಿದ್ದು ವೈಭವದಿಂದ ಕೂಡಿದೆ. ಸುತ್ತಲೂ ಸುಂದರವಾದ ಹೂತೋಟವಿದೆ. ಇಲ್ಲಿನ ಸೆರಾ ಮಠ ಶಿಕ್ಷಣ ಸಂಸ್ಥೆಯ ಮೂಲ ಟಿಬೆಟ್‌ನಲ್ಲಿದೆ. ಸ್ವರ್ಣ ಮಂದಿರದ ಸುತ್ತಲೂ ಟಿಬೆಟ್ ಆಭರಣಗಳು, ಕರಕುಶಲ ವಸ್ತುಗಳು, ಧೂಪದ್ರವ್ಯ ಮತ್ತು ಸ್ಮಾರಕಗಳನ್ನು ಮಾರುವ ಅಂಗಡಿಗಳಿವೆ. ತಾಸಿ ಲುನ್ನೋ ಮಠ, ಟಿಬೆಟ್‌ನ ನಾಲ್ಕು ಪ್ರಮುಖ ಮಠಗಳಲ್ಲಿ ಒಂದು. ಲಾಮಾನ ಕೇಂದ್ರ ಪೀಠವೂ ಹೌದು. ಇದನ್ನು 1972ರಲ್ಲಿ ಬೈಲುಕುಪ್ಪೆಯಲ್ಲಿ ಮರುಸ್ಥಾಪಿಸಲಾಗಿದೆ. ಇಲ್ಲಿ 250 ಬೌದ್ಧ ಸನ್ಯಾಸಿಗಳು ಸೂತ್ರ ಮತ್ತು ತಂತ್ರವನ್ನು ಅಭ್ಯಸಿಸುತ್ತಿದ್ದಾರೆ.
ಮಾರ್ಗ : ಬೆಂಗಳೂರಿನಿಂದ 250 ಕಿ.ಮೀ. ದೂರದಲ್ಲಿದೆ. ಮೈಸೂರಿನಿಂದ 90 ಕಿ.ಮೀ. ಬೈಲುಕುಪ್ಪೆಗೆ ಹತ್ತಿರ ರೈಲ್ವೆ ನಿಲ್ದಾಣ ಮತ್ತು ಏರ್‌ಪೋರ್ಟ್ ಮೈಸೂರು.
"ಬೈಲಕುಪ್ಪೆಯ ಪ್ರವಾಸವು ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಪ್ರಕೃತಿ ಸೌಂದರ್ಯದಿಂದ ಕೂಡಿದ ಮಹತ್ವವನ್ನು ಹೊಂದಿದೆ "
'ಪ್ರವಾಸ ಅನುಭವವೇ - ನಿಜವಾದ ಗುರು'
ಬನ್ನಿ ಒಮ್ಮೆ, ಪ್ರವಾಸಕ್ಕೆ....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************