ನಿಷ್ಪಾಪಿ ಸಸ್ಯಗಳು : ಸಂಚಿಕೆ - 137
Friday, January 30, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 137
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಇತ್ತೀಚೆಗೆ ನಮ್ಮ ಶಾಲಾ ಮಕ್ಕಳಿಗೆ ಹೊರ ಸಂಚಾರವನ್ನೇರ್ಪಡಿಸಿದ್ದೆವು. ವಿವಿಧ ಮರಗಳನ್ನು ಗುರುತಿಸುವುದು, ಕಾಂಡದ ಅಚ್ಚು ತೆಗೆಯುವುದು, ಎಲೆಗಳ ವೈವಿಧ್ಯತೆ, ಗಿಡ ಮರಗಳನ್ನೇ ಆವಾಸ ಮಾಡಿಕೊಂಡ ಕ್ರಿಮಿಕೀಟಗಳನ್ನು ಗುರುತಿಸಿ ಚಿತ್ರಿಸುವ ಕೆಲಸ ಅವರ ಪಾಲಿಗಿತ್ತು. ಇವೆಲ್ಲವನ್ನು ಗಮನಿಸಬೇಕೆಂದು ಗಿಡಮರಗಳು ಸ್ವಲ್ಪ ಒತ್ತಾಗಿರುವ ಜಾಗವನ್ನೇ ಆರಿಸಿಕೊಂಡೆವು. ಚಳಿಗಾಲ ಕಳೆದು ಬೇಸಿಗೆಯು ಕಾಲೂರುತ್ತಿರುವ ಸಮಯವಿದು. ಎಲ್ಲೆಡೆ ತರಗೆಲೆ ಹೊದಿಕೆ! ಮಕ್ಕಳು ಕಣ್ಣರಳಿಸುತ್ತಾ, ಎಚ್ಚರದಿಂದ ಕಾಲಿರಿಸುತ್ತಾ ಸಂತಸಪಟ್ಟರು. ಮರಗಳು ವಿರಳವಾಗಿದ್ದರೂ ಸಣ್ಣ ಸಣ್ಣ ಸಸ್ಯಗಳು, ಪೊದೆಗಳು ಕಾಡಿನಬ್ಬರದ ಭ್ರಮೆ ತೋರಲು ಒತ್ತಾಗಿದ್ದಂತೆ ಕಂಡವು. ಉತ್ಸಾಹದಿಂದ ಮುನ್ನುಗ್ಗುತ್ತಿದ್ದ ಮಕ್ಕಳು ಸ್ವಲ್ಪ ದೂರ ಕ್ರಮಿಸುತ್ತಲೇ ಸೋತುಹೋದರು !. ಯಾಕೆ ಗೊತ್ತಾ? ಯಾವ ಕಡೆಗೂ ದಾರಿ ಬಿಟ್ಟುಕೊಡದ ಚೂರಿಮುಳ್ಳಿನ ಗಿಡಗಳು ಸಣ್ಣ ಪುಟ್ಟ ಗಿಡಗಳನ್ನೆ ಆವರಿಸಿದ್ದವು. ಇತರ ಮುಳ್ಳು ಗಿಡಗಳಿದ್ದರೂ ಚೂರಿಮುಳ್ಳು ಗಿಡದ ಶಾಖೆಗಳು ಮಾತ್ರ ದೊಡ್ಡ ರೆಕ್ಕೆಗಳಂತೆ ಹರಡಿದ್ದವು. ಅವುಗಳ ಕವಲೊಡೆದ ಶಾಖೆಗಳಲ್ಲಿ ಮತ್ತೆ ಸಣ್ಣ ಗಾತ್ರದ ಪರ್ಯಾಯ ಶಾಖೆಗಳು. ಈ ಶಾಖೆಗಳ ಉದ್ದಗಲಕ್ಕೂ ತುದಿ ಚೂಪಾದ, ಒಂದಿಷ್ಟು ದೊರಗೆನಿಸುವ ಅಂಡಾಕಾರದ ಸಣ್ಣ ಸಣ್ಣ ಹಸಿರು ಎಲೆಗಳು. ಎಲೆಗಳ ತೊಟ್ಟಿನ ಬುಡದಲ್ಲಿ ಹಸುರಾದ ನಕ್ಷತ್ರದಂತಹ ಹೂವುಗಳು, ಅಲ್ಲಲ್ಲಿ ಹಸಿರು ಬಣ್ಣದ ಕಾಯಿಗಳೂ ಇದ್ದವು. ಅವುಗಳ ನಡುವೆ ಸಿಕ್ಕಿಬಿದ್ದ ನಮ್ಮ ಮಕ್ಕಳು ತಮ್ಮ ಬಟ್ಟೆಗಳನ್ನು ಮುಳ್ಳಿನಿಂದ ಬಿಡಿಸಿಕೊಳ್ಳಲು ಕಷ್ಟಪಡುತ್ತಿದ್ದರು. ಎಲೆ ಕಾಂಡಗಳ ಮೇಲೆ ಸೂಕ್ಷ್ಮ ರೋಮಗಳಿದ್ದು ಗಿಡವು ಒರಟೊರಟಾಗಿದ್ದು ಮುಳ್ಳಿನ ದೆಸೆಯಿಂದ ಎಲ್ಲೂ ಹಿಡಿಯುವಂತಿರಲಿಲ್ಲ. ಮುಳ್ಳು ಹೇಗಿತ್ತೆಂದರೆ ಮುಳ್ಳಿನ ತುದಿಗಳು ಚೂಪಾಗಿ ಒಳಬದಿಗೆ ಬಗ್ಗಿದಂತಿದ್ದು ಬಿಡಿಸಿಕೊಳ್ಳಲು ಸುಲಭಸಾಧ್ಯವಿರಲಿಲ್ಲ. ಅದು ಚೂರಿಯೇ ಸೈ! ಒಟ್ಟಾರೆ ಮಕ್ಕಳ ಕಾಡಿನೊಳಗೆ ನುಗ್ಗುವ ಆಸೆಗೆ ಬ್ರೇಕ್ ಬಿದ್ದಿತ್ತು. ಇವೆಲ್ಲವನ್ನೂ ವೀಕ್ಷಿಸುತ್ತಿದ್ದ ಶೋಭಿತಾ ಟೀಚರ್ ಅರಿವಿಲ್ಲದೆ ಬಾಲ್ಯಕ್ಕೆ ಜಾರಿದ್ದರು. "ಸವಿ ಸವಿ ನೆನಪು, ಸಾವಿರ ನೆನಪು.." ಎಂದು ಗುನುಗ ತೊಡಗಿದರು!.
ಹೌದು, ಬಾಲ್ಯದ ನೆನಪುಗಳು ಬಹಳ ಸವಿಯಾಗಿರುತ್ತವೆ. ನಮ್ಮ ಬಾಲ್ಯದ ದಿನಗಳನ್ನು ಆವರಿಸಿಕೊಳ್ಳುತ್ತಿದ್ದ ಮುಳ್ಳಂಕಾಯಿ, ಚೂರಿಮುಳ್ಳು, ಬೆಲ್ಲ ಮುಳ್ಳು, ಅರ್ಪು, ಕುಂಟಾಲ, ನೇರಳೆ, ಜಾರಿಗೆ, ಕೊಟ್ಟೆ ಹಣ್ಣು, ಪುನರ್ಪುಳಿ, ಪೆಜಕಾಯಿ, ಕೇಪಳ, ಕರಂಡೆ, ನೆಲ್ಲಿ, ಪುಚ್ಚೆಹಣ್ಣು, ನಾಣಿಲು, ರೆಂಜೆ ಇವೇ ಮೊದಲಾದುವು ಈಗ ನೆನಪಿಗಷ್ಟೇ ಮೀಸಲಾಗಿವೆ. ಈ ಚೂರಿಮುಳ್ಳಿನ ಪಕ್ವವಾದ ಹಣ್ಣುಗಳ ರುಚಿ ಸಿಹಿ ಮಿಶ್ರಿತ ಹುಳಿ. ತಿರುಳು ಬಹಳವಿಲ್ಲವಾದರೂ ಮನ ಸೆಳೆಯುವ ಉತ್ಕೃಷ್ಟ ರುಚಿ! ಇದನ್ನು ನೇರವಾಗಿಯೂ ತಿನ್ನಬಹುದು ಅಥವಾ ಚಟ್ನಿ, ಜ್ಯೂಸ್, ಜಾಮ್ ಕೂಡ ಮಾಡಬಹುದು.
ಚೂರಿಮುಳ್ಳಿನ ಎಲೆ, ಕಾಂಡದ ಸಿಪ್ಪೆ , ಬೇರು ಆಯುರ್ವೇದ ದಲ್ಲಿ ಔಷಧೀಯ ಸ್ಥಾನ ಪಡೆದಿವೆ. ಗಂಟಲು ನೋವು, ಗರ್ಭಕೋಶದ ತೊಂದರೆ ಕ್ಯಾನ್ಸರ್, ಹೃದಯರೋಗ, ಮುಪ್ಪು ಸಂಬಂಧಿತ ಸಮಸ್ಯೆ , ಮಧುಮೇಹ, ದೃಷ್ಟಿ ಸಮಸ್ಯೆ ನಿವಾರಣೆಗೆ ಕೊಡುಗೆ ನೀಡುವ ಈ ನಿಷ್ಪಾಪಿ ಸಸ್ಯ ಫೈಬರ್ ಮತ್ತು ವಿಟಮಿನ್ ಸಿ ಹೊಂದಿದ್ದು ಜೀರ್ಣ ಸಮಸ್ಯೆಗೆ, ಚರ್ಮದ ಆರೋಗ್ಯಕ್ಕೆ, ತೂಕ ನಿಯಂತ್ರಣಕ್ಕೂ ಸಹಕರಿಸಬಲ್ಲದು. ಪ್ರಕೃತಿಯ ಈ ಸಣ್ಣ ಉಡುಗೊರೆ ನಮ್ಮ ಆರೋಗ್ಯಕ್ಕೊಂದು ದೊಡ್ಡ ಉಡುಗೊರೆಯೇ ಸರಿ. ಕಣಜ, ಜೇನು, ಚೇಳು ಇತ್ಯಾದಿ ಕೀಟಗಳ ಕಡಿತಕ್ಕೆ ಇದರ ಎಲೆಯ ಜೊತೆ ಅರಶಿನ ಬೆರೆಸಿ ಅರೆದು ಹಚ್ಚಿದರೆ ಉರಿ ಶಮನವಾಗುವುದು.
ಪ್ರುನಸ್ (Prunus) ಕುಲಕ್ಕೆ ಸೇರಿದ Ziziphus oenopolea ಎಂಬ ನಾಮಧೇಯದ ಚೂರಿಮುಳ್ಳು ಅಥವಾ Cherry fruit ಏಷ್ಯಾ ಮತ್ತು ಆಸ್ಟ್ರೇಲಿಯಾ ದಲ್ಲಿ ಹೆಚ್ಚಿದೆ. ಮಂಗ,8 ಹಂದಿ ಮೊದಲಾದ ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ರೈತರು ಜೀವಂತ ಬೇಲಿಯಾಗಿಯೂ ಬಳಸುವರು. ಪೊದೆ ಸಸ್ಯವಾಗಿ ಕಂಡರೂ ಇದು ಸಣ್ಣ ಪುಟ್ಟ ಗಿಡ ಮರಗಳ ನಡುವೆ ನುಸುಳಿ ಮೇಲೇರಬಲ್ಲದು. ಸಾಮಾನ್ಯವಾಗಿ ಒಂದೆರಡು ಮೀಟರ್ ಎತ್ತರ ಬೆಳೆಯುವ ಚೂರಿಮುಳ್ಳು 15 - 20 ವರ್ಷ ಬಾಳಬಲ್ಲದು. ಕರಿ ಮುಳ್ಳಣ್ಣು, ಪಿರಗಿ ಹಣ್ಣು, ಪರ್ಗಿ ಹಣ್ಣು, ಕರಿಸೂಜಿ, ಕಬ್ಲೇ ಹಣ್ಣು, ಸೂರಿಹಣ್ಣು ಎಂದೆಲ್ಲ ಕರೆಸಿಕೊಳ್ಳುವ ಚೂರಿಮುಳ್ಳು ನಮ್ಮ ಕರಾವಳಿ, ಮಲೆನಾಡುಗಳಲ್ಲಿ ಬಾಲ್ಯದ ಒಂದು ಅಮೂಲ್ಯ ನೆನಪು!. ಕಾಡುಹಣ್ಣುಗಳಿಗೆ ಗೊಬ್ಬರ, ನೀರು, ಆರೈಕೆ ನೀಡದಿದ್ದರೂ ಕಾಲಕಾಲಕ್ಕೆ ಸ್ವಾದಿಷ್ಟವಾದ ಹಣ್ಣುಗಳನ್ನು ನೀಡುತ್ತಲೇ ಇರುತ್ತದೆ. ಈ ಹಣ್ಣುಗಳಿಗಾಗಿಯೇ ಕಾಯುವ ಪುಟ್ಟ ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳು ನೆಮ್ಮದಿಯಿಂದ ಬದುಕುವುದಲ್ಲದೇ ಸಂತತಿಯ ರಾಯಭಾರಿಗಳಾಗಿಯೂ ಸಹಕರಿಸುತ್ತವೆ.
ಮಕ್ಕಳೇ, ಯಾವ ಹಣ್ಣು ಯಾವ ಸಸ್ಯದ ಕೊಡುಗೆಯೆಂದು ಅರಸುತ್ತಾ ಅದರ ಅಂದ ಚಂದ, ರುಚಿ ವಾಸನೆ ಗ್ರಹಿಸುತ್ತಾ ಸುತ್ತಾಡಿದರೆ ನಮ್ಮ ಪ್ರಕೃತಿಯ ಕೊಡುಗೆಯೇನೆಂದು ಅರ್ಥವಾಗುತ್ತದೆ. ನೆನಪುಗಳು ಬಾಲ್ಯದ ಜೋಳಿಗೆ ತುಂಬುತ್ತವೆ. ನೀವೂ ನಿಮ್ಮ ರಜಾ ದಿನಗಳಲ್ಲಿ ಇಂತಹ ಅನುಭವಗಳಿಗೆ ಒಡ್ಡಿಕೊಳ್ಳಬಲ್ಲಿರಾ?
ಸರಿ ಮಕ್ಕಳೇ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************